ಚಿತ್ರ: ವಿಕಿಪೀಡಿಯ
ಚಿತ್ರ: ವಿಕಿಪೀಡಿಯ

ಸಂಗೀತ ಪರಂಪರೆಯ ಮನೆತನದವರಾದ ಗಾಯಕ ಶಿರೋಮಣಿ ತಿರುಫಣೀಂದ್ರ ಸ್ವಾಮಿ ಮತ್ತು ಶೇಷಗಿರಿಯಮ್ಮ ಅವರ ಉದರದಲ್ಲಿ ಪಿ.ಬಿ. ಶ್ರೀನಿವಾಸ್ ಜನಿಸಿದರು. ಜನಿಸಿದ್ದು ಚೆನ್ನೈನಲ್ಲಾದರೂ ಗಾನ ಸಾರ್ವಭೌಮರಾಗಿ ಭಾರತಾದ್ಯಂತ ತಮ್ಮ ಕಂಠಸಿರಿಯಿಂದಾಗಿಯೇ ಸುವಿಖ್ಯಾತರಾದ ಪಿ.ಬಿ. ಶ್ರೀನಿವಾಸ್ ಬಹು ಭಾಷಾ ಚತುರರೂ ಸಹ. ಕನ್ನಡ, ತೆಲುಗು, ತಮಿಳು, ಹಿಂದಿ, ಮಲೆಯಾಳಿ, ಉರ್ದು, ಇಂಗ್ಲೀಷ್ ಮತ್ತು ಸಂಸ್ಕೃತ ಭಾಷೆಗಳಲ್ಲಿ ಗೀತೆಗಳನ್ನು ರಚಿಸಿ ರಾಗ ಸಂಯೋಜನೆ ಮಾಡಿ ಹಾಡುವುದರಲ್ಲೂ ಪಿ.ಬಿ.ಎಸ್. ನಿಷ್ಣಾತರೆನಿಸಿದರು. ಪಿ.ಬಿ.ಎಸ್. ಅಂದರೆ ‘ಪ್ಲೇ ಬಾಕ್ ಸಿಂಗರ್’ ಎಂದೇ ಅಭಿಮಾನಿವಲಯದಲ್ಲಿ ಜನಜನಿತ.

೧೯೫೧-೫೨ ರಲ್ಲಿ ಚಲನಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಪಿ.ಬಿ.ಎಸ್. ಅವರನ್ನು ಮೊದಲು ಗುರುತಿಸಿ ಪ್ರೋತ್ಸಾಹಿಸಿದ ಕೀರ್ತಿ ಹಿರಿಯ ವೀಣಾ ವಿದ್ವಾಂಸ ಮಹೋಪಾಧಾಯ ಪದ್ಮಶ್ರೀ ಇಮಾನಿ ಶಂಕರಶಾಸ್ತ್ರಿ ಮತ್ತು ಸಂಗೀತ ಸಹ ನಿರ್ದೆಶಕ ಬಿ.ಎಸ್. ಕಲ್ಲಾ ಅವರಿಗೆ ಸಲ್ಲಬೇಕು. ಶ್ರೀ ಎಸ್.ಎಸ್. ವಾಸನ್ ತಮ್ಮ ಕಂಠಸಿರಿಯನ್ನು ಮೆಚ್ಚಿ ಅವಕಾಶಗಳನ್ನು ನೀಡಿದ್ದು ಅವರ ನೆನಪಿನಲ್ಲಿ ಇಂದಿಗೂ ಹಸಿರಾಗಿದೆ. ತಮ್ಮ ಗಾಯನವೃತ್ತಿಯಲ್ಲಿ ಘಟಸಿದ ಬಹುಮುಖ್ಯ ಸಂದರ್ಭವೆಂದರೆ ಹಿರಿಯ ದಿಗ್ಗಜ ನಟ ನಿರ್ದೆಶಕ ಆರ್. ನಾಗೇಂದ್ರರಾವ್ ಕನ್ನಡದಲ್ಲಿ ಪ್ರಥಮ ಬಾರಿಗೆ ತಾವು ನಿರ್ಮಿಸಿದ ಚಿತ್ರ ‘ಜಾತಕಫಲ’ದಲ್ಲಿ ಎರಡು ಹಾಡುಗಳನ್ನು ಹಾಡಲು ತಮಗೆ ಅವಕಾಶವಿತ್ತದ್ದು ಗಾಯನವೃತ್ತಿಗೊಂದು ಭರ್ಜರಿ ತಿರುವು ನೀಡಿದ್ದನ್ನು ಪಿ.ಬಿ.ಎಸ್. ಮರೆತಿಲ್ಲ. ಇದೇ ಚಿತ್ರ ತೆಲುಗು ತಮಿಳು ಭಾಷೆಗಳಲ್ಲೂ ‘ಜಾತಕಂ’ ಹೆಸರಿನಲ್ಲಿ ಚಲನಚಿತ್ರವಾಗಿ ಜಯಭೇರಿ ಬಾರಿಸುವುದರೊಂದಿಗೆ ಪಿ.ಬಿ.ಎಸ್.ಗೆ ಗಾಯಕ ಪದವಿಯ ಶಾಶ್ವತಸ್ಥಾನ ದೊರಕಿಸಿಕೊಟ್ಟಿತಲ್ಲದೆ ಕೀರ್ತಿ ಶಿಖರವನ್ನೇರಲು ನಾಂದಿ ಹಾಡಿತು.

ನಂತರ ರಜತೋತ್ಸವವನ್ನು ಹಾಡಿದ ಅತ್ಯಂತ ಜನಪ್ರಿಯ ತಮಿಳು ಚಿತ್ರ ‘ಪಾವಮನಿಪ್ಪು’ವಿನಲ್ಲಿ ಪಿ.ಬಿ.ಎಸ್.. ಹಾಡಿದ ‘ಕಾಲಂಗಳಿಲ್ ಅವಳ್ ವಸತಂ’ ಮನೆಮಾತಾಗಿ ಸ್ಟಾರ್ ವಾಲ್ಯೂ ತಂದುಕೊಟ್ಟಿತು. ನಂತರ ಅವರು ಹಿಂದಿರುಗಿ ನೋಡಲಿಲ್ಲ. ಗಾನ ಕೋಗಿಲೆಗಳಾದ ಪಿ. ಸುಶೀಲ, ಎಸ್. ಜಾನಕಿ, ಪಿ. ಲೀಲಾ, ಜಿಕ್ಕಿಯಂತಹ ಅಸಾಮಾನ್ಯ ಗಾಯಕಿಯರ ಜೊತೆಗಲ್ಲದೆ ಭಾರತದ ನೈಟಿಂಗೇಲ್ ಲತಾಮಂಗೇಶ್ಕರ್ ಜೊತೆಯಲ್ಲಿಯೂ ಯುಗಳ ಗೀತೆಗಳನ್ನು ಹಾಡಿದ್ದು ವೃತ್ತಿ ಜೀವನಕ್ಕೊಂದು ಮೆರಗು ತಂದಿತು. ಗಾಯಕ ದಿಗ್ಗಜರಾದ ಘಂಟಸಾಲ, ಟಿ.ಎಂ.ಸೌಂದರರಾಜನ್, ಶಿರ್ ಕಾಳಿ ಮುಂತಾದವರೊಂದಿಗೆ ಹಾಡಿದ ಗೀತೆಗಳು ಅದ್ಭುತ ಯಶಸ್ಸು ಕಂಡಿದ್ದರಿಂದಾಗಿ ಉತ್ತರ ಮತ್ತು ದಕ್ಷಿಣ ಭಾರತದಲ್ಲಿನ ‘ಗಾನಕೋಗಿಲೆ’ ಎಂಬ ಮನ್ನಣೆಗೆ ಪಾತ್ರರಾದರು.

ಬೇರೆ ಭಾಷೆಗಳಲ್ಲಿ ಹಾಡಿ ಖ್ಯಾತರಾದರೂ ಪಿ.ಬಿ.ಎಸ್. ಗೆ ಸುಭದ್ರ ನೆಲೆ ಬೆಲೆ ಒದಗಿಸಿದ್ದು ಮಾತ್ರ ಕನ್ನಡ ಚಿತ್ರರಂಗವೆಂಬುದು ಹೆಮ್ಮೆಯ ಸಂಗತಿ. ಕನ್ನಡ ಚಿತ್ರಗಳಲ್ಲೇ ಹೆಚ್ಚು ಅವಕಾಶಗಳು ದೊರೆತವು. ಕನ್ನಡ ಚಿತ್ರರಂಗದಲ್ಲಿ ಪಿ.ಬಿ. ಶ್ರೀನಿವಾಸ್ ಅವರೇ ಏಕಮೇವಾ ದ್ವಿತೀಯ ಗಾಯಕರೆಂಬಂತಾಗಿ ಕನ್ನಡಿಗರೇ ಆಗಿಹೋದರೆಂಬುದು ಇಂದಿಗೆ ಇತಿಹಾಸ ಹಾಗೂ ಕನ್ನಡಿಗರಿಗೆ ಹೆಗ್ಗಳಿಕೆಯ ಸಂಗತಿ.

ನಟಸಾರ್ವಭೌಮ ದಾದಾ ಸಾಹೇಬ ಪಾಲ್ಕೆ ಪ್ರಶಸ್ತಿ ವಿಜೇತ ಅದ್ಭುತ ಕಲಾವಿದ ಗಾನ ಗಂಧರ್ವ ಡಾ|| ರಾಜ್ ಕುಮಾರ್ ಅವರ ದನಿಗೆ ಪಿ.ಬಿ.ಎಸ್. ದನಿ ಗಾಯನದ ಬನಿ ಹೊಂದಿಕೊಂಡು ಕನ್ನಡಿಗರಿಗೆಲ್ಲಾ ಮೋಡಿ ಹಾಕಿದ್ದರ ಫಲವಾಗಿ ಡಾ|| ರಾಜ್ ಚಿತ್ರಗಳ ಖಾಯಂ ಗಾಯಕರಾಗಿ ಜನಪ್ರಿಯತೆಯ ಉತುಂಗ ಶಿಖರವೇರಿದ ಪಿ.ಬಿ.ಎಸ್ ಒಂದಿಷ್ಟು ಚಿಕಿತ್ಸೆಯಿಂದ ದನಿ ಬದಲಿಸಿ ನಟ ಉದಯಕುಮಾರ್, ಕಲ್ಯಾಣಕುಮಾರ್, ಗಂಗಾಧರ್, ರಾಜೇಶ್, ಅಶ್ವಥರಂತಹ ನಟರಿಗೂ ಹಾಡುತ್ತಿದ್ದುದರಿಂದಾಗಿ ಆಗಿನ ದಿನಗಳಲ್ಲಿ ಶ್ರೀಯುತರು ಹಾಡದ ಕನ್ನಡ ಚಿತ್ರಗಳೇ ಇರಲಿಲ್ಲವೆಂಬ ದಾಖಲೆ ನಿರ್ಮಾಣವಾಯಿತು. ಡಾ|| ರಾಜ್ ಕೂಡ ಪಿ.ಬಿ. ಅವರನ್ನು ಅಪಾರವಾಗಿ ಮೆಚ್ಚಿ ‘ನನ್ನದು ಶರೀರ ಅವರದ್ದು ಶಾರೀರ’ ಅಂತ ಶ್ಲಾಘಿಸಿದ್ದುಂಟು. ಪಿ.ಬಿ.ಎಸ್ ಹಾಡಿದ ಸಾವಿರಾರು ಕನ್ನಡ ಗೀತೆಗಳಲ್ಲಿ ಭಕ್ತ ಕನಕದಾಸ, ಭಕ್ತ ಕುಂಬಾರ, ಕರುಣೆಯೇ ಕುಟುಂಬದ ಕಣ್ಣು, ಗಂಧದಗುಡಿ, ಕುಲವಧು, ಕಸ್ತೂರಿ ನಿವಾಸ, ಸಂಧ್ಯಾರಾಗ, ಎರಡು ಕನಸು, ಬಂಗಾರದ ಮನುಷ್ಯ, ನಾಗರಹಾವು ಇತ್ಯಾದಿ ಚಿತ್ರಗಳಲ್ಲಿನ ಹಾಡುಗಳು ಎಂದೆಂದಿಗೂ ಅಜರಾಮರ. ಕರ್ನಾಟಕ ಸರ್ಕಾರವು ‘ಕನ್ನಡ ರಾಜ್ಯೋತ್ಯವ ಪ್ರಶಸ್ತಿ’ ನೀಡಿ ಗೌರವಿಸಿತಲ್ಲದೆ ಅನೇಕ ಚಿತ್ರಗಳಿಗೆ ರಾಜ್ಯಪ್ರಶಸ್ತಿ ಹಾಗೂ ಅಭಿಮಾನಿ ಸಂಘ ಸಂಸ್ಥೆಗಳಿಂದ ಪಡೆದ ಸನ್ಮಾನಗಳಿಗಂತೂ ಲೆಕ್ಕವಿಲ್ಲ . ಚಿತ್ರಗೀತೆಗಳಲ್ಲದೆ ಭಕ್ತಿಗೀತೆಗಳ ಗಾಯನದಲ್ಲೂ ಪಿ.ಬಿ.ಎಸ್. ನಿಸ್ಸೀಮರು. ‘ಶರಣು ಶರಣಯ್ಯ ಶರಣು ಬೆನಕ’, ‘ಎದ್ದೇಳು ಮಂಜುನಾಥ’ ದಂತಹ ಸುಪ್ರಭಾತಗಳನ್ನು ಕೇಳದ ಕನ್ನಡಿಗರುಂಟೆ?

ಹಲವಾರು ಭಾಷೆಗಳಲ್ಲಿ ಲಕ್ಷಾಂತರ ಗೀತೆಗಳನ್ನು ರಚಿಸಿ ರಾಗಸಂಯೋಜಿಸಿರುವ ಶ್ರೀಯುತರು ನವರಾಗಗಳ ಜನಕ ಕೂಡ. ಅವುಗಳಲ್ಲಿ ‘ನವನೀತ ಸುಧಾ’ ಸಂಗೀತ ಪ್ರಿಯರ ಮೆಚ್ಚಿಗೆ ಗಳಿಸಿದೆ. ದೇಶವಿದೇಶಗಳಲ್ಲಿ ಗಾಯನ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿರುವ ಪಿ.ಬಿ.ಎಸ್ ಅವರಿಗೆ ಚೆನ್ನೈ ಸರ್ಕಾರ ಕಲೈ ಮಾಮಣಿ ಪ್ರಶಸ್ತಿ ನೀಡಿದೆ. ಆಂಧ್ರ ಸರ್ಕಾರ ಯುಗಾದಿ ಪುರಸ್ಕಾರ, ತೆಲುಗು ಸಂಗೀತ ಆಕಾಡೆಮಿ ಪ್ರಶಸ್ತಿಯಲ್ಲದೆ ಆರಿಜೋನಾ ಅಮೇರಿಕಾ ಯೂನಿವರ್ಸಿಟಿಯಿಂದ  ‘ಡಾಕ್ಟರೇಟ್’ ಪಡೆದ ಏಕೈಕ ಗಾಯಕರು ಕೂಡ ಎಂಬುದು ಗಮನಾರ್ಹ. ಮಾಧುರ್ಯಕ್ಕೆ ಮತ್ತೊಂದು ಹೆಸರೆ ಪಿ.ಬಿ.ಎಸ್. ಎಂಬುದು ನಿರ್ವಿವಾದ.

ಡಾ|| ರಾಜ್‌ಕುಮಾರ್ ಅವರು ತಾವೇ ಹಾಡಲು ಆರಂಭಿಸಿದಾಗ ಜನ ಆ ಹೊಸ ಕಂಠಸಿರಿಯನ್ನು ಒಪ್ಪಿಕೊಂಡಾಗ ಪಿ.ಬಿ.ಎಸ್. ಅವರಿಗೆ ಅವಕಾಶಗಳು ಕಡಿಮೆಯಾಗತೊಡಗಿದವು.

ಚಿನ್ನದ ಕಂಠದ ಗಾಯಕ ಮಹಮದ್ ರಫಿ ಅವರ ಗಾಯನವೃತ್ತಿಯಲ್ಲಿ ಕಿಶೋರ್ ಕುಮಾರ್ ಬಂದಾಗಲೂ ಆದದ್ದು ಇದೇ ಬದಲಾವಣೆ, ಪಿ.ಬಿ.ಎಸ್ ಅವರಿಗೆ ರಾಜ್ ಚಿತ್ರಗಳ ಹೊರತಾಗಿ ಹಾಡಲು ಇದ್ದ ಅವಕಾಶಗಳನ್ನು ನವ ತರುಣ ಗಾಯಕ ಎಸ್.ಪಿ. ಬಾಲಸುಬ್ರಮಣ್ಯಂ ದೋಚಿದರು. ಚಿತ್ರಗಳಲ್ಲಿ ಅವಕಾಶ ವಿರಳವಾದಾಗ ಭಕ್ತಿಗೀತೆಗಳನ್ನು ಹಾಡಿ ಜನರನ್ನು ರಂಜಿಸುತಾ ಅದರಲ್ಲೇ ತೃಪ್ತಿಕಂಡವರು ಪಿ.ಬಿ. ಶ್ರೀನಿವಾಸ್. ಡಾ|| ರಾಜ್ ಹಾಡುವ ಬಗ್ಗೆ ಹಲವರು ಭಿನಾಭಿಪ್ರಾಯ ವ್ಯಕ್ತಪಡಿಸಿದ್ದುಂಟು. ಆಗ ಪಿ.ಬಿ. ಅವರು ಕೊಟ್ಟ ವಿವರಣೆ ಸ್ವರಣೀಯ. ‘ಡಾ|| ರಾಜ್ ಸ್ವಯಂ ಮಧುರ ಗಾಯಕರಾಗಿದ್ದೂ ನನ್ನಂತವರಿಗೆ ಇಷ್ಟು ವರ್ಷಗಳ ಕಾಲ ಅವಿರತವಾಗಿ ಹಾಡಲು ಅವಕಾಶ ನೀಡಿದ್ದು ಔದಾರ್ಯ ಆದರದ ದೊಡ್ಡ ಗುಣ’ ಹೀಗೆ ಹೇಳಿದ ಪಿ.ಬಿ.ಶ್ರೀನಿವಾಸ್ ಸಹ ಗುಣದಲ್ಲಿ ಅದೆಷ್ಟು ದೊಡ್ಡವರಲ್ಲವೆ!
*****