ಈ ಹಾಡಾಹಗಲೇ ದೇಶರಂಗಮಂಚದಲ್ಲಿ
ಬಟಾಬಯಲಾಟ ನೋಡಿರಣ್ಣಾ
ಬರೀ ರಕ್ಕಸ ಪಾತ್ರಗಳಣ್ಣಾ
ತಿರುಗಾ ಮುರುಗಾ ಅಡ್ಡಾತಿಡ್ಡೀ ಕುಣಿತವಣ್ಣಾ
ಹಾಡಿಗೂ ಕುಣಿತಕ್ಕೂ ತಾಳಕ್ಕೂ ಸಂಗೀತಕ್ಕೂ
ಮುಮ್ಮೇಳ ಹಿಮ್ಮೇಳಕ್ಕೂ ತಾಳಮೇಳವಿಲ್ಲ
ಒಂದಾಟವಾಡಲು, ಅನೇಕ ರಸಪ್ರಸಂಗಗಳ ತೋರಿಸಲು
ಫೋಷಣೆ-ಭಾಷಣ, ಆದವಣ್ಣಾ,

ರಂಗದ ಮೇಲೆ ಪರ ಪರಸಂಗಗಳ
ಬಣ್ಣ ಬದಲಿಸಿ ವೇಷ ಬದಲಿಸಿ ಆಡುವರಣ್ಣಾ,
ಊಸರವಳ್ಳಿಗಳೂ ಇದನು ನೋಡಿ ನಾಚಿದವಣ್ಣಾ,
ನಿಸ್ಸಹಾಯ ಪ್ರೇಕ್ಷಕರ ಹರಣ ಕೀಳುವರಣ್ಣಾ

ಅವರ ಕೂಗಾಟ ಒದರಾಟಗಳ ಕೇಳಿ ಕೇಳಿ,
ಇವರು ಕಿವುಡರಾಗಿದ್ದಾರೆ.
ಅದು ಬೇಡ ಇದು ಬೇಕು ಎಂದೆಂದು ಕೂಗಿ ಕೂಗಿ
ಇವರ ಗಂಟಲು ಬಿದ್ದು ಈಗಿವರು ಬರಿ ಮೂಕರಾಗಿದ್ದಾರೆ
ಆಟದವರಂತೂ ತಮ್ಮ ರಸಾನಂದದಲ್ಲೇ ತಲ್ಲಿನರಣ್ಣಾ

ಕ್ಷಣಕ್ಷಣಕ್ಕೂ ಬೆಳೆಯುವ ಇವರ ಕಳ್ಳ ಬಸುರು ಡೊಳ್ಳ ಹೊಟ್ಟೆಗಳಿಗೆ
ರಂಗ ಮಂಚ ಸಾಲದಾಗಿದೆಯಣ್ಣಾ ಪೂರಾ ಸಾಲದ್ದೇ ಆಗಿದೆಯಣ್ಣಾ
ನೋಡಿ ನೋಡಿ ಜನ ಬೆಂಡಾದರಣ್ಣಾ
ಬೆಂಡಾದಂತೆಲ್ಲಾ ಅವರ ಬಂಡಾಟ ಬಯಲಾಟ ರಂಗೇರಿತಣ್ಣಾ
*****

Latest posts by ವೃಷಭೇಂದ್ರಾಚಾರ್‍ ಅರ್ಕಸಾಲಿ (see all)