ರಕ್ಷಣೆ ಇರಲೆಂದು, ಕಾಲಿಗೆ ಮೆಟ್ಟು ಧರಿಸಿಹೆನು ದೇವಾಽ
ಹೃದಯ ಚುಚ್ಚುವ, ಮಾತಿಗೆ ಏತರ ಮೆಟ್ಟು ಧರಿಸಲಿ ದೇವಾಽ…?

ಬಂಧುಗಳ ಕೊಟ್ಟೆ, ನೋವನೂ ಇಟ್ಟೆ ದೇವಾಽ…
ಸಂಬಂಧಿಕರಿಂದ ಕೆಟ್ಟೆ, ಕೈಗೆ ಖಾಲಿ ಚಿಪ್ಪನಿಟ್ಟೆ ದೇವಾಽ…

ಮಾತಿಗೂ ಮಿಗಿಲು ಬಾಣ, ಬಿರುಸೊಂದಿಲ್ಲ ಜಾಣಽ…
ಸ್ನೇಹಲಿ ಇರಿದ ಈಟಿ, ಹೃದಯಕೆ ಬಲು, ನಾಟಿದೆ ದೇವಾಽ…

ಚೇಳಿಗೆ ಕೊಂಡಿಲಿ, ಮಾತ್ರ ವಿಷವಿಟ್ಟೆ ದೇವಾಽ…
ಆತ್ಮೀಯರ ನಡೆ, ನುಡಿ, ನೋಟ ವಿಷವೆಲ್ಲ ವಿಷ… ದೇವಾಽ…

ಯಾರ ಗೊಡೆವೆ ಬೇಡೆಂದು, ದೂರದಿ ಗೋಡೆಕಟ್ಟಿಹೆನು ದೇವಾಽ…
ತಂಟೆ ಜನ, ತುಂಟ ನೆಪದಿ, ಕಾಲು ಕೆದರಿ, ಜಗಳ ಮಾಡುವರು ದೇವಾಽ…

ಪ್ರೀತಿ ಪ್ರೇಮದ ಗದ್ದೆ, ಹಗಲಿರುಳು ಉಳುವರು ದೇವಾಽ…
ಬೆಳೆ ಕಿತ್ತು, ಕಳೆ ಬೆಳೆಸಿ, ಪ್ರೀತಿ ಪ್ರೇಮ, ಉಳುವರು ದೇವಾಽ…

ಹೃದಯದ ಮಾತು, ಬಾಯಿ ಮಾತು, ಬೇರೆ ಬೇರೇನು ದೇವಾಽ…
ಅಪರಿಚಿತರ ಪ್ರೀತಿ ಮುಂದೆ, ಕುರಿ ಮಂದೆ, ಸ್ಥಿರವೇನು ದೇವಾಽ…

ಕಾಲಿಗೆ ಹಾಕೋವು, ತಲೆಗೆ ಬೇಡ! ಹೈಕಳು ಕೇಳುತ್ತಿಲ್ಲ ದೇವಾಽ…
ಮೀಸೆ ಬರುವಾಗ, ದೇಶ ಕಾಣಲ್ಲೆಂಬಾ, ಮಾತು ನಿಜವೇ ದೇವಾಽ…

ಸತ್ಯ ಅರಿತರೆ, ಸಾಲದು! ಚಲಾವಣೆಗೆ ಬರಬೇಕಲ್ಲ ದೇವಾಽ…
ಸಾವಿಗಂಜಿ, ಸತ್ಯ ಮುಚ್ಚಿಟ್ಟರೆ, ಬಾಳ ದಿನ ಬಾಳದಲ್ಲಾ… ದೇವಾಽ…
*****

ಡಾ || ಯಲ್ಲಪ್ಪ ಕೆ ಕೆ ಪುರ
Latest posts by ಡಾ || ಯಲ್ಲಪ್ಪ ಕೆ ಕೆ ಪುರ (see all)