ಕಡಲ ಕನ್ನಡ ನಾಡ ಬೆಡಗಿನ
ಬೆಟ್ಟ ಬನಗಳ ರೂಪಸಿ
ಕಾರವಾರದ ದಾರಿಗುಂಟಾ
ಗಂಟು ಬೀಳುವ ಶೋಡಶೀ

ಮಲೆಯ ನಾಡಿನ ಎಲೆಯ ಕಾಡಿನ
ಹಸಿರ ರಾಣಿಯೆ ಕುಣಿದು ಬಾ
ಸೆರಗು ಬೀಸಿ ಸೊಬಗು ಈಸಿ
ಮಧುರ ವೀರರ ಮುತ್ತು ಬಾ

ಯಾವ ರೇಶಿಮೆ ಯಾವ ಜರವೊ
ನಿನ್ನ ಹೂವಿನ ಕುಬ್ಬಸಾ
ಗುಡ್ಡ ಬೆಟ್ಟದ ಗಟ್ಟಿ ಕುಚಗಳ
ರಸದ ಔತಣದುಬ್ಬಸಾ

ಟೊಂಕ ತಲೆಯಲಿ ಬಿಂಕ ಕೊಡಗಳ
ತುಂಬಿ ತುಳುಕಿದ ತುಡುಗಿ ನೀ
ಶಿವನು ಬೀಸಿದ ಬಣ್ಣ ಬಡಿಗೆಯ
ಹುಂಬ ಹರೆಯದ ಹುಡಿಗಿ ನೀ