ನನ್ನ ನಾನು ಪಡೆವುದೆಂದಿಗೆ
ಹೂವು ಹಣ್ಣ ಬಿಡುವುದೆಂದಿಗೆ?

ಹಣ್ಣು ಬಿರಿದು ಬೀಜವು
ಬಿಂಬ ಸೀಳಿ ತೇಜವು
ನಿಜ ರೂಪವ ಹಿಡಿವುದೆಂದಿಗೆ?

ಭಾರಿ ದೂರ ನಡೆದೆ ನಿಲ್ಲದೆ
ಸಾಲುಮರದ ಕರುಣೆ ಇಲ್ಲದೆ;
ಕನಸಿನಿಂದ ಕನಸಿಗೆ
ಹಾರಿ ದಣಿದ ಮನಸಿಗೆ
ತಣಿಯಲೊಂದು ನೆಲೆಯು ಎಲ್ಲಿದೆ?

ನೀತಿ ತಳೆದು ನಿಂತೆ ಕೆಲದಿನ
ಪ್ರೀತಿ ಉಟ್ಟು ಅಲೆದೆ ಮಧುವನ;
ಮಾತು ತೆರೆದ ಹಾಡಿಗೆ
ಹಾಡು ತೆರೆದ ಕಾಡಿಗೆ
ಬಂದು ನಿಂತೆ ಅರ್ಥದಂಚಿಗೆ

ಸಿಕ್ಕೀತೇ ದಾರಿ ತುದಿಯ ತೀರ?
ದಕ್ಕೀತೇ ಸಾಗಿ ಬಂದ ದೂರ?
ಬೇಲಿ ಎಲ್ಲಜಿಗಿದು
ಸಾಲ ಪೂರ ಹರಿದು
ಕಂಡಾನೇ ಕಳೆದು ಹೋದ ನೀರ?
*****