ಯಾರು ಜೀವವೇ ಯಾರು ಬಂದವರು
ಭಾವನೆಗಳನೇರಿ?
ಒಣಗಿದೆನ್ನೆದೆಗೆ ಮಳೆಯ ತಂದವರು
ಬಿಸಿಲ ತೆರೆಯ ಸೀಳಿ?
ಬಾನನೀಲಿಯಲಿ ಕರಿ ಬಿಳಿ ಬಣ್ಣದ
ಗಾನ ಚಿಮ್ಮಿದವರು?
ಕಾನು ಮಲೆಗಳಲಿ ಚಿಗುರು ಹೂವುಗಳ
ಚಪ್ಪರ ಬೆಳೆದವರು?
ನಸುಕಿನ ಬೆಳಕನು ಮಂಜಿನ ತೆರೆಯಲಿ
ಜಾಲಿಸಿ ಬಿಡುವವರು?
ಮಣ್ಣಿನೆದೆಯಲ್ಲಿ ಹಸಿರಿನ ಸುಂದರ
ಕಣ್ಣ ಬಿಡಿಸಿದವರು?
ಯಾರು ಜೀವವೇ ಗಳಿಗೆ ಹಿಂದೆ ನ-
ನ್ನೆದೆಯಲಿ ಮೂಡಿದರು?
ಯಾರು ಎಂದು ನಾ ತಿಳಿಯುವ ಮೊದಲೇ
ಕಾಣದೆ ಸರಿದವರು?
*****
Latest posts by ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ (see all)
- ಒಪ್ಪಿಕೊ ಪರಾಭವ! - January 14, 2021
- ಕದನ ವಿರಾಮದ ಮಾತು - January 7, 2021
- ಶವಪರೀಕ್ಷೆ - December 31, 2020