ಬಾ ಬಾ ಓ ಬೆಳಕೇ
ಕರುಣಿಸಿ ಇಳಿ ನೆಲಕೆ
ನೀನಿಲ್ಲದೆ ಬಾಳೆಲ್ಲಿದೆ?
ಹೋಳಾಗಿದೆ ಬದುಕೇ
ಕಾಡು ಕಡಲು ಬಾನು
ಏನಿದ್ದೂ ಏನು?
ಮೈಯೆಲ್ಲಿದೆ ಇಡಿ ಬುವಿಗೇ
ಕಾಣಿಸದಿರ ನೀನು?
ನಿನ್ನ ಕೃಪಾಚರಣ
ಚಾಚಿ ತನ್ನ ಕಿರಣ
ಸೋಂಕಿದೊಡನೆ ಸಂಚರಿಸಿದೆ
ನೆಲದೆದೆಯಲಿ ಹರಣ!
ಬಾಂದಳದಾ ತಿಲಕವೇ
ವಿಶ್ಚದೆದೆಯ ಪದಕವೇ
ನಿನ್ನೊಳಗಿನ ಸತ್ಯ ತೋರು
ಬಂಗಾರದ ಫಲಕವೇ!
*****
ಲಕ್ಷ್ಮೀನಾರಾಯಣ ಭಟ್ಟರು ಕನ್ನಡ ಕಾವ್ಯದ ಜೀವಂತಿಕೆಯನ್ನು ಹೆಚ್ಚಿಸುತ್ತ ಆಧುನಿಕ ಕನ್ನಡ ಕಾವ್ಯವನ್ನು ಬೆಳೆಸುತ್ತ ಬಂದಿರುವ ಪ್ರಮುಖ ಕವಿಗಳಲ್ಲಿ ಒಬ್ಬರು. ಅವರ ಅನುವಾದಗಳು ಕನ್ನಡ ಕಾವ್ಯಕ್ಕೆ ಕೊಟ್ಟ ಬೆಲೆಬಾಳುವ ಉಡುಗೊರೆಗಳು ಮಾತ್ರವಾಗಿರದೆ ಸ್ವಂತಕ್ಕೆ ಪಡೆದ ರಕ್ತದಾನವೂ ಆಗಿದೆ. ಸ್ವಂತ ಪ್ರತಿಭೆ, ಶ್ರೇಷ್ಠಕವಿಗಳ ಆಪ್ತ ಅಧ್ಯಯನ ಎರಡೂ ಅವರನ್ನೂ ಎತ್ತರಕ್ಕೆ ಹತ್ತಿಸಿವೆ. ಅಧ್ಯಯನ, ಚಿಂತನೆ ಇವು ಅವರಲ್ಲಿ ಹಾಸು ಹೊಕ್ಕಾಗಿ ಒಂದನ್ನು ಮತ್ತೊಂದು ಬಲಗೊಳಿಸುತ್ತ ಬಂದಿವೆ.