ಆಡುಗೂಲಜ್ಜಿ ಕಣ್ಣುಮುಚ್ಚಿ ಹೇಳುತ್ತಾಳೆ ಕಥೆಯ,
ನೇಯುತ್ತಾಳೆ ರಾಗವಾಗಿ ವರ್ತಮಾನ ವ್ಯಥೆಯಾಗುವ
ಸತ್ತ ಸುಖದ ಸ್ಮೃತಿಯ.
ಕಣ್ಣಿಂದ ದಳದಳ ನೀರು
ಹೆಪ್ಪುಮುಪ್ಪಿನ ಸುಕ್ಕುತೆರೆ ಸರಿಸಿ ಮುಖದಲ್ಲಿ
ಏಳುವುವು ನೂರು
ಜೇನುಗೂಡನು ಹಿಂಡಿಬಂದ ಅನುಭವ ಸಾಲು:
“ಅಯ್ಯೋ ದೇವರೆ ಆಗೆಲ್ಲ ಎಂಥ ಕಾಲ!
ಎಂಥ ಬಾಲ ಕಪ್ಪೆಗೆ, ಏನು ಕೋಡು ಕುದುರೆಗೆ
ಅರಳಿಯೆಲೆಯ ಕೆಂಪುಚಿಗುರೆ ಮೇವು ಹಂಸಪಕ್ಷಿಗೆ;
ಬೇಲಿಯಿರದ ಬೇಟ
ಕಾವಲಿರದ ತೋಟ
ದನಕಾಯುವ ದಡ್ಡ ಕೂಡ ತಪ್ಪಿ ಮೇಲೆ ಕೂತರೆ
ತಟಕ್ಕನೆಯೆ ಜೀವತುಂಬಿ ನುಡಿವ ಧರ್ಮಪೀಠ;
ಎಂಥ ಕೆಟ್ಟ ಹೆಣ್ಣಿಗೂ ಸರಸ್ವತಿಯ ಕಂ
ಅಪ್ಸರೆಯರ ಸೊಂಟ
ಗಂಡಸಾದರಂತು ಬಿಡು ಇಂದ್ರ ಅವನ ನೆಂಟ”.
ಹರಿಹರಿದಂತೆ ನೆರೆ ಬರುವುದು
ಕೊರಕಲಿನಲ್ಲಿ ಕಿಳಪಿಳ ಸರಿವ ಬಡಕಲು ತೊರೆಗೆ;
ಬಿಟ್ಟ ಬಾಯಾಗಿ
ನೆಟ್ಟ ಕಣ್ಣಾಗಿ
ಕೇಳುವುವು ಮಕ್ಕಳು
ಆತು ಅಜ್ಜಿ ಮೈಗೆ,
ಬೆರಗಾಗಿ ಕತ್ತಲಲ್ಲಿ ಕುರುಡ ಬಣ್ಣಿಸುತ್ತಿರುವ
ಬೆಳುದಿಂಗಳ ಕಥೆಗೆ.

ನಮಗೇನು ಗೊತ್ತು
ಹೋಮಧೂಮದಲಿ ಬುದ್ಧಪ್ರೇಮದಲಿ
ಅಶೋಕಧರ್ಮದ ಚಕ್ರಚಲನದಲಿ
ಗಾಡಿ ನಡೆದ ಗತ್ತು?
ಮನೆಯಿತ್ತು
ಮನೆಗೆ ಮಾಡಿತ್ತು;
ಹೆಂಚುದೋಣಿಗಳ ನಡುವೆ ಅಲ್ಲಲ್ಲಿ ತೂತೂ ಇತ್ತು;
ಹಗಲಲ್ಲಿ ಹೊನ್ನ ಸರಳು
ಇರುಳಲ್ಲಿ ಬೆಳುದಿಂಗಳ ಕೊರಳು
ದೇವರ ಮನೆಗೆ ಬೆಳಕ ಹಾಡಿತ್ತು.
ಮಳೆಗಾಲದಲ್ಲಿ ಮನೆ ಕೆರೆಯಾಗಿರಲಿಲ್ಲವೆ,
ಬೆಲ್ಲದ ವರ್ಣನೆಯಲ್ಲೇ ಬೇವಿನ ಮಾಹಿತಿ ಇಲ್ಲವೆ?
ಎದ್ದ ಕಲ್ಲು ಪೂಜಾರಿಯ ಲೆಕ್ಕಕ್ಕೆ ಜಮವಾಗಿ
ಜಾಗಟೆ ಮೊಳಗಿ
ಆರತಿ ಬೆಳಗಿ ಗುಡಿಯಲ್ಲಿ,
ಬಿದ್ದ ಕಲ್ಲುಗಳ ಪಾಡು
ಅಗಸನ ಬಟ್ಟೆಯ ಬಡಿತದ ತಾಳಕೆ ನುಡಿಸಿದ ಹಾಡು!

ಇತ್ತು ಆಗಲೂ ಎಲ್ಲ ಇತ್ತು
ಅಜ್ಜಿಯ ಹಾಡಿನ ಮಲ್ಲಿಗೆ ಜಾಡಿನ ತಳದ ಕೆದಕಿನಲಿ
ಮೂಳೆ ಮಜ್ಜೆಗಳ ನಾರುವ ಗೊಬ್ಬರವಿತ್ತು
ಕರ್ಣನ ಶೌರ್ಯ
ಧರ್ಮನ ಧೈರ್ಯ
ಅಂಬೆಯ ಪ್ರೀತಿ
ಭೀಷ್ಮನ ನೀತಿ
ಎಲ್ಲಕು ಕೂಡಿಯೆ
ಕಾಲಜ್ಞಾನದ ಕತ್ತಲ ಕೊಳದಲಿ ಕಾಲುಜಾರಿತ್ತು.

ಆ ವನದಿಂದಲೆ ತಂದುದು ಈ ಆಲದ ಸಸಿಯ
ಬಳಿಯಬಹುದೆ ನಾವು ಪರಂಪರೆಯ ಮುಖಕೆ ಮಸಿಯ?
ಅಳಿಸಬಹುದೆ ನಿನ್ನೆಯಿಂದ ಇಂದು ಬಂದ ನನ್ನಿಯ?
ಹಾಗೆಂದೇ ಇಂದು ಕೂಡ
ಮಕ್ಕಳಿರುವ ಮನೆನೆತ್ತಿಯ ಮೇಲೆ ಗೂಬೆ ಕೂಗಿದೆ
ತೆಂಗುಗರಿಯ ಮೇಲೆ ಮಂಗ ಕುಣಿದು ಲಾಗ ಹಾಕಿದೆ
ಕಣಜದಲ್ಲೆ ಹೆಗ್ಗಣ
ಅಡಿಗೆಮನೆ ಮದ್ದಿನ
ದೀಪಾವಳಿ ಷಾಪಾಗಿದೆ, ಹೊಂಚುತ್ತಿದೆ ದುರ್ದಿನ?

ಬಿದ್ದಮನೆ ಗುರುತಲ್ಲೆ ಹೊಸಮನೆಗೆ ಅಡಿಪಾಯ
ಆಗೆಯುತ್ತಿದ್ದೇವೆ;
ಹುತ್ತ ಕಂಡೊಡನೆಯೇ ಹಾವಾಗಿ
ನೀರು ಕಂಡೊಡನೆಯೇ ಹೊಳೆಯಾಗಿ
ಎತ್ತಿಟ್ಟಕಾಲ ಮುತ್ತಿಟ್ಟದರ ಮೆಟ್ಟಾಗಿ
ಹೊಟ್ಟಾಗಿ ಈ ಕೆಟ್ಟ ಹೊಟ್ಟೆ ಹೊರೆದಿದ್ದೇವೆ;
ತಿದ್ದ ಬಂದವರನ್ನು ಗುದ್ದಿ ತೆಗೆದಿದ್ದೇವೆ
ಪ್ರತಿಕ್ಷಣವು ಅದಕೆ ಕೊರಗುತ್ತಲೂ ಇದ್ದೇವೆ;
ಕಷ್ಟ ಉಳಿದರು ಕಡೆಗೆ ನಾವು ಮುಗಿಯುವೆವೆಂದು
ಕತ್ತಲೆಯನೇ ನೆಮ್ಮಿ
ನಡೆಯುತ್ತಿದ್ದೇವೆ
ನಡೆಯುತ್ತಿರುತ್ತೇವೆ.
*****

ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್
Latest posts by ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ (see all)