ನೋಡು ಮೌನ ಶಾಂತಿ ಸುಮನ
ಆಳ ಆಳ ಇಳಿದಿದೆ
ಕೇಳು ಎದೆಯ ಪ್ರೇಮ ಕವನ
ಮೇಲೆ ಮೇಲೆ ಏರಿದೆ

ಅಗೋ ಅಲ್ಲಿ ಗಗನದಲ್ಲಿ
ಮೌನ ಮಹಡಿ ಕರೆದಿದೆ
ಇಗೋ ಇಲ್ಲಿ ಮೊರಡಿಯಲ್ಲಿ
ಶಬ್ದ ಕರಡಿ ಮಡಿದಿದೆ

ಬಂತು ಬಂತು ಭಾವ ಗಾನ
ನಿತ್ಯ ಸತ್ಯ ಶಾಶ್ವತಾ
ಆತ್ಮ ವಸ್ತು ಜ್ಯೋತಿ ಶಿಸ್ತು
ಬಾಳ ಚೈತ್ಯ ಭೌಮತಾ

ನಗೆಯ ರಾಣಿ ನಾಗವೇಣಿ
ಮುಗಿಲ ಗಂಗೆ ಸುರಿದಳು
ವಿಮಲ ಅಮಲ ಕಮಲ ರಾಣಿ
ಆತ್ಮ ರಾಣಿ ಎರೆದಳು

ಬಂತು ಬಂತು ಸೊಂಪು ತಂಪು
ಕಂಪು ಹೂವು ಅರಳಿತೋ
ತಲೆಯ ಟೊಳ್ಳು ಟಳ್ಳನೆಂದು
ಜ್ಯೋತಿ ಪುಷ್ಪ ಬಿಚ್ಚಿತೋ

ಓಂ ಶಿವನೆ ಓಂ ಶಾಂತಿ
ಓಂ ಒಲವಿನಮೃತಂ
ಓಂ ಶಾಂತಿ ಓಂ ಶಾಂತಿ
ಓಂ ಮಿಲನ ಶಾಶ್ವತಂ
*****