ಇಂದಿನ ಆಧುನಿಕ ಇಪ್ಪತ್ತೊಂದನೆಯ ಶತಮಾನದಲ್ಲಿಯೂ ಜಗತ್ತಿನ ಒಂದು ಗುಂಪು ವೈಚಾರಿಕತೆಯನ್ನು ವಿರೋಧಿಸುತ್ತಲೇ ಇದೆ. ಅದರಲ್ಲೂ ಭಾರತ ಈ ವಿಚಾರಗಳಲ್ಲಿ ಉಳಿದೆಲ್ಲ ದೇಶಗಳಿಗಿಂತ ಕೊಂಚ ಮುಂದಿದೆ. ವೈಜ್ಞಾನಿಕ ಸತ್ಯಾಸತ್ಯತೆಯ ನಿರೂಪಿಸಲು ಪ್ರಾಯೋಗಿಕತೆ ಎಂಬ ಸಾಧನ ಅಗತ್ಯವಾದರೆ, ವೈಚಾರಿಕತೆಗೆ ನಮ್ಮ ಬುದ್ಧಿಯೇ ಸಾಧನ. ಆಧುನಿಕ ತೃತೀಯ ಜಗತ್ತಿನ ಸ್ತ್ರೀ ಸಮಾನತೆಯ ತತ್ವದಲ್ಲಿ ಆಸಕ್ತಳಾಗಿದ್ದು, ಆದಾಕೆಯ ಹಕ್ಕು ಎಂಬುದನ್ನು ಪ್ರತಿಪಾದಿಸಬೇಕಾದ ಅನಿವಾರ್ಯತೆ ಇಂದಿಗೂ ಇದೆ ಎಂದರೆ ಸಮಾಜ ಜೀವನದಲ್ಲಿ ಪುರುಷ ಪ್ರಾಬಲ್ಯದ, ಸ್ತ್ರೀ ಧಮನದ ಸಂಗತಿಗಳು ಇನ್ನೂ ಜೀವಂತ ಎಂಬುದಕ್ಕೆ ಬೇರೆ ಸಾಕ್ಷಿಗಳ ಅಗತ್ಯವಿಲ್ಲ. ಜಗತ್ತಿನ ಉಳಿದ ಎಲ್ಲ ಸಮಾಜಗಳಿಗಿಂತ ಸ್ತ್ರೀ ದೌರ್ಜನ್ಯದ ,ಸ್ತ್ರೀ ಸ್ವಾತಂತ್ರ್ಯ ಹರಣದ ವಿಚಾರದಲ್ಲಿ ನಾವು ಅವಿವೇಕದಿಂದ ಅತಿರೇಕದಿಂದ ವ್ಯವಸ್ಥೆಯನ್ನು ಕಟ್ಟಿಕೊಂಡಿರುವುದು ಸತ್ಯ.ವೈದಿಕ ಆಚರಣೆಗಳಲ್ಲಂತೂ ಆಕೆ ಶ್ರೂದನಿಗೆ ಸಮಳೆಂಬಂತೆ ನಿಕೃಷ್ಟವಾಗಿಯೇ ನೋಡಲಾಗುತ್ತದೆ. ಬಹುಶಃ ಇದು ಇಂದಿಗೂ ಜೀವಂತವಾಗಿದೆ. ಪೂಜೆ ಪುರಸ್ಕಾರಗಳಲ್ಲಿ ಸ್ತ್ರೀ ಪುರುಷನಂತೆ ಆದ್ಯಳಾಗಿ ಭಾಗವಹಿಸುವಂತಿಲ್ಲ, ಪೂಜಾಕಾರ್ಯಗಳನ್ನು ನೆರವೇರಿಸುವಂತಿಲ್ಲ. ಪುರುಷನಿಗೆ ಅರ್ಧಾಂಗಿಯಾಗಿ ಆತನ ಹಿಂದೆ ಎರಡನೆ ವ್ಯಕ್ತಿಯಾಗಿರಲಷ್ಟೇ ಆಕೆಗೆ ಬೆಲೆ.ದೇಗುಲಗಳಲ್ಲಿ ಪೂಜೆ ಪುರಸ್ಕಾರ ಪುರುಷನ ಹಕ್ಕು. ಶಾಸ್ತ್ರಾಧ್ಯಯನ, ಉಪನಯನ ಗಂಡಿಗೆ ಮಾತ್ರ. ಮಾತಾಪಿತೃಗಳ ಅಂತ್ಯಸಂಸ್ಕಾರ ಗಂಡು ಮಗನೇ ಮಾಡಬೇಕೆಂಬ ನಿಯಮಗಳು ಇವೆಲ್ಲವೂ ಪುರೋಹಿತ ಸಮುದಾಯದ ಸಮಯಸಾಧಕತನ ಹಾಗೂ ಹೆಣ್ಣನ್ನು ಧಮನಿಸುವ ತಂತ್ರಗಳಾಗಿದ್ದವು. ಆಚರಣೆಯ ಹಲವು ಸಂಗತಿಗಳು ಹೆಣ್ಣನ್ನು ಮೆಟ್ಟುವ ಆಕೆಯ ಅಸ್ತಿತ್ವವನ್ನು ನಿರಾಕರಿಸುವ ಹಿನ್ನೆಲೆಯಲ್ಲಿಯೇ ಪ್ರಚಲಿತದಲ್ಲಿರುವುದು ಸ್ಪಷ್ಟ. ಆಕೆಗೆ ವೇದಾಧ್ಯಯನಕ್ಕೆ ಅವಕಾಶವಿರಲಿಲ್ಲ, ಗಂಡ ಸತ್ತ ಹೆಣ್ಣು ಪತಿಯ ಚಿತೆಯೊಡನೆ ಸಹಗಮನ ಮಾಡಿಕೊಳ್ಳುವುದು. ಇಲ್ಲದಿರೆ ವಿಧವೆಯಾಗಿ ಬದುಕಿದರೆ ಕೇಶಮುಂಡನಮಾಡಿಸಿ ವಿಕಾರವಾಗಿ ಕಾಣುವಂತೆ ಆಕೆಯ ಹೊಂಗನಸುಗಳ ಹೊಸಕಿಹಾಕುವುದು. ಪೂಜಾವಿಧಿವಿಧಾನಗಳಿಂದ ಹೊರಗಿಡುವುದು, ಇವೆಲ್ಲವೂ ಸ್ತ್ರೀಯರ ದುರ್ಭರ ಬದುಕಿನ ಸಂಗತಿಗಳಾಗಿದ್ದವು. ಇಂದಿಗೂ ಆಕೆ ಜನಿವಾರ ಧರಿಸುವಂತಿಲ್ಲ. ಮೇಲಾಗಿ ಶೀಲವೆನ್ನುವುದು ಹೆಣ್ಣಿಗೆ ಮಾತ್ರ ಅನ್ವಯ ಪದ ಎಂಬೆಲ್ಲ ಸಂಗತಿಗಳು ಸ್ತ್ರೀಯ ವ್ಯಕ್ತಿತ್ವವನ್ನು ಕುಂದಿಸುವ, ಆಕೆಯ ಮೌಲ್ಯವನ್ನು ಕಡೆಗಣಿಸುವ ತಂತ್ರಗಳೇ ಆಗಿವೆ.
ಧರ್ಮ, ಪುರಾಣ, ಮತಗಳಲ್ಲಿಯ ಊರ್ಜಿತ ಮೌಲ್ಯಗಳನ್ನು ಸ್ವೀಕರಿಸಿ ಅನಿಷ್ಟವಾದವುಗಳನ್ನು ನಿರಾಕರಿಸಬೇಕಾದ ಅನಿವಾರ್ಯತೆಯನ್ನು ಮನಗಂಡಿದ್ದ ವಚನಕಾರರು ಇವೆಲ್ಲವನ್ನೂ ಹನ್ನೆರಡನೆಯ ಶತಮಾನದಲ್ಲಿಯೇ ಪ್ರಶ್ನಿಸಿದ್ದರು. ಅಂದೇ ಸಮಾನತೆಯ ಮಂತ್ರವನ್ನು ಪಠಿಸಿದ್ದರು. ಹೆಣ್ಣಿನದು ಪುರುಷನಿಗಿಂತ ವಿಶಿಷ್ಟವಾದ ಶಾರೀರಿಕ ಸಾಮರ್ಥ್ಯ ನಿಜಕ್ಕೂ. ಇನ್ನೊಂದು ಜೀವವನ್ನು ಉದರದಲ್ಲಿಟ್ಟು ಪೋಷಿಸುವ, ಆ ಮೂಲಕ ಮನುಜಕುಲದ ಉದ್ಧಾರವನ್ನು ಶತಶತಮಾನಗಳಿಂದ ಸಹನೆಯಿಂದ ಕಾಪಾಡುವ ಕೈಂಕರ್ಯದಲ್ಲಿ ತಲ್ಲೀನಳಾದ ಮಹಿಳೆಯ ಪರಮತೆಯನ್ನು ಉದ್ದೇಶಪೂರ್ವಕವಾಗಿಯೇ ಸ್ವಾರ್ಥ ದೃಷ್ಟಿಯಿಂದಲೇ ನಿರ್ಲಕ್ಷಿಸಲಾಗಿತ್ತು. ಬರಿಯ ದೇಹ ಭಿನ್ನತೆಯಿಂದಲೇ ಹೆಣ್ಣನ್ನು ಇಷ್ಟೆಲ್ಲಾ ಪಡಿಪಾಟಲುಗಳಿಗೆ ಒಳಗು ಮಾಡಿದ ಸಮಾಜ ಆಕೆಯ ಮನಸ್ಸು, ಬುದ್ಧಿ ಹೃದಯಗಳ ಅದರೊಳಗಿನ ಆತ್ಮವ ಅನುಲಕ್ಷಿಸದೇ ಅವಗಣನೆಗೆ ಈಡುಮಾಡಿದ್ದನ್ನು ವಚನಕಾರರು ಗಂಭೀರವಾಗಿಯೇ ವಿಡಂಬಿಸಿದ್ದಾರೆ. ದೇವರ ದಾಸಿಮಯ್ಯನ ಈ ವಚನ ಸಮಾನತೆಯ ಬೀಜಮಂತ್ರವೇ ಆಗಿದೆ
ಮೊಲೆ ಮೂಡಿಬಂದರೆ ಹೆಣ್ಣೆಂಬರು
ಗಡ್ಡಮೀಸೆ ಬಂದರೆ ಗಂಡೆಂಬರು
ನಡುವೆ ಸುಳಿವಾತ್ಮ ಗಂಡೂ ಅಲ್ಲ, ಹೆಣ್ಣು ಅಲ್ಲ, ಕಾಣಾ ರಾಮನಾಥ
ಎಂದು ತರ್ಕಿಸುತ್ತಾರೆ. ಆತ್ಮಕ್ಕೆ ಲಿಂಗಬೇಧವಿಲ್ಲ ಎಂಬುದು ಎಷ್ಟು ಸರಳಸಂಗತಿಯಾಗಿದ್ದರೂ ಪುರುಷ ಸಮಾಜ ತಾನು ಗಂಡು ಎಂಬ ನೆಲೆಯಲ್ಲಿ ಭಿನ್ನತೆಯನ್ನು ಶ್ರೇಷ್ಟತೆಯನ್ನು ತಾನಾಗಿಯೇ ಸೃಷ್ಟಿಸಿಕೊಂಡ ಪ್ರಭಾವಲಯ.
ಬಸವಣ್ಣ ಹುಟ್ಟುಹಾಕಿದ ಧರ್ಮ ವೈದಿಕ ಧರ್ಮದಲ್ಲಿಯ ಮೌಢ್ಯಾಚರಣೆಗಳಿಗೆ ಪಟ್ಟಭದ್ರ ಹಿತಾಸಕ್ತಿಗಳಿಗೆ ಸಡ್ಡುಹೊಡೆದು ಮೂಡಿಬಂದ ಹೊಸ ವಿನೂತನ ಮೂಲವಾಗಿತ್ತು. ಸ್ತ್ರೀ ಸಮಾನತೆಯನ್ನು ಪ್ರತಿಪಾದಿಸಿದ ಆದ್ಯಪುರುಷ ಬಸವಣ್ಣ. ಸ್ತ್ರೀ ಸಮಾನತೆ,ವಿಧವಾ ವಿವಾಹ, ಸ್ತ್ರೀ ಶಿಕ್ಷಣ, ಅಂತರ್ಜಾತಿಯ ವಿವಾಹ ಹೀಗೆ ಸಾಮಾಜಿಕ ಕ್ರಾಂತಿಯ ಕಹಳೆಯನ್ನೆ ಊದಿದ್ದರು. ಮಹಿಳೆಯ ಸಾಮಾಜಿಕ ಮಟ್ಟವನ್ನು ಸುಧಾರಿಸುವ ಇರಾದೆಯಿಂದ ಧಾರ್ಮಿಕ ವಲಯದಲ್ಲಿ ಸ್ತ್ರೀಯರಿಗೆ ಲಿಂಗದೀಕ್ಷೆಯ ಅವಕಾಶ ಕಲ್ಪಿಸಿದ್ದರು. ಹಾಗಾಗೇ ಅನುಭವ ಮಂಟಪದಲ್ಲಿ ಅಕ್ಕಮಹಾದೇವಿ, ಮುಕ್ತಾಯಕ್ಕ, ಮಹಾದೇವಿಯಕ್ಕ, ಆಯ್ದಕ್ಕಿ ಲಕ್ಕಮ್ಮ, ಮುಂತಾದ ಶಿವಶರಣೆಯರು ಪುರುಷ ಶರಣರಿಗೆ ಸಮಾನವಾಗಿ ಭಾಗಿಗಳಾಗಿದ್ದರು. ಆತ್ಮ ಸಾಕ್ಷಾತ್ಕಾರ ಸ್ತ್ರೀಯರಿಂದಲೂ ಸಾಧ್ಯವೆಂಬುದನ್ನು ಈ ಶರಣೆಯರು ತೋರಿಸಿಕೊಟ್ಟರು.
ಮೊಟ್ಟಮೊದಲ ಕವಯತ್ರಿ ಎಂದು ಹೆಸರಾದ ಅಕ್ಕಮಹಾದೇವಿ ಅಸಾಧಾರಣ ಸ್ತ್ರೀರತ್ನ.ಹೆತ್ತವರಿಗಾಗಿ ತನ್ನ ಮೆಚ್ಚಿದ ರಾಜ ಕೌಶಿಕನ ಕೈಹಿಡಿದರೂ ಆತನ ಭೋಗ ಜೀವನದಿಂದ ಬಸವಳಿದು ತ್ಯಜಿಸಿ ಚೆನ್ನ ಮಲ್ಲಿಕಾರ್ಜುನನೆ ತನ್ನ ಗಂಡನೆಂದು ಸ್ವೀಕರಿಸಿ ಉಳಿದ ಗಂqರನ್ನೆಲ್ಲಾ ಒಲೆಯೊಳಗಿಕ್ಕು ಎಂದು ಜರೆದ ಧೈರ್ಯವಂತೆ. ದಿಗಂಬರೆಯಾಗಿ ಶಿವಮೊಗ್ಗೆಯ ಉಡುತಡಿಯಿಂದ ಕಾಲ್ನಡಿಗೆಯಲ್ಲಿ ಕಲ್ಯಾಣದವರೆಗೆ ನಡೆದು ಬರುವಾಗ ತನ್ನ ಮೆಚ್ಚಿ ಬಂದ ಕ್ಷುಧ್ರ ಪುರುಷರಿಂದ ಉಂಟಾದ ಹತ್ತು ಹಲವು ಅನಾಚಾರದ ವರ್ತನೆಗಳನ್ನು ಘಟನೆಗಳನ್ನು ಮೀರಿ ಮಾನಸಿಕ ಸ್ಥೈರ್ಯ ಧೈರ್ಯವನ್ನು ಪ್ರದರ್ಶಿಸಿದವಳು. ಸನ್ಮಾರ್ಗದ ಗತಿಯನ್ನು ತೋರಿದವಳು. ಅನುಪಮ ಸುಂದರಿಯಾದ ಆಕೆ ತನ್ನ ಯೌವನದ ದೇಹವನ್ನು ಬರಿಯ ಕೇಶದಿಂದಲೇ ಮುಚ್ಚಿಕೊಂಡು ದೇಹದ ವಾಂಛೆಯನ್ನು ಮೀರಿದ ಅತೀತವಾದ ಮಾನಸಿಕ ಧೃಡತೆಗೆ ಸಾಕ್ಷಿಯಾಗಿದ್ದಳು. ಆಕೆಯ ಸುಂದರ ಶರೀರ ನೋಡಿ ಮೋಹಿಸಿ ಬಂದ ಗಂಡುಗಳನ್ನು ಆಕೆ ಹಳಿವ ಪರಿಗೆ ಉದಾಹರಣೆಯಾಗಿ ಈ ವಚನ ನಿಲ್ಲುತ್ತದೆ.
ಬಟ್ಟಿಹ ಮೊಲೆಯ ಭರದ ಜವ್ವನದ ಚೆಲುವ ಕಂಡು ಬಂದಿರಣ್ಣಾ!
ಅಣ್ಣಾ ನಾನು ಹಸುಗೂಸಲ್ಲ! ಅಣ್ಣಾ ನಾನು ಸೂಳೆಯಲ್ಲ!
ಅಣ್ಣಾ ಮತ್ತೆ ನನ್ನ ಕಂಡು ಆರೆಂದು ಬಂದಿರಣ್ಣ?
ಚೆನ್ನ ಮಲ್ಲಿಕಾರ್ಜುನನಲ್ಲದ ಮಿಕ್ಕಿನ ಪುರುಷನು
ನಮಗಾಗದ ಮೋರೆ ನೋಡಣ್ಣ!
ಗಂಡಿನ ಕಾಮ ದೃಷ್ಟಿಗೆ ಉತ್ತರವಾಗಿ ದಿಟ್ಟವಾಗಿ ಆಕೆ ಉತ್ತರಿಸುತ್ತಾಳೆ. ತನ್ನ ಚೆನ್ನಮಲ್ಲಿಕಾರ್ಜುನನ ಹೊರತಾದ ಗಂಡಿರ ಮೋರೆಗಳು ಆಕೆಗೆ ಅಸಹ್ಯವೆನಿಸುತ್ತವೆ. ಇದನ್ನು ಮುಖಕ್ಕೆ ಹೊಡೆದಂತೆ ನುಡಿವ ಅಕ್ಕ ಆತ್ಮ ಸಂಗಾತದ ಅನನ್ಯತೆಗೆ ಮೊರೆಹೋಗುತ್ತಾಳೆ. ಕೌಶಿಕನ ಅರಮನೆಯ ಸುಖಸುಪ್ಪತ್ತಿಗೆ ಆಕೆಗೆ ಮುಳ್ಳಹಾಸಿಗೆ. ಪುರುಷರನ್ನು ನಿರಾಕರಿಸುತ್ತಾಳೆ. ಸ್ತ್ರೀ ದೌರ್ಜನ್ಯವನ್ನು ನಯವಾದ ಮಾತುಗಳಿಂದಲೇ ಆದರೆ ಧೃಢವಾಗಿ ಧಿಕ್ಕರಿಸುವ ಆಕೆ ಸ್ತ್ರೀತ್ವದ ಮಹಿಮೆಯನ್ನು ಎತ್ತಿ ಹಿಡಿವ, ಶೋಷಣೆಯನ್ನು ಎದುರಿಸಿ ನಿಲ್ಲುವ ಸಮರ್ಥ ಶಕ್ತಿಯಾಗಿ ಕಾಣುತ್ತಾಳೆ. ಸ್ತ್ರೀ ಬದುಕು ಮನೆಯ ನಾಲ್ಕು ಗೋಡೆಗಳಿಗೆ ಸೀಮಿತವಾಗಿದ್ದ ಕಾಲದಲ್ಲಿ ಪುರುಷನಿಗೆ ಸಮಾನ ಜ್ಞಾನ, ವಿಚಾರ, ಆಚಾರ, ಭಕ್ತಿ ಆತ್ಮ ಸಾಕ್ಷಾತ್ಕಾರಗಳಿಂದ ಮಾನ್ಯಳಾದ ಅಪೂರ್ವ ಮಹಿಳೆ.
ತನ್ನ ಉತ್ಕೃಷ್ಟ ವಿಚಾರ ತತ್ವ ಪರಿಪಾಲನೆಯಿಂದಾಗಿ ವಚನ ಸಾಹಿತ್ಯ ವಿಶ್ವಸಾಹಿತ್ಯದಲ್ಲಿ ತನ್ನದೇ ಆದರಣೀಯತೆಯನ್ನು ಹೊಂದಿದೆ. ಸ್ತ್ರೀ ಶೋಷಣೆ ವಿರುದ್ಧ ಎತ್ತಿದ ಮೊದಲ ದನಿಯಾಗಿ, ಸಮಾನತೆಯನ್ನು ಪ್ರತಿಪಾದಿಸಿದ ಮೊದಲ ಧರ್ಮವಾಗಿ ಮೂಡಿಬಂದ ಈ ಧರ್ಮವೂ ಕಾಲಕ್ರಮೇಣ ತನ್ನ ಮಹತ್ತನ್ನು ಕಳೆದುಕೊಂಡು ಒಳಜಗಳದಲ್ಲಿ ತಲ್ಲೀನವಾಗಿರುವುದು, ಅಸಮಾನತೆಯ ಪುನಃ ಹೊದ್ದುಕೊಳ್ಳುತ್ತಿರುವುದ ನೋಡಿದರೆ ಖೇದವಾಗುತ್ತದೆ. ಆದಾಗ್ಯೂ ವಚನಗಾರ್ತಿಯರು ಭಾರತದಲ್ಲಿ ಆಧುನಿಕ ಸ್ತ್ರೀತ್ವದ ಪರಿಕಲ್ಪನೆಗಳಿಗೆ ಇಂಬು ಕೊಟ್ಟಿದ್ದರು ಎಂಬುದು ಅಷ್ಟೇ ಸತ್ಯ.
*****