ಮರೆಯಲ್ಲಿ ನಿಂತು
ಮಣಿದಿಗಂತಗಳನ್ನು ಬರೆಯುವ
ಸತ್ಯದ ತರಣಿಯೇ,
ನನ್ನ ಹರಣದ ನಿಜಗೆಳೆಯ ಇನ್ನಾರು ? ನೀನೇ.
ಈ ಮೊಗ್ಗು ಅರಳಿದ್ದು,
ಹಂಬಲಕ್ಕೆ ಹೊರಳಿದ್ದು,
ಮೆಚ್ಚಿದ ದುಂಬಿಯ ಹುಚ್ಚಿಗೆ
ಕಾಯಿಬಿಟ್ಟು ಫಲಿಸಿದ್ದು
ನಿನ್ನರಸಿ ಅಭಿನಯಿಸಿದ ಮಧುನೃತ್ಯದ ಒಂದೊಂದು ಹೆಜ್ಜೆ
ಏನೇನನ್ನೋ ಒಲಿದು
ನಿನ್ನನ್ನಷ್ಟೇ ಮರೆತದ್ದೂ
ಕಸಕಡ್ಡಿಗಳನ್ನೆಲ್ಲ ನುಡಿದು
ಪತಿಯ ಹೆಸರನ್ನೆ ಹೇಳಲು ಒಲ್ಲದ
ಸತಿಯ ಲಜ್ಜೆ

ನೋಡು
ನಿನ್ನ ನೆನಪಾದೊಡನೆ ಇಲ್ಲಿ
ಹೊನ್ನ ಬೆಳಕು ಹುಟ್ಟಿದೆ,
ಮಣ್ಣಿನ ಮರೆಯಲ್ಲಿ ಸಣ್ಣಗೆ
ಮಲ್ಲಿಗೆ ಪರಿಮಳ ಎದ್ದಿದೆ,
ಅಲೆಗಳ ಕಿರಿಕಿರಿ ಹರಿದು
ಕೆಳಕಡಲಿನ ಅಖಂಡತೆ ತೆರೆದಿದೆ;
ಜಾತ್ರೆಗೆ ಹೊರಟ ಜೀವಕ್ಕೆ ಉಳಿದ
ಯಾತ್ರೆಯ ನೆನಪಾಗಿ,
(ಬದಲಾಗದ ಹೊನ್ನು ಹೆಣ್ಣು ಮಣ್ಣು)
ನಿನ್ನೊಂದಿಗೆ
ಪಡಲಾಗದ ಸುಖದ ಹಂಬಲದಲ್ಲಿ
ಸುಡುತ್ತಿವೆ.
*****