ಕರುಣಿಕರು ಕೊಟ್ಟ ಅರಪಾವ ಜೋಳದಿಂದ
ಹೊಟ್ಟೆ ಬರ ಹಿಂಗುವುದ್ಯಾಂಗಲೋ ಮನಸೇ ||ಪ||

ಸ್ಥಿರವಲ್ಲ ಸಂಸಾರ ಕೆರವಿನಟ್ಟಿಯ ಸರಿ
ಬರಿದೆ ಆಸೇಕ ಬಿದ್ದೆಲ್ಲೋ ಮನಸೇ ||ಅ.ಪ.||

ನೇಮಿಸಿ ದೇಶಪಾಂಡೆ ಭೀಮರಾಯನೆಂಬೊ
ನಾಮವನು ಕೇಳಿ ಬಂದೆಲ್ಲೋ ಮನಸೇ
ಇವನ್ನು ಕೊಡುತಿದ್ದಿಲ್ಲ ಶಿವನೇ ಸದ್ಗುರು ಬಲ್ಲಾ
ಅವರಪ್ಪ ಬಲು ಜ್ಞಾನಿಯೋ ಮನಸೇ ||೧||

ಸತಿ ಸುತರ ಹಸಿವಿಗೊದಗದ ಕಾಳು ಮನಿಗೊಯ್ಯೋ
ಮತಿಗೇಡಿಯೆನ್ನುತಿಹರೋ ಮನಸೇ
ಜತನದಲಿ ಮಹಾರಾಯನ ಸರಕಿನೊಳಗೆ ಸುರುವಿ
ಹಿತದಿ ಹಿಂದಕ್ಕೆ ನೀ ನಡಿಯಲೋ ಮನಸೇ ||೨||

ಆರು ಬೇಡಿದರಿಲ್ಲಾ ಆರು ಕಾಡಿದರಿಲ್ಲಾ
ಪ್ರಾರಬ್ದ ಕೃತಭೋಗವು ಮನಸೇ
ಚಾರುತರದ ವೃಷಭನಮಂತ್ರ ಬಲವಿರಲು
ನರರ ಹಂಗಿನ್ನೇನಲೋ ಮನಸೇ ||೩||

ಇಂದಿಗೆ ದುಷ್ಕಾಳ ವಂದೇ ಎನ್ನಲಿಬ್ಯಾಡಾ
ಮುಂದೆ ಪ್ರಳಯ ಕಾಲವೋ ಮನಸೇ
ಬಂದ ಭವಾ ಕಳಿದು ಶಿಶುನಾಳ ಮಂದಿರದಿ ಗೋ-
ವಿಂದ ಗುರುವಿನ ಹೊಂದಿಕೋ ಮನಸೇ ||೪||

****