ರಾಮ ರಹಿಮ ಕ್ರಿಸ್ತ ಬುದ್ಧರನು ಹುಟ್ಟಿಸಿ
ಚದುರಂಗ ಪಟದ ನಾಲ್ಕೂ ದಿಕ್ಕಿಗೆ ಇಟ್ಟು
ಧರ್ಮಗಳ ದಾಳ ಎಸೆಯುತ್ತಾ
ದಾಳಿ ಪ್ರತಿದಾಳಿ ಕೊಲೆ ಸುಲಿಗೆ
ಜನ ಸಾಮಾನ್ಯರ, ಸೈನಿಕರ, ದುರಂತನೋಡುತಿರುವ
ದೇವದೇವಾ ಸೃಷ್ಟಿಕರ್ತಾ ಎಲ್ಲಿರುವಿಯೋ!

ಗುಜರಾತ್ ತಾಲಿಬಾನ್ ಇಸ್ರೇಲ್ ಪ್ಯಾಲಸ್ಟೇನ್‌ಗಳಲಿ
ನೋವು ದುಃಖ ದುಮ್ಮಾನಗಳ ಸಾಲು-
ಹಾಡೇ ಹಗಲಿಗೆ ಹೆದರಿ
ಹೆಣ್ಣುಗಳು ಗುಬ್ಬಚ್ಚಿಯಾಗುವದು
ಕ್ರೂರಿಗಳು ಅರ್ಭಟಿಸಿ ಮನೆ ದೇಶಗಳಿಗೆ
ಕೊಳ್ಳಿ ಇಡುವದನು ನೋಡುತ
ಕಲ್ಲಿನಂತೆ ಕುಳಿತ ಸೃಷ್ಟಿಕರ್ತ ಎಲ್ಲಿರುವಿಯೋ!

ಆದರೂ ನಿನಗಾಗಿ ಮಂದಿರಕಟ್ಟಲು
ಮಸೀದಿ ಕಟ್ಟಲು ಚರ್ಚುಕಟ್ಟಲು
ನೆತ್ತರುಹರಿಸಿ ಸಜ್ಜಾಗುವ ಭಕ್ತರೂ ಇರುವ
ಹುಚ್ಚರೂ ಪ್ರಾರ್ಥಿಸಿ ಉಪಾಸಿಸಿ
ಮೂರ್ಛೆ ಬೀಳುವ ಉಸಿರುಗಳನು ಕೇಳಿಸಿಕೊಳ್ಳುತ
ಕಿವುಡು ಮೂಕ ಕುರುಡರಂತಿರುವ
ಅಜ್ಞಾತವಾಸಿ ಸೃಷ್ಟಿಕರ್ತಾ ಎಲ್ಲಿರುವಿಯೋ!
*****

ಲತಾ ಗುತ್ತಿ
Latest posts by ಲತಾ ಗುತ್ತಿ (see all)