ಆಸೆಯುಳ್ಳನ್ನಕ್ಕ ರೋಷ ಬಿಡದು.
ಕಾಮವುಳ್ಳನ್ನಕ್ಕ ಕಳವಳ ಬಿಡದು.
ಕಾಯಗುಣವುಳ್ಳನ್ನಕ್ಕ ಜೀವನ ಬುದ್ಧಿ ಬಿಡದು.
ಭಾವವುಳ್ಳನ್ನಕ್ಕ ಬಯಕೆ ಸವೆಯದು.
ನಡೆಯುಳ್ಳನ್ನಕ್ಕ ನುಡಿಗೆಡದು.
ಇವೆಲ್ಲವು ಮುಂದಾಗಿರ್ದ್ದು ಹಿಂದನರಿದೆನೆಂಬ
ಸಂದೇಹಿಗಳಿರಾ ನೀವು ಕೇಳಿರೋ.
ನಮ್ಮ ಶರಣರು ಹಿಂದೆ ಹೀಗೆ
ಅರಿದರೆಂದರೆ, ಆಸೆಯನಳಿದರು.
ರೋಷವ ಹಿಂಗಿದರು.
ಕಾಮನ ಸುಟ್ಟು ಕಳವಳ ಹಿಂಗಿದರು.
ಕಾಯ ಗುಣವಳಿದು ಜೀವನ ಬುದ್ಧಿಯ ಹಿಂಗಿದರು.
ಭಾವವ ಬಯಲು ಮಾಡಿ ಬಯಕೆ ಸವೆದರು.
ಹಿಂದನರಿದು ಮುಂದೆ ಲಿಂಗವೆ ಗೂಡಾದ
ಶರಣರ ಈ ಸಂದೇಹಿಗಳೆತ್ತ ಬಲ್ಲರೊ
ಅಪ್ಪಣಪ್ರಿಯ ಚನ್ನಬಸವಣ್ಣಾ?
*****

ಸಂಗ್ರಹ: ರಾ|| ಸಾ|| ಫ. ಗು. ಹಳಕಟ್ಟಿ