ಸಂಶೋಧಕರ ಪುಟಗಳಿಂದ

ಲಕ್ಷಾಂತರ ವರ್ಷಗಳ ಹಿಂದೆ ಆರೇಬಿಯ ದ್ವೀಪಕಲ್ಪ ಆಫ್ರಿಕ ಖಂಡದ ಭಾಗವೇ ಆಗಿತ್ತು. ನಂತರ ಭೂತಳದ ಅಗ್ನಿಕೋಷ್ಟದ ಆವರಣದಲ್ಲಿ ಉಷ್ಣತೆಯ ಪ್ರವಾಹ ಹೆಚ್ಚಾಗಿ ಅಧಿಕ ಪ್ರಮಾಣದಲ್ಲಿ ಬಿರುಕೊಡೆದು ಸರಿಯತೊಡಗಿತು. ಈ ಸರಿಯುವಿಕೆಯ ಸಮಯದಲ್ಲಿ ಅರೇಬಿಯನ್ (ಅರಬ್ಬಿ) ಸಮುದ್ರ ಮುನ್ನುಗ್ಗ ತೊಡಗಿತು. ಹೀಗೆ ಬಿರುಕೊಡೆದ ಭೂಮಿ ಉತ್ತರಕ್ಕೆ ಸರಿಯುತ್ತಿದ್ದಂತೆಯೇ ಅಲ್ಲಿ ನುಗ್ಗಿದ ಅರೋಬಿಯನ್ ಸಮುದ್ರದ ಒಂದು ಭಾಗ ಕೆಂಪು  ಎಂದು ಹೆಸರು
ಹೊತ್ತು ಆ ಸ್ಥಳವನ್ನಾವರಿಸಿಕೊಂಡಿದೆ.

ಈ ಭೂ ಭಾಗ ಇನ್ನೂ ನಿಧಾನವಾಗಿ ಒಂದೇ ಸಮನೇ ಚಲಿಸುತ್ತಲೇ ಇದೆ. ಅಂತೆಯೇ ಕೆಂಪು ಸಮುದ್ರದ ಆಕಾರ ಕೂದ ಬದಲಾಗುತ್ತಲೇ ಇದೆ. ಆದರೆ ಈ ಬದಲಾವಣೆ ಬರಿಗಣ್ಣಿನಿಂದ ನೋಡಲಸಾಧ್ಯ. ಭೂಗರ್ಭ ಶಾಸ್ರಜ್ಞರಿಗೆ ಮಾತ್ರ ಅದರ ಪರಿಣಾಮ ಗೊತ್ತಾಗುವುದು. ಉತ್ತರಕ್ಕೆ ಸರಿದ ಅರೇಬಿಯನ್ ಭಾಗ ಇಳಿಜಾರಾಗಿದ್ದು, ಪಶ್ಚಿಮದೆಡೆಗೆ ಎತ್ತರವಾಗಿದ್ದು ದಕ್ಷಿಣಕಡೆಗೆ ವಾಲಿದೆ. ಭೂತಳದ ಉಷ್ಣಪ್ರವಾಹದಲ್ಲಿ ಬಿರುಕುಬಿಟ್ಟ ಸಮಯದಲ್ಲಿ ಹೊರಬಿದ್ದು ಹಬ್ಬಿರುವ ಲಾವಾದ ಗುರುತುಗಳನ್ನು ಇಂದು ನಾವು ಪಶ್ಚಿಮದೆಡೆಗೆ ನೋಡಿದೆವು. ಜೆಡ್ಡಾ, ಮಕ್ಕಾ ಸುತ್ತೆಲ್ಲ ಈಗಷ್ಟೇ ಕುದಿದು
(Boiled) ನಿಂತಂತೆ ಕಾಣಿಸುವ  ಉಬ್ಬು ತಗ್ಗುಗಳಿವೆ. ದಕ್ಷಿಣದೆಡೆಗೆ ಕೆಂಪುಸಮುದ್ರದ ದಂಡೆ ನೋಡಿದೆವು. ಇದಕ್ಕೆ ತಿಹಾಮಾತೀರ ಎಂದು ಕರೆಯುತ್ತಾರೆ. ಉತ್ತರ ದಿಕ್ಕಿಗೆ ‘ನಾಫೂದ್’ ಮರಭೂಮಿ ಗುಲಾಬಿ ಮಿಶ್ರಿತ ಉಸುಕಿನ ಉಬ್ಬು ತಗ್ಗು ಗಳನ್ನು ಹೊಂದಿದ್ದರೆ, ದಕ್ಲಿಣದೆಡೆಗೆ ‘ರಬ್‌ ಅಲ್ ಖಾಲಿ’ ಜಗತ್ತಿನಲ್ಲಿಯೇ ಅತೀ ದೊಡ್ಡ ಮರುಭೂಮಿ ಇದೆ. ಇದೊಂಡು ಉಸುಕಿನ ಸಮುದ್ರ.

ಅಂತರ್ರಾಷ್ಟ್ರೀಯ ಹೆದ್ದಾರಿಗಳು ಆದಿಕಾಲದಿಂದಲೂ ಆಫ್ರಿಕ, ಯುರೋಪ್, ಮತ್ತು ಏಶಿಯಾ ಖಂಡಗಳನ್ನು   ಸಂಪರ್ಕಿಸುತ್ತಿವೆ. ಹಾಗೇ ಈ ಭೂಖಂಡಗಳು ಮೂರು ಪ್ರಮುಖ ಏಕ ದೈವತ್ವ ಸಾರುವ ಧರ್ಮಗಳ ವೇದಿಕೆಯಷ್ಟೇ ಅಗಿರದೆ, ಅಮೋಘ, ಹಾಗೂ ನವಿರೇಳಿಸುವ ಸಂಶೋಧನೆಗಳ ಮತ್ತು ಮಾನವನ ಸಾಧನಗಳಿಗೆ ಹೆಸರುವಾಸಿ-ಯಾಗಿವೆ. ಈ ಪ್ರದೇಶದ ನಾಗರೀಕತೆಗಳು ಅಭಿವೃದ್ಧಿ ಹೊಂದಿ ನಂತರ ವಿಜ್ಞಾನ-ಕಲೆ ಸಾಹಿತ್ಯ ಹಾಗೂ ತತ್ವಜ್ಞಾನಗಳ ಶ್ರೀಮಂತ ಸಂಪ್ರದಾಯವೂ ಆಗಿವೆ. ವಿಷಾದ ವೇನೆಂದರೆ ಈ ನಾಡುಗಳಲ್ಲೀಗ Fundamentalism ಮತ್ತು terrorism ಮಾತ್ರ ಅಭಿವೃದ್ಧಿ ಹೊಂದುತ್ತಿರುವ ವಿಚಾರ ಎಲ್ಲರಿಗೂ ಗೊತ್ತೇ ಇದೆ.

ಕ್ರಿ.ಪೂ. 3000ದಲ್ಲಿ ಸುಮೇರಿಯನ್ ನಾಗರೀಕತೆಯು ಸಾಮಾನ್ಯವಾಗಿ ಮೆಸಪೊಟೆಮಿಯಾದ ಟೈಗ್ರಿಸ್-ಯುಪ್ರೆಟಿಸ್ ನದಿಗಳ ಸಮೀಪ (ಇಂದಿನ ಇರಾಕ್) ಇಜಿಪ್ಟನ ನೈಲ್ ನದಿ, ಹಾಗೂ ಇಂಡಸ್ (ಸಿಂಧು) ನದಿಗಳ ಸಮೀಪದ ಪ್ರದೇಶಗಳಲ್ಲಿ ಪ್ರಾರಂಭವಾಗಿರುವುದು ಕಂಡು ಬರುತ್ತದೆ. ನಂತರ ಈ ಸಂಸ್ಕೃತಿಯು ‘ಪೂರ್ವ ಮಧ್ಯ’ (Middle East) ಪ್ರಾಂತಕ್ಕೆ ಹರಡಿದಾಗ ಭೂಮಿಯ ಮಿಕ್ಕ ಪ್ರದೇಶದಲ್ಲಿ ವಾಸಿಸುವ ಜನರು ಮೂಲನಿವಾಸಿಗಳಾಗಿರುವುದು ಕಂಡು ಬರುತ್ತದೆ.

ಪೂರ್ವ ಮಧ್ಯ (Middle East) ಪ್ರದೇಶವು ಬೇರೆ ಬೇರೆ ಸಾಮ್ರಾಜ್ಯಗಳ ಅಳಿವು ಹಾಗೂ ಉಳಿವುಗಳ, ಯುದ್ದಗಳ ಪರಾಕ್ರಮಗಳನ್ನು ಸಾರುತ್ತವೆ. ಬರೆದಿಟ್ಟ ದಾಖಲೆಗಳನ್ನು ನೋಡಿದಾಗ ಪೂರ್ವ ಮಧ್ಯಭಾಗದ ಜನರು ನಾಗರಿಕ ಜೀವನವನ್ನು ಹೊಂದಿದ್ದು, ಅದಲ್ಲದೆ ಏಕ ಸರಕಾರಿ ಆಡಳಿತ, ಧರ್ಮ, ಸಾಮಾಜಿಕ ಹಾಗೂ ಅರ್ಥಿಕ ಸಂಸ್ಥೆಗಳ-ನ್ನೊಳಗೊಂಡಿರುವುದು ಒಂದು ವಿಶೇಷ ಸಂಗತಿಯಾಗಿದೆ. ಇದಕ್ಕೂ ಮೊದಲು ಫಲವತ್ತಾದ ಪ್ರದೇಶಗಳಲ್ಲಿ ಜನರು ಲೋಹಗಳನ್ನು ಶೋಧಿಸಿದ್ದು, ಹಾಗೂ ಲೋಹ ಗಳಿಂದ ಸಲಕರಣೆಗಳನ್ನು ಮತ್ತು ಆಯುಧಗಳನ್ನು ತಯಾರಿಸಿರುವುದು ಗೊತ್ತಾಗುವುದು.

ಕ್ರಿ.ಪೂ. 5500ರಲ್ಲಿ ಮೆಸೊಪೊಟೆಮಿಯಾದ ಸಮೃದ್ಧ ಭೂಮಿಯೊಂದಿಗೆ ಹಾಗೂ ಸೌದಿ ಅರೇಬಿಯಾದ ಸಮುದ್ರ ತಟಗಳೊಂದಿಗೆ ಆಗಲೇ ಭೂಮಿಯ ಬೇರೆ ಬೇರೆ ಭಾಗಗಳಿಗೆ ಸಂಪರ್ಕ ಹೊಂದಿರುವುದು ಕೂಡಾ ಕಂಡು ಬರುತ್ತದೆ. ಸುಮಾರು ಕ್ರಿ.ಪೂ. 2360ರಲ್ಲಿ ಮಧ್ಯಪೂರ್ವದ ಇತಿಹಾಸದಲ್ಲೇ ‘ಅಕ್ಕಡ’ ಸಾಮ್ರಾಜ್ಯ ಸ್ಥಾಪನೆಯಾಗಿರುವುದು ಗೊತ್ತಾಗುವುದು. ಈ ಪ್ರಾಂತವು ಮುಂದೆ ‘ಬೆಬಿಲೋನಿಯಾ’ ಎಂದು ಹೆಸರುವಾಸಿಯಾಯಿತು. ಬೆಬಿಲೊಲಿನಿಯಾದ ಪ್ರಾಚೀನ ನಗರವು ಕ್ರಿಪೂ. 18ನೆಯ ಶತಮಾನದಲ್ಲಿ ಹಮ್ಮುರಾಬಿ ರಾಜನಿಂದ ಆಳಲ್ಪಡುತ್ತಿತ್ತು. ಈ ಕಾಲದಲ್ಲಿ ವಿಜ್ಞಾನ, ಗಣಿತ, ಖಗೋಳ, ತತ್ವಶಾಸ್ರಗಳ ಬೆಳವಣಿಗೆಗಳು ಅಭಿವೃದ್ಧಿ ಹೊಂದತೊಡಗಿದವು.

ಕ್ರೀಪೂ. 1600ರಲ್ಲಿ ಹಿಟ್ಟಿ (Hitties) ರಾಜ್ಯವು ಪ್ರಬಲವಾಗಿ ಬೆಬಿಲೋನಿ ಯನ್ನರನ್ನು ಸೋಲಿಸಿ ಸಿರಿಯಾ ಪ್ರಾಂತ-ದವರೆಗೆ ಹರಡಿ ಇಜಿಪ್ಟ ದೇಶದೊಂದಿಗೆ ವ್ಯವಹಾರ ಒಪ್ಪಂದ ಮಾಡಿಕೊಂಡಿತು. ನಂತರ  ಸಾಮ್ರಾಜ್ಯವು ಬೆಬಿಲೋನಿ
ಯನ್ನರನ್ನು ಸುಮಾರು 400 ವರ್ಷ ಜಯಶಾಲಿಯಾಗಿ ಅಳಿರುವದು ಒಂದು ವಿಶೇಷ. ಅ ನಂತರ ಅಸ್ಸೇರಿಯನ್‌ರಿಂದ ಆಳಲ್ಪಟ್ಟಿತು.

‘ಅಸ್ಸೇರಿಯನ್ನರು’ ಮೆಸೊಪೋಟೆಮಿಯಾದ ಉತ್ತರ ಭಾಗದಲ್ಲಿ ಟೈಗ್ರಿಸ್ ನದಿ ದಂಡೆಯ ‘ಅಸ್ಸೆರ್’ನ್ನು ತಮ್ಮ ರಾಜಧಾನಿಯನ್ನಾಗಿ ಮಾಡಿಕೊಂಡರು. ಅಸ್ಸೆರಿಯನ್ನರ ಪ್ರಭಾವದಿಂದ ಬೆಬಿಲೋನಿಯ ಹಾಗೂ ಸುಮೇರಿಯನ್ನರು ಅಭಿವೃದ್ಧಿ ಹೊಂದಿದ್ದು, ಅಲ್ಲದೆ ವಾಣಿಜ್ಯ ಹಾಗೂ ಅಂಚೆ ಚೀಟಿಯ ಉಪಯೋಗ ಜಾರಿಗೆ ತಂದದ್ದು ಮತ್ತು ಬೆಳ್ಳಿಯ ತುಣುಕುಗಳನ್ನು ಹಣದ ಬದಲಿಗೆ ಉಪಯೋಗಿಸಿರುವುದು ಈ ಪ್ರಗತಿಪರ ಧೋರಣೆಗೆ ಒಂದು ಉದಾಹರಣೆ. ಅದಲ್ಲದೆ ದೊಡ್ಡ ವಾಚನಾಲಯಗಳನ್ನು ಹಾಗೂ ಸುಂದರ ಅರಮನೆ  ದೇವಾಲಯಗಳನ್ನು ಕಟ್ಟಿರುವುದೂ ಕಂಡು ಬರುತ್ತದೆ.
ಅವರು ಕ್ರಿ.ಪೂ 10 ರಿಂದ 8ನೇ ಶತಮಾನದವರೆಗೆ ಶಕ್ತಿಶಾಲಿಯಾಗಿ ಅಳಿದರು. 7ನೆಯ ಶತಮಾನದಹೊತ್ತಿಗೆ ಅಸ್ಸೇರಿಯನ್ನರನ್ನು ಮೇಡಾಸ್  ಬೆಬಿಲೋನ, ಹಾಗೂ ಪರ್ಶಿಯನ್ನರು ದಾಳಿ ಮಾಡಿ ನಾಶಮಾಡಿದರು.

ಬೆಬಿಲೋನ್ ಶಕ್ತಿಶಾಲಿಯಾಗಿ ಉಳಿದು ವಿದ್ವಾನರ್ ಕೇಂದ್ರವಾಗಿ ಹೆಸರುವಾಸಿ ಯಾಯಿತು. ಬಹುಕಾಲದ ನಂತರ ‘ಅರಮೇನಿಯ’ ಹಾಗೂ ‘ಅರಬ’ರಿಂದ ಅಳಲ್ಪಟ್ಟಿತು. ‘ನೆಬುಚೆದ್‌ನೆಜ್ಜ್‌ರ್’ ಈ ಸಾಮ್ರಾಜ್ಯದ ಹೆಸರುವಾಸಿ ರಾಜನೆಂದು ಪ್ರಖ್ಯಾತನಾಗಿದ್ದನು. ಅವನು ಇಜಿಪ್ಟನ್ನು  ಗೆದ್ದು ಕ್ರಿ.ಪೂ. 586ರಲ್ಲಿ “ಜೆರುಸ್ಲೆಮ್ ‘ರಾಜ್ಯವನ್ನು ಸೋಲಿಸಿ ಬೆಬಿಲಾನನ್ನು ಸಮೃದ್ಧಗೊಳಿಸಿದನು. ಇಲ್ಲಿನ ತೂಗು ಉದ್ಯಾನಗಳು, ಜಗತ್ತಿ ನ ಏಳು ಪ್ರಾಚೀನ ಅದ್ಭುತಗಳಲ್ಲಿ ಸೇರಿದ್ದವು. ಇಲ್ಲಿಯ ವಿಶಾಲ ಅರಮನೆಗಳು ಹಾಗೂ ಭವ್ಯ ದೇವಾಲಯಗಳಿಂದ ‘ಚಾಲಡಿಯನ್ ಬೆಬಿಲಾನ್’ ಜಗತ್ತಿನಲ್ಲೇ ಹೆಸರುವಾಸಿ ರಾಜಧಾನಿ ಯಾಗಿ ಮರೆಯಿತು. ಕ್ರಿ.ಪೂ. 539ರಲ್ಲಿ ಪರ್ಶಿಯದ ಸೈರಸ್ ಎಂಬ ಬಲಶಾಲಿ ರಾಜನಿಂದ ಬೆಬಿಲಾನ್ ಅಪಜಯ ಹೊಂದಿತು.

ಮುಂದೆ ಹಲವಾರು ಪರ್ಷಿಯನ್ ರಾಜರ  ಅನಂತರ ಸ್ವಲ್ಪ ಕಾಲ ಗ್ರೀಕರ, ಅಲೆಕ್ಸಾಂಡರನ ಅಧೀನತೆಯಲ್ಲಿ ಈ ಭೂಭಾಗ ಆಳಿದುದನ್ನು ಕಾಣುತ್ತೇವೆ. ಗ್ರೀಕರ ಸಂಸ್ಕೃತಿಯ ಪ್ರಭಾವವು ಪೂರ್ವ ಮಧ್ಯಭಾಗದ ದೇಶಗಳಿಗೆ ಸಾಕಷ್ಟು ಪ್ರಮಾಣದಲ್ಲಿ ಆಗಿರುವುದು ನಾವು ಕಾಣುತ್ತೇವೆ.

ನಂತರ ಪರ್ಶಿಯನ್ ಸಾಮ್ರಾಜ್ಯವು ಪರ್ಶಿಯನ್ನರಿಂದ ಕ್ರಿ.ಪೂ.250 ರಿಂದ 226ರವರೆಗೆ ಅಳಲ್ಪಟ್ಟಿತು. ಆ ಸಮಯದಲ್ಲಿ ‘ಅರೇಬಿಯನ್ ಕೊಲ್ಲಿ’,  ‘ಮೆಸೊಪೊಟಿಮಿಯಾ’ಗಳ ನಡುವೆ ನಿಕಟ ಸಂಬಂಧವಿದ್ದುನ್ನು ಸಂಶೋಧಕರು ಪತ್ತೆ ಹಚ್ಚಿದ್ಧಾರೆ. ನಂತರ; ‘ಹೆಬ್ರು’ (Hebrew) ಆಡಳಿತ ಸ್ಥಾಪನೆಯಾಗಿ ಈ ಭಾಗವು ಬೆಬಿಲೋನಿಯನ್ನರ ವಶದಲ್ಲಿ ಸೇರ್ಪಡೆಯಾಯಿತು. ನೆರೆಹೊರೆಯ ದೇಶಗಳಾದ ಇಜಿಪ್ತ, ಮೆಸೊಪೊಟೆಮಿಯಾ, ಗ್ರೀಕ್, ರೋಮನ್ನರು ನಂತರ ಹೆಬ್ರು ರಾಜ್ಯವನ್ನು ತಮ್ಮ ಸ್ವಾಧೀನದಲ್ಲಿ ಇಟ್ಟುಕೊಂಡಿದ್ದು ತಿಳಿದು ಬರುತ್ತದೆ.

ಕ್ರಿ.ಶ. 7ನೇ ಶತಮಾನದ ನಂತರ ಇಜಿಪ್ತ ಅರೇಬಿಯದ ವಶದಲ್ಲಿ ಸೇರಿತು. ಸಾವಿರಾರು ವರ್ಷಗಳಿಂದ ಅರಬ್ಬೀ ಭೂ ಖಂಡದಲ್ಲಿ ‘ಓಯಸಿಸ್’ ಪ್ರದೇಶಗಳಲ್ಲಿ ಜನವಸತಿ ಇದ್ದಿತು, ಆದಿ ಕಾಲದಿಂದಲೂ ಅರಬರಲ್ಲಿ ಎರಡು ಭಾಗಗಳನ್ನು ಅವರ ಸಂಸ್ಕೃತಿಯಿಂದ ಕಾಣಬಹುದಾಗಿದೆ. ಉತ್ತರಕ್ಕೆ ವಲಸೆ ಜನಾಂಗ ಹಾಗೂ ದಕ್ಷಿಣಕ್ಕೆ ನಾಗರಿಕ ಜನಾಂಗ ಎಂದು. ಈ ಎರಡು ಜನಾಂಗಗಳ ಮಧ್ಯೆ ಹೊಂದಾಣಿಕೆ ತರುವ ಯತ್ನ ಮೊಹಮ್ಮದ ಪೈಗಂಬರರ ಸಮಯದಲ್ಲಿ ನಡೆದದು ಈಗ ಇತಿಹಾಸವಾಗಿದೆ.

ಇತಿಹಾಸದ ಒಂದು ಘಟ್ಟದದಲ್ಲಿ ದಕ್ಷಿಣ ಅರಬ್ಬಿ ಪ್ರಾಂತವು ಪ್ರಮುಖ ವಾಣಿಜ್ಯ ಕೇಂದ್ರವಾಯಿತು. ಹಾಗೂ ರೋಮ್ ದೇಶದೊಂದಿಗೆ ವ್ಯವಹಾರ ಸಂಪರ್ಕ ಹೊಂದಿತು. ಈ ಪ್ರಾಂತವು ರೇಷ್ಮೆ ಹಾಗೂ ಅಭರಣಗಳ, ಮಸಾಲೆ ಸಾಮಾನುಗಳು ಆಮದು/ರಫ್ತು ವ್ಯಾಪಾರಕ್ಕಾಗಿ ಹೆಸರುವಾಸಿಯಾಯಿತು. ಈ ಸಾಮಾನುಗಳನ್ನೆಲ್ಲ ಪೂರ್ವ ಅಪ್ಪಿಕ ಹಾಗೂ ಭಾರತಗಳಿಂದ ಆಮದು ಮಾಡಿ ಮೆಡಿಟರೇನಿಯನ್ ಕೆಂಪುಸಮುದ್ರದ ಮೂಲಕ ಪಾಶ್ಚಿಮಾತ್ಯ ದೇಶಗಳಿಗೆ ಸರಬರಾಜು ಮಾಡುತ್ತಿದ್ದರೆನ್ನುವದು ಗೊತ್ತಾಗುವುದು, ಒಂಟೆಗಳನ್ನು ಒಂದು ವ್ಯಾಪಾರಿಕೇಂದ್ರದಿಂದ ಇನ್ನೊಂದು ವ್ಯಾಪಾರಿ ಕೇಂದ್ರಕ್ಕೆ ಸರಕು ಸಾಗಾಟಕ್ಕಾಗಿ ಉಪಯೊಳಿಗಿಸಲಾಗಿದ್ದು ಇಂತಹ ಕಾರವನ್ (Caravan) ಮಾರ್ಗಗಳು ಅರೇಬಿಯದಿಂದ ಇಜಿಪ್ಟ್ ಹಾಗೂ ಬೆಬಿಲೋನ್ ಪ್ರಾಂತದವರೆಗೆ ಚಾಚಿಕೊಂಡಿದ್ದವೆಂದು
ತಿಳಿಯಲಾಗಿದೆ. ಕೆಲವು ಮಾರ್ಗಗಳನ್ನು ಈಗಲೂ ಮಕ್ಕಾ ಹಾಗೂ ಮದೀನಾಕ್ಕೆ ಬರುವ ಯಾತ್ರಾರ್ಥಿಗಳು ಉಪಯೋಗಿಸುತ್ತಾರೆನ್ನುವುದು ನಾನೀಗ ನೋಡುತ್ತಿದ್ದೇವೆ.

ದಕ್ಷಿಣ ಅರೇಬಿಯಾದ ಭಾಗದಲ್ಲಿ ಮೇಲಿಂದ ಮೇಲೆ ಯುದ್ಧಗಳಾಗಿ ಅಲ್ಲಲ್ಲಿ ಬದಲಾವಣೆಗಳು ಆಗಿವೆ. ಮಯಾನ್, ಸಬಾ ರಾಜ್ಯಗಳು ದಕ್ಷಿಣ ಅರೇಬಿಯ ರಾಷ್ಟ್ರಗಳನ್ನು ಆಳಿದವು. ಇವುಗಳಲ್ಲಿ ‘ಶಿಬಾ’ದ ರಾಣಿಯ ಆಡಳಿತವು    ಹೆಸರು-ವಾಸಿಯಾಗಿದೆ. ಈ ಪ್ರಾಂತದ ‘ನಬಾಟೆ’ಯನ್ನರು ಸೌದಿ ಅರೇಬಿಯದ ವಾಯುವ್ಯ ದಿಕ್ಕಿನಲ್ಲಿರುವ ‘ಮೆಡೈನ್ ಸಲೇಹ್’ ವ್ಯಾಪಾರಿ ಮಾರ್ಗಗಳನ್ನೆಲ್ಲ ತನ್ನ ನಿಯಂತ್ರಣದಲ್ಲಿಟ್ಟುಕೊಂಡಿದ್ದು ದಾಗಿಯೂ ತಿಳಿಯುತ್ತದೆ. ಸಂಶೋಧಕರು (ಭೂಗರ್ಭ) ಇತ್ತೀಚಿನ ವರ್ಷಗಳಲ್ಲಿ ‘ಮೆಡೈನ್‌ ಸಲೇಹ್’ದ ಸುತ್ತ ಮುತ್ತೆಲ್ಲ ಸಾಕಷ್ಟು ವೀಕ್ಷಿಸಿ-ಪರೀಕ್ಷಿಸಿ ಸಾಕ್ಷ್ಯಾಧಾರ
ಗಳನ್ನು ಕೊಟ್ಟದ್ಧಾರೆ. ಆಗಲೇ ಅಲ್ಲಿ ಅಣೆಕಟ್ಟುಗಳನ್ನು ಕಟ್ಟಿ ಕೃಷಿಯನ್ನು ಸಾಧಿಸಿದ್ದಾಗಿ ಹೇಳುತ್ತಾರೆ. ಇಂತಹ  ವರ್ಷಗಳಲ್ಲಿ ಗ್ರೀಕ್ ಹಾಗೂ ರೋಮನ್ನರು ಅರಬರ ವ್ಯಾಪಾರ ಪದ್ದತಿಯನ್ನು ತಾವೂ ಅನುಸರಿಸಿದರು. ಹೀಗಾಗಿ ಅರಬರ ವ್ಯಾಪಾರ ಕುಂಠಿತವಾಗತೊಡಗಿತು. ಕ್ರಿ.ಶ. 4, 6 ನೆಯ ಶತಮಾನದಲ್ಲಿ ದಕ್ಷಿಣ ಅರೇಬಿಯಾ ಅಬಾಯ ಸನಿಯ ಆಡಳಿತಕ್ಕೊಳಪಟ್ಟಿತು.

ಹೀಗೆ ಪ್ರಾಚೀನ ಕಾಲದಲ್ಲಿ ಅಕ್ಕಪಕ್ಕದ ನಾಡಿನವರು ಅರೇಬಿಯಾವನ್ನು ಆಕ್ರಮಿಸಿದ್ದು ಆಳಿದ್ದು ಪ್ರಭಾವಿಸಿದ್ದು ಕಂಡು ಬರುತ್ತದೆ. ಅರಬ್ಬೀ ಜನಗಳ ಮೂಲ ನಿವಾಸಸ್ಥಾನ ಈ ರಾಷ್ಟ್ರದ ಕೇಂದ್ರ ಭಾಗ ಹಾಗೂ ಉತ್ತರ ಅರೇಬಿಯಾ ಭಾಗಗಳಾಗಿದ್ದಿರಬಹುದೆಂದು ಸಂಶೋಧಕರು ಊಹಿಸಿದ್ದಾರೆ.

ಈ ನಾಡಿನ ಮಧ್ಯಯುಗೀನ ಚರಿತ್ರೆ ಎಂದರೆ ಹೋರಾಟಗಳ ಸರಮಾಲೆ. ಇದಕ್ಕೆ ಕಾರಣ-ಪ್ರಭುತ್ವಕ್ಕಾಗಿ ಸ್ಥಳೀಯ ಹಾಗೂ ವಿದೇಶೀರಾಜರುಗಳು ನಡೆಸಿದ ಹಣಾಹಣಿ. 1517ರಲ್ಲಿ ಇದರ ಆಡಳಿತ ಓಟ್ಟೋಮಾನ್ (Emporor Ottoman)ನ ವಶವಾಗುವವರೆಗೂ ಸಾಕಷ್ಟು ಯುದ್ಧಗಳಾದವು. ಅಲ್ಲಿಂದ ಸುಮಾರು ಇನ್ನೂರೈವತ್ತು ವರ್ಷಗಳ ಕಾಲ ಈ ವಂಶದವರು ನಿರಾತಂಕವಾಗಿ ಅಳಿದರು. ಕೊನೆಕೊನೆಯಲ್ಲಿ ಈ ಪ್ರಭುತ್ವಕ್ಕೆ ವಿರೋಧ ಆರಂಭವಾಯಿತು. 1745ರಲ್ಲಿ ಮಹಮ್ಮದ್ ಇಬ್ನಅಲ್ ವಹೇಬ್ ಎಂಬ ಸುಧಾರಣಾವಾದಿಯು ಇಸ್ಲಾಮಿನ ಮೇಲೆ ಆಗಿರುವ ಬಾಹ್ಯ ಪ್ರಭಾವಿಗಳಿಂದ ಅದನ್ನು ಶುದ್ಧಗೊಳಿಸುವ ಪ್ರಚಾರ ಮಾಡಿದ. ಇದಕ್ಕೆ ಬೆಂಬಲ ಸಿಕ್ಕ ವಹಾಬಿಯಾ ಚಳುವಳಿ
ಅರೇಬಿಯಾದುದ್ದಕ್ಕೂ ಹರಡಿತು. ಇದರ ಯಶಸ್ಸನ್ನು ತಡಯಲು ಓಟೋಮನ್‌ರು, ಇಜಿಪ್ತರು ಪ್ರಯತ್ನಿಸಿದರೂ ಫಲಕಾರಿಯಾಗದೆ ಹೋರಾಟ ಮುಂದುವರೆಯುತ್ತಲೆ ಹೋಯಿತು. 18ನೇ ಶತಕದ ಪೂರ್ತಿ ಇದು ನಡೆಯಿತು. 1904ರ ವೇಳೆಗೆ ಇಬ್ನ ಸೌದ (ಅಬ್ದ್-ಅಲ್ ಅಜೀಜ್) ಮಧ್ಯ ಅರೇಬಿಯಾದ ಎಲ್ಲ ಸೌದಿ ಪ್ರದೇಶಗಳನ್ನು ಪುನಃ ವಶ
ಪಡಿಸಿಕೊಂಡಿದ್ದ. ಆದರೆ ಉಳಿದ ಸೌದಿ ಪ್ರದೇಶಗಳು ಅನ್ಯರ ಆಡಳಿತದಲ್ಲೇ ಇದ್ದವು. ಇಡೀ ಸೌದಿಯ ಒಂದು ಗೂಡಿಕೆಗಾಗಿ ಇಬ್ನ್‌ಸೌದ್ ಪ್ರಯತ್ನಿಸಿದ. ಅವನು ‘ಇಖ್‌ವಾನ್ (Ikhwan) ಅಂದರೆ ‘ಅರಬ್ಬಿ ಸೋದರರು’ ಎಂಬ ಪಡೆಯನ್ನು 1912 ರಿಂದ 1930 ನಡುವೆ ಸಂಘಟಿಸಿದ ಇದೊಂದು ರಾಷ್ಟೀಯ ರಕ್ಷಣಾ ಪಡೆ (National
Guard) ಯಂತೆ ನಂಬಲರ್ಹವಾದ ಸರ್ವಸನ್ನದ್ಧವಾದ ಮೇಲ್ಮಟ್ಟದವರ ಪಡೆಯಾಗಿರಬೇಕೆಂದು ಅವನ ಆಶಯವಾಗಿತ್ತು.

ಬುಡಕಟ್ಟು ಜನಾಂಗದವರ ಹಾಗೂ ಶ್ರೀಮಂತರ ಸಂಪರ್ಕದಿಂದ ದೂರ ವಿರುವ ಉದ್ದೇಶದಿಂದ ಈ ಪಡೆಯ ಯೋಧರು ಮರುಭೂಮಿಯ ಓಯಸಿಸಸ್‌ಗಳ ಸಮೀಪ ಹಿಜ್ರಾ ಎಂಬ ಕಾಲೋನಿಯಲ್ಲಿ ವಾಸಿಸುತ್ತಿದ್ದರು. ಇವರು ಬುಡಕಟ್ಟು ಜನರು ಅಲೆಮಾರಿಗಳಾಗುವುದನ್ನು ತಪ್ಪಿಸಿ, ಅವರಿಗಾಗಿ ಮನೆಗಳು, ಶಾಲೆಗಳು, ವ್ಯವಸಾಯೋ
ಪಕರಣಗಳು, ಅವುಗಳನ್ನು ಬಳಸುವ ಜ್ಞಾನ, ಆಯುಧಗಳು, ಮದ್ದು ಗುಂಡುಗಳು-ಇವೆಲ್ಲವನ್ನೂ ಒದಗಿಸಿದರು. ಇಸ್ಲಾಮಿನ ಮೂಲಭೂತವಾದವನ್ನು ಇವರಿಗೆ ಬೋಧಿಸಲು ಧಾರ್ಮಿಕ ಗುರುಗಳನ್ನು ಕರೆಸಲಾಯಿತು. ಇವೆಲ್ಲದರ ಪರಿಣಾಮವಾಗಿ ಅಲೆಮಾರಿ ಜನ ತೀವ್ರ ಸಂಪ್ರದಾಯಸ್ಥರಾದರು. 1918ರ ಹೊತ್ತಿಗೆ ಅವರು ಇಬ್ನಸೌದನ ವಿದ್ಯಾವಂತರ ಪಡೆಯನ್ನು ಪ್ರವೇಶಿಸಲು ಸನ್ನದ್ದರಾದರು.

ಇವೆಲ್ಲ ಘಟನೆಗಳ ನಂತರ 1932ರಲ್ಲಿ ಈ ಪ್ರದೇಶದ ಎಲ್ಲ ರಾಜ್ಯಗಳನ್ನು (ಮುಖ್ಯವಾಗಿ ಹೆಜಾಜ್‌ ಮತ್ತು ನಜ್ದಿ) ಒಂದುಗೂಡಿಸಿ ಸೌದಿ ಅರೇಬಿಯಾ ರಾಷ್ಟ್ರ ಎಂದು ನಾಮಕರಣ ಮಾಡಲಾಯಿತು. ಅಲ್ಲಿಗೆ ಏಕಛದ್ರದಡಿಯಲ್ಲಿ ಅರಬ್ಬರ ಹೊಸ ನಾಡು ಉದಯವಾದಂತಾಯಿತು.

ಅನಂತರದ ದಿನಗಳು

ಅಬ್ಬುಲ್ ಅಜೀಚ್ ತನ್ನ ಸಾಮ್ರಾಜ್ಯ ಸ್ಥಾಪಿಸಿದಾಗ ಹೇಳಿಕೊಳ್ಳವಂತಹ ಪರಿಸ್ಥಿತಿ ಏನೂ ಇರಲಿಲ್ಲ. ಜೇವನಾ- ವಶ್ಯಕತೆಗೆ ಬೇಕಾದಷ್ಟೇ ಪೂರೈಸಿಕೊಳ್ಳುತ್ತಿದ್ದರೂ ಹಾಜ್‌ಯಾತ್ರಿಕರಿಂದ ವಿದೇಶಿವಿನಿಮಯ ದಿನಸಿಗಳ ಮೂಲಕ ಅಷ್ಟಿಷ್ಟು ಜೀವನ ನಡೆಸುತ್ತಿ ದ್ದ ರು.

1932ರಲ್ಲಿ ಅಮೇರಿಕನ್ ಸಲಹೆಗಾರರಿಂದ, ಭೂಗರ್ಭಶಾಸ್ತ್ರಜ್ಞರ ಅಭಿಪ್ರಾಯ ದೊಂದಿಗೆ ಭೂಮಿಯ ಒಡಲಾಳದಿಂದ ತೈಲ ತೆಗೆಯುವ ಒಪ್ಪಂದ ಮಾಡಿಕೊಂಡರು. ಅಮೇರಿಕನ್ ಅಯಿಲ್ ಕಂಪನಿ ಕೆಲವೊಂದು ಹಕ್ಕುಗಳೊಂದಿಗೆ ಒಪ್ಪಿಗೆ ಹಾಕಿತು. 1950ರಷ್ಟೊತ್ತಿ ಗೆ ARAMCO(ಅರೇಬಿಯನ್ + ಅಮೇರಿಕನ್ ಕಂಪನಿ) 25 ಮಿಲಿಯನ್ ಟನ್‌ಗಳಷ್ಟು ತೈಲ ತಗೆದು ರಿಕಾರ್ಡ್ ಸಾಧಿಸಿದರು.

ಅಷ್ಟೊತ್ತಿಗಾಗಲೇ ಅಬ್ದುಲ್ ಅಜೀಚ್ ದಕ್ಷ ಆಡಳಿತಗಾರನಾಗಿ, ನ್ಯಾಯ ಪ್ರಿಯನಾಗಿ ಪ್ರಗತಿಯತ್ತ ಸಾಕಷ್ಟು ಮುಂದು- ವರೆದಿದ್ದ. ದೇಶದ ಭಧ್ರತೆಗಾಗಿ ಸಾಕಷ್ಟು ಶ್ರಮಿಸಿ ಬಳಲಿದ ಈ ದೊರೆ 1953ರಲ್ಲಿ ನಿಧನಹೊಂದಿದನು. ಅಜೀಜ್‌ನ ನಿಧನದ ಸಮಯದಲ್ಲಿ 47 ಗಂಡುಮಕ್ಕಳು (ಕೊನೆಯವ 7 ವರ್ಷದವ) ಮತ್ತು ಅಂಕೆಗೂ ಸಿಗಲಾರದಷ್ಟು ಹೆಣ್ಣು ಮಕ್ಕಳೂ ಇದ್ದರಂತೆ. ಅವನಿಗೆ ನೂರಾರು ಹೆಂಡತಿಯರೂ ಇದ್ದರೆಂದು ಹೇಳುತ್ತಾರೆ.

ಇಬ್ನ್‌ಸೌದ್‌ ಅಬ್ದುಲ್ ಅಜೀಜ್‌ನ ನಂತರ ಪಟ್ಟಕ್ಕೆ ಬಂದವನು ಅವನ ಹಿರಿಯ ಇಬ್ಬರು ಮಕ್ಕಳಲ್ಲಿ ಒಬ್ಬನಾದ ಸೌದ್. ಈತನ ಪೂರ್ಣ ಹೆಸರು ಇಬ್ನ್‌ ಅಬ್ದುಲ್ ಅಜೀಜ್ ಅಲ್‌-ಫೈಸಲ್ ಅಲ್ ಸೌದ್ ಈತ 15-1-1902ರಲ್ಲಿ ಕುವೈಟಿನಲ್ಲಿ ಹುಟ್ಟಿದ. ತಂದೆಯ ಮರಣಾನಂತರ 1953ರಲ್ಲಿ, ತನ್ನ ಐವತ್ತೊಂದನೇ ವಯಸ್ಪಿನಲ್ಲಿ ಪಟ್ಟಕ್ಕೆ ಬಂದ. ಇದಕ್ಕೆ ಮುನ್ನ 1933ರಿಂದಲೇ ಈತ ಯುವರಾಜನಾಗಿದ್ದ. 1953ರಲ್ಲಿ ತಂದೆ ಇಬ್ನ್‌ ಸೌದ್ ಅಬ್ದುಲ್ ಅಜೀಜ್ ಮಂತ್ರಿ ಮಂಡಲ- ವೊಂದನ್ನು ರಚಿಸಿದಾಗ ಈತ, ಅದರ ಮುಖ್ಯಸ್ಥನಾಗಿದ್ದ. ಅದೇ ವರ್ಷ ತನ್ನ ಸೋದರರ ಬೆಂಬಲದೊಂದಿಗೆ
ನವೆಂಬರಿನಲ್ಲಿ ದೊರೆಯಾದ.

ಈತ ತನ್ನ ತಂದೆ ಕೈಗೊಂಡಿದ್ದ ಆಧುನೀಕರಣದ ಕಾರ್ಯಕ್ರಮವನ್ನು ಮುರಿದುವರೆಸಿದ. ವೈದ್ಯಕೀಯ ಹಾಗೂ ಶೈಕ್ಷಣಿಕ ಸವಲತ್ತುಗಳನ್ನು ಹೆಚ್ಚಿಸುವತ್ತ ವಿಶೇಷ ಗಮನ ನೀಡಿದ. ಅದರೆ ಆ ಮೊದಲೇ ಅಂತರಿಕ ಸಮಸೈಗಳು, ಯಾದವೀ ಕಲಹಗಳೇ ಸಾಕಷ್ಟು ಬೆಳೆದಿದ್ದರಿಂದ ಈ ಸುಧಾರಣೆಗಳು ತಿವ್ರವಾಗಿ ನಡೆಯಲಿಲ್ಲ. 1960ರ  ಹೊತ್ತಿಗೆ ಈತನ ಕೈಗೆ ಸಾಕಷ್ಟು ನಿಯಂತ್ರಣ ಬಂದಿತ್ತು. ಆದರೆ 1963ರಿಂದ ನಂತರದ ಹೆಚ್ಚು ಕಾಲವನ್ನು ಈತ ಚಿಕಿತಗೆಗಾಗಿ ವಿದೇಶದಲ್ಲೇ ಕಳೆಯಬೇಕಾಯಿತು. ಕೊನೆಗೆ 23-2-1964ರಲ್ಲಿ ಈತ ಅಥೆನ್ಸೆನಲ್ಲಿ ತೀರಿಕೊಂಡ.

ಇವನ ನಂತರ ದೊರೆಯಾದವನು ಇವನ ತಮ್ಮನಾದ ಫೈಜಲ್. ಈತನೂ ತಂದೆಯಂತೆ ದಕ್ಷ ಆಡಳಿತಗಾರ. ಈತನೂ ಸಹ 1926ರಿಂದಲೇ ಯೂರೋಪಿನಲ್ಲೆಲ್ಲಾ ಅಡ್ಡಾಡಿ ರಾಜಕೀಯ ಅರಿತುಕೊಂಡವನಾಗಿದ್ದನು. ಇವನ ಆಡಳಿತದಲ್ಲಿಯೂ ಕೂಡಾ ಒಳ್ಳೆಯ  ಸಂಸ್ಥೆಗಳು, ಆಸ್ಪತ್ರೆಗಳು, ಆಧುನಿಕ ಮಿಲಿಟರಿ-ಎಲ್ಲ ಅಸ್ತಿತ್ವಕ್ಕೆ ಬಂದವು.
1970ರಲ್ಲಿ ಇಜಿಪ್ಟದ ಅಧ್ಯಕ್ಷ ಅಬ್ದುಲ್‌ನಾಸಿರ್ ಕೂಡಾ ಇವನ ಆಡಳಿತಕ್ಕೆ ಮೆಚ್ಚುಗೆ ವ್ಯಕ್ತಪಡಿಸಬೇಕಾಯ್ತು.

ಫೈಜಲ್‌ನ ಕೊನೆಯ ದಿನಗಳಲ್ಲಂತೂ ತೈಲ ರಫ್ತಿನಿಂದಾಗಿ ಡಾಲರುಗಳು ಹರಿದುಬಂದು ಜಗತ್ತಿನಲ್ಲಿಯೇ ಶ್ರೀಮಂತ ರಾಷ್ಟ್ರವೆಂಬ ಹೆಗ್ಗಳಿಕೆ ಸೌದಿ ಅರೇಬಿಯಕ್ಕೆ ಬಂದಿತು. ಹಳ್ಳಿಪಳ್ಳಿಗಳಂತಿದ್ದ ರಿಯಾದ್-ಜೆಡ್ಡಾಗಳು ಝಗಮಗಿಸ ತೊಡಗಿದವು. ವಿದೇಶಿ ಅನುಭವಿ ತಂತ್ರಜ್ಞಾನಗಳ ಮುಖಾಂತರ ಸುಧಾರಣೆಯತ್ತ ದಿನದಿನಕ್ಕೂ ಮುನ್ನುಗ್ಗ ತೊಡಗಿ- ದವು. ಸ್ಥಳೀಯ ಸೌದಿಗಳೂ ಟ್ರೈನಿಂಗ್ ಪಡೆದು ಸಾಕಷ್ಟು ಸುಧಾರಿಸತೊಡಗಿದರು. 1975ರಲ್ಲಿ ಸಹೋದರನ ಮಗನು ಫೈಜಲ್‌ಗೆ ಗುಂಡು ಹೊಡೆದು ಸಾಯಿಸಿದನೆಂದು ಸುದ್ದಿಯಾಯಿತು.

ಫೈಜಲ್‌ನ ಸಹೋದರ ‘ಖಲೀದ್’ ರಾಜನಾಗಿ ಅಧಿಕಾರವಹಿಸಿಕೊಂಡು ಅಡಳಿತ ಮುಂದುವರಸಿದನು. ತಂದೆ, ಸಹೋದರರ ಆಡಳಿತ ನೋಡಿದ್ದ, ಅವರೊಂದಿಗೆ ವಿದೇಶಗಳಲ್ಲಿ ಅಡ್ಡಾಡಿ ರಾಜಕೀಯದಲ್ಲಿ ಪಳಗಿದ್ದ. ಖಲೀದ 1975ರಲ್ಲಿ ಅಧಿಕಾರ ವಹಿಸಿಕೊಂಡಾಗ ದೇಶದಲ್ಲಿ ಸಾಕಷ್ಟು ಸುಧಾರಣೆಯಾಗಿತ್ತು. 38 ರಾಷ್ಟ್ರಗಳ ಮುಸ್ಲಿಂ
ಧುರೀಣರನ್ನು ಒಂದುಗೂಡಿಸಿ ಮಕ್ಕಾ ಟೈಪ್‌ದಲ್ಲಿ ಭಾಷಣ ಮಾಡಿದ. ಅಷ್ಟೆ ಅಲ್ಲದೆ ಇವನಿಂದ ‘ಕೊಲ್ಲಿ ಸಹಕಾರ ಸಂಘವು’ ಅಸ್ತಿತ್ವಕ್ಕೆ ಬಂದಿತು.

1982ರಲ್ಲಿ ಖಲೀದ ಎದೆನೋವಿನ ಬಳಲಿಕೆಯಿಂದ ನಿಧನವಾದಾಗ ಇಡೀ ದೇಶವೇ ದುಃಖಿಸಿತು. ಈ ಹೊತ್ತಿಗೆ ನಾವು ಜೆಡ್ಡಾದಲ್ಲಿದ್ದು 3 ವಷ೯ಗಳಾಗಿದ್ಧವು. ಟೀವಿ ಮುಖಾಂತರ ರಾಜ ಖಲೀದನ ಅಂತ್ಯಯಾತ್ರೆಯನ್ನು ನೋಡಿದೆವು.

ಖಲೀದನ ತರುವಾಯ ಅವನ ಸಹೋದರ ‘ಪಹದ್’ ಅಧಿಕಾರ ವಹಿಸಿಕೊಂಡು ಇಸ್ಲಾಂ ಚೌಕಟ್ಟಿನಲ್ಲಿ ಕೆಲವು ಬಿಗಿಯಾದ ಕಾಯ್ದೆಗಳೊಂದಿಗೆ ಆಡಳಿತ ಶುರು ಮಾಡಿದನು. ಅಗಲೇ ಫೈಜಲ್, ಖಲೀದರ್  ಅಡಳಿತೆಯಲ್ಲಿ ನುರಿತ ಅನುಭವಿ ರಾಜಕಾರಣಿ ಎಂದು ಹೆಸರುಗಳಿಸಿದ್ದಲ್ಲದೇ ರಾಜನಾಗಿ ಅಧಿಕಾರಿಯಾದ ನಂತರವೂ ದೇಶವಿದೇಶಗಳಲ್ಲಿ ಖ್ಯಾತಿಗಳಿಸಿದನು. ಅರಬ ದೇಶಗಳ ಒಕ್ಕೂಟಕೈ ಅಂತರಾಷ್ಟ್ರೀಯ ಮಾನ್ಯತೆ ಗಳಿಸಿಕೊಟ್ಟನು.

ನಾವಿದ್ದ 15 ವರ್ಷಗಳ ಅವಧಿಯಲ್ಲಿ ಸೌದಿ ಅರೇಬಿಯದ ರೂಪು ರೇಷೆಗಳು ನಮ್ಮ ಕಣ್ಮುಂದೆಯೇ ನೋಡು ನೋಡು- ತ್ತಿದ್ದಂತೆಯೇ ಮತ್ತೂ ಬದಲಾಗತೊಡಗಿದವು.

ಇದು – ಮರುಭೂಮಿಯಲ್ಲಿ ಚಿನ್ನ ಬೆಳೆಯುತ್ತಿರುವ ಈ ನಾಡಿನ ಸಂಕ್ಲಿಪ್ತ ಇತಿಹಾಸ.

ಪ್ರಾಕೃತಿಕ ಲಕ್ಷಣಗಳು

ಇದರ ಪ್ರಾಕೃತಿಕ ಲಕ್ಷಣಗಳನ್ನು ಕೊಂಚ ನೋಡೋಣ. ಈ ರಾಷ್ಟ್ರದ ವಿಸ್ತಾರ ಇಪ್ಪತ್ನಾಲ್ಕು ಲಕ್ಷ ಚದರ ಕಿಲೋ -ಮೀಟರುಗಳು. ಜನಸಂಖ್ಯೆ (1988ರಲ್ಲಿ) ಒಂದು ಕೋಟಿ ಹದಿನೈದು ಲಕ್ಷಕ್ಕೂ ಸ್ವಲ್ಪ ಹೆಚ್ಚು. ಇಂದು ಇದರ ರಾಜಧಾನಿ ರಿಯಾದ್ ಭಾಷೆ ಅರೆಬಿಕ್, ಕರ್‌ನ್ಸಿ-ಸೌದಿ ರಿಯಾಲ್.

ಈ ದೇಶದ ಪೂರ್ವಕ್ಕೆ ಪಷಿ೯ಯನ್ ಖಾರಿ ಇದೆ. ಪಶ್ಚಿಮಕ್ಕೆ ಕೆಂಪು ಸಮುದ್ರ. ಉತ್ತರಕ್ಕೆ ಜೋರ್ಡಾನ್, ಇರಾಕ್, ಕುವೈಟ್‌ಗಳಿವೆ. ದಕ್ಷಿಣಕ್ಕೆ Yemen, Omanಗಳಿವೆ ಅರಬೀ ಸಮುದ್ರವಿದೆ. ಇದಿಷ್ಟು ಸೌದಿ ಅರೇಬಿಯಾದ ಈಗಿನ ಚೆಕ್ಕುಬಂದಿ.

ಈ ದೇಶದಲ್ಲಿ ನಾಲ್ಕು ಪ್ರಾಕೃತಿಕ ವಿಭಾಗಗಳಿವೆ.

1. ಕೆಂಪು ಸಮುದ್ರದ ದಂಡೆಯುದ್ದಕ್ಕೂ ಚಾಚೆಕೊಂಡಿರುವ, ಅಗಲ ಕಿರಿದಾಗಿರುವ ಬಯಲು ಪ್ರದೇಶ.

2. ಈ ಬಯಲು ಪ್ರದೇಶದ ಒಳ ಅಂಚಿನಿಂದ ಮೇಲೆದ್ದು, ಪೂರ್ವದ ಕಡೆ ಜಾಚಿಕೊಳ್ಳುತ್ತಾ ಇಳಿದಿರುವ  ಘಟ್ಟಗಳ ಪ್ರದೇಶ.

3. ದೇಶದ ಒಳಭಾಗದಲ್ಲಿರುವ ಪ್ರಸ್ಥಭೂಮಿ. ದೇಶದ ವಿಸ್ತೀರ್ಣದ ಶೇ. 90 ಭಾಗದಷ್ಟನ್ನು ಅವರಿಸಿರುವ ಇದರ ಬಹುಪಾಲು ಮರುಭೂಮಿ.

4. ಪೂರ್ವದ ಕರಾವಳಿ.

ದೇಶದ ಒಳಭಾಗದಲ್ಲಿರುವ ಮರುಭೂಮಿ ಪ್ತದೇಶದಲ್ಲಿ, ಎರಡು ದೊಡ್ಡ ಮರುಭೂಮಿಗಳಿವೆ. ಅವು-

(1) ಉತ್ತರ ಭಾಗದಲ್ಲಿರುವ ‘ನಾಪೂಡ’ ಮರುಭೂಮಿ (Nafud desert) ಇದರ ವಿಸ್ತಾರ ಇಪ್ಪತ್ತೆರಡು ಸಾವಿರ ಚದರ ಮೈಲಿನಷ್ಟು . ಇದರ ಉಸುಕು ಗುಲಾಬಿ ರಂಗನ್ನು ಹೊಂದಿದೆ.

(2) ಆಗ್ನೇಯದಲ್ಲಿರುವ “ರಬ್-ಅಲ್-ಖಾಲಿ’ (Rub-ali-khali) ಮರುಭೂಮಿ ಜಗತ್ತಿನಲ್ಲಿಯೇ ಅತಿ ದೊಡ್ಡ ಮರುಳು- ಗಾಡೆಂಬ ಖ್ಯಾತಿ ಇದರದ್ದು. ಇಲ್ಲಿ ಯಾವ ವಸಾಹತುಗಳಿಲ್ಲ. ಅದರೆ ಇಲ್ಲಿನ ವಸುಂಧರೆಯ ಗರ್ಭದಲ್ಲಿ ತೈಲಸಂಪತ್ತು ತುಂಬಿದೆ ಎಂದು ಭೂಗರ್ಭ ಶಾಸ್ತ್ರಜ್ಞರ ಅಭಿಪ್ರಾಯ. ಇದರ ವಿಸ್ತಾರ ಅರೂವರೆ ಲಕ್ಷ ಚದರ ಕಿಲೋಮೀಟರುಗಳಷ್ಟು. ಇಲ್ಲಿ ಇಡೀ ದಶಕ ಮಳೆಯಾಗದಿರುವುದೂ ಉಂಟು. ಇಲ್ಲಿ ಸರೋವರ ಅಥವಾ ನದಿಗಳಿಲ್ಲ. (ಮಳೆ  ಬಿದ್ದಾಗ ಕೆಲವೆಡೆ ತಾತ್ಕಾಲಿಕ ನದಿಗಳು ಹರಿಯುತ್ತವೆ) ಮರುಭೂಮಿ ಪ್ರದೇಶದ ಹಗಲಿನ ಉಷ್ಣಾಂಶ ಕೆಲವು ತಿಂಗಳಲ್ಲಿ 55ಡಿಗ್ರಿ ಸೆಂಟಿ- ಗ್ರೇಡ್‌ವರೆಗೂ ಹೋದರೆ ಸರಾಸರಿ ಉಷ್ಣತೆ 30ಡಿಗ್ರಿ ಸೆಂ. ಇರುತ್ತದೆ. ಪಶ್ಚಿಮದೆಡೆ ಇರುವ ಓಯಸಿಸ್‌ಗಳೆಡೆಯಲ್ಲಿ ವರ್ಷಕ್ಕೆ 250 ಮಿ.ಮೀ ಮಳೆಯಾದರೆ ಉಳಿದೆಡೆಗಳಲ್ಲಿ ಸುಮಾರಾಗಿ ಐವತ್ತು ಮಿಲಿ ಮೀ ಮಳೆಯಾಗುತ್ತದೆ.

ಸಾಮಾನ್ಯ ಜಾತಿಯ ಗಿಡಗಳು ಪೊದೆಗಳು ಹಾಗೂ ಡೇಟ್‌ಪಾಮ ಮರ ಇಲ್ಲಿನ ಸ್ವಾಭಾವಿಕ ಸಸ್ಯವರ್ಗ. ಕಾಡುಪ್ರಾಣಿಗಳಲ್ಲಿ ತೋಳ, ಕತ್ತೆಕಿರುಬ, ನರಿ, ಬೆಟ್ಟದ ಕುರಿ, ಚಿರತೆ ಇವೆ.

***

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಾಟಿ ಕಲ್ಲನು ದಾಟಿ ಇಳಿದು ಬಾ
Next post ಹುಂಬರಾದೆವಲ್ಲೋ

ಸಣ್ಣ ಕತೆ

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

cheap jordans|wholesale air max|wholesale jordans|wholesale jewelry|wholesale jerseys