ಹೋಗುವಿಯೋ ನೀ ಹೋಗು – ಮತ್ತೆ
ನುಡಿಯದೆ ಇರುವುದೆ ಮುರಳಿ?
ಬಂದೇ ಬರುವೆ ಹೊರಳಿ-ನೀ
ಬಂದೇ ಬರುವೆ ಮರಳಿ.

ಅದ್ದುವಳಲ್ಲ ನನ್ನೀ ಬಾಳನು
ಸಲ್ಲದ ಕಣ್ಣೀರಲ್ಲಿ
ತೆರಳುವಳಲ್ಲ ದೀಪವ ನಂದಿಸಿ
ಜೀವನದುತ್ಸವದಲ್ಲಿ

ಏನೇ ಕಂಟಕ ಬಂದರು ಏನು
ಬೆಚ್ಚುವ ಜೀವವಿದಲ್ಲ
ಮುಚ್ಚಿಹೋದರೂ ಬಾಗಿಲು – ಅದನು
ತೆರೆಯದೆ ಉಳಿವವಳಲ್ಲ.

ದಿನ ದಿನ ನಿನ್ನ ಮನಸಿನ ಗಂಟನು
ಬಿಡಿಸುವೆ ಒಂದೊಂದಾಗಿ
ಮೆಲ್ಲಗೆ ಹೊದಿಸುವೆ ಸ್ನೇಹದ ಸೆರಗ
ತೋಳೊಳು ನಿನ್ನನು ತೂಗಿ

***

ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್
Latest posts by ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ (see all)