ಹರಿನಾಮದ ಪಾನದ ರುಚಿ ತಲೆಗೆ ಹೊಕ್ಕಿದೆ
ಹಾಡಿ ಕುಣಿವ ಈ ದಾಸಿಯ ಬಾಳು ಉಕ್ಕಿದೆ
ಊರು ಕೇರಿ ಕೇಕೆ ಹಾಕಿ ಕೈಯ ತಟ್ಟಿದೆ
ಮೀರಾ ಹುಚ್ಚಿ ಎಂಬ ಕೂಗು ಬಾನ ಮುಟ್ಟಿದೆ.

ನಿಜವೆ, ನಾನು ಹುಚ್ಚಿಯೇ
ಜನದ ಕಣ್ಣಿಗೆ!
ಲಜ್ಜೆ ಏಕೆ ಕೃಷ್ಣ ಮೆಚ್ಚಿ
ಕರೆದ ಹೆಣ್ಣಿಗೆ?
ನೆಲದ ಕುಲದ ಹಂಗು ಬೇಕೆ
ಹರಿಯ ದಾಸಿಗೆ?
ಕ್ಳಷ್ಣನನ್ನು ಜರಿವ ಕುಲ
ನನಗೆ ಹೇಸಿಗೆ.

ಯಾವುದೇ ಕುಲ ವಂಶ ಬಲ ನನ್ನ ಸೆಳೆಯದು,
ಕ್ಳಷ್ಣನಿರದ ಒಂದೇ ಕ್ಷಣ ಜೀವ ಉಳಿಯದು;
ವಿರಹದ ಬಾಣಲೆಗೆ ಬಿದ್ದು ಕಾದುಹೋದೆನೇ
ಗಿರಿಧರನ ಕೊಳಲು ಸೇರಿ ನಾದವಾದೆನೇ!

*****