ಒಲವೇ… ಭಾಗ – ೭

ನಿನ್ನ ತಾಳಕ್ಕೆ ತಕ್ಕಂತೆ ಕುಣಿಯೋದಕ್ಕೆ ನಾವು ತಯಾರಿಲ್ಲ. ನೀನು ಎಲ್ಲಿಗೂ ಹೋಗುವ ಅವಶ್ಯಕತೆ ಇಲ್ಲ. ಕೊಟ್ಟದನ್ನ ತಿನ್ಕೊಂಡು ಇಲ್ಲೇ ಬಿದ್ದಿರು. ನಮ್ಮ ಮಾತು ಧಿಕ್ಕರಿಸಿ ಹೋಗ್ತಿನಿ ಅಂಥ ನಿರ್ಧಾರ ಮಾಡಿದ್ರೆ ಈಗ್ಲೇ ಹೊರಡ್ಬೊಹುದು. ಇನ್ನೆಂದಿಗೂ ಇತ್ತ ತಲೆ ಹಾಕಿ ನೋಡ್ಬೇಡ. ನಮ್ಮ ಪಾಲಿಗೆ ಮಗಳು ಸತ್ತು ಹೋದ್ಲು ಅಂಥ ತಿಳ್ಕೊಂಡು ಬದುಕು ನಡೆಸ್ತಿವಿ. ಹೆಣ್ಮಕ್ಕಳಿಗೆ ಸ್ವಲ್ಪ ಸಲುಗೆ ಕೊಟ್ರೆ ತಲೆಮೇಲೆ ಬಂದು ಕೂತ್ಕೋತ್ತಾರೆ. ಮೈಸೂರಿಗೆ ಹೋಗಿ ಅದೇನು ಸಾಧಿಸಬೇಕೂಂತ ಅಂದ್ಕೊಂಡಿದ್ದಾಳೋ…? ಅಪ್ಪ, ಅಮ್ಮನ ಮಾತಿಗೆ ಒಂದಿಷ್ಟು ಬೆಲೆ ಕೊಡೋದನ್ನ ಕಲ್ತುಕೊಂಡಿಲ್ಲ. ಅಲ್ಲೇನಾದರು ಹೆಚ್ಚು ಕಮ್ಮಿ ಆದರೆ ಏನು ಗತಿ? ಎಂದು ಒಂದೇ ಸಮನೆ ರೇಗಾಡಿದರು.

ಇನ್ನು ಚರ್ಚಿಸಿ ಫಲವಿಲ್ಲವೆಂದು ನಿರ್ಧರಿಸಿದ ಅಕ್ಷರ ಕಣ್ಣೀರಿಡುತ್ತಾ ಬೆಡ್‌ರೂಂ ಕಡೆಗೆ ನಡೆದಳು. ಪೂರ್ವಜನ್ಮದಲ್ಲಿ ಅದ್ಯಾವ ಪಾಪ ಮಾಡಿದ್ದೆನೋ ಏನೋ. ಆ ದೇವರಿಗೇ ಗೊತ್ತು. ಅದಕ್ಕೆ ಈ ಜನ್ಮದಲ್ಲಿ ಹೆಣ್ಣಾಗಿ ಹುಟ್ಟಿ ನರಕಯಾತನೆ ಅನುಭವಿಸ್ತಾ ಇದ್ದೇನೆ. ಗಂಡಾಗಿ ಹುಟ್ಟಿದ್ದರೆ ಎಲ್ಲಿ ಬೇಕಾದರು ಸುತ್ತಾಡಬಹುದು. ಹೇಳೋರು ಕೇಳೋರು ಯಾರು ಇಲ್ಲ. ಆದರೆ ಹೆಣ್ಣಿಗೆ ಆ ಸ್ವಾತಂತ್ರ್ಯವಾದರು ಎಲ್ಲಿ? ಮನೆಯ ಹೊಸ್ತಿಲು ದಾಟಲು ಸಹ ಅನುಮತಿ ಬೇಕು. ಹೆಣ್ಣಿಗೆ ಮನೆಯೇ ಒಂದು ಸೆರೆಮನೆ. ಅದರ ಸುತ್ತಲಿನ ಪರಿಸರ ಸೆರೆಮನೆಯ ಆವರಣ. ಮದುವೆಗೂ ಮುಂಚೆ ಅಪ್ಪ, ಅಮ್ಮ ನಿರ್ಮಿಸಿದ ಸೆರೆಮನೆಯಲ್ಲಿ ಕಾಲ ಕಳೆಯಬೇಕು. ವಿವಾಹವಾದ ನಂತರ ಗಂಡನ ಮನೆಯ ಸೆರೆಮನೆಯಲ್ಲಿ ಜೀವನ ಪೂರ್ತಿ ಜೀವ ಸವೆಸಬೇಕು. ಮಹಿಳೆಯರಿಗೆ ಕನಿಷ್ಠ ಸ್ವಂತ ಯೋಚನೆ ಮಾಡಿ ನಿರ್ಧಾರ ಕೈಗೊಳ್ಳುವಷ್ಟೂ ಅಧಿಕಾರ ಈ ಸಮಾಜ ಕೊಟ್ಟಿಲ್ಲ. ಮಹಿಳೆಯರಿಗೆ ನೀಡಿರುವ ಸ್ವಾತಂತ್ರ್ಯ ಕೇವಲ ಪುಸ್ತಕದ ಮೇಲಿನ ಬದನೆಕಾಯಿ ಎಂದು ಮನದೊಳಗೆ ಅಪ್ಪ, ಅಮ್ಮನ ಮೇಲೆ ಸಿಡುಕಿದಳು.

ಇಂತಹ ಪರಿಸ್ಥಿತಿಯಲ್ಲಿ ಅಭಿಮನ್ಯುವನ್ನು ಪ್ರೀತಿಸುತ್ತಿರುವ ವಿಚಾರವೇನಾದರು ಗೊತ್ತಾದರೆ ದೊಡ್ಡ ರಾದ್ಧಾಂತ ನಡೆಯುವುದರಲ್ಲಿ ಸಂಶಯವಿಲ್ಲ. ಮೈಸೂರಿಗೆ ಹೋಗುವ ಸಣ್ಣ ವಿಚಾರಕ್ಕೆ ಇಷ್ಟೊಂದು ಕೋಪ ಮಾಡ್ಕೊಂಡವರು ಅಭಿಮನ್ಯುವನ್ನು ಪ್ರೀತಿಸ್ತಾ ಇದ್ದೇನೆ, ಅವನನ್ನೇ ವಿವಾಹವಾಗ್ತೇನೆ ಅಂದರೆ ನಮ್ಮಿಬ್ಬರನ್ನ ಕೊಲ್ಲುವುದಕ್ಕೂ ಹೇಸುವುದಿಲ್ಲ. ಎಂಥಾ ಕೆಟ್ಟ ಜನ ಅಂದುಕೊಂಡ ಅಕ್ಷರಳ ಮನದಲ್ಲಿ ಅಪ್ಪ, ಅಮ್ಮನ ಬಗ್ಗೆ ಕೋಪ, ಅಸಹ್ಯ ಹುಟ್ಟಿಕೊಂಡಿತು.

ಈ ಹಾಳಾದ ಮನೆಯ ವಿಚಾರ ಇನ್ನು ಸಾಕು. ಯೋಚನೆ ಮಾಡಿದಷ್ಟೂ ತಲೆ ಹಾಳು ಎಂದು ಅಕ್ಷರ ಮಂಚದ ಮೇಲಿಟ್ಟದ್ದ ಅಭಿಮನ್ಯು ಗಿಫ್ಟ್‌ಕೊಡಿಸಿದ ಮುದ್ದಾದ ಗೊಂಬೆಗಳನ್ನು ತಬ್ಬಿಕೊಂಡು ಅಭಿಮನ್ಯುವಿನ ಕನವರಿಕೆಯಲ್ಲಿ ಸಮಯ ದೂಡಲು ಪ್ರಯತ್ನಿಸಿದಳು. ಮಗಳು ಕಣ್ಣೀರು ಇಟ್ಟು ಬೆಡ್‌ರೂಂ ಒಳಗೆ ಸೇರಿಕೊಂಡದ್ದು ಲೀಲಾವತಿಯ ಮನ ಕರಗುವಂತೆ ಮಾಡಿತು. ಮಗಳನ್ನು ಸಂತೈಸಲು ಬೆಡ್‌ರೂಂ ಕಡೆಗೆ ತೆರಳಿ ಆಕೆಯ ಪಕ್ಕದಲ್ಲಿ ಕುಳಿತು ತಲೆಯನ್ನು ಹಿತವಾಗಿ ತೀಡುತ್ತಾ ಕೋಪ ಮಾಡ್ಕೋ ಬೇಡ ಅಕ್ಷರ ಎಂದು ಆಕೆಯ ಹಣೆಗೊಂದು ಸಿಹಿ ಮುತ್ತು ನೀಡಿದರು.

ಇಷ್ಟೊಂದು ಸಣ್ಣ ವಿಚಾರಕ್ಕೆಲ್ಲ ಕಣ್ಣೀರಿಡುತ್ತಾ ಕೂತ್ರೆ ಹೇಗೆ? ಅಪ್ಪ ಹೇಳಿದ್ದು ಎಲ್ಲ ನಿನ್ನ ಒಳ್ಳೆಯದಕೋಸ್ಕರ ತಾನೆ? ನೀನು ಹೀಗೆ ಕೋಪ ಮಾಡ್ಕೊಂಡ್ರೆ ನಮ್ಮ ಮನಸ್ಸಿಗೆ ಎಷ್ಟು ನೋವಾಗುತ್ತೆ ಅಂಥ ಗೊತ್ತಾ ನಿನ್ಗೆ? ಅಪ್ಪ ನಿನ್ನ ಮೇಲೆ ಪ್ರಾಣನೇ ಇಟ್ಟಿದ್ದಾರೆ. ನಿನ್ಗೆ ಬೈಯೋದು ಬೈದು ಈಗ ಕೊರಗುತ್ತಾ ಕೂತಿದ್ದಾರೆ. ನೀನು ಯಾವತ್ತೂ ಈ ಮನೆಯಲ್ಲಿ ನಗುನಗುತ್ತಾ ಇಬೇಕಮ್ಮ. ಇಲ್ದಿದ್ರೆ ಈ ಮನೆಯ ಸೌಭಾಗ್ಯವೇ ಹೊರಟು ಹೋಗುತ್ತೆ. ಕೆಲ್ಸ ಹೋದ್ರೆ ಏನಿವಾಗ? ನಿನ್ಗೇನು ಕಮ್ಮಿಯಾಗಿದೆ ಹೇಳು? ಮೂರು ತಲೆಮಾರು ಕೂತು ತಿನ್ನುವಷ್ಟು ಆಸ್ತಿ ಕೂಡಿಟ್ಟಿದ್ದಾರೆ ನಿಮ್ಮಪ್ಪ. ಇನ್ನು ನಿನ್ಗೆ ಚಿಂತೆ ಯಾಕೆ ಮಗಳನ್ನು ಸಂತೈಸುವ ಪ್ರಯತ್ನ ಮಾಡಿದರು.

ಲೀಲಾವತಿ ಹೇಳಿದ ಮಾತಿನಲ್ಲಿ ತಪ್ಪೇನು ಇರಲಿಲ್ಲ. ಆದರೆ ಆ ಮಾತುಗಳನ್ನೆಲ್ಲ ಸ್ವೀಕಾರ ಮಾಡಲು ಸಾಧ್ಯವಾಗದಷ್ಟು ದೂರ ಆಕೆ ಮುನ್ನಡೆದು ಬಿಟ್ಟಿದ್ದಾಳೆ. ಇನ್ನೆಂದೂ ಅಪ್ಪ, ಅಮ್ಮ ನೋಡಿದ ಹುಡುಗನೊಂದಿಗೆ ಮದುವೆ ಮಾಡಿಕೊಳ್ಳುವುದಕ್ಕ್ಕೆ ಸಾಧ್ಯವಿಲ್ಲವೆಂಬ ಸತ್ಯ ಆ ಮನೆಯೊಳಗೆ ಆಕೆಗೆ ಮಾತ್ರ ಗೊತ್ತು. ಎಲ್ಲವನ್ನು ತೆರೆದಿಡುವ ಸಮಯವಲ್ಲ ಇದು. ಹಾಗಾಗಿ ಅಮ್ಮನ ಯಾವುದೇ ಮಾತು ಆಕೆಗೆ ರುಚಿಸದೆ ಹೋಯಿತು. ಲೀಲಾವತಿ ಮಾತಾಡುತ್ತಲೇ ಇದ್ದರು. ಅಕ್ಷರ ಇನಿಯನೊಂದಿಗೆ ಕಲ್ಪನೆಯ ಪ್ರೇಮಲೋಕದಲ್ಲಿ ವಿಹರಿಸುತ್ತಿದ್ದಳು. ಅವಳಿಗೆ ಅದೊಂದೇ ಪ್ರಪಂಚ. ಅದು ಬಿಟ್ಟು ಬೇರೊಂದು ಪ್ರಪಂಚಕ್ಕೆ ಕಾಲಿಡಲು ಮನಸ್ಸು ಸುತರಾಂ ಇಷ್ಟಪಡುತ್ತಿಲ್ಲ.

ಆದಷ್ಟು ಬೇಗ ಮನೆಯವರನ್ನು ಒಪ್ಪಿಸಿ ಮೈಸೂರಿಗೆ ತೆರಳಬೇಕು. ಕೆಲಸ ಬಿಟ್ಟರೆ ಬದುಕನ್ನು ಕೈ ಬಿಟ್ಟಂತೆಯೇ ಸರಿ. ಮೈಸೂರಿನಲ್ಲಿ ಒಂದಷ್ಟು ವರ್ಷ ಇದ್ದು ನಂತರ ಅಭಿಮನ್ಯುವನ್ನು ವಿವಾಹ ಮಾಡಿಕೊಂಡರೆ ಆಯಿತು. ಅಪ್ಪ, ಅಮ್ಮ ಒಪ್ಪಿದರೂ ಒಪ್ಪದೆ ಇದ್ದರೂ ಅವನನ್ನೇ ಮದುವೆಯಾಗೋದು ಎಂದು ಮುಂದಿನ ವೈವಾಹಿಕ ಜೀವನದ ಬಗ್ಗೆ ಕಲ್ಪನೆ ಮಾಡಿಕೊಳ್ಳುತ್ತಾ ಪುಳಕಿತಳಾಗುತ್ತಿದ್ದಳು. ಮತ್ತೆ ಒಂದೇ ಕ್ಷಣದಲ್ಲಿ ಆಕೆಯ ಮನದೊಳಗೆ ಎಲ್ಲಿ ನಮ್ಮ ಮದುವೆಗೆ ಅಪ್ಪ, ಅಮ್ಮ ಭಂಗ ತರುತ್ತಾರೋ ಎಂಬ ಆತಂಕ ಕವಿದುಕೊಳ್ಳಲು ಪ್ರಾರಂಭಿಸಿತು.

ಅಮ್ಮ ನೀವು ಏನೇ ಹೇಳು. ನನ್ನ ನಿರ್ಧಾರ ಬದಲಾಯಿಸೋದಕ್ಕೆ ಸಾಧ್ಯನೇ ಇಲ್ಲ. ನಾನು ಮೈಸೂರಿಗೆ ಹೊರಡೋದು ನಿಶ್ಚಿತ. ನೀನು ಅಂದಂತೆ ಇಲ್ಲಿ ಜೀವನ ಪೂರ್ತಿ ಕೂತು ತಿನ್ನೋದಕ್ಕೆ ನಾನು ಗಂಡಾಗಿ ಹುಟ್ಟಿಲ್ಲ. ಇವತ್ತಲ್ಲ ನಾಳೆ ಮನೆ ಬಿಟ್ಟು ತೆರಳಲೇ ಬೇಕು. ಮದುವೆಯಾಗೋ ಹುಡುಗ ಜೀವನಪೂರ್ತಿ ನನ್ನ ಚೆನ್ನಾಗಿ ನೋಡ್ಕೋತ್ತಾನೆ ಎಂಬ ನಂಬಿಕೆ ನನಗಿಲ್ಲ. ಹಾಗಾಗಿ ನನ್ನ ಬದುಕಿನ ದಾರಿ ನಾನೇ ನೋಡ್ಕೋತ್ತಿನಿ. ದಯವಿಟ್ಟು ಅಡ್ಡ ಬಬೇಡಿ ಮತ್ತೆ ಹಳೆಯ ನಿರ್ಧಾರಕ್ಕೆ ಅಂಟಿ ಕೂತಳು.

ಮಗಳು ಮದುವೆಯ ವಿಚಾರದಲ್ಲಿ ಸಾಕಷ್ಟು ಕಳವಳಗೊಂಡಿದ್ದಾಳೆಂಬುದನ್ನು ಲೀಲಾವತಿ ಅರ್ಥೈಸಿಕೊಂಡರು. ಅದರೆ ಮನದ ಮೂಲೆಯಲೆಲ್ಲೋ ಅಕ್ಷರ ಯಾರನ್ನಾದರು ಪ್ರೀತಿ ಮಾಡ್ತಾ ಇದ್ದಾಳಾ? ಪ್ರೀತಿ ಮಾಡ್ತಾ ಇಲ್ಲ ಅಂದ್ರೆ ಅಪ್ಪ, ಅಮ್ಮನ ಮಾತು ಮೀರುವವಳಲ್ಲ. ಆದರೆ ಇಂದು ನಮ್ಮ ಮಾತನ್ನೇ ಧಿಕ್ಕರಿಸಿ ಹೊರಟು ನಿಂತಿದ್ದಾಳಲ್ಲ? ಅಂದುಕೊಂಡರು. ಮತ್ತೆ ಮನಸ್ಸು ಬದಲಾಯಿತು. ಛೇ, ಮಗಳ ಬಗ್ಗೆ ಏನೇನೋ ಹುಚ್ಚು ಕಲ್ಪನೆ ಮಾಡಿಕೊಳ್ಳುತ್ತಿದ್ದೇನಲ್ಲ? ನನ್ನ ಮಗಳು ಹಾಗಾಗೋದಕ್ಕೆ ಸಾಧ್ಯವಿಲ್ಲವೆಂದು ತನ್ನನ್ನು ತಾನೇ ಸಂತೈಸಿಕೊಂಡು ಮತ್ತೆ ಮಗಳ ಮನವೊಲಿಕೆಗೆ ಮುಂದಾದರು.

ಮದುವೆಯ ಬಗೆಗಿನ ಹತ್ತಾರು ಕಥೆಗಳು, ಕಷ್ಟ ಸುಖ ಎಲ್ಲವನ್ನು ಮಗಳ ಮುಂದೆ ಪ್ರಥಮ ಬಾರಿಗೆ ತೆರೆದಿಟ್ಟು ಮದುವೆಯ ಬಗ್ಗೆ ಆಸೆ ಹುಟ್ಟಿಸಲು ಪ್ರಯತ್ನಿಸಿದರು. ಆದರೂ ಮಗಳ ಮನಸ್ಸಿನಲ್ಲೇನು ಬದಲಾವಣೆ ಕಾಣಲಿಲ್ಲ. ಆಕೆ ಮೈಸೂರಿಗೆ ಹೊರಡುವ ನಿರ್ಧಾರವನ್ನು ಮತ್ತಷ್ಟು ಗಟ್ಟಿಗೊಳಿಸಿದಳು.

ನೀನೇನು ಮದ್ವೆ ಬಗ್ಗೆ ಚಿಂತೆ ಮಾಡ್ಕೋ ಬೇಡ. ನಿನ್ಗೆ ಒಳ್ಳೆಯ ಮನೆತನದ ಹುಡುಗನನ್ನೇ ನೋಡಿ ಮದ್ವೆ ಮಾಡಿಸ್ತೇವೆ. ಅದು ಕೂಡ ನಿನ್ಗೆ ಒಪ್ಪಿಗೆ ಆದರೆ ಮಾತ್ರ.

ನಿಮ್ಗೆ ಮದುವೆ ಚಿಂತೆ ಬಿಟ್ರೆ ಬೇರೇನು ಕಾಣ್ತಾ ಇಲ್ಲ. ಈ ಮನೆಯಿಂದ ನಾನು ಒಂದು ಸಲ ತೊಲಗಿದರೆ ಸಾಕೂಂತ ನೀವು ನಿರ್ಧಾರ ಮಾಡಿಬಿಟ್ಟಿದ್ದೀರ. ಇನ್ನೊಂದೆರಡು ವರ್ಷ ಎಲ್ಲಾದರು ಹೋಗಿ ಹಾಳಾಗಿ ಹೋಗ್ತಿನಿ. ಎರಡು ವರ್ಷವಾದರೂ ನನ್ನ ಪಾಡಿಗೆ ನನ್ನ ಬಿಟ್ಟುಬಿಡಿ. ನನ್ನ ಮನಸ್ಸು ಬದಲಾಯಿಸುವ ವ್ಯರ್ಥ ಪ್ರಯತ್ನ ಮಾಡ್ಬೇಡಿ ಅಮ್ಮನ ಮುಖವನ್ನು ನೋಡದೆ ತಲೆಬಾಗಿಸುತ್ತಾ ಕಟುವಾಗಿ ಹೇಳಿದಳು.

ಮಗಳಿಗೆ ಬುದ್ಧಿ ಮಾತು ಹೇಳಿ ಸುಖವಿಲ್ಲ. ಇದುವರೆಗೆ ದೇವರು ಎಲ್ಲವನ್ನು ಚೆನ್ನಾಗಿ ನಡೆಸಿಕೊಟ್ಟಿದ್ದಾನೆ. ಮುಂದೆನೂ ನಡೆಸಿಕೊಡುವ ಭರವಸೆ ಇದೆ. ಈಗಿನ ಕಾಲದಲ್ಲಿ ಯಾವ ಮಕ್ಕಳು ತಾನೆ ಅಪ್ಪ, ಅಮ್ಮನ ಮಾತು ಕೇಳುತ್ತಾರೆ? ಬೆಳೆದು ದೊಡ್ಡವರಾದ ಮೇಲೆ ಅವರ ನಿರ್ಧಾರ ಅವರಿಗೆ. ಇನ್ನು ನಮ್ಮ ಮಾತಿಗೆಲ್ಲಿದೆ ಬೆಲೆ? ಅಂದುಕೊಂಡ ಲೀಲಾವತಿ ಅಕ್ಷರ, ಕೊನೆಯದಾಗಿ ಹೇಳ್ತಾ ಇದ್ದೇನೆ. ಯಾವುದಕ್ಕೂ ದಿಢೀರಾಗಿ ನಿರ್ಧಾರ ಕೈಗೊಳ್ಬೇಡ. ಒಂದೆರಡು ದಿನ ಕೂತು ಆಲೋಚನೆ ಮಾಡು. ಆಗಲೂ ಕೂಡ ನಿನ್ಗೆ ಮೈಸೂರಿಗೆ ಹೋಗ್ಬೇಕು ಅನ್ನಿಸಿದರೆ ಹೊರಡು. ನಮ್ಮದೇನು ಅಭ್ಯಂತರವಿಲ್ಲ ಎಂದು ತಮ್ಮ ನಿರ್ಧಾರ ಪ್ರಕಟಿಸಿ ಭಾರವಾದ ಮನಸ್ಸಿನೊಂದಿಗೆ ಹೊರ ನಡೆದರು.

ಇಬ್ಬರ ಮಾತನ್ನು ಹೊರಗಿನಿಂದ ಆಲಿಸುತ್ತಿದ್ದ ರಾಜಶೇಖರ್‌ಗೆ ಮನೊದೊಳಗೆ ಕಳವಳ ಪ್ರಾರಂಭವಾಯಿತು. ಮಗಳ ಭವಿಷ್ಯ ಹಾಳಾಗಿ ಹೋಗುತ್ತಿದೆಯಲ್ಲ ಎಂಬ ಆತಂಕ. ಅಷ್ಟೊಂದು ದೊಡ್ಡ ನಗರದಲ್ಲಿ ಹೇಗೆ ಬದುಕು ನಡೆಸುತ್ತಾಳೋ!? ಮಡಿಕೇರಿ ನಗರ ಮೈಸೂರಿನ ಒಂದು ಗಲ್ಲಿಗೆ ಸಮಾನ. ಮೈಸೂರು ಅಷ್ಟೊಂದು ದೊಡ್ಡದಾಗಿ ಬೆಳೆದು ನಿಂತಿದೆ. ಅಂತಹ ದೊಡ್ಡ ಅಪರಿಚಿತ ನಗರದಲ್ಲಿ ಮಗಳು ಬದುಕು ನಡೆಸುವುದು ಅಂದರೆ ಸಣ್ಣ ಮಾತ? ಅವಳಿಗೇನೋ ಬುದ್ಧಿ ಇಲ್ಲ. ಸಣ್ಣ ಹುಡುಗಿ. ಇವಳಿಗಾದ್ರು ಬುದ್ಧಿ ಬೇಡ್ವ? ಮಗಳಿಗೆ ಬುದ್ಧಿ ಹೇಳಿ ಬಾ ಅಂದರೆ ಮಗಳ ನಿರ್ಧಾರಕ್ಕೆ ತಲೆದೂಗಿ ಬಂದುಬಿಟ್ಟಿದ್ದಾಳೆ ಎಂದು ಪತ್ನಿ ವಿರುದ್ಧ ಮನದೊಳಗೆ ರೇಗಾಡಿದ ರಾಜಶೇಖರ್ ಹಣೆಯಲ್ಲಿ ಮೂಡಿದ್ದ ಬೆವರನ್ನು ಒರೆಸುತ್ತಾ ಲೀಲಾವತಿಯ ಕಡೆಗೆ ದೃಷ್ಟಿ ಹಾಯಿಸಿದರು.

ನೀನೇನು ಅವಳಿಗೆ ಬುದ್ಧಿ ಹೇಳ್ಲಿಕ್ಕೆ ಹೋಗಿದ್ಯಾ ಅಥವಾ ಅವಳಿಗೆ ಮೈಸೂರಿಗೆ ಹೊರಡೋದಕ್ಕೆ ಬಟ್ಟೆ ಪ್ಯಾಕ್ ಮಾಡ್ಲಿಕ್ಕೆ ಹೋಗಿದ್ಯಾ? ಅಮ್ಮ, ಮಗಳು ಇಬ್ಬರು ಒಂದೇ. ಭವಿಷ್ಯದ ಬಗ್ಗೆ ಒಂದು ಚೂರು ಆಲೋಚನೆ ಇಲ್ಲ ರಾಜಶೇಖರ್ ಮಗಳ ಮೇಲಿದ್ದ ಕೋಪವನ್ನು ಲೀಲಾವತಿ ಮೇಲೆ ತೋರ್ಪಡಿಸಿದರು.

ಸದಾ ಚಟುವಟಿಕೆಯ ತಾಣವಾಗಿದ್ದ ಮನೆಯೊಳಗೆ ಮೌನ ತನ್ನ ಸಾಮ್ರಾಜ್ಯ ಸ್ಥಾಪಿಸಿಕೊಂಡು ಆಳ್ವಿಕೆ ನಡೆಸಲು ಪ್ರಾರಂಭಿಸಿತು. ಎಲ್ಲರೂ ಮೌನಕ್ಕೆ ಶರಣು. ಉತ್ಸಾಹದ ಕೇಂದ್ರಬಿಂದುವಾಗಿದ್ದ ಅಕ್ಷರ ಬೆಡ್‌ರೂಂನೊಳಗೆ ಅಪ್ಪ ಆಡಿದ ಪ್ರತಿಯೊಂದು ಮಾತುಗಳನ್ನು ಕೇಳಿಸಿಕೊಂಡು ಬಿಕ್ಕಳಿಸಿ ಅಳ ತೊಡಗಿದಳು. ಇದೀಗ ಆ ಮನೆಯೊಳಗೆ ಅಳುವಿನ ಶಬ್ದವೊಂದು ಮಾತ್ರ ಕೇಳಿಸುತಿತ್ತು. ರಾಜಶೇಖರ್ ಮನಸ್ಸನ್ನು ಕಲ್ಲಾಗಿಸುವ ಪ್ರಯತ್ನ ಮಾಡಿದರು.

ಅಳಲಿ ಮನಸ್ಸಾರೆ ಅಳಲಿ. ಅವಳ ನಿರ್ಧಾರ ಅವಳಿಗೆ ಸರಿ ಅಲ್ಲ ಅನ್ನಿಸೋ ತನಕ ಅಳಲಿ ಎಂದು ಮನದೊಳಗೆ ಇನ್ನೂ ತಣಿಯದ ಸಿಟ್ಟನ್ನು ತೋರ್ಪಡಿಸಿದರು.

ಅಪ್ಪನ ಮಾತಿನಿಂದ ಅಕ್ಷರ ಮತ್ತೆ ಕಣ್ಣೀರಿನ ಕಡಲಾದಳು. ಮತ್ತೆ ಬಿಕ್ಕಳಿಸಿ ಅಳತೊಡಗಿದಳು. ಲೀಲಾವತಿಗೆ ಮಗಳ ಅಳು ವಿನ ದನಿ ಹೃದಯವನ್ನೊಮ್ಮೆ ಕಲಕಿದಂತಾಯಿತು. ನಿಂತಲ್ಲೇ ಒಮ್ಮೆ ಕಂಪಿಸಿದರು. ಆದರೆ ಮಗಳ ಬಳಿ ಹೋಗಿ ಸಂತೈಸುವ ಧೈರ್ಯ ಆಗಲಿಲ್ಲ. ಎಲ್ಲಿ ರಾಜಶೇಖರ್ ಮತ್ತೆ ಬೈದು ಬಿಡುತ್ತಾರೋ ಎಂಬ ಭಯ. ಸಣ್ಣ ವಯಸ್ಸಿನಲ್ಲಿ ಮಾತ್ರ ಆಕೆಯ ಅಳುವಿನ ದನಿ ಮನೆಯಲ್ಲಿ ಕೇಳಿತ್ತು. ಸಣ್ಣಪುಟ್ಟ ವಿಚಾರಕ್ಕೂ ಹಟ ಹಿಡಿದು ಅಳುತ್ತಿದ್ದಳು. ಮನಸ್ಸಿಗೆ ಬೇಕು ಅನ್ನಿಸಿದ ಯಾವುದೇ ವಸ್ತುವನ್ನು ಪಡೆದುಕೊಳ್ಳಲು ಅವಳು ಅಳುವಿನ ಮಾರ್ಗ ತುಳಿದು ಬಿಡುತ್ತಿದ್ದಳು. ಆಸೆ ಈಡೇರುವ ತನಕ ಅಳುತ್ತಲೇ ಇರುತ್ತಿದ್ದಳು. ಬೆಳೆದಂತೆ ಅಳು ಎಂಬುದನ್ನು ಮರೆತೇ ಹೋಗಿದ್ದಳು. ಅಷ್ಟೊಂದು ಪ್ರೀತಿ ಯಿಂದ ಮುದ್ದಾಗಿ ಆಕೆಯನ್ನು ಬೆಳೆಸಿದ್ದರು. ರಾಜಶೇಖರ್ ಮನದಲ್ಲಿ ಹಳೆಯ ನೆನಪುಗಳೆಲ್ಲ ಗರಿಗೆದರಿಕೊಂಡಿತು. ಎಂಥಾ ಹುಚ್ಚು ಹುಡ್ಗಿ ಮತ್ತೆ ಮಗುತರ ಅಳೋದಕ್ಕೆ ಶುರು ಮಾಡಿದ್ದಾಳೆ ಅಂದುಕೊಂಡು ಆಕೆಯ ಬೆಡ್‌ರೂಂ ಕಡೆಗೆ ನಡೆದರು.

ಮಗಳ ಬಳಿ ಕುಳಿತು ಸಂತೈಸಲು ಮುಂದಾದರು. ಅಕ್ಷರ ಕೋಪದಿಂದ ಮತ್ತೊಂದು ಬದಿಗೆ ಮುಖ ತಿರುಗಿಸಿಕೊಂಡು ತನ್ನ ಅಳುವಿನ ಪ್ರತಿಭಟನೆ ಮುಂದುವರೆಸಿದಳು. ಯಾಕಮ್ಮ ನನ್ನ ಮೇಲೆ ಇಷ್ಟೊಂದು ಕೋಪ? ನನ್ನಿಂದ ತಪ್ಪಾಗಿದ್ರೆ ಕ್ಷಮಿಸಿ ಬಿಡು. ಇಷ್ಟೊಂದು ಸಣ್ಣ ವಿಶಯಕ್ಕ್ಕೆ ಮುಖ ಊದಿಸಿಕೊಂಡು ಕೂತ್ಕೊಂಡ್ರೆ ಏನು ಸುಖ ಹೇಳು? ಈಗೇನು ನೀನು ಮೈಸೂರಿಗೆ ಹೋಗ್ಬೇಕು, ಅಷ್ಟೇ ತಾನೆ? ನೀನು ಯಾವಾಗ ಬೇಕಾದ್ರು ಹೊರಡ್ಬೊಹುದು. ಆದ್ರೆ ಕೋಪ ಮಾತ್ರ ಮಾಡ್ಕೋಬೇಡ ಅಂದ ರಾಜಶೇಖರ್ ಮಗಳ ಮೈಸೂರು ಯಾತ್ರೆಗೆ ಕಡೆಗೂ ಹಸಿರು ನಿಶಾನಿ ತೋರುತ್ತಿದ್ದಂತೆ ಅಕ್ಷರ ಅಪ್ಪನನ್ನು ತಬ್ಬಿಕೊಂಡು ಥ್ಯಾಂಕ್ಯೂ ಡ್ಯಾಡಿ ಎಂದು ಕೆನ್ನೆಗೊಂದು ಮುತ್ತು ನೀಡಿ ಸಂತಸ ತೋರ್ಪಡಿಸಿದಳು. ಕೆಲವು ನಿಮಿಷಗಳ ಕಾಲ ಅಪ್ಪನನ್ನೇ ತಬ್ಬಿಕೊಂಡು ಮತ್ತೆ ಬಿಕ್ಕಳಿಸಿ ಅತ್ತು ಮನಸ್ಸು ಹಗುರ ಮಾಡಿಕೊಂಡಳು.

ಕಣ್ಣೀರಿನ ಮೂಲಕ ಅಪ್ಪ, ಅಮ್ಮನ ಮನಗೆದ್ದು ಮೈಸೂರು ಯಾತ್ರೆಯನ್ನು ಸುಗಮಗೊಳಿಸಿಕೊಂಡ ಅಕ್ಷರ ಮತ್ತೆ ಚಿಂತೆಗೆ ಬಿದ್ದದ್ದು ಅಭಿಮನ್ಯುವಿನ ವಿಚಾರದಲ್ಲಿ. ಮೈಸೂರಿಗೆ ಹೊರಡುವ ವಿಚಾರ ಹೇಳಿದರೆ ಅವನು ಎಲ್ಲಿ ಕೋಪ ಮಾಡಿಕೊಳ್ಳುತ್ತಾನೋ ಎಂಬ ಭಯ ಕಾಡಲು ಪ್ರಾರಂಭಿಸಿತು. ಅಭಿಮನ್ಯು ಕೇವಲ ಎರಡೇ ಎರಡು ದಿನ ಗೋವಾಕ್ಕೆ ಟೂರ್ ಹೋಗಿ ಬತೇನೆ ಅಂಥ ನನ್ನಲ್ಲಿ ಕೈ ಮುಗಿದು ಕೇಳ್ಕೊಂಡ್ರೂ ಹೋಗದಕ್ಕೆ ಅವಕಾಶ ಕೊಡ್ಲಿಲ್ಲ. ಈಗ ನಾನು ವರ್ಷಾನುಗಟ್ಟಲೇ ಅಭಿಮನ್ಯುವನ್ನು ಬಿಟ್ಟು ಮೈಸೂರಿನಲ್ಲಿ ಇತೇನೆ ಅಂದ್ರೆ ಅವನು ಎಷ್ಟೊಂದು ನೊಂದುಕೊಳ್ಳೋದಿಲ್ಲ? ಎಂದು ನೆನೆದು ಮತ್ತೆ ದುಃಖದಲ್ಲಿ ಮುಳುಗಿದಳು.

ಮರು ದಿನ ಸಂಜೆ ರಾಜಾಸೀಟ್‌ನಲ್ಲಿ ಎಂದಿನಂತೆ ಅಕ್ಷರ ಅಭಿಮನ್ಯುವನ್ನು ಭೇಟಿಯಾದಳು. ಆಕೆಯ ಮೊಗದಲ್ಲಿ ಎಂದಿನಂತೆ ಉತ್ಸಾಹ ಇರಲಿಲ್ಲ. ಯಾವುದೋ ಚಿಂತೆಯಲ್ಲಿ ಮುಳುಗಿದವಳಂತೆ ಕಂಡಳು. ರಾತ್ರಿ ಸರಿಯಾಗಿ ನಿದ್ರೆ ಮಾಡದೆ ಕಣ್ಣುಗಳು ಕೆಂಪಾಗಿದ್ದವು. ಪ್ರಪಂಚವನ್ನೇ ಮರೆತು ಸದಾ ನಗುತ್ತಲೇ ಇರುತ್ತಿದ್ದ ಅಕ್ಷರ ಅಭಿಮನ್ಯುನ ಬಳಿ ಬಂದು ಕುಳಿತರೂ ಮೌನ.. ಮೌನ… ಅಭಿಮನ್ಯು ಏನೇ ಕೇಳಿದರೂ ಮೌನವೊಂದೇ ಆಕೆಯ ಉತ್ತರವಾಗಿತ್ತು. ಮಾತನಾಡುವ ಮನಸ್ಸು ಇರಲಿಲ್ಲ. ಎಲ್ಲದಕ್ಕಿಂತ ಹೆಚ್ಚಾಗಿ ಹೇಗೆ ಮಾತು ಪ್ರಾರಂಭಿಸಲಿ ಎಂಬ ಗೊಂದಲಕ್ಕೆ ಆಕೆ ಸಿಲುಕಿಕೊಂಡಿದ್ದಳು. ಆಕೆಯ ಜೀವನದಲ್ಲಿ ನಡೆಯಬಾರದೇನೋ ನಡೆದು ಹೋಗಿದೆ ಎಂಬ ಕಳವಳಕ್ಕೆ ಬಿದ್ದ ಅಭಿಮನ್ಯು ಅಕ್ಷರ, ಯಾಕೆ ಇಷ್ಟೊಂದು ಮೌನ. ನಿನ್ನ ಮೌನ ನೋಡ್ತಾ ಇದ್ರೆ ನನ್ಗೆ ಭಯ ಆಗ್ತಾ ಇದೆ. ದಯವಿಟ್ಟು ಏನಾದ್ರು ಮಾತಾಡು

ನಾನು ಮೌನವಾಗಿದ್ರೆ ಹೇಗೆ ಕಾಣಿಸ್ತೇನೆ, ನೀನು ಹೇಗೆ ಪ್ರತಿಕ್ರಿಯಿಸ್ತೀಯ ಅಂತ ನೋಡೋದಕ್ಕೆ ಮೌನವಾಗಿದ್ದೆ ವಿಷಯ ವನ್ನು ಮರೆ ಮಾಚಲು ಪ್ರಯತ್ನಿಸಿದಳು.

ನೀನೇನು ನನ್ಗೆ ಹೊಸಬಳು ಅಂದುಕೊಂಡಿದ್ದೀಯ? ಸಣ್ಣ ವಯಸ್ಸಿನಿಂದಲೂ ನಿನ್ನ ನೋಡ್ತಾ ಇದ್ದೇನೆ. ನಿನ್ನ ಕಣ್ಗಳನ್ನು ನೋಡಿದರೆ ಸಾಕು. ನಿನ್ನ ಮನದಲ್ಲಿ ನೋವು ಅಡಗಿ ಕುಳಿತಿದೆ ಎಂಬುದು ಮನದಟ್ಟಾಗುತ್ತದೆ. ಯಾಕೆ ಮನಸ್ಸಿನಲ್ಲಿ ನೋವು ತುಂಬಿಕೊಂಡು ಹೊರಗೆ ಸಂತೋಷವಾಗಿದ್ದೇನೆ ಅಂಥ ತೋರ್ಪಡಿಸಿಕೊಳ್ಳಲು ಪ್ರಯತ್ನ ಮಾಡ್ತಾ ಇದ್ದೀಯ? ನಾನು ನಿನ್ನವನ ಲ್ಲವಾ? ನನ್ನೊಂದಿಗೆ ನಿನ್ನ ದುಃಖ ಹಂಚಿಕೊಳ್ಳಬಾರದ? ಕೇಳಿದ ಅಭಿಮನ್ಯು.
ಸ್ವಲ್ಪಹೊತ್ತು ಏನೂ ಹೇಳದೆ ಸುಮ್ಮನೆ ಕುಳಿತ ಅಕ್ಷರ ಇದ್ದಕ್ಕಿದ್ದ ಹಾಗೆ ಅಭಿ, ನಾನು ನಿನ್ನಿಂದ ದೂರವಾಗಿ ಬಿಟ್ರೆ ಏನ್ ಮಾಡ್ತಿಯಾ?

“ದೂರ ಅಂದ್ರೆ”?

“ದೂರ ಅಂದ್ರೆ ಶಾಶ್ವತವಲ್ಲ. ಕೆಲವು ವರ್ಷಗಳು ಮಾತ್ರ”.

ಆಕೆಯ ಮಾತು ಕೇಳಿ ಅಭಿಮನ್ಯುವಿಗೆ ಮಕ್ಕಳಾಟ ಆಡುತ್ತಿದ್ದಾಳೆ ಅನ್ನಿಸಿತು. ಇಂತಹ ತಲೆ ಪ್ರಶ್ನೆಗಳನ್ನು ಆಗಿಂದಾಗೆ ಕೇಳುತ್ತಲೇ ಇರುತ್ತಾಳೆ. ಇದು ಕೂಡ ಹಾಗೆಯೇ ಇರಬಹುದೆಂದು ಅಂದುಕೊಂಡ. ಹೀಗಾಗಿ ಆಕೆಯ ಮಾತು ಅಭಿಮನ್ಯು ವಿಗೆ ನಗು ತರಿಸಿತು.

ಎಷ್ಟು ವರ್ಷ ಬೇಕಾದ್ರು ದೂರ ಇರು. ನನ್ಗೇನು ಚಿಂತೆ ಇಲ್ಲ ಎಂದು ಹೇಳಿ ನಗಲು ಪ್ರಾರಂಭಿಸಿದ.

ಒಂದ್ವೇಳೆ ನಾನು ಎರಡು ವರ್ಷ ದೂರದ ಊರಿಗೆ ಹೊರಟೋದ್ರೆ ಏನ್ಮಾಡ್ತಿಯ? ಮತ್ತೆ ಪ್ರಶ್ನಿಸಿದಳು.

ಇವಳ ತಲೆ ಪ್ರಶ್ನೆ ಇವತ್ತಿಗೆ ಮುಗಿಯೋದಿಲ್ಲ ಅಂದುಕೊಂಡ ಅಭಿಮನ್ಯು ಆಕೆಯ ಪ್ರಶ್ನೆಗಳಿಗೆ ತಮಾಷೆಯಾಗಿಯೇ ಉತ್ತರಿಸಲು ಪ್ರಾರಂಭಿಸಿದ.

ಹಾಗೊಂದು ವೇಳೆ ನೀನು ಹೊರಟು ಹೋದ್ರೆ ಆ ಎರಡು ವರ್ಷಗಳಲ್ಲಿ ಒಂದು ಮುದ್ದಾದ ಹುಡುಗಿಯನ್ನು ಲವ್ ಮಾಡಿ ಮುದ್ದಾದ ಮಗುವನ್ನು ಪಡೆದು ಸುಖವಾದ ಸಂಸಾರ ನಡೆಸ್ತೇನೆ. ಇದು ನನ್ನ ಕಥೆ. ಎರಡು ವರ್ಷಗಳಲ್ಲಿ ನೀನೇನು ಮಾಡ್ತಿಯ? ಕೇಳಿದ ಅಭಿಮನ್ಯು.

ಅಭಿಮನ್ಯು ಪ್ರತಿಯೊಂದು ಪ್ರಶ್ನೆಗಳನ್ನು ಲಘುವಾಗಿ ಪರಿಗಣಿಸಿ ಅಷ್ಟೇ ಲಘುವಾಗಿ ಉತ್ತರಿಸುತ್ತಿರುವುದನ್ನು ಕಂಡ ಅಕ್ಷರ ಕಂಗಾಲಾದಳು. ಇವನಿಗೆ ಹೇಗೆ ಹೇಳಿ ಅರ್ಥಮಾಡಿಸೋದು? ಎಲ್ಲವನ್ನು ತಮಾಷಿಯಾಗಿ ನೋಡುತ್ತಾ ಇದ್ದಾನಲ್ಲ? ಎಂದು

ಚಿಂತೆಗೆ ಬಿದ್ದಳು. ಎಲ್ಲವನ್ನು ಬಿಡಿಸಿ ಹೇಳುವ ಧೈರ್ಯ ಸಾಲದೆ ಮತ್ತೆ ಸುತ್ತಿಬಳಸಿ ಪ್ರಶ್ನೆಗಳನ್ನು ಕೇಳಲು ಮುಂದಾದಳು.

ಅಭಿ, ನಿನ್ಗೆ ಎಲ್ಲ ತಮಾಷಿಯಾಗಿಯೇ ಕಾಣ್ತದೆ. ಮದ್ವೆಯಾದ ನಂತರನೂ ಹೀಗೆ ತಮಾಷಿ ಮಾಡ್ಕೊಂಡು ಕಾಲ ಕಳೆದು ಬಿಡ್ತಿಯ. ಜೀವನದಲ್ಲಿ ಸ್ವಲ್ಪನಾದ್ರು ಗಂಭೀರತೆ ಬೇಡ್ವ? ನಾನು ಏನು ಹೇಳಿದ್ರೂ ಕೂಡ ನಿನ್ಗೆ ಅದು ತಮಾಷಿಯಾಗಿ ಕಾಣ್ತದೆ ಎಂದು ಮಾತು ಮುಂದುವರೆಸುತ್ತಿದ್ದಂತೆ ಆಕೆಯ ಮಾತಿನ ನಡುವೆ ಬಾಯಿಹಾಕಿ ಸಾಕು ನಿಲ್ಸು. ನನ್ಗೆ ಕೇಳಿ ಕೇಳಿ ಸಾಕಾಗಿ ಹೋಗಿದೆ. ನಿನ್ನ ಮಾತು ಕೇಳ್ತಾ ಇದ್ರೆ ನಗು ಬರದೆ ಇನ್ನೇನು ಅಳು ಬರೋದಕ್ಕೆ ಸಾಧ್ಯನಾ ಹೇಳು? ಪಾಂಡವರಂತೆ ನೀನು ಕೂಡ ವನವಾಸಕ್ಕೆ ಹೊರಡೋ ಹಾಗೆ ಮಾತಾಡ್ತಾ ಇದ್ದೀಯ. ವನವಾಸಕ್ಕೆ ಹೊರಟ ಮೇಲೆ ನಾನು ಇಲ್ಲಿ ಏನು ಮಾಡ್ಕೋತ್ತಿನೋ ಎಂಬ ಭಯ ಬೇರೆ. ನಿನ್ನ ಮಾತು ಕೇಳ್ತಾ ಇದ್ರೆ ಸಣ್ಣ ಮಕ್ಕಳಿಗೆ ಕಥೆ ಹೇಳ್ದಂಗೆ ಉಂಟು ಎಂದು ಅಭಿಮನ್ಯು ಆಕಾಶದ ಕಡೆಗೆ ಮುಖ ಮಾಡಿ ಮತ್ತೆ ನಗಲು ಪ್ರಾರಂಭಿಸಿದ.

ಅಕ್ಷರ ತುಂಬ ನೊಂದುಕೊಂಡಳು. ಅಭಿಮನ್ಯುವಿಗೆ ಹೇಗೆ ಎಲ್ಲವನ್ನು ಬಿಡಿಸಿ ಹೇಳೋದು ಎಂದು ಅರ್ಥವಾಗದೆ ಗೊಂದಲಕ್ಕೆ ಸಿಲುಕಿದಳು. ಮನದೊಳಗೆ ಉದಯಿಸುತ್ತಿದ್ದ ದುಃಖ ಕಣ್ಣೀರಿನ ಮೂಲಕ ಹೊರ ಬಂದಿತು. ತುಟಿ ಕಚ್ಚಿ ಹಿಡಿದುಕೊಂಡು ನೋವನ್ನು ನುಂಗಿಕೊಳ್ಳಲು ಪ್ರಯತ್ನಿದರೂ ತಡೆದುಕೊಳ್ಳಲು ಆಗಲಿಲ್ಲ. ಕ್ಷಮಿಸಿ ಬಿಡು ಅಭಿ, ನಾನು ನಿನ್ನ ಬಿಟ್ಟು ಹೋಗ್ತಾ ಇದ್ದೇನೆ. ಸದ್ಯಕ್ಕೆ ಏನು ಕೇಳ್ಬೇಡ ಅಭಿಮನ್ಯುವನ್ನು ತಬ್ಬಿಕೊಂಡು ಬಿಕ್ಕಳಿಸಿ ಅತ್ತಳು.

ಅಕ್ಷರ ಕಣ್ಣೀರಿಡುತ್ತಿರುವುದನ್ನು ಕಂಡು ಕಳವಳಗೊಂಡ. ಏನು ಹೇಳಬೇಕೆಂದು ತೋಚದೆ ಸುಮ್ಮನೆ ಆಕೆಯನ್ನು ಮತ್ತಷ್ಟು ಬಿಗಿದಪ್ಪಿಕೊಂಡು ಏನು ಆಗೋದಿಲ್ಲ. ನಾನಿದ್ದೇನಲ್ಲ, ಭಯ ಪಡ್ಬೇಡ ಎಂದು ಮೈದಡವಿ ಸಂತೈಸಿದ.

ಮಡಿಕೇರಿಯಿಂದ ಮೈಸೂರಿಗೆ ವರ್ಗಾವಣೆಯಾದ ವಿಷಯ, ಮೈಸೂರಿಗೆ ಹೋಗಿ ನೆಲೆಸಲೇ ಬೇಕಾದ ಅನಿವಾರ್ಯತೆಯನ್ನು ತೆರೆದಿಟ್ಟಳು.

ಅಭಿ, ನೀನು ಆಗಿಂದಾಗೆ ಹೇಳ್ತಾ ಇದ್ದೆ ಅಲ್ವ, ದೂರ ಇದ್ದಷ್ಟು ಪ್ರೀತಿ ಜಾಸ್ತಿ ಇರುತ್ತೆ ಅಂಥ? ಒಂದೆರಡು ವರ್ಷ ನಿನ್ನಿಂದ ದೂರ ಇರೋದು ಅನಿವಾರ್ಯ. ಎಲ್ಲವನ್ನು ಸಹಿಸಿಕೊಳ್ಳಲೇ ಬೇಕು. ನಮ್ಮಿಬ್ಬರ ಪ್ರೀತಿಗೋಸ್ಕರ. ದಯವಿಟ್ಟು ಪ್ರೀತಿಯಿಂದ ಕಳುಹಿಸಿಕೊಡು ಎಂದು ಮತ್ತೆ ಕಣ್ಣೀರಿನ ಕಡಲಾದಳು.

ಅಕ್ಷರಳನ್ನು ಮೈಸೂರಿಗೆ ಕಳುಹಿಸಿಕೊಡಲು ಅಭಿಮನ್ಯುವಿನ ಮನಸ್ಸು ಸುತರಾಂ ಒಪ್ಪಲಿಲ್ಲ. ಕಷ್ಟನೋ ಸುಖನೋ ಒಟ್ಟಿಗೆ ಇದ್ದು ಎದುರಿಸುವ ಎಂಬ ನಿರ್ಧಾರ ಅವನದು. ಅಷ್ಟಕ್ಕೂ ಮೈಸೂರಿಗೆ ಹೋಗಿ ಸಾಧಿಸೋದಕ್ಕೆ ಏನಿದೆ? ಇರೋದರಲ್ಲಿ ನೆಮ್ಮದಿಯ ಬದುಕು ಕಂಡುಕೊಂಡರೆ ಸಾಕು. ತಾನು ದುಡಿದ ಹಣದಲ್ಲಿಯೇ ಸುಂದರ ಬದುಕು ಕಟ್ಟಿಕೊಳ್ಳಬಹುದು ಎಂಬ ನಿರ್ಧಾರ ಅಭಿಮನ್ಯುವಿನದು.

ಅಕ್ಷರ, ಮೈಸೂರಿಗೆ ಹೋಗುವಂತ ಅನಿವಾರ್ಯತೆ ನಿನ್ಗೇನು ಇಲ್ಲ ಬಿಡು. ನೀನು ಕೆಲ್ಸ ಕಳ್ಕೊಂಡ್ರೂ ಕೂಡ ನಿನ್ನ ಸಾಕುವ ತಾಕತ್ತು ನನ್ಗೆ ಇಲ್ವ? ಈ ಶ್ರೀಮಂತರ ಹಣೆ ಬರಹವೇ ಇಷ್ಟು. ಎಷ್ಟು ಸಿಕ್ಕರೂ ಸಾಲ್ದು. ನೀನು ಕೂಡ ಹಣದ ಬೆನ್ನು ಹತ್ತಿ ಬಿಟ್ಟಿದ್ದಿಯ! ಇಲ್ಲಿ ಹಾಯಾಗಿರೋದು ಬಿಟ್ಟು ಮೈಸೂರಿಗೆ ಹೋಗಿ ಕೊರಗಿ, ಕೊರಗಿ ಮನಸ್ಸು, ದೇಹವನ್ನು ಯಾಕೆ ಹಾಳು ಮಾಡ್ಕೊಳ್ಬೇಕು. ದಯವಿಟ್ಟು ಹೋಗ್ಬೇಡ. ಇಲ್ಲೇ ಇರು. ನನ್ಗೋಸ್ಕರ ಕಳಕಳಿಯಿಂದ ಕೋರಿಕೊಂಡ.

ಕೆಲಸಕ್ಕೆ ರಾಜೀನಾಮೆ ಕೊಟ್ಟು ಮನೆಯಲ್ಲಿ ಕೂತ್ಕೊಂಡ್ರೆ ಏನು ಲಾಭ? ಅಭಿಮನ್ಯುವಿನ ದುಡಿಮೆಯಲ್ಲಿಯೇ ಸಂಸಾರ ನಿಭಾಯಿಸೋದಕ್ಕೆ ಸಾಧ್ಯವಿಲ್ಲ. ಮದುವೆಯಾದ ನಂತರವೂ ಕೂಡ ಸುಖವಾಗಿ ಬಾಳಬೇಕೆಂಬ ಹಂಬಲ ಆಕೆಯದ್ದು. ನಾಳೆ ದಿನ ನಮಗೆ ಹುಟ್ಟುವ ಮಕ್ಕಳಿಗೆ ತನಗೆ ಸಿಗುವ ಸಂಬಳದಿಂದ ಒಳ್ಳೆಯ ಶಿಕ್ಷಣ ಕೊಡಿಸಬಹುದು. ಅಭಿಮನ್ಯು ದುಡಿಯುವ ಹಣ ದಿಂದ ಸಂಸಾರ ನಿಭಾಯಿಸಬಹುದು. ಇಷ್ಟಿದ್ದರೆ ಸಾಕು ನೆಮ್ಮದಿಯ ಜೀವನ. ಈಗಿನ ಕಾಲದಲ್ಲಿ ಮಕ್ಕಳ ಮನಸ್ಥಿತಿಯೇ ಬೇರೆ. ಇರುವ ವ್ಯವಸ್ಥೆಗೆ ಹೊಂದಿಕೊಂಡು ಬದುಕು ನಡೆಸೋದಿಲ್ಲ. ಆರೈಕೆಯಲ್ಲಿ, ಶಿಕ್ಷಣದಲ್ಲಿ ಎಲ್ಲದಕ್ಕಿಂತ ಹೆಚ್ಚಾಗಿ ಆರ್ಥಿಕ ವಿಷಯದಲ್ಲಿ ಸ್ವಲ್ಪ ಹೆಚ್ಚು ಕಡಿಮೆಯಾದರೂ ಸಹಿಸಿಕೊಳ್ಳುವುದಿಲ್ಲ. ಇಷ್ಟು ಕಷ್ಟದಲ್ಲಿ ಯಾಕಾದರು ಅಪ್ಪ, ಅಮ್ಮ ನಮ್ಮನ್ನು ಹುಟ್ಟಿಸಿದರೋ ಎಂದು ಕೇಳೋದರಲ್ಲಿ ಸಂಶಯವಿಲ್ಲ. ಈಗಿನ ಶಿಕ್ಷಣ ವ್ಯವಸ್ಥೆಯೂ ಕೂಡ ವ್ಯಾಪಾರಿಕರಣಗೊಂಡಿದೆ. ಒಂದನೆ ತರಗತಿಯಲ್ಲಿ ಓದುವ ಮಗುವಿಗೂ ಕೂಡ ಸಾವಿರಾರು ರೂಪಾಯಿ ಡೊನೇಷನ್ ಕೇಳುತ್ತಾರೆ. ಹಣ ಇಲ್ಲ ಅಂದರೆ ಒಳ್ಳೆಯ ವಿದ್ಯಾಸಂಸ್ಥೆಯಲ್ಲಿ ಶಿಕ್ಷಣ ಕೊಡಿಸೋದಕ್ಕೆ ಸಾಧ್ಯವೇ ಇಲ್ಲ. ಹಾಗಾಗಿ ತನ್ನ ದುಡಿಮೆ ಅನಿವಾರ್ಯ ಎಂಬ ವಿಷಯವನ್ನು ಅಭಿಮನ್ಯುವಿನ ಮುಂದೆ ಆಕೆ ತೆರೆದಿಟ್ಟರೂ ಅಭಿಮನ್ಯು ಆಕೆಯನ್ನು ಮೈಸೂರಿಗೆ ಕಳುಹಿಸಲು ಒಪ್ಪಲಿಲ್ಲ. ಖಾಸಗಿ ಶಾಲೆಯಲ್ಲಿ ಓದಿದವರೆಲ್ಲ ಉದ್ಧಾರ ಆಗಿದ್ದಾರೆ ಎಂಬುದು ಕೇವಲ ಭ್ರಮೆ ಅಷ್ಟೆ. ಖಾಸಗಿ ಶಾಲೆಗಿಂತ ಸರಕಾರಿ ಶಾಲೆಯೇ ವಾಸಿ. ಮಾನವೀಯ ಮೌಲ್ಯಗಳೇನಾದರು ಉಳಿದಿದ್ದರೆ ಅದು ಸರಕಾರಿ ಶಾಲೆಯಲ್ಲಿ ಓದಿದ ಮಕ್ಕಳಲ್ಲಿ ಮಾತ್ರ. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಈಗಲೇ ತಲೆ ಕೆಡಿಸಿಕೊಳ್ಳೋದನ್ನು ನೋಡಿದರೆ ಕೂಸು ಹುಟ್ಟುವ ಮುನ್ನ ಕುಲಾವಿ ಹೊಲಿಸದಂತೆ ಎಂಬುದು ಅಭಿಮನ್ಯುವಿನ ವಾದ.

ಸರಕಾರಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುತ್ತಿದೆ ಎಂಬುದು ಕೇವಲ ಭಾಷಣದಲ್ಲಿ ಕೇಳೋದಕ್ಕೆ ಮಾತ್ರ ಚೆಂದ. ಸರಕಾರಿ ಶಾಲೆಯ ಶಿಕ್ಷಕರು, ಶಾಸಕರು, ಮಂತ್ರಿಗಳು, ಸರಕಾರಿ ವೇತನ ಪಡೆಯುತ್ತಿರುವ ಪ್ರತಿಯೊಂದು ಇಲಾಖೆಯವರು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗೆ ಕಳುಹಿಸುವಂತಾದರೆ ಮಾತ್ರ ಸರಕಾರಿ ಶಾಲೆಯ ಹಣೆಬರಹ ಬದಲಾಗೋದಕ್ಕೆ ಸಾಧ್ಯ ಎಂಬುದು ಅಕ್ಷರಳಿಗೆ ಚೆನ್ನಾಗಿ ಗೊತ್ತು. ಹೀಗಾಗಿ ಅಭಿಮನ್ಯುವಿನ ಅಭಿಪ್ರಾಯಕ್ಕೆ ತಲೆದೂಗಲು ಆಕೆ ಇಷ್ಟ ಪಡಲಿಲ್ಲ.

ಅಭಿ, ನೀನು ಇನ್ನು ಯಾವ ಲೋಕದಲ್ಲಿದ್ದಿಯ? ಇದು ಸ್ಪರ್ಧಾತ್ಮಕ ಜಗತ್ತು. ಆಂಗ್ಲಭಾಷೆ ಕಲಿಕೆ ಅನಿವಾರ್ಯ. ಸಾಕಷ್ಟು ಪ್ರತಿಭಾವಂತ ಸರಕಾರಿ ಶಾಲೆಯ ವಿದ್ಯಾರ್ಥಿಗಳು ಆಂಗ್ಲಭಾಷೆಯ ಜ್ಞಾನವಿಲ್ಲದೆ ಉದ್ಯೋಗ ಪಡೆಯೋದಕ್ಕೆ ಸಾಧ್ಯವಾಗದೆ ಪರದಾಡುತ್ತಿದ್ದಾರೆ. ಸರಕಾರಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುವುದಾದರೆ ಬಹುತೇಕ ಪೋಷಕರು ತಮ್ಮ ಮಕ್ಕಳನ್ನು.

ಖಾಸಗಿ ಶಾಲೆಗೆ ಯಾಕೆ ಕಳುಹಿಸಬೇಕು ಹೇಳು? ಇಂದು ಬಡವರ್ಗದವರು ಕೂಡ ತಮ್ಮ ಮಕ್ಕಳಿಗೆ ಆಂಗ್ಲಮಾಧ್ಯಮ ಶಾಲೆಯಲ್ಲಿ ಶಿಕ್ಷಣ ಕೊಡಿಸುವ ಕನಸು ಕಾಣ್ತಾ ಇದ್ದಾರೆ. ದಯವಿಟ್ಟು ನನ್ನ ಅರ್ಥ ಮಾಡ್ಕೊ ಅಭಿ. ನಿನ್ಗೆ ಕೈ ಮುಗಿದು ಕೇಳ್ಕೋತ್ತೇನೆ. ದಯವಿಟ್ಟು ನನ್ಗೆ ಹೊರಡೋದಕ್ಕೆ ಅವಕಾಶ ಮಾಡಿಕೊಡು, ಇಲ್ಲ ಅನ್ಬೇಡ. ನನ್ನ ಬಂಗಾರ ಅಲ್ವ ನೀನು? ಅಭಿಮನ್ಯುವಿನ ಎದುರು ಕೈ ಮುಗಿದು ಕೇಳಿಕೊಂಡಳು.

ಆಯ್ತು, ಅದ್ಕ್ಕೆ ಯಾಕೆ ಇಷ್ಟೊಂದು ಗೋಗರಿಯ್ತ ಇದ್ದೀಯ? ಹೋಗಿ ಬಾ. ಆದ್ರೆ ಹೋದ ನಂತರ ಈ ಬಡಪಾಯಿಯನ್ನ ಮರಿಬೇಡ. ನೀನು ಬರುವ ಹಾದಿಯನ್ನೇ ಕಾಯ್ತಾ ಇತೇನೆ. ಅಕ್ಷರಳ ಮೈಸೂರು ಪಯಣಕ್ಕೆ ಅಭಿಮನ್ಯುವಿನಿಂದ ಕಡೆಗೂ ಗ್ರೀನ್ ಸಿಗ್ನಲ್ ದೊರೆಯಿತು.

ನಿನ್ನ ನೋಡದೆ ನನ್ನಿಂದ ಇರೋದಕ್ಕೆ ಸಾಧ್ಯನಾ ಹೇಳು? ಎಷ್ಟೇ ಆದ್ರು ನೀನು ನನ್ನ ಬಂಗಾರ ಅಲ್ವ? ರಜೆ ಸಿಕ್ಕಾಗೆಲ್ಲ ಬಂದೇ ಬತಿನಿ. ನಿನ್ನ ನೋಡುವ ಒಂದೇ ಒಂದು ಉದ್ದೇಶಕ್ಕೆ. ಆಗ ಇದೇ ರಾಜಾಸೀಟ್‌ನಲ್ಲಿ ಭೇಟಿಯಾಗೋಣ. ನಿನ್ನ ಬಿಟ್ಟು ಮೈಸೂರಿಗೆ ಹೋಗೋದಕ್ಕೆ ಮನಸ್ಸಾಗುತ್ತಿಲ್ಲ. ಮದ್ವೆಯಾಗಿದ್ರೆ ಇಬ್ರು ಒಟ್ಟಿಗೆ ಮೈಸೂರಿನಲ್ಲಿ ಹಾಯಾಗಿ ಇಬೊಹುದಿತ್ತು ಎಂದು ಮನದ ಇಂಗಿತ ತೋರ್ಪಡಿಸಿದಳು.

ಈಗೇನು ನಾವಿಬ್ರು ಹಾಯಾಗಿ ಇಲ್ವ? ಎಂದು ಆಕೆಯನ್ನು ತನ್ನ ತೋಳಲ್ಲಿ ಬಳಸಿಕೊಂಡ. ಹಲವು ಸಮಯ ಅಭಿಮನ್ಯುವಿನ ತೋಳಲ್ಲಿ ಬಂಧಿಯಾಗಿ ಮನದೊಳಗಿದ್ದ ನೋವನ್ನೆಲ್ಲ ದೂರ ಮಾಡಿಕೊಂಡಳು. ಇಬ್ಬರಿಗೂ ಇಂತಹ ಒಂದು ಪರಿಸ್ಥಿತಿ ಎದುರಾಗುತ್ತದೆ ಎಂಬ ಸಣ್ಣ ನಿರೀಕ್ಷೆ ಕೂಡ ಇರಲಿಲ್ಲ. ಸದಾ ಒಬ್ಬರನ್ನೊಬ್ಬರು ತೋಳಲ್ಲಿ ಬಳಸಿಕೊಳ್ಳುತ್ತಾ, ಮುಂದಿನ ವೈವಾಹಿಕ ಜೀವನದ ಬಗ್ಗೆ ನೂರಾರು ಮಾತುಗಳನ್ನಾಡುತ್ತಾ ಕಾಲ ಕಳೆದು ಹೋಗಿದ್ದೇ ಅವರ ಅರಿವಿಗೆ ಬರಲಿಲ್ಲ. ಪ್ರೀತಿಸಲು ಪ್ರಾರಂಭಿಸಿದ ದಿನದಿಂದಲೂ ಅಷ್ಟೊಂದು ಸುಂದರವಾದ ಬದುಕನ್ನು ಕಂಡಿದ್ದರು. ಜೀವನ ಪೂರ್ತಿ ಹೀಗೆಯೇ ಕಳೆಯಬೇಕೆಂದು ಅಂದುಕೊಂಡಿದ್ದರು. ಅದರೆ ಬದುಕು ಅನ್ನೋದು ಯಾರು ಅಂದುಕೊಂಡಂತೆ ಇರುವುದಿಲ್ಲ. ಒಬ್ಬರನ್ನೊಬ್ಬರು ಅಗಲಿ ಇರಬೇಕಾದ ಅನಿವಾರ್ಯತೆ ನಿರ್ಮಾಣಗೊಂಡಿತು. ಅಭಿಮನ್ಯುವಿಗೆ ಅಕ್ಷರಳನ್ನು ಕಳುಹಿಸಿಕೊಡಲು ಇಷ್ಟವಿರದೆ ಇದ್ದರೂ ಮುಂದಿನ ಸುಂದರ ಬದುಕಿಗಾಗಿ ಆಕೆ ಹೊರಟ್ಟಿದ್ದಾಳೆ ಎಂದು ಮನವರಿಕೆಯಾದ ನಂತರ ತಡೆದು ನಿಲ್ಲಿಸುವ ಮನಸ್ಸಾಗಲಿಲ್ಲ. ಭಾರವಾದ ಮನಸ್ಸಿನೊಂದಿಗೆ ಆಕೆಯನ್ನು ಕಳುಹಿಸಿಕೊಡುವ ನಿರ್ಧಾರ ಮಾಡಿದ.

“ಅಕ್ಷರ, ನೀನು ಮೈಸೂರಿಗೆ ಹೊರಡೋದು ಯಾವಾಗ”?

ಮುಂದಿನ ವಾರ ಹೊರಡ್ತಿನಿ. ಅದರ ನಡುವೆ ಮೈಸೂರಿಗೆ ಒಮ್ಮೆ ಹೋಗಿ ಬಬೇಕು. ಜೊತೆಗೆ ನೀನು ಬಾ. ಒಟ್ಟಿಗೆ ಹೋಗಿ ಬರುವ ಅಂದಳು.

ಕೆಲವು ದಿನ ಮನೆಯಲ್ಲಿಯೇ ಕಳೆದ ಅಕ್ಷರ ಮೈಸೂರಿಗೆ ಹೊರಡಲು ಬೇಕಾದ ಸಿದ್ಧತೆಗಳನ್ನು ಕೈಗೊಂಡಳು. ಎರಡು ಸೂಟ್‌ಕೇಸ್ ತುಂಬ ಡ್ರೆಸ್‌ಗಳೇ ತುಂಬಿಕೊಂಡಿದ್ದವು. ಅದರೊಂದಿಗೆ ಒಂದು ಸೂಟ್‌ಕೇಸ್‌ನಲ್ಲಿ ಆಕೆಯ ಅಲಂಕಾರಿಕ ವಸ್ತುಗಳು, ಆಕೆ ಹೆಚ್ಚಾಗಿ ಇಷ್ಟಪಡುತಿದ್ದ ಟೆಡ್ಡಿಬೇಸ್, ಅಭಿಮನ್ಯು ಬರೆದ ಪ್ರೇಮ ಪತ್ರಗಳು, ಹುಟ್ಟು ಹಬ್ಬ, ಪ್ರೇಮಿಗಳ ಹಬ್ಬ ವೇಲೆಟೈನ್ಸ್ ಡೇ, ಹೊಸ ವರ್ಷದಂದು ನೀಡಿದ ಸಾಕಷ್ಟು ಗ್ರಿಟಿಂಗ್ಸ್, ಗಿಫ್ಟ್‌ಗಳು ತುಂಬಿಕೊಂಡಿದ್ದವು. ಮೈಸೂರಿಗೆ ಹೊರಡುವ ಸಿದ್ಧತೆ ಪೂರ್ಣಗೊಳಿಸಿದ ನಂತರ ಮೈಸೂರಿಗೆ ತೆರಳಿ ಒಂದು ಒಳ್ಳೆಯ ಲೇಡಿಸ್‌ಹಾಸ್ಟೆಲ್ ಹುಡುಕಬೇಕೆಂದು ನಿರ್ಧರಿಸಿ ಅಭಿಮನ್ಯುವಿನೊಂದಿಗೆ ಮೈಸೂರಿಗೆ ಪಯಣ ಬೆಳೆಸಿದಳು.

ಬೆಳಗಿನ ಜಾವ. ಸೂರ್ಯ ಆಗತಾನೆ ಭುವಿಯನ್ನು ಕಣ್ತೆರೆದು ನೋಡಲು ಪ್ರಯತ್ನಿಸುತ್ತಿದ್ದ. ದಟ್ಟ ಹೊಗೆಯಂತೆ ಕವಿದುಕೊಂಡಿದ್ದ ಮಂಜು ಚಳಿಯ ತೀವ್ರತೆಯನ್ನು ಮತ್ತಷ್ಟು ಹೆಚ್ಚಿಸಿತು. ಮೈಸೂರಿಗೆ ಅಭಿಮನ್ಯುವಿನೊಂದಿಗೆ ಹೋಗುವ ವಿಚಾರವನ್ನು ಅಕ್ಷರ ಮನೆಯಲ್ಲಿ ತಿಳಿಸಿರಲಿಲ್ಲ. ಹಾಗಾಗಿ ಆಕೆಯ ಮನದಲ್ಲಿ ಯಾರಾದರು ನೋಡಿಬಿಟ್ಟರೆ? ಎಂಬ ಭಯ ಕವಿದುಕೊಂಡಿತ್ತು. ಮಡಿಕೇರಿಯ ಕೆ‌ಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಸುತ್ತ ಒಮ್ಮೆ ಕಣ್ಣಾಡಿಸಿ ಪರಿಚಿತರು ಯಾರು ಇಲ್ಲವೆಂದು ಖಚಿತಪಡಿಸಿ ಕೊಂಡು ಅಭಿಮನ್ಯುವಿನೊಂದಿಗೆ ಕಳ್ಳಹೆಜ್ಜೆ ಇಡುತ್ತಾ ಬಸ್ ಏರಿ ಕುಳಿತಳು. ಬೆಳಗ್ಗಿನ ಜಾವವಾಗಿದ್ದರಿಂದ ಪ್ರಯಾಣಿಕರು ಹೆಚ್ಚೇನು ಇರಲಿಲ್ಲ. ಬಸ್‌ನಲ್ಲಿದ್ದ ಬೆರಳೆಣಿಕೆಯಷ್ಟು ಪ್ರಯಾಣಿಕರ ಪೈಕಿ ಕೆಲವರು ದಿನಪತ್ರಿಕೆ ಓದುವುದರಲ್ಲಿ ಮುಳುಗಿ ಹೋಗಿದ್ದರು. ಮತ್ತೆ ಕೆಲವರು ಮಾತಾಡುತ್ತಾ ಕುಳಿತ್ತಿದ್ದರು. ಆ ಚಳಿಯ ನಡುವೆಯೂ ಕೂಡ ಬೆವರಿ ಹೋದ ಅಕ್ಷರ ಮನೆಯಿಂದ ತಂದಿದ್ದ ನೀರಿನ ಬಾಟಲಿಯನ್ನು ತೆರೆದು ಕುಡಿದು ಆಯಾಸ ನೀಗಿಸಿಕೊಳ್ಳುತ್ತಿದ್ದಳು. ಮಡಿಕೇರಿಯಿಂದ ಬಸ್ ಹೊರಡುತ್ತಿದ್ದಂತೆ ಇಬ್ಬರು ನೆಮ್ಮದಿಯ ನಿಟ್ಟುಸಿರು ಬಿಟ್ಟರು. ಹಾವು ಹರಿದಾಡಿದಂತಿರುವ ಕೊಡಗು ಜಿಲ್ಲೆಯ ರಸ್ತೆಯಲ್ಲಿ ತೆವಳುತ್ತಾ ಸಾಗುತ್ತಿದ್ದ ಬಸ್ ಕುಶಾಲನಗರ ದಾಟಿ ಮೈಸೂರಿನ ಬಯಲು ಸೀಮೆಗೆ ಪ್ರವೇಶಿಸುತ್ತಿದ್ದಂತೆ ತನ್ನ ವೇಗ ಹೆಚ್ಚಿಸಿಕೊಂಡಿತು. ಪಯಣದುದ್ದಕ್ಕೂ ಮಾತಿನಲ್ಲಿಯೇ ಕಳೆದು ಹೋದ ಇಬ್ಬರಿಗೆ ಮೈಸೂರಿಗೆ ಬಸ್ ಇಷ್ಟೊಂದು ಬೇಗ ಬಂದು ಬಿಡ್ತಾ ಅನ್ನಿಸಿತು.

ಮೈಸೂರು ತಲುಪಿದಂತೆ ಮೊದಲು ಪ್ರಾರಂಭಿಸಿದ್ದೇ ಲೇಡಿಸ್ ಹಾಸ್ಟೆಲ್‌ಗಾಗಿ ಹುಡುಕಾಟ. ಅಪರಿಚಿತ ನಗರದಲ್ಲಿ ಎದುರಿಗೆ ಸಿಕ್ಕ ಹತ್ತಾರು ಜನರಲ್ಲಿ ಇಲ್ಲಿ ಒಳ್ಳೆಯ ಲೇಡಿಸ್ ಹಾಸ್ಟೇಲ್ ಯಾವುದಿದೆ? ಎಂಬ ಪ್ರಶ್ನೆ ಕೇಳುತ್ತಾ ಕೊನೆಗೂ ಲೇಡಿಸ್ ಹಾಸ್ಟೆಲ್ ಕಂಡು ಹಿಡಿದರು. ಅಲ್ಲಿಗೆ ಒಂದು ದೊಡ್ಡ ಕೆಲಸ ಮುಗಿದಂತಾಯಿತು. ಮೈಸೂರಿನಲ್ಲಿ ಸಣ್ಣಪುಟ್ಟ ಕೆಲಸಗಳನ್ನೆಲ್ಲ ಮುಗಿಸಿಕೊಂಡು ನೇರವಾಗಿ ಚಾಮರಾಜೇಂದ್ರ ಮೃಗಾಲಯಕ್ಕೆ ತೆರಳಿದರು. ಮರದಿಂದ ಮರಕ್ಕೆ ನೆಗೆಯುವ ಕೋತಿಗಳು, ಆಕಾಶದೆತ್ತರಕ್ಕೆ ಕತ್ತನ್ನು ಎಟುಕಿಸುವ ತವಕದಲ್ಲಿರುವ ಜಿರಾಫೆಗಳು, ಘೀಳಿಡುತ್ತಾ ಅತ್ತಿಂದಿತ್ತ ಓಡಾಡುವ ಆನೆಗಳು, ಹುಲಿಗಳು ಮನಸ್ಸಿಗೆ ಮುದ ನೀಡಿದವು. ಸ್ವಚ್ಛಂದ ಪರಿಸರದಲ್ಲಿ ವಿಹರಿಸುತ್ತಿದ್ದ ಪ್ರಾಣಿಗಳು ಮನುಷ್ಯನ ಮನಸ್ಸನ್ನು ಸಂತೃಪ್ತಿ ಪಡಿಸಲು ಮೃಗಾಲಯದಲ್ಲಿ ಬಂಧಿಯಾಗಿದ್ದವು.

ಅಲ್ನೋಡು ನಿನ್ನ ವಂಶಸ್ತರು ಎಂದು ಮರದಿಂದ ಮರಕ್ಕೆ ನೆಗೆಯುತ್ತಿದ್ದ ಕೋತಿಯನ್ನು ತೋರಿಸಿ ಅಕ್ಷರಳನ್ನು ಗೇಲಿಮಾಡಿದ.

ಅವರು ನನ್ನ ವಂಶಸ್ತರು ಮಾತ್ರ ಅಲ್ಲ. ನಿನ್ನ ವಂಶಸ್ತರು ಕೂಡ. ನಿನ್ನ ಪೂರ್ವಜರಿಗೆ ನಮಸ್ಕಾರ ಮಾಡು ಎಂದು ಪ್ರತಿಯಾಗಿ ಗೇಲಿಮಾಡಿದಳು.

ಚಾಮುಂಡಿ ಬೆಟ್ಟ, ಅರಮನೆಯೊಳಗೆ ಕೈ ಕೈ ಹಿಡಿದುಕೊಂಡು ಪ್ರಪಂಚವನ್ನೇ ಮರೆತ ಹಾಗಿ ಸಂತೋಷದಲ್ಲಿ ಮನಸ್ಸಿಗೆ ಖುಷಿಯಾಗುವಷ್ಟು ಹೊತ್ತು ಸುತ್ತಾಡಿದರು. ಮೈಸೂರಿನಲ್ಲಿ ಸಮಯ ಹೋಗಿದ್ದೇ ಅರಿವಿಗೆ ಬರಲಿಲ್ಲ. ಮಡಿಕೇರಿಯಲ್ಲಾದರೆ ಇಬ್ಬರನ್ನು ಗಮನಿಸಲು ನೂರಾರು ಕಣ್ಣುಗಳು ಇರುತ್ತಿದ್ದವು. ಆದರೆ, ಮೈಸೂರಿನಲ್ಲಿ ಯಾರಿದ್ದಾರೆ? ಇಲ್ಲಿ ಹೇಳೋರು ಕೇಳೋರು ಯಾರು ಇಲ್ಲ ಎಂದು ನಿರ್ಧರಿಸಿ ಸುತ್ತಿದ್ದೇ ಸುತ್ತಿದ್ದು. ಮೈಸೂರಿನಲ್ಲಿ ಅಲ್ಲಿ ಇಲ್ಲಿ ಅಡ್ಡಾಡಿ ಸಂಜೆಯಾಗುತ್ತಿದ್ದಂತೆ ಮನೆಯ ನೆನಪಾಗಿ ಮಡಿಕೇರಿಯ ಕಡೆಗೆ ಹೊರಟು ನಿಂತಿದ್ದ ವೋಲ್ವೋ ಬಸನ್ನು ತರಾತುರಿಯಲ್ಲಿ ಏರಿಕುಳಿತರು. ಬಸ್ ಮುಂದೆ ಮುಂದೆ ಸಾಗುತ್ತಿದ್ದಂತೆ ಹೊತ್ತು ಸರಿದು ಧರೆಯನ್ನು ಇರುಳು ಮೆಲ್ಲನೆ ಕವಿದುಕೊಳ್ಳಲು ಪ್ರಾರಂಭಿಸಿತು. ರಾತ್ರಿಯಾದ್ದರಿಂದ ಬಸ್‌ನಲ್ಲಿ ಯಾವುದೇ ಸದ್ದು ಗದ್ದಲವಿರಲಿಲ್ಲ. ಸಣ್ಣಗೆ ಪಿಸುಗುಟ್ಟಿದರೂ ಕೂಡ ಎಲ್ಲರಿಗೂ ಕೇಳಿಸಿ ಬಿಡುತಿತ್ತು. ಬಸ್‌ನ ದೀಪಗಳು ಒಂದೊಂದಾಗಿ ಉರಿಯುವುದು ನಿಲ್ಲಿಸಿ ಕತ್ತಲು ಆವರಿಸಿಕೊಂಡಾಗ ಇಬ್ಬರ ಎದೆ ಬಡಿತ ಹೆಚ್ಚಾಗತೊಡಗಿತು. ಆ ಬಸ್‌ನೊಳಗೆ ಮಾಡಬಾರದಂತದ್ದೇನು ಮಾಡಲು ಸಾಧ್ಯವಿಲ್ಲ ಎಂಬ ಅರಿವು ಇದ್ದರೂ ಕತ್ತಲೆ ಅವರಿಬ್ಬರ ಎದೆ ಬಡಿತ ಹೆಚ್ಚಿಸಿತು. ಈ ಕತ್ತಲೆಯ ನಡುವೆ ಆಕೆ ತನ್ನ ಬಗ್ಗೆ ಈಗ ಏನಂದುಕೊಳ್ಳುತ್ತಿದ್ದಾಳೋ ಎಂಬ ಪ್ರಶ್ನೆ ಅಭಿಮನ್ಯುವಿನ ಮನದಲ್ಲಿ ಕಾಡಿದಂತೆ ಆಕೆಯ ಮನದಲ್ಲಿಯೂ ಅಂತಹದ್ದೇ ಒಂದು ಪ್ರಶ್ನೆ ಕಾಡದೆ ಇರಲಿಲ್ಲ. ಮಡಿಕೇರಿಯ ರಾಜಾಸೀಟ್ ಉದ್ಯಾನವನದಲ್ಲಿ ಇಬ್ಬರು ಬಿಗಿದಪ್ಪಿಕೊಂಡು ಚುಂಬಿಸಿದಾಗಲೂ ಕೂಡ ಇಬ್ಬರಲ್ಲಿ ಅಷ್ಟೊಂದು ತೀವ್ರತರದ ಎದೆ ಬಡಿತ ಕೇಳಿಸಿರಲಿಲ್ಲ. ಒಬ್ಬರೊಬ್ಬರಿಗೆ ಕೇಳಿಸುವಷ್ಟರ ಮಟ್ಟಿಗೆ ಎದೆ ಬಡಿತದ ಶಬ್ದ ಕೇಳಿಸುತಿತ್ತು. ಒಮ್ಮೊಮ್ಮೆ ಬಸ್ ಅಲುಗಾಡಿ ಮೈ ಸೋಕಿದಾಗ ಮೈ ಪೂರ ಬೆವತು ಹೋಗಿ ಹೊದೆಯಲು ನೀಡಿದ ಬೆಡ್‌ಶೀಟನ್ನು ಪಕ್ಕಕಿಟ್ಟು ಒಂದು ಬಾಟಲಿ ನೀರು ಖಾಲಿ ಮಾಡಿದರು. ಬಸ್ ಮಡಿಕೇರಿ ತಲುಪುವವರೆಗೂ ಇಬ್ಬರು ಕಲ್ಪನೆಯ ಸುಖ ಅನುಭವಿಸುತ್ತಾ ಪ್ರೇಮಲೋಕದಲ್ಲಿ ವಿಹರಿಸಿದರು. ಬಸ್ ಮಡಿಕೇರಿ ತಲುಪುವಾಗ ಗಂಟೆ ಒಂಭತ್ತು ಕಳೆದು ಹತ್ತರ ಕಡೆಗೆ ನಡಿಗೆ ಹಾಕುತ್ತಿತ್ತು. ಇಬ್ಬರು ಬಸ್ ಇಳಿದು ಆಟೋರಿಕ್ಷಾ ಏರಿ ಮನೆ ಸೇರಿಕೊಂಡರು.
* * *

ಅಕ್ಷರ ಮೈಸೂರಿಗೆ ಹೊರಡೋದಕ್ಕೆ ಮೂರು ದಿನಗಳು ಮಾತ್ರ ಬಾಕಿ ಉಳಿದಿದ್ದವು. ಆ ಮೂರು ದಿನಗಳನ್ನು ಮನೆಯಲ್ಲಿ ಇಲ್ಲದ ಸುಳ್ಳುಹೇಳಿ ಹೊರ ಬಂದು ಅಭಿಮನ್ಯುವಿನೊಂದಿಗೆ ಕಳೆದುಬಿಟ್ಟಳು. ಮೂರು ದಿನಗಳ ಬಳಿಕ ಆಕೆಯನ್ನು ರಾಜಶೇಖರ್ ಕಾರಿನಲ್ಲಿ ಮೈಸೂರುವರೆಗೆ ಕರೆದೊಯ್ದು ಬಿಟ್ಟು ಬಂದರು. ಮೈಸೂರಿನ ವಾತಾವರಣಕ್ಕೆ ಒಗ್ಗಿಕೊಳ್ಳಲು ಆಕೆಗೆ ಹೆಚ್ಚು ಸಮಯ ಬೇಕಾಗಲಿಲ್ಲ. ಒಂದಷ್ಟು ಹೊಸ ಸ್ನೇಹಿತರಿಂದ ಒಂದಷ್ಟು ಹೊಸ ವಿಷಯಗಳನ್ನು ತಿಳಿದುಕೊಂಡು ಸಂತಸದಿಂದಲೇ ದಿನ ಕಳೆದಳಾದರೂ ಆಕೆಗೆ ಅಭಿಮನ್ಯುವಿನ ಬಿಸಿಯಪ್ಪುಗೆ ನೆನಪಾದೊಡನೆ ಈಗಿಂದೀಗಲೆ ಹೊರಟು ಬಿಡುವ ಅನ್ನಿಸತೊಡಗುತಿತ್ತು. ಮೊಬೈಲ್ ಸಂಭಾಷಣೆ ಇಬ್ಬರನ್ನು ಹತ್ತಿರ ತರುತಿತ್ತಾದರೂ ಒಟ್ಟಿಗೆ ಕುಳಿತು ಮಾತಾಡುವುದರಲ್ಲಿ ಸಿಗುತ್ತಿದ್ದ ಸಂತೋಷ ಮೊಬೈಲ್‌ನಿಂದ ಸಿಗುತ್ತಿರಲಿಲ್ಲ.

ಎರಡು ತಿಂಗಳು ಸರಿದರೂ ಆಕೆಗೆ ಮಡಿಕೇರಿಯ ಕಡೆಗೆ ಮುಖಮಾಡಲು ಸಾಧ್ಯವಾಗಲಿಲ್ಲ. ಆ ಎರಡು ತಿಂಗಳ ಅವಧಿಯ ಪ್ರತಿಯೊಂದು ದಿನಗಳೂ ಕೂಡ ಅಭಿಮನ್ಯುವಿನ ಪಾಲಿಗೆ ತಳಮಳ, ಆತಂಕದ ದಿನಗಳಾಯಿತು. ಅಭಿಮನ್ಯುವಿನ ಮನದಲ್ಲಿ ಸಣ್ಣಗೆ ಒಂದು ಆತಂಕ ಕವಿದುಕೊಳ್ಳಲು ಪ್ರಾರಂಭಿಸಿತು. ಅಕ್ಷರ ನನ್ನ ಮರೆತು ಬಿಟ್ಟಳಾ? ಒಂದೇ ಒಂದು ದಿನ ನನ್ನ ನೋಡದೆ ಇರಲು ಅವಳಿಂದ ಸಾಧ್ಯವಾಗುತ್ತಿರಲಿಲ್ಲ. ಇದೀಗ ಎರಡು ತಿಂಗಳು ಕಳೆದರೂ ನೋಡುವ ಉತ್ಸಾಹ ತೋರುತ್ತಿಲ್ಲವಲ್ಲ!? ಎಂಬುದು ಅವನ ಕಳವಳಕ್ಕೆ ಕಾರಣವಾಗಿತ್ತು. ಆ ವಿಚಾರವನ್ನೊಮ್ಮೆ ಕೇಳಿಯೇ ಬಿಡಬೇಕೆಂದು ನಿರ್ಧರಿಸಿ ಕರೆ ಮಾಡಿ ಅಕ್ಷರ ಯಾಕೆ ಮಡಿಕೇರಿಗೆ ಬರೋ ಮನಸ್ಸು ಮಾಡ್ತಾ ಇಲ್ಲ. ನನ್ನ ನೋಡೋದಕ್ಕೆ ಮನಸ್ಸಾಗ್ತಾ ಇಲ್ವ? ನನ್ಮೇಲೆ ಕೋಪನಾ? ಬೇಸರನಾ? ಅಥವಾ ತಿರಸ್ಕಾರನಾ….? ಕೇಳಬಾರದೆಂದುಕೊಂಡರೂ ಮೂರನೇ ಪ್ರಶ್ನೆಯನ್ನು ಬಾಯಿತಪ್ಪಿ ಕೇಳಿ ಬಿಟ್ಟು ನಾಲಿಗೆ ಕಚ್ಚಿಕೊಂಡ.

ಅದ್ಯಾವುದೂ ಅಲ್ಲ ನನ್ನ ಬಂಗಾರ. ನಿನ್ನ ನೋಡ್ಬೇಕು. ನಿನ್ನೊಂದಿಗೆ ಮಾತಾಡ್ಬೇಕೂಂತ ಜೀವ ತುಡಿಯ್ತಾ ಇದೆ. ಮುಂದಿನವಾರ ರಜೆಹಾಕಿ ಬಂದ್ಬಿಡ್ತಿನಿ. ಕೋಪ ಮಾಡ್ಕೋ ಬೇಡ. ಯಾವತ್ತಿದ್ದರೂ ನಾನು ನಿನ್ನವಳೇ ಕಣೋ. ಅದು ಆ ಸೂರ್ಯ, ಚಂದಿರ ಇರುಷ್ಟೇ ಸತ್ಯ ಪ್ರೀತಿಯಲ್ಲಿ ಆಕೆ ಸಾಕಷ್ಟು ಪಳಗಿದ್ದಳು. ಅಭಿಮನ್ಯುವನ್ನು ಮುದ್ದಿಸಿ ಮನಗೆಲ್ಲುವುದನ್ನು ಆಕೆ ಎಂದೋ ಕರತಲಾಮಲಕ ಮಾಡಿಕೊಂಡಿದ್ದಳು.

ಆ ಭರವಸೆಯೊಂದಿಗೆ ನಿನಗಾಗಿ ಕಾಯ್ತಾ ಇತೇನೆ. ಬೇಗ ಬಂದ್ಬಿಡು. ಅಂದ ಅಭಿಮನ್ಯುವಿನಲ್ಲಿ ಒಮ್ಮಿಂದೊಮ್ಮೆಲೆ ಉಕ್ಕಿಬಂದ ದುಃಖ, ಸಂತೋಷದಿಂದ ಕಣ್ಣೀರ ಹನಿಗಳು ನೆಲಕ್ಕೆ ತೊಟ್ಟಿಕ್ಕಿದವು.

ಏಯ್ ಅಭಿ, ಹುಡುಗ ಆಗಿದ್ದುಕೊಂಡು ಆಳ್ತಾ ಇದ್ದಿಯಲ್ಲೋ? ಮುಂದಿನವಾರ ಖಂಡಿತ ಬಂದೇ ಬತೇನೆ. ಅದು ನಿನ್ಮೇಲೆ ಆಣೆ. ದಯವಿಟ್ಟು ಅಳ್ಬೇಡ. ಸಂತೈಸಿದಳು.

ಇಬ್ಬರ ಪ್ರೀತಿ ತುಂಬಾ ಸುಂದರ, ನಿರ್ಮಲವಾಗಿತ್ತು. ಯಾವುದೇ ವಿಚಾರಕ್ಕೆ ಕೋಪ ಮಾಡಿಕೊಂಡರೂ ಕೋಪ ಹೆಚ್ಚು ಕಾಲ ಉಳಿಯುತ್ತಿರಲಿಲ್ಲ. ಪ್ರೀತಿಯ ಮುಂದೆ
ಕೋಪಕ್ಕೆ ಉಳಿಗಾಲ ಇರುತ್ತಿರಲಿಲ್ಲ. ಪ್ರೀತಿ ಅವರಿಬ್ಬರನ್ನು ಮತ್ತೆ ಬಂಧಿಸಿ ಬಿಡುತಿತ್ತು. ಕೋಪ ಮಾಡಿಕೊಂಡು ದೂರ ಸರಿದು ಮತ್ತೆ ಒಂದಾಗಿ ಮತ್ತಷ್ಟು ಹತ್ತಿರವಾಗುತ್ತಿದ್ದರು. ಪ್ರೀತಿ ಅಂದ ಮೇಲೆ ಒಂದಿಷ್ಟು ಮುನಿಸು ಇರಲೇ ಬೇಕು. ಆಗ ಮಾತ್ರ ಪ್ರೀತಿ ಮತ್ತಷ್ಟು ಅರಳಿ ನಿಲ್ಲೋದಕ್ಕೆ ಸಾಧ್ಯ ಎಂಬುದನ್ನು ಅರಿತ್ತಿದ್ದರು. ಮುನಿಸಿಕೊಂಡಷ್ಟೂ ಒಬ್ಬರನ್ನೊಬ್ಬರು ಅರಿತುಕೊಳ್ಳಲು ಸಾಧ್ಯವಾಗುತ್ತದೆ. ಮುನಿಸಿಗೆ ಕಾರಣವೇನೆಂದು ಹುಡುಕುತ್ತಾ ಹೊರಟು ವಾತಾವರಣ ತಿಳಿಗೊಳಿಸಿ ಮತ್ತೆ ಮುದ್ದಾಡುತ್ತಿದ್ದರು. ಇಬ್ಬರು ಮುನಿಸಿಕೊಂಡದ್ದಕ್ಕಿಂತ ಪ್ರೀತಿಯ ಅಲೆಯಲ್ಲಿ ತೇಲಾಡಿದ್ದೇ ಹೆಚ್ಚು. ಅಕ್ಷರ ಮುಂದಿನ ವಾರ ಖಂಡಿತ ಬತೇನೆ ಅಂಥ ಭರವಸೆ ಕೊಟ್ಟ ಮೇಲಂತೂ ಅಭಿಮನ್ಯುಗೆ ಆಕಾಶದಲ್ಲಿ ತೇಲಾಡಿದ ಅನುಭವ. ಆ ಮುಂದಿನವಾರ ಎಂದು ಬರುವುದೋ ಎಂದು ಎದುರು ನೋಡುತ್ತಾ ಬಹಳ ಕಷ್ಟದಿಂದಲೇ ದಿನ ದೂಡಿದ.
* * *

ಅಭಿಮನ್ಯು ಅಕ್ಷರಳ ಆಗಮನವನ್ನೇ ಎದುರು ನೋಡುತ್ತಾ ಕಚೇರಿಯಲ್ಲಿ ಕುಳಿತ್ತಿದ್ದ. ಅಕ್ಷರ ಬಸ್ಸಿಳಿದು ಆಟೋ ಏರಿ ನೇರ ಅಭಿಮನ್ಯುವಿನ ಮುಂದೆ ಹಾಜರಾಗಿ ಈಗ ತೃಪ್ತಿ ಆಯ್ತಾ? ಮಡಿಕೇರಿಗೆ ಬಾ ಅಂತ ಅದೆಷ್ಟು ಸಲ ಬಾಯಿಬಡ್ಕೊತ್ತಾ ಇದ್ದೆ. ಈಗ ನೋಡು ನಿನ್ನ ಎದುರಿಗೆ ಬಂದು ನಿಂತಿದ್ದೆನೆ ಎಂದು ಆ ಮಾತನ್ನು ಅಲ್ಲಿಗೆ ನಿಲ್ಲಿಸಿ ಅಭಿ, ಇದ್ಯಾಕ್ಕೆ ಹೀಗೆ ಸೊರಗಿ ಹೋಗಿದ್ದೀಯ? ನಾನಿಲ್ಲಾಂತ ವಿರಹ ವೇದನೆಯ? ಹೊತ್ತಿಗೆ ಸರಿಯಾಗಿ ಊಟ ಮಾಡ್ಬಾರದ್ದ್ದಾ? ನಾನೊಂದೆರಡು ತಿಂಗಳು ಹೊರಗೆ ಹೋಗಿದ್ದೇ ತಡ, ನಿನ್ಗೆ ಹೇಳೋರು ಕೇಳೋರು ಯಾರು ಇಲ್ಲದಂತಾಗಿದ್ದಾರೆ ಎಂದು ಅಭಿಮನ್ಯು ದಷ್ಟಪುಷ್ಟವಾಗಿದ್ದರೂ ಛೇಡಿಸಲೆಂದೇ ಕೇಳಿದಳು.

ನೀನಂದುಕೊಂಡಂತೇನು ಇಲ್ಲ ಬಿಡು. ನೀನು ಮೈಸೂರಿಗೆ ಹೋದ ನಂತರ ನನ್ಗಂತು ತುಂಬನೇ ಬೇಸರ ಆಯ್ತು. ಇಷ್ಟು ದಿನ ಅಕ್ಷರಳನ್ನ ಲವ್ ಮಾಡ್ತಾ ಇದ್ದೆ. ಇನ್ನು ಯಾರನ್ನ ಲವ್ ಮಾಡ್ಲಿ? ಅಂತ ಚಿಂತೆಯಲ್ಲಿ ಮುಳುಗಿ ಕಣ್ಣಿಗೆ ಕಂಡ ಹುಡುಗಿಯರ ಹಿಂದೆಲ್ಲ ಸುತ್ತಿ ಸುತ್ತಿ ಸೊರಗಿ ಹೋಗಿದ್ದೇನೆ ನೋಡು ಪ್ರತಿಯಾಗಿ ಅಷ್ಟೇ ತುಂಟತನದಿಂದ ಉತ್ತರ ನೀಡಿದ.

ಕೋತಿ, ನಿನ್ಗೆ ಯಾವ ಹುಡುಗಿಯರೂ ಸಿಗ್ಲಿಲ್ಲ ಅಲ್ವ? ಅದಕ್ಕೆ ನನ್ಗೆ ದಿನಾ ಫೋನ್ ಮಾಡಿ ಬರೋದಕ್ಕೆ ಹೇಳ್ತಾ ಇದ್ದೆ. ಈಗ ಅರ್ಥ ಆಯ್ತು ಬಿಡು. ನಿನ್ಗೆ ಈ ಜಗತ್ತಿನಲ್ಲಿ ನನ್ನ ಬಿಟ್ರೆ ಬೇರೆ ಯಾವ ಹುಡುಗಿಯೂ ಸಿಗೋದಿಲ್ಲ ಕಣೋ, ನಿನ್ನ ಕಪಿಚೇಷ್ಟೆಗೆ. ನಾನಾಗಿರುವುದಕ್ಕೆ ಸಹಿಸಿಕೊಂಡು ಸುಮ್ನೆ ಇದ್ದೇನೆ. ಅಂತೂ ನಿನ್ಗೆ ನನ್ನ ಮೇಲೆ ಪ್ರೀತಿ ಇಲ್ಲ ಅಂದಂಗಾಯ್ತು…?

ಎಂದು ರಾಗವಾಗಿ ಹೇಳಿದ ಅಕ್ಷರಳನ್ನು ಬರಸೆಳೆದುಕೊಂಡ ಅಭಿಮನ್ಯು ನಿನ್ನ ಮೇಲೆ ಕೇವಲ ಪ್ರೀತಿ ಮಾತ್ರ ಇಟ್ಟಿಲ್ಲ. ನನ್ನ ಜೀವವನ್ನೇ ಇಟ್ಟಿದ್ದೇನೆ ಅಂದ.

ಎಷ್ಟೊಂದು ದಿನಗಳಾಯ್ತಲ್ಲ ಅಭಿ, ನಿನ್ನ ತೋಳಲ್ಲಿ ಬಂಧಿಯಾಗದೆ? ನನ್ಗಂತೂ ನೀನಿಲ್ಲದೆ ಮೈಸೂರು ಸಾಕಾಗಿ ಹೋಗಿದೆ. ಅನಿವಾರ್ಯವಾಗಿ ಕೆಲಸ ಮಾಡ್ಕೊಂಡು ಹೋಗ್ತಾ ಇದ್ದೇನೆ. ನೀನು ನನ್ನೊಂದಿಗಿಲ್ಲದ ಘಳಿಗೆ ಮರುಭೂಮಿಯಲ್ಲಿ ನಿಂತ ಅನುಭವ ಆಗುತ್ತೆ. ನೀನು ನನ್ನೊಂದಿಗೆ ಬಂದ್ಬಿಡೋ… ಕೋರಿಕೊಂಡಳು.

“ಬರೋದು ಬಿಡೋದನ್ನ ಮತ್ತೆ ಚರ್ಚೆ ಮಾಡುವ, ಮೊದ್ಲು ಬೇಗ ಮನೆಗೆ ಹೋಗಿ ಸೇಕೊ. ನಿಮ್ಮಪ್ಪನಿಗೆ ನೀನಿಲ್ಲಿರೋ ವಿಚಾರ ಗೊತ್ತಾದ್ರೆ ನಿನ್ನೊಂದಿಗೆ ನನ್ಗೂ ಸೇರಿಸಿ ಒದಿತಾರೆ. ಮೊದ್ಲು ಇಲ್ಲಿಂದ ಜಾಗ ಖಾಲಿ ಮಾಡು”

ಅಭಿಮನ್ಯು ತಮಾಷೆಗೆ ಆಡಿದ ಮಾತುಕೂಡ ಆಕೆಗೆ ಬೇಸರ ತರಿಸದೆ ಇರಲಿಲ್ಲ. ಎರಡು ತಿಂಗಳಿನಿಂದ ಭೇಟಿಯಾಗಿಲ್ಲ, ಮುದ್ದಾಡಿಲ್ಲ. ಅದಕೋಸ್ಕರನೇ ತರಾತುರಿಯಲ್ಲಿ ಹೊರಟು ಬಂದಾಗ ಅಭಿಮನ್ಯುವಿನಿಂದ ತಿರಸ್ಕಾರದ ಮಾತು ಕೇಳಿ ಮನದೊಳಗೆ ನೊಂದುಕೊಂಡಳು. ಈ ಮಾತು ಕೇಳಿಸಿಕೊಳ್ಳೋದಕ್ಕೆ ನಾನು ಇಲ್ಲಿಗೆ ಬಬೇಕಿತ್ತಾ? ಎಂದು ಮನದಲ್ಲಿ ಅಂದುಕೊಂಡಳು.

ಅಷ್ಟೊಂದು ದೂರದಿಂದ ಬಂದಿದ್ದೀನಿ. ಒಂದಷ್ಟು ಹೊತ್ತು ಕೂತು ಮಾತಾಡಿಸುವಷ್ಟೂ ವ್ಯವಧಾನ ಕೂಡ ಇಲ್ಲದಾಯ್ತ ನಿನ್ನಲ್ಲಿ? ಜಾಗ ಖಾಲಿ ಮಾಡು ಅನ್ನುವುದಕೋಸ್ಕರನಾ ನನ್ನ ಅಲ್ಲಿಂದಿಲ್ಲಿಗೆ ಕರೆಯಿಸಿಕೊಂಡಿದ್ದು? ನಿನ್ಗೆ ನನ್ಮೇಲೆ ಒಂದು ಚೂರು ಕೂಡ ಪ್ರೀತಿ ಇಲ್ಲ ಎಂದವಳೇ ಮುಖ ಊದಿಸಿಕೊಂಡು ಮೌನ ಪ್ರತಿಭಟನೆ ಪ್ರಾರಂಭಮಾಡಿದಳು.

ಅಮ್ಮ, ತಾಯೆ ದಯಮಾಡಿ ಈ ಬಡಪಾಯಿನ ಕ್ಷಮಿಸಿಬಿಡು. ನಿನ್ನ ಇಷ್ಟಾರ್ಥಗಳೆಲ್ಲವೂ ನೆರವೇರಲಿ. ಅರ್ಧ ಗಂಟೆ ಏನು, ಬೆಳಕರಿಯುವ ತನಕ ಇಲ್ಲೇ ಕೂತಿರು. ನನ್ನದೇನು ಅಭ್ಯಂತರವಿಲ್ಲ. ಯಾರಿಗೆ ಬೇಕಾದರೂ ಬುದ್ಧಿವಾದ ಹೇಳ್ಬೊಹುದು. ಆದ್ರೆ, ಹುಡುಗಿಯರಿಗೆ ಮಾತ್ರ ಹೇಳ್ಲಿಕ್ಕೆ ಹೋಗ್ಬಾದು. ಮೂಗಿನ ತುದಿಯಲ್ಲಿಯೇ ಕೋಪ. ಬಾಯಿಯಲ್ಲಿ ಪೌರುಷ ತೋರಿಸಿ ಬಿಡುತ್ತಾರೆ ಎಂದು ಆಕೆಯನ್ನು ನೋಡಿ ಹುಸಿಮುನಿಸು ತೋರ್ಪಡಿಸಿದ.

ನೀನು ಈ ತರ ಹುಡುಗಿಯರ ಬಗ್ಗೆ ಕೇವಲವಾಗಿ ಮಾತಾಡ್ಬೇಡ. ಹುಡುಗಿಯರ ಬಗ್ಗೆ ನಿನ್ಗೇನು ಗೊತ್ತು? ಅವರ ಕಷ್ಟಗಳೇನಾದ್ರು ಗೊತ್ತಾ? ಹುಡುಗಿಯರು ಒಂದು ತಿಂಗಳಲ್ಲಿ ಅನುಭವಿಸುವ ಕಷ್ಟವನ್ನ ನೀನು ಜೀವನಪೂರ್ತಿ ಅನುಭವಿಸೋದಿಲ್ಲ. ನಿಮ್ಗೇನು ನಾಲ್ಕು ಜನ ಸ್ನೇಹಿತರು ಸಿಕ್ರೆ ಸಾಕು. ಕುಡ್ಕೊಂಡು ಹಾಯಾಗಿತಿರ. ನಮ್ಗೆ ಅಂತಹ ಸ್ವಾತಂತ್ರ್ಯ ಎಲ್ಲಿದೆ? ಅಭಿಮನ್ಯುವಿನ ಸ್ತ್ರೀ ಕುಲದ ಧ್ವೇಷಕ್ಕೆ ಪ್ರತಿಯಾಗಿ ಮಾತಿನಲ್ಲಿಯೇ ತಿವಿದಳು.

ಹುಡುಗರನ್ನ ಅಷ್ಟೊಂದು ಕೇವಲವಾಗಿ ಕಾಣ್ಬೇಡ. ಕುಡುಕರು.. ಕುಡುಕರು… ಅಂತ ಎಷ್ಟೊಂದು ಕೇವಲವಾಗಿ ಮಾತಾಡ್ತಿರಲ್ಲ?

ಕುಡಿಯೋದು ಎಷ್ಟು ಕಷ್ಟಾಂತ ನಿಮ್ಗೇನಾದ್ರು ಗೊತ್ತಾ? ಕುಡಿಯೋ ಕಷ್ಟ ಕುಡುಕರಿಗೆ ಮಾತ್ರ ಗೊತ್ತು. ಹೆಂಡ ನಾಲಿಗೆಗೆ ರುಚಿ ನೀಡದಿದ್ದರೂ ಗಟಗಟನೆ ಎತ್ತಿ ರುಚಿಗೋಸ್ಕರ ಉಪ್ಪಿನಕಾಯಿ ನೆಕ್ಕಿಕೊಳ್ತೇವೆ. ಅಂಥ ಕಷ್ಟ ನಿಮ್ಗೇನಾದ್ರು ಇದೆಯ? ಕುಡಿದು ಅಭ್ಯಾಸ ಮಾಡಿಕೊಂಡ್ರೆ ಕುಡಿತವನ್ನು ಬಿಟ್ಟು ಒಂದೇ ಒಂದು ದಿನ ಇರೋದಕ್ಕೆ ಸಾಧ್ಯನಾ? ದುಡ್ಡಿಲ್ಲದೆ ಇದ್ರೂ ಸಾಲ ಮಾಡಿಯಾದರು ಕುಡಿಯಬೇಕು. ಕುಡುಕರಿಗೆ ಯಾರಾದರು ಸಾಲ ಕೊಡ್ತಾರ? ಖಂಡಿತ ಇಲ್ಲ. ಕುಡುಕರ ಕಷ್ಟ ನಿನ್ಗೇನು ಗೊತ್ತು? ಸ್ವತಃ ಪಾನಪ್ರಿಯನಾಗಿರುವುದರಿಂದ ಕುಡಿತದ ಚಟವನ್ನು ಬಲವಾಗಿ ಸಮರ್ಥಿಸಿಕೊಂಡ.

ಆಹಾ…, ಏನ್ ಚೆನ್ನಾಗಿ ಮಾತಾಡ್ತಾ ಇದ್ದೀಯ? ಕುಡುಕರೇನು ಕುಡ್ದು ಸುಮ್ನೆ ಇತಾರ? ಮೈ ಮೇಲೆ ದೆವ್ವ ಬಂದಂಗೆ ಆಡ್ತಾರೆ. ರಸ್ತೆಯಲ್ಲಿ ಹೋಗುವವರಿಗೆ ಹೊಡೆಯೋದಕ್ಕೆ ತಾಕತ್ತಿಲ್ಲದೆ ಮನೆಯಲ್ಲಿರೋ ಪಾಪದ ಹೆಂಡ್ತಿ, ಮಕ್ಕಳನ್ನು ಇಡ್ಕೊಂಡು ಹೊಡಿಯ್ತಾರೆ. ನನ್ಗೆ ಗೊತ್ತಿಲ್ವ ಕುಡುಕರ ಪೌರುಷ. ಕುಡ್ದು, ಕುಡ್ದು ಸಾವಿರಾರು ರೂಪಾಯಿ ಕಳಿಯ್ತಾರೆ. ಆದ್ರೆ ಹೆಂಡ್ತಿಗೋಸ್ಕರ ಒಂದೇ ಒಂದು ಜೊತೆ ಬಳೆ ಕೊಡಿಸೋದಕ್ಕೂ ಯೋಚ್ನೆ ಇರೋದಿಲ್ಲ. ನನ್ಗೆ ಕುಡುಕರನ್ನ ಕಂಡ್ರೆ ಚಪ್ಲಿ ತಗೊಂಡು ಹೊಡಿಬೇಕು ಅನ್ನಿಸ್ತದೆ ಆಕೆ ಕುಡುಕರ ವಿರುದ್ಧ ವಾಗ್ಯುದ್ಧ ಮುಂದುವರೆಸುತ್ತಿದ್ದಂತೆಯೇ ಒಂದೈದು ನಿಮಿಷ ಇಲ್ಲೇ ಇರು. ಈಗ ಬಂದು ಬಿಡ್ತೇನೆ ಎಂದು ಹೇಳಿ ಹೊರಹೋದ ಅಭಿಮನ್ಯು ಎರಡು ಡಜನ್ ಬಳೆಯೊಂದಿಗೆ ಆಗಮಿಸಿದ.

ಮೊದ್ಲು ಕೈ ತೋರಿಸು. ಬಳಿ ತೊಡಿಸ್ಬಿಡ್ತೇನೆ. ನಿನ್ಗೆ ಬಳೆ ಕಂಡ್ರೆ ತುಂಬ ಇಷ್ಟ ಅಂತ ಈಗತಾನೆ ಗೊತ್ತಾಯ್ತು. ಇನ್ನು ಬಳೆ ತೊಡಿಸ್ಲಿಲ್ಲ ಅಂತ ಬೈಕೊಂಡು ಕೂತಿಬೇಡ ಎಂದು ಮುಗುಳ್ನಗೆ ಬೀರಿದ.

ಸದ್ಯ ಈಗ್ಲಾದ್ರು ನನ್ಗೆ ಏನು ಇಷ್ಟ ಅಂಥ ಗೊತ್ತಾಯ್ತಲ್ಲ? ಅದು ನನ್ನ ಭಾಗ್ಯ. ನೋಡಿದ್ಯಾ ಹುಡುಗಿಯರ ಬಾಯಿ ಎಷ್ಟೊಂದು ಉಪಕಾರಿ ಅಂತ. ನಾನಿಷ್ಟೊಂದು ಮಾತಾಡದೆ ಇದ್ರೆ ನೀನೆಲ್ಲಿ ಬಳೆ ತೊಡಿಸುವ ಮನಸ್ಸು ಮಾಡ್ತಾ ಇದ್ದೆ. ಮಾತು ಮಹಿಳೆಯರಿಗೆ ದೇವರು ಕೊಟ್ಟ ವರ ಕಣೋ. ಈಗ ನನ್ಗೆ ತೃಪ್ತಿ ಆಯ್ತು, ನಾನಿನ್ನು ಹೊರಡ್ತೇನೆ. ನಾಳೆ ಸಂಜೆ ರಾಜಾಸೀಟ್‌ನಲ್ಲಿ ಭೇಟಿಯಾಗುವ ಎಂದು ಅಭಿಮನ್ಯು ಕೈಗೆ ತೊಡಿಸಿದ ಬಳೆಯನ್ನು ಮತ್ತೊಮ್ಮೆ ಆಸೆಗಣ್ಣಿನಿಂದ ನೋಡಿ ಬಳೆ ಕೊಡಿಸಿದಕ್ಕೆ ಥ್ಯಾಂಕ್ಸ್ ಕಣೋ ಕೋತಿ ಎಂದು ಅಭಿಮನ್ಯುವಿನ ಕೆನ್ನೆಗೆ ಚುಂಬಿಸಿ ಮನೆಗೆ ತೆರಳಲು ಅಣಿಯಾದಳು. ಆಯ್ತು ಹೋಗಿ ಬಾ. ಇಷ್ಟೊತ್ತು ನನ್ನ ತಲೆ ತಿಂದಾಯ್ತು, ಇನ್ನು ನಿನ್ನ ಅಪ್ಪ, ಅಮ್ಮ ಬಾಕಿ ಇದ್ದಾರೆ. ಅವರ ತಲೆ ಒಂದ್ಸಲ ಹಾಳು ಮಾಡಿ ಬಾ ಅಂದ ಅಭಿಮನ್ಯು ಅಕೆಯನ್ನು ಆಟೋ ಹತ್ತಿಸಿ ಮನೆಗೆ ಕಳುಹಿಸಿಕೊಟ್ಟ.

ಅಕ್ಷರ ಮೈಸೂರಿಂದ ಹೊರಡುವುದಕ್ಕಿಂತ ಮುಂಚೆ ದೂರವಾಣಿ ಮೂಲಕ ಮನೆಗೆ ಬರುವ ವಿಚಾರ ತಿಳಿದ್ದರಿಂದ ಮಗಳ ಹಾದಿಯನ್ನೇ ಕಾಯುತ್ತಾ ರಾಜಶೇಖರ್, ಲೀಲಾವತಿ ಕುಳಿತ್ತಿದ್ದರು. ಮನೆಯೊಳಗೆ ಕಾಲಿಟ್ಟೊಡನೆ ಅಕ್ಷರ ಅಪ್ಪ, ಅಮ್ಮನ ಕಾಲಿಗೆ ಬಿದ್ದು ನಮಸ್ಕರಿಸಿದಳು.

ಛೇ, ಇದೆಲ್ಲ ಯಾಕಮ್ಮ? ಎಂದು ಮಗಳನ್ನು ಎಬ್ಬಿಸಿದ ರಾಜಶೇಖರ್ ಹೇಗಿದ್ದೀಯ? ಮೈಸೂರಿನ ವಾತಾವರಣ ಹಿಡಿಸಿತಾ? ಮೈಸೂರಿಗೆ ಹೋದ ನಂತರ ಅಪ್ಪ, ಅಮ್ಮನನ್ನೇ ಮರೆತು ಬಿಡೋದ. ಎಷ್ಟೊಂದು ದಿನ ಆಯ್ತು ನಿನ್ನ ನೋಡದೆ, ಈಗ್ಲಾದರು ಮನೆ ಕಡೆ ನೆನಪಾಯ್ತಲ್ಲ?

ಏನಪ್ಪ ನೀವು, ನಾನು ಮೈಸೂರಿಗೆ ಹೋಗಿ ಎರಡು ತಿಂಗಳಾಯ್ತು. ಮಗಳು ಹೇಗಿದ್ದಾಳೆ ಅಂತ ಒಂದು ದಿನವಾದ್ರು ವಿಚಾರಿಸಿದ್ರಾ? ನನ್ನ ಒಂದು ದಿನನೂ ನೋಡೋದಕ್ಕೆ ಬಲೇ ಇಲ್ಲ.? ಸದಾ ತೋಟದ ಕಡೆಗೆ ನಿಮ್ಮ ಗಮನ. ನನ್ಮೇಲೆ ಗಮನ ಹರಿಸೋದಕ್ಕೆ ಸಮಯ ಎಲ್ಲಿದೆ ನಿಮ್ಗೆ? ಹುಸಿಕೋಪ ತೋರ್ಪಡಿಸಿದಳು.

ಏನು ನಾನು ನಿನ್ನ ಮರೆಯೋದಾ…? ನನ್ನ ಮುದ್ದಿನ ಮಗಳನ್ನ ಮರೆಯೋದಕ್ಕೆ ಸಾಧ್ಯವಿಲ್ಲ ಬಿಡು. ನೀನು ನನ್ನ ಜೀವ. ನೀನೆಲ್ಲೋ ಮೈಸೂರಿನಲ್ಲೇ ಹುಡುಗನನ್ನ ನೋಡ್ಕೊಂಡು ನಮ್ಗೆ ಹೇಳದೆಕೇಳದೆ ಮದ್ವೆ ಮಾಡ್ಕೊಂಡಿದ್ದೀಯ ಅಂತ ಅನ್ಕೊಂಡು ನಾವಿಬ್ರು ಸುಮ್ನೆ ಇದ್ದೇವು ಅಂದಾಗ ಎಲ್ಲರು ನಕ್ಕರು.

ಅಪ್ಪ…, ನಿಮ್ಗೆ ಯಾವತ್ತೂ ತಮಾಷಿನೇ ಅಂದ ಅಕ್ಷರ ನಗುತ್ತಾ ಬಾತ್‌ರೂಂ ಕಡೆಗೆ ತೆರಳಿ ಬಿರುಬಿಸಿಲಿಗೆ ಬೆವತ ದೇಹವನ್ನು ತಣ್ಣೀರಿನ ಸ್ನಾನದ ಮೂಲಕ ತಂಪಾಗಿಸಿಕೊಂಡಳು. ಅಮ್ಮ ಮಾಡಿಕೊಟ್ಟ ಫ್ರೆಶ್‌ಜ್ಯೂಸ್ ಕುಡಿದು ಹರಟೆಯಲ್ಲಿ ತೊಡಗಿದಳು.

ಮೈಸೂನಲ್ಲಿ ನೀವಿಬ್ರು ಇಲ್ಲ ಎಂಬ ಕೊರತೆ ಬಿಟ್ರೆ ಬೇರೇನು ಕೊರತೆ ಇಲ್ಲ. ತುಂಬಾ ಹಾಯಾಗಿದ್ದೇನೆ. ನೀವು ಕೂಡ ನನ್ನೊಂದಿಗೆ ಬಂದ್ಬಿಡಿ. ಅಲ್ಲೇ ಸೆಟ್ಲಾಗಿ ಬಿಡುವ ಆಹ್ವಾನ ನೀಡಿದಳು.

ಅಯ್ಯೋ ಬೇಡ ಕಣಮ್ಮ. ಇಲ್ಲೇ ನೆಮ್ಮದಿಯ ಜೀವನ ನಡೆಸ್ತಾ ಇದ್ದೇವೆ. ಈ ವಯಸ್ಸು ಕಾಲದಲ್ಲಿ ಯಾಕೆ ನಮ್ಗೆ ಸಿಟಿಯ ಸಹವಾಸ ಅಂದರು ಲೀಲಾವತಿ.

ಅಕ್ಷರಳನ್ನು ಫೋಟೋದಲ್ಲಿಯೇ ನೋಡಿ ಒಂದೇ ಮಾತಿಗೆ ನನ್ಗೆ ಮೆಚ್ಚುಗೆ ಆಯ್ತು ಎಂದು ಉದ್ಗರಿಸಿದ ಅಗರ್ಭ ಶ್ರೀಮಂತ ಮನೆತನದ ನಂದಕುಮಾರ್ ಅವರ ಏಕೈಕ ಪುತ್ರ ನಿಖಿಲ್‌ನ ವಿಷಯವನ್ನು ಅಕ್ಷರಳ ಎದುರು ತೆರೆದಿಡಲು ಸಂದರ್ಭಕ್ಕಾಗಿ ರಾಜಶೇಖರ್-ಲೀಲಾವತಿ ದಂಪತಿ ಕಾಯುತ್ತಿದ್ದರು. ತುಂಬ ದೊಡ್ಡ ಸಂಬಂಧ. ಕೈ ತಪ್ಪಿ ಹೋದರೆ ಮತ್ತೆಂದು ಅಂತಹ ಸಂಬಂಧ ದೊರೆಯೋದಿಲ್ಲವೆಂಬ ಆತಂಕ ಅವರಲ್ಲಿ ಕಾಡುತಿತ್ತು. ಇಬ್ಬರು ಅಕ್ಷರ ಬಂದಾಗಿನಿಂದಲೂ ಮದುವೆಯ ವಿಚಾರವನ್ನು ತಿಳಿಸಲು ಪ್ರಯತ್ನಿಸುತ್ತಿದ್ದರು. ಹೇಗೆ ಹೇಳಬೇಕೆಂದು ತೋಚದೆ ಸಂಜೆವರೆಗೂ ಚಡಪಡಿಕೆಯಲ್ಲಿಯೇ ಕಳೆದರು. ಹೇಳಿದರೆ ಎಲ್ಲಿ ಕೋಪ ಮಾಡಿಕೊಂಡು ಬಿಡುತ್ತಾಳೋ ಎಂಬ ಭಯ ಕಾಡಲು ಪ್ರಾರಂಭಿಸಿತು. ಇತ್ತೀಚಿಗೆ ತಾನೇ ವಿವಾಹದ ವಿಚಾರ ಎತ್ತಿದಾಗ ಮುಖ ಊದಿಸಿಕೊಂಡಿದ್ದಳು. ಆಕೆಯನ್ನು ಸಂತೈಸಲು ಹರಸಾಹಸ ಪಟ್ಟಿದ್ದನ್ನು ಇಬ್ಬರು ಇನ್ನು ಮರೆತ್ತಿರಲಿಲ್ಲ. ಆದರೆ, ಇದೀಗ ಬಂದಿರುವ ಆಫರನ್ನು ಕೈ ಬಿಡುವಂತಿಲ್ಲ. ನಿಖಿಲ್ ಸುಪದ ಸುಪ್ಪತ್ತಿಗೆಯಲ್ಲಿ ಬೆಳೆದವನು. ಅಲ್ಲದೆ ಅಮೆರಿಕದಲ್ಲಿ ಕೆಲಸದಲ್ಲಿ ಬೇರೆ ಇದ್ದಾನೆ. ಆಸ್ತಿ, ಅಂತಸ್ತು, ಗೌರವಕ್ಕೇನು ಕೊರತೆ ಇಲ್ಲ. ಇದು ನಮಗೆ ಹೇಳಿ ಮಾಡಿಸಿದ ಸಂಬಂಧ ಎಂಬ ನಿರ್ಧಾರಕ್ಕೆ ಬಂದುಬಿಟ್ಟರು ರಾಜಶೇಖರ್-ಲೀಲಾವತಿ ದಂಪತಿ.

ಸಂಜೆಯಾಗುತ್ತಿದ್ದಂತೆ ಹೇಗೋ ಧೈರ್ಯ ಮಾಡಿಕೊಂಡು ಮಗಳನ್ನು ಪಕ್ಕದಲ್ಲಿ ಕೂರಿಸಿಕೊಂಡು ಮದುವೆಯ ವಿಚಾರವನ್ನು ಮೆಲ್ಲನೆ ತೆರೆದಿಟ್ಟರು. ಮುಂದಿನ ತಿಂಗಳು ನಿಶ್ಚಿತಾರ್ಥ ಇಟ್ಕೊಂಡಿದ್ದೀವಿ. ಇಲ್ಲ ಅನ್ಬೇಡ. ಇದು ನಮ್ಮ ಕುಟುಂಬದ ಮರ್ಯಾದೆಯ ಪ್ರಶ್ನೆ. ಒಳ್ಳೆಯ ಕಡೆಯ ಸಂಬಂಧ. ನಿನ್ನ ನಿರ್ಧಾರದ ಮೇಲೆ ನಮ್ಮ ಕುಟುಂಬದ ಗೌರವ ನಿಂತಿದೆ. ಆಗೊಲ್ಲ ಅಂತ ಮಾತ್ರ ಅನ್ಬೇಡ ಲೀಲಾವತಿ ಮಗಳ ಮೇಲೆ ಒತ್ತಡ ಹೇರಿದರು.

ಅಕ್ಷರ ಎಲ್ಲೇ ಹೋದರೂ ಆಕೆಯನ್ನು ಮದುವೆ ಎಂಬ ಭೂತ ಹಿಂಬಾಲಿಸುತ್ತಲೇ ಇತ್ತು. ಅದು ಆಕೆಯ ನೆಮ್ಮದಿಯನ್ನು ಮತ್ತೆ ಕೆಡಿಸಲು ಪ್ರಾರಂಭಿಸಿತು. ಇತ್ತೀಚೆಗಂತೂ ಆಕೆ ಎಲ್ಲಾ ವಿಚಾರಗಳನ್ನು ಬದಿಗಿಟ್ಟು ಮದುವೆಯಿಂದ ಪಾರಾಗೋದು ಹೇಗೆ ಎಂಬ ಚಿಂತೆಯಲ್ಲಿ ಮುಳುಗುವಂತೆ ಮಾಡಿತು.

ಅಂತು ನಾನು ನೆಮ್ಮದಿಯಾಗಿರೋದನ್ನ ಕಂಡ್ರೆ ನಿಮ್ಗೆ ಇಷ್ಟ ಇಲ್ಲ ಅಂದಂಗಾಯ್ತು. ಮನೆಗೆ ಕಾಲಿಟ್ಟಾಗಲೆಲ್ಲ ಇದೇ ರಾಮಾಯಣ ಆಗೋಯ್ತು. ಯಾರನ್ನ ಕೇಳಿ ನಿಶ್ಚಿತಾರ್ಥ ಇಟ್ಕೊಂಡಿದ್ದೀರ? ನನ್ಗಂತು ಈ ಮದ್ವೆ ಇಷ್ಟ ಇಲ್ಲ. ನನ್ನ ಪಾಡಿಗೆ ನನ್ನ ಬಿಟ್ಬಿಡಿ. ತನ್ನ ಹಿಂದಿನ ನಿರ್ಧಾರವನ್ನೇ ಮತ್ತೆ ಹೇಳಿದಳು.

ನೀನಿನ್ನೂ ಸಣ್ಣವಳೂಂತ ತಿಳ್ಕೊಂಡಿದ್ದೀಯ? ಇನ್ನೆಷ್ಟು ವರ್ಷಾಂತ ಹೀಗೆ ಇತಿಯ? ನೀನು ಮದ್ವೆ ಬಗ್ಗೆ ಯೋಚನೆ ಮಾಡಿ ನಿರ್ಧಾರ ತಗೊಳ್ಳುವಷ್ಟರೊಳಗೆ ಮುದ್ಕಿಯಾಗಿತಿಯ. ಮದ್ವೆ ಬೇಡ ಅಂತ ಯಾಕೆ ಹಟ ಹಿಡ್ದು ಕೂತ್ಕೊಂಡಿದ್ದಿಯ? ಇದು ನಮ್ಮ ಮನೆತನದ ಮರ್ಯಾದೆಯ ಪ್ರಶ್ನೆ. ಹುಡುಗನ ಮನೆ ಕಡೆಯವರು ನಿಮ್ಮಪ್ಪನಿಗೆ ತುಂಬಾ ಬೇಕಾದವರು. ನೀನು ಮದ್ವೆ ಬೇಡ ಅಂದ್ರೆ ನಿಮ್ಮಪ್ಪನ ಮಾನ, ಮರ್ಯಾದೆ ಏನಾಗಬೇಡ? ಮುಂದಿನ ತಿಂಗಳು ನಡೆಯುವ ನಿಶ್ಚಿತಾರ್ಥಕ್ಕೆ ನೀನು ಬಲೇ ಬೇಕು ಆಜ್ಞೆ ಹೊರಡಿಸಿದರು ಲೀಲಾವತಿ.

ಆಜ್ಞೆಯಿಂದ ಕೂಡಿದ ಅಮ್ಮನ ಮಾತುಕೇಳಿ ಆಕೆಯ ಮನದೊಳಗೆ ಕಳವಳ ಪ್ರಾರಂಭವಾಗತೊಡಗಿತು. ಹೇಗೆ ಈ ಸಂಬಂಧ ವನ್ನು ಕಡಿದುಕೊಳ್ಳೋದು? ಅಭಿಮನ್ಯುವನ್ನು ಪ್ರೀತಿಸುತ್ತಿರುವ ವಿಚಾರ ಹೇಳಿ ಬಿಡ್ಲಾ? ಒಂದ್ವೇಳೆ ಒಪ್ಪಿಕೊಳ್ಳದೆ ಹೋದರೆ ಏನ್ಮಾಡೋದು? ಹುಡುಗನನ್ನು ನೋಡಿ ಹುಡುಗ ನನ್ಗೆ ಖುಷಿಯಾಗಿಲ್ಲ ಅಂದ್ರೆ ಹೇಗೆ? ಎಂದು ತನ್ನನ್ನು ತಾನೇ ಪ್ರಶ್ನಿಕೊಂಡು ಹುಡಗನ ಖುಷಿಯಾಗಿಲ್ಲ ಅನ್ನೋದಕ್ಕೆ ಸಾಧ್ಯ ಇಲ್ಲ. ಈಗಾಗ್ಲೇ ಹುಡುಗನನ್ನ ನೋಡಿ ಅಪ್ಪ, ಅಮ್ಮ ಖುಷಿ ಪಟ್ಟಿದ್ದಾರೆ. ಮದ್ವೆಗೆ ಒಪ್ಕೋಬೇಕೂಂತ ಬಲವಂತ ಮಾಡ್ತಾ ಇದ್ದಾರೆ. ಇನ್ನು ಖುಷಿ ಇಲ್ಲ ಅಂದರೂ ಕೂಡ ಬಲವಂತಮಾಡಿ ಒಪ್ಪಿಸುತ್ತಾರೆ. ಅದಕ್ಕಿಂತ ಅಭಿಮನ್ಯುವನ್ನು ಪ್ರೀತಿಸುತ್ತಿರುವ ವಿಚಾರ ಹೇಳಿಕೊಳ್ಳುವುದೇ ವಾಸಿ ತನ್ನ ಪ್ರಶ್ನೆಗೆ ತಾನೇ ಉತ್ತರ ಕಂಡುಕೊಂಡು ಅದನ್ನು ಅಪ್ಪ, ಅಮ್ಮನಿಗೆ ಹೇಳಲು ಅಣಿಯಾದಳು.

ಅಮ್ಮ, ನನ್ನ ಮನಸ್ಸಿಗೆ ಹಿಡಿಸಿದವರ ಜೊತೆ ಮಾತ್ರ ನಾನು ಮದ್ವೆಯಾಗೋದು. ಮನಸ್ಸು ಒಬ್ಬನಿಗೆ ಕೊಟ್ಟು, ದೇಹ ಮತ್ತೊಬ್ಬನಿಗೆ ಕೊಡೋದಕ್ಕೆ ನನ್ನಿಂದ ಸಾಧ್ಯ ಇಲ್ಲ. ನಾನು ಅಭಿಮನ್ಯುವನ್ನು ಮನಸಾರೆ ಪ್ರೀತಿಸ್ತಾ ಇದ್ದೇನೆ. ಅವನನ್ನೇ ಮದ್ವೆಯಾಗಬೇಕೂಂತ ನಿರ್ಧಾರ ಮಾಡಿಯಾಗಿದೆ ಅಂದುಬಿಟ್ಟಳು.

ಮಗಳ ಮಾತು ಕೇಳಿ ಇಬ್ಬರಿಗೆ ಬರಸಿಡಿಲು ಬಡಿದ ಅನುಭವವಾಯಿತು. ಆಕಾಶವೇ ತಲೆಮೇಲೆ ಕಳಚಿ ಬಿದ್ದಂತೆ ಒಂದು ಕ್ಷಣ ದಂಗಾಗಿ ಕುಳಿತರು. ಮನದೊಳಗೆ ದುಃಖ ಮಡುಗಟ್ಟಿಕೊಳ್ಳಲು ಪ್ರಾರಂಭಿಸಿತು. ತುಂಬಾ ಅಕ್ಕರೆಯಿಂದ ಬೆಳೆಸಿದ ಮಗಳು ನಮ್ಮ ಮಾತನ್ನೇ ಧಿಕ್ಕರಿಸುವಷ್ಟರ ಮಟ್ಟಿಗೆ ಬೆಳೆದು ಬಿಟ್ಟಿದ್ದಾಳಲ್ಲ? ತಲತಲಾಂತರಂಗಳಿಂದ ಕಾಪಾಡಿಕೊಂಡು ಬಂದ ಕುಟುಂಬದ ಗೌರವಗಳನ್ನೆಲ್ಲ ಒಂದೇ ಕ್ಷಣದಲ್ಲಿ ಬೀದಿಪಾಲು ಮಾಡಲು ಹೊರಟು ನಿಂತಿದ್ದಾಳಲ್ಲ? ಅದು ನಮ್ಮ ಮುದ್ದಿನ ಮಗಳು ಅಂದುಕೊಂಡು ದುಃಖಿತರಾದ ರಾಜಶೇಖರ್, ಲೀಲಾವತಿ ದಂಪತಿ ಕಣ್ಣಂಚಿನಿಂದ ಕಣ್ಣೀರು ನೆಲಕ್ಕುರುಳಿತು. ಕೆಲವು ನಿಮಿಷಗಳ ಕಾಲ ಏನು ಮಾತಾಡಬೇಕೆಂದು ತೋಚದೆ ಇಬ್ಬರು ಮೌನಕ್ಕೆ ಮಾರು ಹೋದರು. ಮತ್ತೆ ಸುಧಾರಿಸಿಕೊಂಡು ಕೊನೆಯ ಪ್ರಯತ್ನ ಎಂಬಂತೆ ಮಗಳನ್ನು ಒಲಿಸಿಕೊಳ್ಳುವ ಪ್ರಯತ್ನ ಮಾಡಿದರು.

ಅಕ್ಷರ, ನಿನ್ನ ನಿರ್ಧಾರ ಬದಲಾಯಿಸಿಕೊಳ್ಳೋದಕ್ಕೆ ಸಾಧ್ಯನೇ ಇಲ್ವ? ಸ್ವಲ್ಪ ಆಲೋಚನೆ ಮಾಡಿ ನೋಡು. ನೀನು ಮಾಡ್ತಾ ಇರೋದು ಸರಿಯಾ ಅಂಥ? ಆಗ ನಿನ್ಗೆ ಎಲ್ಲ ಅರ್ಥವಾಗುತ್ತೆ. ದುಡುಕಿ ಯಾವುದೇ ನಿರ್ಧಾರ ಕೈಗೊಳ್ಬೇಡ. ಇದು ನಮ್ಮ ಮನೆತನದ ಗೌರವದ ಪ್ರಶ್ನೆ. ನೀನು ಇಡುವ ಒಂದು ತಪ್ಪು ಹೆಜ್ಜೆಯಿಂದ ನಾವು ಸಮಾಜದ, ಕುಟುಂಬದವರ ಮುಂದೆ ತಲೆ ತಗ್ಗಿಸಿ ನಿಲ್ಬೇಕಾಗುತ್ತೆ. ಇರೋ ಒಬ್ಬಳೇ ಮಗಳ ಮದುವೆಯನ್ನ ವೈಭವಯುತವಾಗಿ ನಡೆಸಲು ಏನೆಲ್ಲೋ ಕನಸು ಕಂಡಿದ್ದೆ. ಕನಸುಗಳನ್ನೆಲ್ಲ ನುಚ್ಚುನೂರು ಮಾಡುವ ಹಾದಿ ತುಳಿಯುತ್ತಾ ಇದ್ದೀಯಲ್ಲ? ಗೋಳಾಡಿದರು ರಾಜಶೇಖರ್.

ನಿಮ್ಮ ಆಸೆಗೆ ನಾನೆಂದೂ ತಣ್ಣೀರೆರೆಚೋದ್ದಿಲ್ಲ. ನೀವು ಅಂದುಕೊಂಡಂತೆ ನನ್ನ ಮದ್ವೆಯನ್ನ ಅಭಿಮನ್ಯುವಿನೊಂದಿಗೆ ಅದ್ಧೂರಿಯಾಗಿ ನಡೆಸಬಹುದಲ್ವ? ನನ್ಗೆ ಇಷ್ಟವಿಲ್ಲದವನೊಂದಿಗೆ ಎಷ್ಟೇ ವೈಭವಯುತವಾಗಿ ಮದ್ವೆ ಮಾಡಿಸಿದರೂ ಆಗುವ ಪ್ರಯೋಜನವಾದರೂ ಏನು? ಮದ್ವೆಗೆ ಬರೋ ನೂರಾರು ಜನರು ಮದ್ವೆ ಅದ್ಧೂರಿಯಾಗಿತ್ತೆಂದು ಹತ್ತಾರು ದಿನ ಹಾಡಿ ಹೊಗಳಿ ಮತ್ತೆ ಮರೆತು ಬಿಡ್ತಾರೆ. ಅದಕ್ಕಿಂತ ಹೆಚ್ಚೇನು ಆಗೋದಿಲ್ಲ. ನನ್ನ ಬದುಕು ಹಾಳಾದ ನಂತರ ಅದೇ ಜನ ತಮ್ಮ ಮನಸ್ಸಿಗೆ ತೋಚಿದ ರೀತಿಯಲ್ಲಿ ಮಾತಾಡ್ಕೋತ್ತಾರೆ. ಆಗ ನೀವು ಜೀವನದಲ್ಲಿ ಗಳಿಸಿ ಕೂಡಿಟ್ಟುಕೊಂಡಿರುವ ಮಾನ, ಮರ್ಯಾದೆಗಳೆಲ್ಲ ಬೀದಿ ಪಾಲಾಗೋದಿಲ್ವ? ಆ ಸಂದರ್ಭ ನನ್ಗೆ ಹೊಸ ಜೀವನ ಕೊಡಿಸಿಕೊಡೋದಕ್ಕೆ ನಿಮ್ಮಿಂದ ಸಾಧ್ಯ ಉಂಟಾ? ನಾನೆಂದು ಆತುರದ ನಿರ್ಧಾರ ಕೈಗೊಂಡಿಲ್ಲ. ಸಾಕಷ್ಟು ಬಾರಿ ಆಲೋಚಿಸಿದ ಬಳಿಕವಷ್ಟೇ ಅಭಿಮನ್ಯುವನ್ನು ಪ್ರೀತಿಸೋದಕ್ಕೆ ಪ್ರಾರಂಭ ಮಾಡಿದ್ದು. ಅವನ ಪ್ರೀತಿಯಲ್ಲಿ ಕಲ್ಮಷತೆಯಿಲ್ಲ. ನಿಷ್ಕಲ್ಮಷದ ಪ್ರತಿರೂಪವೇ ಅಭಿಮನ್ಯು. ಅವನನ್ನಲ್ಲದೆ ಇನ್ಯಾರನ್ನ ಮದ್ವೆಯಾಗಲಿ? ಇನ್ಯಾರಲ್ಲಿ ಅಂತಹ ಪ್ರೀತಿಯನ್ನ ನಿರೀಕ್ಷೆ ಮಾಡ್ಲಿ? ಒಂದ್ವೇಳೆ ನಾನು ಅವನನ್ನ ತಿರಸ್ಕಾರ ಮಾಡಿಬಿಟ್ರೆ ಅವನ ಬದುಕೇ ನಾಶವಾಗಿ ಹೋಗೋದು ನಿಶ್ಚಿತ. ಅದನ್ನ ಕಂಡು ದಿನವಿಡೀ ಕೊರಗುವ ಸೌಭಾಗ್ಯ ಕರುಣಿಸ್ಬೇಡಿ ಅಭಿಮನ್ಯುವನ್ನೇ ಮದುವೆಯಾಗುತ್ತೇನೆಂದು ನಿರ್ಧಾರ ತಳೆದಿರುವ ಅಕ್ಷರ ತನ್ನ ನಿರ್ಧಾರವನ್ನು ಯಾವುದೇ ಅಳುಕಿಲ್ಲದೆ ಹೇಳಿ ಮುಗಿಸಿದಳು.

ನಿನ್ಗೆ ಪ್ರೀತಿಯ ಹುಚ್ಚು ಹಿಡ್ಕೊಂಡಿದೆ. ಅದ್ಕೆ ನಿನ್ಗೆ ಜಗತ್ತು ಕಣ್ಣಿಗೆ ಕಾಣಿಸ್ತಾ ಇಲ್ಲ. ಅಪ್ಪ, ಅಮ್ಮನ ಪ್ರೀತಿ ವಿಶ್ವಾಸಗಳು ಕಣ್ಣಿಗೆ ಕಾಣಿಸ್ತಾ ಇಲ್ಲ. ಕೇವಲ ಅಭಿಮನ್ಯು ಒಬ್ಬ ಮಾತ್ರ ಕಾಣಿಸ್ತಾ ಇದ್ದಾನೆ. ಒಂದುಸಲ ಕಣ್ತೆರೆದು ನೋಡು ಅಭಿಮನ್ಯುವಿನಂತಹ ನೂರಾರು ಹುಡುಗರು ಕಣ್ಣೆದುರಿಗೆ ಬಂದು ನಿಲ್ತಾರೆ. ಈ ಜಗತ್ತಿನಲ್ಲಿ ಪ್ರೀತಿಸೋದಕ್ಕೆ ಅಭಿಮನ್ಯುವಿಗೆ ಮಾತ್ರ ತಿಳಿದಿರೋದಾ? ನೀನು ಅವನನ್ನ ಬಿಟ್ಟ ತಕ್ಷಣ ಅವನ ಬದುಕೇನು ಕೊನೆಯಾಗೋದಿಲ್ಲ. ಅದೆಲ್ಲ ಭ್ರಮೆಗಳಷ್ಟೆ. ನೀನು ಆ ಭ್ರಮಾ ಲೋಕದಲ್ಲಿ ಬದುಕು ನಡೆಸ್ತಾ ಇದ್ದೀಯ. ಅದರಿಂದ ಹೊರಬರುವ ಪ್ರಯತ್ನ ಮಾಡು. ನಾನು ಅದೆಷ್ಟೋ ಹುಡುಗರನ್ನ ನೋಡಿದ್ದೇನೆ. ಒಂದು ಹುಡುಗಿ ಕೈಕೊಟ್ಟ ತಕ್ಷಣ ಮತ್ತೊಂದು ಹುಡುಗಿಯ ಕೈ ಹಿಡ್ಕೋತ್ತಾರೆ. ನನ್ಗೇನು ಹುಡಗರ ಬುದ್ಧಿ ಗೊತ್ತಿಲ್ವ? ಸುಮ್ನೆ ಎಲ್ಲ ಮರೆತು ನಾವು ನೋಡಿದ ಹುಡುಗನೊಂದಿಗೆ ಮದ್ವೆಯಾಗೋದಕ್ಕೆ ತಯಾರಾಗು. ಪ್ರೀತಿ- ಪ್ರೇಮ ಅಂತ ಹಾಳಾಗಿ ಹೋಗ್ಬೇಡ. ಅದನ್ನ ನೋಡೋ ಶಕ್ತಿ ನಮ್ಗಿಲ್ಲ. ರಾಜಶೇಖರ್ ಬದುಕಿನ ವಾಸ್ತವತೆಯನ್ನು ಮಗಳಿಗೆ ತಿಳಿಸುವ ಪ್ರಯತ್ನ ಮುಂದುವರೆಸುತ್ತಲೇ ಇದ್ದಾಗ ನಡುವೆ ಬಾಯಿ ಹಾಕಿದಳು ಅಕ್ಷರ.

ಅಪ್ಪ, ನಿಮ್ಗೆ ಅಭಿಮನ್ಯುವಿನ ಮೇಲೆ ನಂಬಿಕೆ ಇಲ್ದೆ ಇಬೊಹುದು. ಆದ್ರೆ ನನ್ಗೆ ನಂಬಿಕೆ ಇದೆ. ಜೀವಕ್ಕಿಂತ ಹೆಚ್ಚಾಗಿ ನನ್ನ ಪ್ರೀತಿಸ್ತಾ ಇದ್ದಾನೆ. ಕೊನೆವರೆಗೂ ಕೈ ಹಿಡಿದು ಕಾಪಾಡ್ತಾನೆ ಎಂಬ ನಂಬಿಕೆ ಇದೆ. ಅವನೇ ನನ್ನ ಬಾಳ ಸಂಗಾತಿ. ನಿವೇನೇ ಅಂದರೂ, ವಿರೋಧ ಮಾಡಿದರೂ ನಾನು ಅವನನ್ನೇ ಮದ್ವೆಯಾಗೋದು. ಅಷ್ಟಕ್ಕೂ ನಾನು ಅವನೊಂದಿಗೆ ಮದ್ವೆಯಾದ್ರೆ ನಿಮ್ಗೇನು ಕಷ್ಟ ಪ್ರತಿಭಟನಾತ್ಮಕವಾಗಿ ಕೇಳಿದಳು.

ಕಷ್ಟ, ನಷ್ಟ ಇರೋದ್ರಿಂದ್ಲೇ ಹೇಳ್ತಾ ಇರೋದು. ನೀನು ಅವನನ್ನ ಮದ್ವೆಯಾಗೋದು ಬೇಡ ಅಂಥ. ಅಭಿಮನ್ಯುವಿನ ಗುಣ, ನಡತೆ ಚೆನ್ನಾಗಿದೆ ಅಂತ ನನ್ಗೂ ಗೊತ್ತು. ಅದು ನಿನ್ನಿಂದ ತಿಳ್ಕೋಬೇಕಾದ ಅವಶ್ಯಕತೆ ಇಲ್ಲ. ಅವನು ನಮ್ಗೆ ಸರಿ ಹೊಂದು ವಂತವನಲ್ಲ, ನಮ್ಮ ಜಾತಿಯವನಲ್ಲ. ಜಾತಿ ವಿಷಯವೇನೋ ಹಾಳಾಗಿ ಹೋಗ್ಲಿ ಅಂಥ ಸುಮ್ನಿಬೊಹುದು. ಅದ್ರೆ ನಮ್ಮ ಅಂತಸ್ತಿನ ಮುಂದೆ ಅವನೆಲ್ಲಿ? ಹೋಗಿ ಹೋಗಿ ಅಂತವನಿಗೆ ನಿನ್ನ ಕೊಟ್ಟು ಮದ್ವೆ ಮಾಡೋದಕ್ಕೆ ನಮ್ಗೇನು ಹುಚ್ಚು ಹಿಡ್ಕೊಂಡಿಲ್ಲ ಎಂದು ಕೋಪದಿಂದ ನುಡಿದು ಸ್ವಲ್ಪ ಹೊತ್ತು ಮೌನಿಯಾಗಿ ಏನೋ ನೆನಪಿಸಿಕೊಂಡವರಂತೆ ಮಾತು ಮುಂದುವರೆಸಿದರು.

ಅವನಿಗೆ ಹೋಗಿ ಹೇಳು ‘ನಮ್ಮಿಬ್ಬರ ಪ್ರೀತಿಗೆ ಮನೆಯಲ್ಲಿ ವಿರೋಧ ಕೇಳಿ ಬತಾ ಇದೆ. ನಾವಿಬ್ರು ದೂರ ಇರೋದೇ ವಾಸಿ ಅಂತ. ಎಲ್ಲರ ಮುಂದೆ ನಾವು ತಲೆತಗ್ಗಿಸುವಂತೆ ಮಾಡ್ಬೇಡ. ಹಾಗೊಂದ್ವೇಳೆ ಏನಾದ್ರು ಆಗೋದ್ರೆ ಅವನನ್ನ ಜೀವ ಸಹಿತ ಉಳಿಸೋದಿಲ್ಲ ರಾಜಶೇಖರ್ ಗುಡುಗಿದರು.

ಅಪ್ಪನ ಮಾತು ಕೇಳಿ ಅಕ್ಷರ ಕಳವಳಗೊಂಡಳು. ಅಪ್ಪ ಎಂತ ಮನುಷ್ಯ ಅಂಥ ಅಕ್ಷರಳಿಗೆ ಚೆನ್ನಾಗಿ ಗೊತ್ತು. ಹಿಡಿದ ಹಟ ಸಾಧಿಸದೆ ವಿರಮಿಸುವ ವ್ಯಕ್ತಿಯಲ್ಲ. ಮನೆಯ ಆಳು ಕಾಫಿ ಕಳವು ಮಾಡಿದ ಎಂಬ ಕಾರಣಕ್ಕೆ ರಾಜಶೇಖರ್ ಆತನಿಗೆ ಮನಬಂದಂತೆ ಥಳಿಸಿ ಹತ್ಯೆ ಮಾಡಿದ ದೃಶ್ಯ ಇನ್ನೂ ಆಕೆಯ ಮನದಲ್ಲಿ ಅಚ್ಚಳಿಯದೆ ಉಳಿದಿದೆ. ಒಂದುವೇಳೆ ಅಭಿಮನ್ಯುವಿಗೆ ಏನಾದರು ಆಗಿ ಹೋದರೆ ಎಂಬ ಭಯ ಕಾಡಲು ಪ್ರಾರಂಭಿಸಿತು.

ಅದ್ಯಾಕಪ್ಪ ಅಷ್ಟೊಂದು ಕೋಪ ಮಾಡ್ಕೊತ್ತಾ ಇದ್ದೀರ? ತಪ್ಪು ಮಾಡಿರೋದು ನಾನು. ಶಿಕ್ಷೆ ನೀಡುವುದೇನಿದ್ದರೂ ನನ್ಗೆ ನೀಡಿ. ಈ ವಿಚಾರದಲ್ಲಿ ಅವನನ್ನ ಬಲಿಪಶು ಮಾಡೋದಕ್ಕೆ ನಾನು ಅವಶಕಾಶ ಕೊಡೊಲ್ಲ. ನೀವು ಮಾಡ್ತಾ ಇರೋದು ನಿಮ್ಗೆ ಸರಿ ಅನ್ನಿಸ್ತಾ ಇದೆಯಾ?

ನ್ಯಾಯ, ಅನ್ಯಾಯದ ಬಗ್ಗೆ ಚರ್ಚೆ ನಡೆಸುವ ಸಮಯವಲ್ಲ ಇದು. ಅವನು ಸ್ವಲ್ಪ ಆಲೋಚನೆ ಮಾಡ್ಬೇಕಾಗಿತ್ತು. ಶ್ರೀಮಂತ ಮನೆತನದ ಹುಡುಗಿನ ಪ್ರೀತಿಸೋದು ಸರಿನಾ ಅಂಥ. ಶ್ರೀಮಂತರ ಮನೆಯ ಹುಡುಗಿನ ಪ್ರೀತಿ ಮಾಡಿದರೆ ಇವತ್ತಲ್ಲದಿದ್ದರೂ ನಾಳೆಯಾದರೂ ಸಮಸ್ಯೆ ಬಂದೇ ಬರುತ್ತೆ ಎಂಬ ಆಲೋಚನೆ ಅವನ ಮನಸ್ಸಿಗೆ ಬರಬೇಕಾಗಿತ್ತು. ಹಿಂದೆ ಮುಂದೆ ಆಲೋಚನೆ ಮಾಡದೆ ನಿನ್ನ ಮೇಲೆ ಕಣ್ಣಿಟ್ಟರೆ ಅದನ್ನ ನೋಡ್ಕೊಂಡು ಇರೋದಕ್ಕೆ ಸಾಧ್ಯನಾ? ಬಡವ ಯಾವತ್ತೂ ಅವನ ಮಟ್ಟದಲ್ಲಿಯೇ ಯೋಚ್ನೆ ಮಾಡ್ಬೇಕು. ಅದು ಬಿಟ್ಟು ಶ್ರೀಮಂತರ ಮನೆಯ ಹುಡುಗಿಯನ್ನ ಪ್ರೀತಿಸಿ ಜೀವನದಲ್ಲಿ ಹಾಯಾಗಿ ಇತೇನೆ ಅಂಥ ಭ್ರಮೆಯಲ್ಲಿ ತೇಲಾಡ್ಲಿಕ್ಕೆ ಹೋದ್ರೆ ಕೆಳಗೆ ಬೀಳೋದು ನಿಶ್ಚಿತ ರಾಜಶೇಖರ್ ತಮ್ಮ ಕೋಪವನ್ನೆಲ್ಲ ಒಂದೊಂದಾಗಿ ತೋರ್ಪಡಿಸಲು ಪ್ರಾರಂಭಿಸಿದರು.

ಹಣ, ಹಣ ಅಂಥ ಸಾಯ್ತಾ ಇದ್ದೀರಲ್ಲ. ಸಾಯುವಾಗ ಅದನ್ನ ಹೊತ್ಕೊಂಡು ಹೋಗ್ತಿರಾ? ಸತ್ತ ನಂತರವೂ ಉಳಿಯೋದು ಪ್ರೀತಿ, ವಿಶ್ವಾಸ ಮಾತ್ರ. ಶ್ರೀಮಂತ ಮನೆತನದ ಹುಡುಗನನ್ನ ಮದ್ವೆಯಾದರೆ ನಾನು ಸುಖವಾಗಿತಿನಿ ಅಂತ ನೀವಂದು ಕೊಂಡರೆ ಅದು ನಿಮ್ಮ ಭ್ರಮೆ. ಅಭಿಮನ್ಯುವನ್ನು ನಾನು ಮದ್ವೆಯಾದರೆ ನೀವು ಕಳೆದುಕೊಳ್ಳುವಂತದ್ದೇನು ಇಲ್ಲ. ಅವನಿಗಿಂತ ಒಳ್ಳೆಯ ಹುಡುಗ ಹುಡುಕಿದರೂ ಸಿಗೋದಿಲ್ಲ. ಒಂದ್ವೇಳೆ ಸಿಕ್ಕಿದರೂ ಕೂಡ ನನ್ಗೆ ಅವಶ್ಯಕತೆ ಇಲ್ಲ. ಮನಸ್ಸು, ದೇಹ ಏನಿದ್ದರೂ ಅಭಿಮನ್ಯುವಿಗೆ ಮಾತ್ರ ಮುಡಿಪು. ನೀವು ಈ ಮದ್ವೆಗೆ ಒಪ್ಪಿಗೆ ಕೊಡದಿದ್ರೆ ನಾವು ನಮ್ಮ ಹಾದಿ ತುಳಿಯ್ತೇವೆ. ಧೈರ್ಯಮಾಡಿ ಧ್ವನಿ ಏರಿಸಿ ಮಾತನಾಡಿದಳು.

ಏ… ಹುಚ್ಚಿ. ನಿನ್ಗೆ ಪ್ರೀತಿಯ ಹುಚ್ಚು ಹಿಡ್ಕೊಂಡಿದೆ. ಅದ್ಕ್ಕೆ ಬಾಯಿಗೆ ಬಂದಹಾಗೆ ಮಾತಾಡ್ತಾ ಇದ್ದೀಯ. ಅಭಿಮನ್ಯು ಏನು ಸಾಕ್ಷಾತ್ ಶ್ರೀಕೃಷ್ಣ ಪರಮಾತ್ಮ ಅಂದುಕೊಂಡಿದ್ದೀಯ?. ಯಾವ ಹುತ್ತದಲ್ಲಿ ಯಾವ ಹಾವು ಇರುತ್ತೆ ಅಂತ ಹೇಳೋದಕ್ಕೆ ಸಾಧ್ಯ ಇಲ್ಲ. ಕೈ ಹಾಕಿದಾಗ ಮಾತ್ರ ಅದರ ಅನುಭವ ಆಗುತ್ತೆ. ನೀನು ಈಗ ಹುತ್ತದೊಳಗೆ ಕೈ ಹಾಕುವ ಪ್ರಯತ್ನ ಮಾಡ್ತಾ ಇದ್ದೀಯ. ಪ್ರೀತಿ, ಪ್ರೇಮದ ಗುಂಗಿನಲ್ಲಿರುವಾಗ ಎಲ್ಲರು ಎಲ್ಲರನ್ನೂ ಚೆನ್ನಾಗಿಯೇ ನೋಡ್ಕೋತ್ತಾರೆ. ಸಂಸಾರದ ನೌಕೆ ಮುನ್ನಡೆಸುವ ಜವಾಬ್ದಾರಿ ಹೆಗಲ ಮೇಲೆ ಬಂದು ಬಿದ್ದಾಗ ಪ್ರೀತಿ, ಪ್ರೇಮವನ್ನೆಲ್ಲ ಕಸದ ಬುಟ್ಟಿಗೆ ಎಸೆದುಬಿಡ್ತಾರೆ. ಸಂಸಾರ ನಡೆಸೋದೇನು ಮಕ್ಕಳಾಟ ಅಂಥ ತಿಳ್ಕೊಂಡಿದ್ದೀರಾ? ಮದುವೆಯಾಗಿ ಒಂದೆರಡು ವರ್ಷ ಕಳೆಯುವಷ್ಟರೊಳಗೆ ಪ್ರೀತಿ, ವಾತ್ಸಲ್ಯ ಕಡಿಮೆಯಾಗಿ ಅಸಮಾಧಾನದ ಹೊಗೆ ಮನೆ ತುಂಬ ದಟ್ಟವಾಗಿ ಹರಡಿಕೊಂಡು ಉಸಿರುಗಟ್ಟಿದ ವಾತಾವರಣದಲ್ಲಿ ಬದುಕು ನಡೆಸಲು ಸಾಧ್ಯವಾಗದೆ ಇಬ್ಬರು ಬೇರಾಗುವುದರಲ್ಲಿ ಸಂಶಯವೇ ಇಲ್ಲ ವೈವಾಹಿಕ ಜೀವನದ ಬಗ್ಗೆ ಸುಂದರ ಕಲ್ಪನೆಗಳನ್ನು ಕಟ್ಟಿಕೊಂಡಿದ್ದ ಅಕ್ಷರಳ ಕನಸುಗಳಿಗೆ ಕಲ್ಲೆಸೆಯುವ ಪ್ರಯತ್ನ ಮಾಡಿದರು.

ಅಪ್ಪ, ನೀವು ಏನೇನೋ ಕಲ್ಪನೆ ಮಾಡ್ಕೊಂಡು ಹುಚ್ಚುಚ್ಚಾಗಿ ಮಾತಾಡ್ಬೇಡಿ. ಅದನ್ನ ಕೇಳ್ಕೊಂಡು ಇರೋದಕ್ಕೆ ನನ್ಗೆ ಇಷ್ಟ ಇಲ್ಲ. ನನ್ಗೂ ಕೂಡ ಆಲೋಚನೆ ಮಾಡಿ ನಿರ್ಧಾರ ಕೈಗೊಳ್ಳುವಷ್ಟು ಬುದ್ಧಿ ದೇವರು ಕೊಟ್ಟಿದ್ದಾನೆ. ಮದ್ವೆಯಾಗಿ ಸಾಕಷ್ಟು ವರ್ಷಗಳೇ ಕಳೆದರೂ ಕೂಡ ನೀವಿಬ್ಬರು ಒಟ್ಟಿಗೆ ಜೀವನ ನಡೆಸ್ತಾ ಇಲ್ವ? ನಿಮ್ಮ ಸಂಸಾರದಲ್ಲಿ ಯಾಕೆ ಅಸಮಾಧಾನದ ಹೊಗೆ ಆವರಿಸಿಕೊಳ್ಳಲಿಲ್ಲ? ನಮ್ಮಿಬ್ಬರ ಸಂಸಾರದಲ್ಲಿ ಅಸಮಾಧಾನದ ಹೊಗೆ ಕಾಣಿಸಿಕೊಂಡ್ರೆ ಅದನ್ನ ಹೇಗೆ ನಿಯಂತ್ರಣಕ್ಕೆ ತಬೇಕೂಂತ ನನ್ಗೆ ಚೆನ್ನಾಗಿ ಗೊತ್ತಿದೆ. ಜೀವನದಲ್ಲಿ ಸೋಲು-ಗೆಲುವು ಸಹಜ. ಪ್ರಯತ್ನ ಇರುವ ಕಡೆ ಸೋಲು-ಗೆಲುವು ಇದ್ದೇ ಇರುತ್ತೆ. ಪ್ರಯತ್ನ ಪಡದೆ ಇದ್ರೆ ಅವರೆಡೂ ನಮ್ಮ ಬಳಿಗೆ ಸುಳಿಯೋದೇ ಇಲ್ಲ. ಸೋಲನ್ನು ಗೆಲುವಾಗಿಸುವುದೇ ನಿಜವಾದ ಜೀವನ. ಸಂಸಾರದಲ್ಲಿ ಸೋಲು, ಗೆಲುವು ಸಹಜ. ಅದನ್ನ ಸಮಾನವಾಗಿ ಸ್ವೀಕಾರ ಮಾಡಿ ಜೀವನ ನಡೆಸುವ ಮನಸ್ಸು ಇಬೇಕು. ಅಂತಹ ಒಂದು ಬದುಕು ನಡೆಸುವ ಭರವಸೆ ನಮ್ಮಲ್ಲಿ ಇದೆ. ನೀವೇನು ಭಯ ಪಡುವ ಅವಶ್ಯಕತೆ ಇಲ್ಲ.

ಅಪ್ಪ-ಮಗಳ ಮಾತನ್ನು ಸಾಕಷ್ಟು ಹೊತ್ತಿನಿಂದ ಕೇಳುತ್ತಾ ಒಂದೆಡೆ ಕುಳಿತ್ತಿದ್ದ ಲೀಲಾವತಿಗೆ ಮಗಳ ಮಾತು ಕೇಳಿ ಎಲ್ಲಿಲ್ಲದ ಕೋಪ ಬಂತು. ಇಷ್ಟು ವರ್ಷ ಯಾವುದೇ ಕೊರತೆಯಾಗದಂತೆ ಸಾಕಿ ಬೆಳೆಸಿದ್ದಕಾದರೂ ಅಪ್ಪನಿಗೆ ಬೆಲೆ ಕೊಡೋದನ್ನ ಮಗಳು ಕಲಿತುಕೊಂಡಿಲ್ಲವಲ್ಲ ಎಂಬ ವ್ಯಥೆ ಕಾಡಿತು.
ಪ್ರತಿಯೊಂದು ಮಾತಿಗೂ ಎದುರು ಮಾತಾಡ್ತಾ ಇದ್ದೀಯಲ್ಲ? ಅಪ್ಪನಿಗೆ ಸ್ವಲ್ಪನಾದರೂ ಗೌರವ ಕೊಡೋದು ಬೇಡ್ವ? ಅಪ್ಪನಿಗೆ ಬೆಲೆ ಕೊಡೋದಕ್ಕೆ ಗೊತ್ತಿಲ್ದೆ ಇರುವವಳು ಸಂಸಾರ ಹೇಗೆ ನಡೆಸ್ತಾಳೋ…? ಆ ದೇವರೊಬ್ಬನಿಗೆ ಮಾತ್ರ ಗೊತ್ತು! ನಿನ್ನ ಮುದ್ದಾಗಿ ಸಾಕಿದ್ದೇ ದೊಡ್ಡ ತಪ್ಪಾಯ್ತು. ವಯಸ್ಸಿಗೆ ಬಂದಾಗ ಮದ್ವೆ ಮಾಡಿಸಿದ್ರೆ ಇಷ್ಟೆಲ್ಲ ರಾದ್ಧಾಂತ ಆಗ್ತ‌ಇಲಿಲ್ಲ. ಮನೆತನದ ಗೌರವದ ಬಗ್ಗೆ ಸ್ವಲ್ಪನಾದ್ರು ಕಾಳಜಿ ಬೇಡ್ವ? ಈ ವಿಚಾರ ನಿನ್ನಣ್ಣ ಪ್ರೀತಮ್‌ಗೇನಾದ್ರು ಗೊತ್ತಾದ್ರೆ ನಿಮ್ಮಿಬ್ಬರನ್ನ ಜೀವ ಸಹಿತ ಉಳಿಸೋದಿಲ್ಲ ಲೀಲಾವತಿ ಮನದೊಳಗೆ ಹುದುಗಿದ್ದ ಕೋಪವನ್ನೆಲ್ಲ ಹೊರಗೆಡವಿದರು.

ಅಣ್ಣನಿಗೇನು, ಇಡೀ ಪ್ರಪಂಚಕ್ಕೇ ಗೊತ್ತಾದರೂ ನಮ್ಮಿಬ್ರನ್ನ ಏನು ಮಾಡೋದಕ್ಕೆ ಸಾಧ್ಯವಾಗೋದಿಲ್ಲ. ಪೌರುಷ ಪ್ರೀತಮ್‌ನಲ್ಲಿ ಮಾತ್ರ ಇಲ್ಲ. ಎಲ್ಲರಲ್ಲಿಯೂ ಇದೆ. ನೀವಂದುಕೊಂಡಂತೆ ಜೀವ ತೆಗೆಯೋದು ಕೋಳಿ ಕತ್ತನ್ನು ಕುಯ್ದಷ್ಟು ಸುಲಭವಲ್ಲ ಸಿಟ್ಟಿನಲ್ಲಿ ಕುದಿಯಲು ಪ್ರಾರಂಭಿಸಿದಳು.

ಎರಡು ದಿನದ ರಜೆಯಲ್ಲಿ ಹಾಯಾಗಿರುವ ಎಂದು ನಿರ್ಧರಿಸಿ ಬಂದ ಅಕ್ಷರ ಜಗಳದಲ್ಲೇ ಸಮಯ ಕಳೆಯುವಂತಾಯಿತು. ಮನೆಯಲ್ಲಿ ಪ್ರೀತಿಯ ವಿಚಾರ ಅಲ್ಲೋಲಕಲ್ಲೋಲ ಪರಿಸ್ಥಿತಿ ನಿರ್ಮಾಣ ಮಾಡಿತು. ಮನೆಯಲ್ಲಿ ಇಷ್ಟೆಲ್ಲ ರಾದ್ಧಾಂತ ಆದರೂ ಅಕ್ಷರ ರಾಜಾಸೀಟ್‌ಗೆ ಹೊರಟು ನಿಂತಳು. ರಾಜಾಸೀಟ್‌ಗೆ ಆಕೆ ಹೋಗುತ್ತಿರುವುದೇ ಅಭಿಮನ್ಯುವನ್ನು ಭೇಟಿಯಾಗೋದಕ್ಕೆ ಎಂಬ ವಿಚಾರ ತಿಳಿದಿರುವ ಲೀಲಾವತಿ ಮನೆಯ ಹೊರಗೆ ಕಾಲಿಡಲು ಅವಕಾಶ ನೀಡಲಿಲ್ಲ. ಅಭಿಮನ್ಯು ಎಂಬ ಹೆಸರೇ ರಾಜಶೇಖರ್, ಲೀಲಾವತಿಗೆ ಅಸಹ್ಯ ಅನ್ನಿಸತೊಡಗಿತು.

ಅಭಿಮನ್ಯುವನ್ನು ನೋಡದಿದ್ದರೇನು ನಿನ್ನ ಜೀವ ಹೋಗೋದಿಲ್ಲ. ಮನೆಯಲ್ಲಿಯೇ ಬಿದ್ದಿರು. ಮೈಸೂರಿಗೂ ಹೋಗುವ ಅವಶ್ಯಕತೆನೂ ಇಲ್ಲ. ಇಷ್ಟು ವರ್ಷ ಕೆಲ್ಸ ಮಾಡಿದ್ದು ಸಾಕು. ನಾವು ನೋಡಿದ ಹುಡುಗನೊಂದಿಗೆನೇ ನಿನ್ನ ಮದ್ವೆ. ಈ ನಿರ್ಧಾರ ಬದಲಾಯಿಸೋದಕ್ಕೆ ಸಾಧ್ಯನೇ ಇಲ್ಲ ಗುಡುಗಿದರು ರಾಜಶೇಖರ್.

ನನ್ಗೆ ಹುಡುಗನ ಹುಡುಕುವ ವ್ಯರ್ಥಪ್ರಯತ್ನ ಕೈ ಬಿಟ್ಟು ಅಣ್ಣನಿಗೊಂದು ಒಳ್ಳೆಯ ಹುಡುಗಿಯನ್ನ ಹುಡುಕುವ ಪ್ರಯತ್ನ ಮಾಡಿ. ನನ್ನ ಬಗ್ಗೆ ಯಾರೂ ಕೂಡ ತಲೆ ಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ನನ್ನ ಮದುವೆಯನ್ನ ನನ್ನ ಖರ್ಚಿನಲ್ಲಿಯೇ ಮಾಡಿಕೊಳ್ಳುತ್ತೇನೆ. ಯಾರ ಸಹಕಾರವೂ ನನ್ಗೆ ಬೇಕಾಗಿಲ್ಲ ಮತ್ತೆ ಮತ್ತೆ ತನ್ನ ಕೋಪ ತೋರ್ಪಡಿಸಿದಳು.

ನೀನು ಮದ್ವೆಯಾಗಿ ಹೇಗೋ ಹಾಳಾಗಿ ಹೋಗ್ಲಿ ಅಂಥ ಸುಮ್ನೆ ಇಬೊಹುದು. ಆದ್ರೆ ಈ ಸಮಾಜ ಸುಮ್ನೆ ಇಬೇಕಲ್ಲ? ಅಂತರ್ಜಾತಿ ವಿವಾಹ ಅಂದಕ್ಷಣ ಎಲ್ಲರು ಸೇರಿ ನಮ್ಮ ಕುಟುಂಬದ ಮಾನ, ಮರ್ಯಾದೆಗಳನ್ನೆಲ್ಲ ಬೀದಿಯಲ್ಲಿ ಹರಾಜು ಹಾಕಿ ಬಿಡ್ತಾರೆ. ಮಾನ, ಮರ್ಯಾದೆ ಕಳ್ಕೊಂಡು ಬದುಕಿರೋದಕ್ಕಿಂತ ಸಾಯೋದೇ ಮೇಲು. ನೀನು ಒಂದ್ವೇಳೆ ಅಭಿಮನ್ಯು ವನ್ನು ಮದ್ವೆಯಾದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುವುದು ನಿಶ್ಚಿತ. ನಿನ್ಗೆ ಅಭಿಮನ್ಯು ಮುಖ್ಯನೋ ಅಥವಾ ನಾವು ಮುಖ್ಯನೋ ಈಗ್ಲೇ ನಿರ್ಧಾರ ಮಾಡು ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆವೊಡ್ಡಿ ಮಗಳ ಮನವೊಲಿಸಿ ತಾವು ನೋಡಿದ ಹುಡುಗನೊಂದಿಗೆ ಮದುವೆ ಮಾಡಿಸುವ ಆತುರದಲ್ಲಿದ್ದರು ಲೀಲಾವತಿ.

ಮಾತಿನ ಮೂಲಕ ನನ್ನ ಕಟ್ಟಿ ಹಾಕೋದಕ್ಕೆ ಪ್ರಯತ್ನ ಮಾಡ್ಬೇಡಿ. ನನ್ಗೆ ಎಲ್ಲರೂ ಮುಖ್ಯನೇ. ನೀವಿಬ್ಬರು ನನ್ಗೆ ಎಷ್ಟು ಮುಖ್ಯನೋ ಅಷ್ಟೇ ಅಭಿಮನ್ಯು ಕೂಡ. ನೀವಿಬ್ಬರು ಪ್ರೀತಿಸಿ ಮದ್ವೆಯಾದರೂ ಕೂಡ ನಮ್ಮಿಬ್ಬರ ಪ್ರೀತಿಯನ್ನ ಯಾಕೆ ಅರ್ಥ ಮಾಡಿಕೊಳ್ತಾ ಇಲ್ಲ. ಮನೆಯ ಹಿರಿಯರು ನಿಮ್ಮಿಬ್ಬರ ಮದುವೆಗೆ ವಿರೋಧ ವ್ಯಕ್ತಪಡಿಸಿದಾಗ ಅಪ್ಪ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆವೊಡ್ಡಿ ತಮ್ಮ ಆಸೆಯನ್ನ ಈಡೇರಿಸಿಕೊಂಡರು. ಹಿರಿಯರ ಮಾತಿಗೆ ಬೆಲೆ ಕೊಡದೆ ಅಂದು ನೀವು ಮದ್ವೆಯಾಗಿ ಇದೀಗ ನಮ್ಮ ಪ್ರೀತಿಗೆ ಅಡ್ಡಿ ಪಡಿಸೋದಕ್ಕೆ ಸ್ವಲ್ಪನಾದರೂ ನಾಚಿಕೆಯಾಗೋದಿಲ್ವ? ಅಪ್ಪ, ಅಮ್ಮ ಹಾಕಿಕೊಟ್ಟ ಹಾದಿಯಲ್ಲಿಯೇ ನಾನು ಕೂಡ ಮುನ್ನಡೆಯುತ್ತಾ ಇರೋದು. ಒಂದ್ವೇಳೆ ನೀವೇನಾದರು ಅಭಿಮನ್ಯುವಿನೊಂದಿಗೆ ಮದ್ವೆ ಮಾಡ್ಕೊಳ್ಳೋದಕ್ಕೆ ಅವಕಾಶ ಕೊಡದಿದ್ರೆ ನಾನು ಆತ್ಮಹತ್ಯೆ ಮಾಡಿಕೊಳ್ಳೋದು ನಿಶ್ಚಿತ. ಇದು ಕೇವಲ ಬೆದರಿಕೆ ಅಲ್ಲ. ನನ್ನ ನಿರ್ಧಾರ ಲೀಲಾವತಿ ಒಡ್ಡಿದ ಆತ್ಮಹತ್ಯೆ ಬೆದರಿಕೆಗೆ ಪ್ರತಿಯಾಗಿ ಅಕ್ಷರ ಕೂಡ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆವೊಡ್ಡಿ ಇಬ್ಬರನ್ನು ದಂಗುಬಡಿಸಿದಳು.

ಅಕ್ಷರಳ ಪಾಲಿಗೆ ಅಪ್ಪ-ಅಮ್ಮ ಯವ್ವನದ ಕಾಲದಲ್ಲಿ ಮಾಡಿದ್ದು ತಪ್ಪು ಅನ್ನಿಸಲಿಲ್ಲ. ಹಾಗಾಗಿ ತಾನು ಮಾಡುತ್ತಿರುವುದು ಕೂಡ ತಪ್ಪು ಅನ್ನಿಸಲಿಲ್ಲ. ಪ್ರೀತಿಸಿ ವಿವಾಹವಾಗುವುದರಲ್ಲಿ ತಪ್ಪೇನಿದೆ? ಅಪ್ಪ-ಅಮ್ಮ ಪ್ರೀತಿಸಿ ಮದುವೆಯಾಗಬಹುದು. ಆದರೆ, ಮಕ್ಕಳು ಮಾತ್ರ ಪ್ರೀತಿಸಿ ಮದುವೆಯಾಗಬಾರದು. ಇದು ಯಾವ ಸೀಮೆಯ ನ್ಯಾಯ? ಅಂದುಕೊಂಡಳು. ಆದರೆ, ರಾಜಶೇಖರ್-ಲೀಲಾವತಿ ದಂಪತಿಯ ಚಿಂತನೆಯ ಧಾಟಿಯೇ ಬೇರೆ. ನಾವಿಬ್ಬರು ಪ್ರೀತಿಸಿ ಮದುವೆಯಾಗಿದ್ದರೂ ಕೂಡ ನಮ್ಮಿಬ್ಬರದ್ದು ಒಂದೇ ಜಾತಿ. ಸರಿಸಮಾನವಾದ ಅಂತಸ್ತು. ಹೀಗಾಗಿ ಮದುವೆಯಾಗಿರುವುದರಲ್ಲಿ ತಪ್ಪೇನು ಇಲ್ಲ ಎಂಬಂತೆ ಸಮರ್ಥಿಸಿಕೊಂಡರು.

ಅಭಿಮನ್ಯು ತನ್ನ ಬಾಳಸಂಗಾತಿಯೆಂದು ಆಕೆ ಎಂದೋ ನಿರ್ಧರಿಸಿಯಾಗಿತ್ತು. ಪ್ರೀತಿಯ ಹಾದಿಯಲ್ಲಿ ಆಕೆ ಬಹುದೂರ ಸಾಗಿಯಾಗಿತ್ತು. ಇನ್ನು ಹಿಂತಿರುಗುವ ಪ್ರಶ್ನೆಯೇ ಆಕೆಯ ಮುಂದಿಲ್ಲ. ಹೀಗಾಗಿ ಅಪ್ಪ-ಅಮ್ಮ ಏನೇ ಹೇಳಿದರೂ, ಎಷ್ಟೇ ಮನವೊಲಿಸುವ ಪ್ರಯತ್ನ ಮಾಡಿದರೂ ಕೂಡ ಅದು ನೀರಿನಲ್ಲಿ ಹೋಮ ಮಾಡಿದಂತೆ ವ್ಯರ್ಥವಾಯಿತು. ಒಂದೆಡೆ ರಾಜಶೇಖರ್ ಮಗಳಿಗೆ ಬಾಯಿಗೆ ಬಂದಂತೆ ಬೈಯ್ಯುತ್ತಿದ್ದರೆ, ಮತ್ತೊಂದೆಡೆ ಅಕ್ಷರ ತನ್ನ ಮನದೊಳಗೆ ಅಭಿಮನ್ಯುವನ್ನು ಕರೆತಂದು ಪ್ರೇಮ ಸಾಮ್ರಾಜ್ಯದಲ್ಲಿ ವಿಹರಿಸತೊಡಗಿದಳು. ಎಷ್ಟೇ ಕೂಗಾಡಿದರೂ, ಬೈಯ್ದರೂ ಆಕೆಗೆ ನಾಟುತ್ತಿರಲಿಲ್ಲ. ಅಷ್ಟಕ್ಕೂ ಅಭಿಮನ್ಯುವಿನಲ್ಲೇನು ಕೊರತೆ ಇದೆ? ಒಂದಷ್ಟು ಬಡತನ, ಜಾತಿ ಬೇರೆ ಇರಬಹುದು. ಅದು ನನಗೆ ದೊಡ್ಡ ಸಮಸ್ಯೆಯೇ ಅಲ್ಲ. ಪ್ರೀತಿ ಹೃದಯಲ್ಲಿ ಯಾವಾಗ, ಯಾವ ಸಂದರ್ಭ, ಯಾರ ಮೇಲೆ ಹುಟ್ಟಿಕೊಳ್ಳುತ್ತದೋ ಹೇಳೋದಕ್ಕೆ ಸಾಧ್ಯವಿಲ್ಲ. ನಮ್ಮ ಜಾತಿಯ ಹುಡುಗರನ್ನು ಕಂಡರೆ ಪ್ರೀತಿ ಹುಟ್ಟಬಹುದು ಅಥವಾ ಹುಟ್ಟದೇ ಇರಬಹುದು. ಅದು ಬೇರೆ ವಿಚಾರ. ಆದರೆ, ನನಗೆ ಮೊದಲು ಪ್ರೀತಿ ಹುಟ್ಟಿದ್ದು ಅಭಿಮನ್ಯುವಿನ ಮೇಲೆ. ಆ ಪ್ರೀತಿಯನ್ನು ಇದುವರೆಗೂ ಜೋಪಾನವಾಗಿ ಕಾಪಾಡಿಕೊಂಡು ಬಂದಿದ್ದೇನೆ. ಹೃದಯದಲ್ಲಿ ಮೊಳಕೆಯೊಡೆದ ಪ್ರೀತಿ ಬೃಹದಾಕಾರವಾಗಿ ಬೆಳೆದು ನಿಂತಿದೆ. ಅದನ್ನು ತುಂಡರಿಸುವ ಪ್ರಯತ್ನ ಮಾಡೋದಿಲ್ಲ ಎಂದು ಮತ್ತೆ ಮತ್ತೆ ತನ್ನೊಳಗೆ ತಾನೇ ಹೇಳಿಕೊಂಡಳು.

ಮಗಳು ಮಾತು ಮಾತಿಗೂ ಎದಿರೇಟು ನೀಡುತ್ತಿರುವುದನ್ನು ಕಂಡು ರಾಜಶೇಖರ್ ಕಂಗಾಲಾದರೂ ತೋರ್ಪಡಿಸಿಕೊಳ್ಳಲಿಲ್ಲ. ಇನ್ನು ಈಕೆ ನಮ್ಮ ಕೈಗೆ ಸಿಗೋದಿಲ್ಲ. ಹಾಗಾಂತ ಸುಮ್ಮನೆ ಇರೋದಕ್ಕೂ ಸಾಧ್ಯ ಇಲ್ಲ. ಕೊನೆಯವರೆಗೂ ಪ್ರಯತ್ನ ನಡೆಸಿ ನೋಡುವ ಪ್ರಯತ್ನ ಫಲಿಸಿದರೂ ಫಲಿಸಬಹುದು! ಎಂಬ ಆಶಾಭಾವನೆ ರಾಜಶೇಖರ್ ಮನದೊಳಗೆ ಮೊಳಕೆಯೊಡೆದೊಡನೆ ಮಗಳ ವಿರುದ್ಧ ಮತ್ತೆ ರೇಗಾಡಲು ಪ್ರಾರಂಭಿಸಿದರು.

ಹಾಳಾದ ಹುಡ್ಗಿ. ಮಾನ, ಮರ್ಯಾದೆ ಕಳ್ಕೊಂಡು ಇರೋದಕ್ಕಿಂತ ಎಲ್ಲಾದ್ರು ಹೋಗಿ ಬಾವಿಗೆ ಬಿದ್ದು ಸಾಯಿ. ಮಗಳು ಸತ್ತೋದ್ಲು ಅಂಥ ಕಣ್ಣೀರು ಸುರಿಸಿ ನೆಮ್ಮದಿಯ ಜೀವನ ನಡೆಸ್ತೇವೆ. ಇಂಥ ಮಗಳು ಬದುಕಿದ್ದು ಏನು ಸುಖ? ನಿನ್ನ ಪ್ರೀತಿಯನ್ನ ಜೋಪಾನವಾಗಿ ಇಟ್ಕೊ. ಅದನ್ನ ಎಲ್ಲಿ, ಯಾವಾಗ, ಹೇಗೆ ತುಂಡರಿಸಬೇಕೂಂತ ನನ್ಗೆ ಚೆನ್ನಾಗಿ ಗೊತ್ತು. ಇದುವರೆಗೆ ಅಪ್ಪನ ಒಂದು ಮುಖ ಮಾತ್ರ ನೋಡಿದ್ದೀಯ. ಇನ್ನೊಂದು ಮುಖ ನೋಡುವ ದುಸ್ಸಾಹಸಕ್ಕೆ ಕೈ ಹಾಕ್ಬೇಡ. ಇಬ್ಬರನ್ನ ಜೀವ ಸಹಿತ ಉಳಿಸೋದಿಲ್ಲ ಮಗಳನ್ನು ಬೆದರಿಕೆಯ ಮಾತುಗಳಲ್ಲಿ ಬಂಧಿಸಲು ಮುಂದಾದರೂ ಕೂಡ ಅಕ್ಷರಳ ಮೊಗದಲ್ಲಿ ಆತಂಕವೆಂಬುದು ಕಾಣಿಸಿಕೊಳ್ಳಲಿಲ್ಲ.

ಏನಾದರು ಹೇಳ್ಕೊಂಡು ಸಾಯ್ಲಿ. ಆದಷ್ಟು ಬೇಗ ಇಲ್ಲಿಂದ ತೊಲಗಿದರೆ ಸಾಕು. ನಮ್ಮ ಪ್ರೀತಿಗೆ ಮಂಗಳ ಹಾಡೋದು ಅಪ್ಪನ ಪಾಲಿಗೆ ಕೇವಲ ತಿರುಕನ ಕನಸಾಗಿ ಉಳಿಯೋದು ನಿಶ್ಚಿತ. ಅಪ್ಪ ಈ ರೀತಿ ಕೂಗಾಡುತ್ತಿರುವುದರಲ್ಲಿ ತಪ್ಪೇನು ಇಲ್ಲ. ಮಗಳ ಭವಿಷ್ಯ ಎಲ್ಲಿ ಹಾಳಾಗಿ ಹೋಗುತ್ತದೆಯೋ ಎಂಬ ಭಯ ಅವರಿಗೆ. ಆದರೆ, ಅವರ ಆಸೆ ಈಡೇರಿಸಲು ಮುಂದಾದರೆ ನನ್ನ ಆಸೆಗಳೆಲ್ಲ ಮಣ್ಣುಪಾಲಾಗಿ ಹೋಗುವುದು ನಿಶ್ಚಿತ. ಅಭಿಮನ್ಯುವನ್ನು ದೂರ ಮಾಡಿದರೆ ನನ್ನಷ್ಟು ಪಾಪಿ ಈ ಜಗತ್ತಿನಲ್ಲಿ ಮತ್ತೊಬ್ಬಳು ಇರೋದಕ್ಕೆ ಸಾಧ್ಯ ಇಲ್ಲ. ಅಭಿಮನ್ಯುವನ್ನು ಮದುವೆಯಾಗಬೇಕಾಗಿರುವುದು ನನ್ನ ಪಾಲಿನ ಕರ್ತವ್ಯ. ಆ ಕರ್ತವ್ಯವನ್ನು ಈಡೇರಿಸಲೇ ಬೇಕು. ರಜೆ ಮುಗಿದೊಡನೆ ಮನೆಯಿಂದ ಜಾಗ ಖಾಲಿ ಮಾಡಬೇಕು. ಒಂದ್ವೇಳೆ ಮನೆಯಲ್ಲಿ ಬಲವಂತವಾಗಿ ಕೂಡಿ ಹಾಕುವ ಪ್ರಯತ್ನ ಮಾಡಿದರೆ? ಎಂದು ತನ್ನನ್ನು ತಾನೇ ಪ್ರಶ್ನಿಸಿಕೊಂಡು ಕಂಗಾಲಾದಳು. ಕದ್ದು ಓಡಿದರಾಯ್ತು ಎಂಬ ಉತ್ತರವನ್ನು ತಕ್ಷಣವೇ ಹುಡುಕಿಕೊಂಡು ನೆಮ್ಮದಿಯ ನಿಟ್ಟುಸಿರು ಬಿಟ್ಟಳು.

ಬೆದರಿಕೆವೊಡ್ಡಿದಾಗ ಮಗಳಿಂದ ಯಾವುದೇ ಪ್ರತ್ಯುತ್ತರ ಬಾರದೆ ಇದ್ದಾಗ ರಾಜಶೇಖರ್ ಮನದೊಳಗೆ ದುಃಖ, ಸಂತೋಷ ಎರಡು ಒಟ್ಟಿಗೆ ಏಕಕಾಲಕ್ಕೆ ಪ್ರವೇಶಿಸಿತು. ಮಗಳು ತನ್ನ ವಾಗ್ದಾಳಿಗೆ ಹೆದರಿ ತಾನು ಹೇಳಿದಂತೆ ಕೇಳಬಹುದೇನೋ ಎಂಬ ವಿಚಾರ ಅವರ ಸಂತೋಷಕ್ಕೆ ಕಾರಣವಾದರೆ, ಮೌನಕ್ಕೆ ಶರಣಾದವಳು ಎಲ್ಲಾದರು ಅಭಿಮನ್ಯು ಜೊತೆ ಓಡಿ ಹೋಗೋದಕ್ಕೆ ಆಲೋಚನೆ ಮಾಡುತ್ತಾ ಇದ್ದಾಳೋ ಏನೋ ಎಂಬ ವಿಚಾರ ದುಃಖಕ್ಕೆ ಕಾರಣವಾಯಿತು. ಯಾವುದಕ್ಕೂ ಮಗಳ ಮೇಲೆ ಒಂದು ಕಣ್ಣಿಟ್ಟಿರುವುದು ಒಳ್ಳೆಯದು. ಯಾವುದೇ ಕಾರಣಕ್ಕೂ ಮಗಳು ಮನೆಯ ಹೊಸ್ತಿಲು ದಾಟಿ ಹೋಗದಂತೆ ನೋಡಿಕೊಳ್ಳಬೇಕು. ಈ ಸಂದರ್ಭದಲ್ಲಿ ಎಡವಿದರೆ ಮನೆಯ ಮಾನ, ಮರ್ಯಾದೆಯೆಲ್ಲ ಬೀದಿಪಾಲಾಗೋದು ನಿಶ್ಚಿತ ಅಂದುಕೊಂಡರು. ಯಾವುದಕ್ಕೂ ಇನ್ನೊಂದಷ್ಟು ಹೊತ್ತು ಮಾತಾಡಿ ಮಗಳ ಮನಸ್ಸು ಬದಲಾಯಿಸೋದು ಸೂಕ್ತ ಎಂದು ನಿರ್ಧರಿಸಿ ಮುಂದುವರೆದರು.

ನೀನು ಅಭಿಮನ್ಯುವನ್ನು ಮದ್ವೆಯಾಗೋದೇನೋ ಸರಿ. ಆದ್ರೆ ಮದ್ವೆಯಾದ ನಂತರ ಅವನು ನಿನ್ಗೆ ಕೈಕೊಟ್ರೆ ಏನು ಮಾಡ್ತಿಯ? ಒಂದ್ವೇಳೆ ಅವನ ಆರ್ಥಿಕ ಪರಿಸ್ಥಿತಿ ಹದಗೆಟ್ಟು ಜೀವನಾಧರಕ್ಕಿರುವ ಅಂಗಡಿಯನ್ನೇ ಮಾರುವ ಪರಿಸ್ಥಿತಿ ನಿರ್ಮಾಣವಾದರೆ ಏನು ಮಾಡ್ತಿಯ? ಆಗ ನೀನು ಬೀದಿಯಲ್ಲಿ ಬಂದು ನಿತ್ಕೋ ಬೇಕಾಗುತ್ತೆ. ಇಂತಹ ಸಾಕಷ್ಟು ಘಟನೆಗಳನ್ನ ನನ್ಗೆ ನೋಡಿ ನೋಡಿ ಸಾಕಾಗಿದೆ. ಕೊನೆಗೆ ಮೋಸಹೋದ ಹೆಣ್ಮಕ್ಕಳಿಗೆ ಆಶ್ರಯ ನೀಡೋದು ತವರು ಮನೆಯೇ ಹೊರತು ಬೇಯಾರೂ ಅಲ್ಲ. ತವರು ಮನೆಯಲ್ಲಿ ಆಶ್ರಯ ಸಿಗದಿದ್ರೆ ಫುಟ್‌ಪಾತೇ ಗತಿ. ಅದನ್ನ ತಿಳ್ಕೋ ಮೂದೇವಿ. ರಾಜಶೇಖರ್ ಮನದೊಳಗಿದ್ದ ನೋವುಗಳು ಆಕ್ರೋಶವಾಗಿ ಸ್ಫೋಟಗೊಂಡಿತು.

ಇಂತಹ ಕಲ್ಪನೆ ಅಥವಾ ನಿದರ್ಶನಗಳನ್ನ ನೂರಾರು ನೀಡ್ಬೊಹುದು. ಆದ್ರೆ ಅದು ಎಲ್ಲರ ಜೀವನಕ್ಕೆ ಅನ್ವಯಿಸೋದಿಲ್ಲ. ಜೀವನದ ವಾಸ್ತವತೆಗಳೇ ಬೇರೆ. ಪ್ರೇಮವಿವಾಹವಾದವರೆಲ್ಲ ಹಾಳಾಗಿ ಹೋಗಿದ್ದಾರೆ ಎಂದು ಯಾವ ಮುಠ್ಠಾಳ ನಿಮ್ಗೆ ಹೇಳಿದ್ದು? ನೀವಿಬ್ರು ಪ್ರೀತಿಸಿ ಮದ್ವೆಯಾಗಿ ಸುಖವಾಗಿಲ್ವ? ಗುರು, ಹಿರಿಯರ ಸಹಮತದೊಂದಿಗೆ ಸಪ್ತಪದಿ ತುಳಿದವರಲ್ಲಿ ಮನಸ್ತಾಪ ಉಂಟಾಗಿ ಬೇರ್ಪಟ್ಟ ಘಟನೆಗಳು ಏಕೆ ನಿಮ್ಮ ಕಣ್ಣಿಗೆ ಕಾಣಿಸ್ತಾ ಇಲ್ಲ? ಪ್ರೀತಿಯಲ್ಲಿರುವ ಒಳ್ಳೆಯ ವಿಚಾರಗಳನ್ನೆಲ್ಲ ಬಚ್ಚಿಟ್ಟು ಕೇವಲ ನಿಮ್ಮ ಸ್ವಾರ್ಥಕೋಸ್ಕರ ಲೋಪದೋಷಗಳನ್ನ ಮಾತ್ರ ಎತ್ತಿ ತೋರಿಸೋದು ನನ್ಗೆ ಸರಿ ಕಾಣಿಸ್ತಾ ಇಲ್ಲ. ನಿಮ್ಮ ಸ್ವಾರ್ಥಕ್ಕೆ ನಾನು ಬಲಿಪಶು ಆಗೋದಕ್ಕೆ ನನ್ಗೆ ಇಷ್ಟ ಇಲ್ಲ. ಅಭಿಮನ್ಯು ಪ್ರೀತಿಸೋದಕ್ಕೆ ಅರ್ಹನಲ್ಲದಿದ್ದರೆ ಅವನಿಂದ ನಾನೇ ದೂರ ಸರಿಯ್ತಾ ಇದ್ದೆ. ಅದ್ರೆ ಅವನಿಂದ ದೂರ ಸರಿಯುವುದಕ್ಕೆ ಕಾರಣಗಳೇ ಇಲ್ಲ. ಕಣ್ಣು ಮುಚ್ಚಿ ಆಲೋಚಿಸಿದಾಗೆಲ್ಲ ಕಾಣುವುದು ಅವನ ನಿರ್ಮಲವಾದ ಪ್ರೀತಿ ಮಾತ್ರ. ಅಂತಹವನನ್ನ ಹೇಗೆತಾನೆ ದೂರ ಮಾಡ್ಲಿ? ಪ್ರೀತಿ ಅನ್ನೋದು ‘ನಿರ್ಮಲ ಎಂಬ ಮಾತಿದೆ. ನಾನು ಅವನಿಗೆ ಮೋಸ ಮಾಡಿ ಆ ಮಾತಿಗೆ ಅಪವಾದ ಆಗೋದಕ್ಕೆ ಇಷ್ಟವಿಲ್ಲ್ಲ ಎಂದು ತಾನು ಮುಂದೆ ತುಳಿಯಲಿರುವ ಹಾದಿಯನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದಳು.

ನೀನು ಹೇಳೋ ಮಾತೇನೋ ಸರಿ ಇದೆ. ಆದ್ರೆ ಅದನ್ನ ಒಪ್ಪಿಕೊಳ್ಳೋದಕ್ಕೆ ಸಾಧ್ಯ ಇಲ್ಲ. ಜೀವನಪೂರ್ತಿ ಸತ್ಯ, ನಿಷ್ಠೆಯಿಂದ ನಡ್ಕೊಂಡ್ರೆ ಸತ್ಯಹರಿಶ್ಚಂದ್ರನಿಗೆ ಆದ ಸ್ಥಿತಿ ನಮಗಾಗುತ್ತೆ ಅಷ್ಟೆ. ಜೀವನದಲ್ಲಿ ಕೆಲವೊಂದು ಸಲ ಮತ್ತೊಬ್ಬರಿಗೋಸ್ಕರ ನಾವೊಂದಷ್ಟು ತ್ಯಾಗ ಮಾಡ್ಬೇಕು. ನಿನ್ನ ಆ ಒಂದು ತ್ಯಾಗದಿಂದ ಅಭಿಮನ್ಯುವಿನ ಮನಸ್ಸಿಗೆ ಮಾತ್ರ ನೋವಾಗ್ಬೊಹುದು. ಆದ್ರೆ ನೀನು ಆ ತ್ಯಾಗಕ್ಕೆ ಸಿದ್ಧವಾಗದಿದ್ರೆ ನಮ್ಮ ಮನೆತನದ ಅದೆಷ್ಟೋ ಮಂದಿ ದುಃಖದಲ್ಲಿ ಮುಳುಗುತ್ತಾರೆ. ನಿನ್ನದೊಂದು ಸಣ್ಣ ತ್ಯಾಗ ನಮ್ಮ ಕುಟುಂಬದ ಸಂತೋಷವನ್ನ ನಿರ್ಧರಿಸುತ್ತೆ. ನಿನ್ಗೆ ಅಭಿಮನ್ಯು ಬಳಿ ಈ ವಿಚಾರ ಹೇಳೋದಕ್ಕೆ ಸಂಕೋಚವಾದರೆ ನಾನೇ ಎಲ್ಲವನ್ನು ಹೇಳಿ ಅವನನ್ನ ಒಪ್ಪಿಸ್ತೇನೆ. ನಮ್ಮ ನೋವು ಹೇಳಿಕೊಂಡ್ರೆ ಅವನಿಗೂ ಎಲ್ಲಾ ಅರ್ಥ ಆಗುತ್ತೆ. ನನ್ಗೆ ಆ ವಿಶ್ವಾಸ ಇದೆ. ಆದ್ರೆ ನೀನು ಅದಕ್ಕೆ ಮನಸ್ಸು ಮಾಡ್ಬೇಕಷ್ಟೆ ರಾಜಶೇಖರ್ ಒಂದು ಕ್ಷಣ ತಮ್ಮ ಸಿಟ್ಟುಗಳನ್ನೆಲ್ಲ ಬದಿಗಿಟ್ಟು ಮತ್ತೆ ಮಗಳ ಮನಸ್ಸು ಒಲಿಸಿಸುವ ಪ್ರಯತ್ನಕ್ಕೆ ಇಳಿದರು.

ಅಭಿಮನ್ಯು ಮುಂದೆ ಇಂತಹ ಬೇಡಿಕೆ ಇಡೋದು ನಿಮ್ಗೆ ಸರಿ ಅನ್ನಿಸ್ತದಾ? ನಮ್ಮ ಕುಟುಂಬಕೋಸ್ಕರ ಅವನ ಸಂತೋಷಗ ಳನ್ನೇಕೆ ಬಲಿ ತಗೋಬೇಕು? ಅವನು ನನ್ನ ತುಂಬಾ ಪ್ರೀತಿಸ್ತಾ ಇದ್ದಾನೆ. ನಿಮ್ಮ ಬೇಡಿಕೆಗಳಿಗೆ ಒಪ್ಪಿಕೊಳ್ಳೋದಕ್ಕೆ ಸಾಧ್ಯನೇ ಇಲ್ಲ. ವ್ಯರ್ಥ ಕಸರತ್ತು ಮಾಡ್ಬೇಡಿ. ನಮ್ಮ ಪಾಡಿಗೆ ನಮ್ಮನ್ನ ಇರೋದಕ್ಕೆ ಬಿಟ್ಬಿಡಿ. ಎಲ್ಲಾದರು ಹೋಗಿ ಬದುಕು ಕಂಡುಕೊಳ್ತೇವೆ ತನ್ನ ನಿಲುವಿಗೆ ಅಂಟಿಕುಳಿತುಕೊಂಡ ಅಕ್ಷರಳನ್ನು ನೋಡಿ ರಾಜಶೇಖರ್‌ಗೆ ಮತ್ತೆ ಕೋಪ ನೆತ್ತಿಗೇರಿ ಹಿಡಿದು ನಾಲ್ಕು ಬಾರಿಸಿ ಬಿಡುವ ಅನ್ನಿಸಿತು.

ನೀನು ತುಂಬಾ ಬೆಳೆದು ಬಿಟ್ಟಿದ್ದೀಯ.! ಗಿಡವಾಗಿದ್ದಾಗಲೇ ಬಗ್ಗಿಸುವ ಪ್ರಯತ್ನ ಮಾಡ್ಲಿಲ್ಲ. ಅದು ನಾವು ಮಾಡಿದ ತಪ್ಪು ಈಗ ಹೇಳಿ ಏನು ಸುಖ? ದುಃಖದಿಂದ ಹೇಳಿ ಸುಮ್ಮನಾಗಿಬಿಟ್ಟರು.

….. ಮುಂದುವರೆಯುವುದು
ಕಾದಂಬರಿ ಪುಟ ೯೧-೧೧೦

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಂದಾನೋ ಹನೀಪನೋ ಸುಂದರನೋ
Next post ಸಂಗರ ಗೆಲಿದಾ ಯಜಿದಾ

ಸಣ್ಣ ಕತೆ

 • ಡಿಪೋದೊಳಗಣ ಕಿಚ್ಚು…

  ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

 • ಕಲಾವಿದ

  "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

 • ಬಲಿ

  ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

 • ನಂಬಿಕೆ

  ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

 • ಆವರ್ತನೆ

  ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…