ಎಲ್ಲಿ ಹಾರಿತು ನನ್ನ ಮುದ್ದು ಹಕ್ಕಿ
ಎಲ್ಲಿ ಕೂಗುತಲಿದೆಯೊ ವ್ಯಥೆಗೆ ಸಿಕ್ಕಿ?
ಕಣ್ಣು ತಪ್ಪಿಸಿ ಹಾರಿ
ಬೇಲಿ ಸಾಲನು ಮೀರಿ
ಅಡವಿ ಪಾಲಾಯಿತೋ ದಾರಿ ತಪ್ಪಿ!

ಮನೆಯ ಕಾಳನು ತಿಂದು ಬೇಸರಾಗಿ
ವನದ ತೆನೆಯನು ತಿನುವ ಚಪಲ ರೇಗಿ
ಹೊಸ ಸಂಗ ಬೇಕೆನಿಸಿ ಹಾರಿತೇನೋ?
ಹಳೆಯ ಪರಿಚಯ ಬೇಸರಾಯಿತೇನೋ?

ತಾನಾಗಿ ಬಂತು ಇದು ಹೇಗೊ ಮನೆಗೆ
ಸಾಕಿದೆನು ಉಣಿಸಿಟ್ಟು ಅಪ್ಪಿ ಎದೆಗೆ
ಮಾತ ಕಲಿಸಿದೆ, ಈಗ ರೆಕ್ಕೆ ಬಲಿತು
ಹಾರಿತೆಲ್ಲೋ ಹೊರಗೆ ನನ್ನ ಮರೆತು.

ಎಲ್ಲಾದರೂ ಇರಲಿ ತನ್ನ ರೀತಿ,
ನಡುವೆ ನೆನಪಾದೀತು ಹಳೆಯ ಪ್ರೀತಿ.
ನೋಯದಿರಲೆಂದೂ ತಾ ತಪ್ಪಿದುದಕೆ
ಒಗ್ಗಿಕೊಳುವುದೆ ನೀತಿ ಒಪ್ಪಿದುದಕೆ!
*****

Latest posts by ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ (see all)