ಭ್ರಮಣ – ೧೩

ಭ್ರಮಣ – ೧೩

ಆ ದಿನದಿಂದ ಸುಮಾರು ಒಂದೂವರೆ ತಿಂಗಳು ಯಾವ ವಿಶೇಷ ಘಟನೆಯೂ ನಡೆಯದೇ ಉರುಳಿಹೋಯಿತು ಕಾಲ. ಬಂಡೇರಹಳ್ಳಿಯ ಆಸ್ಪತ್ರೆ ಸರಿಯಾದ ಸಮಯಕ್ಕೆ ತೆಗೆಯುತ್ತಿತ್ತು. ಅಲ್ಲಿಗೆ ಬಂದ ಹೊಸ ಡಾಕ್ಟರ್ ಯಾವ ಲಂಚದ ಆಮಿಷವೂ ಇಲ್ಲದೇ ಅಲ್ಲಿಯವರ ಚಿಕಿತ್ಸೆ ಮಾಡುತ್ತಿದ್ದ. ಕಳ್ಳತನದಿಂದ ಸಾರಾಯಿ ಮಾರುವುದು ನಿಂತು ಕೆಲ ಕುಡುಕರು ಸುಧಾರಿಸಿ ತಮ್ಮ ತಮ್ಮ ಕೆಲಸಗಳಿಗೆ ಹೋಗಲಾರಂಭಿಸಿದ್ದರು. ಲಾಟರಿಯಿಂದ ಒಮ್ಮಿಂದೊಮ್ಮೆ ಧನವಂತರಾಗುವ ಕನಸನ್ನು ಬಿಟ್ಟ ಜೂಜುಖೋರರಲ್ಲಿ ಕೆಲವರು ಬೇರೆ ಜೂಜಿನ ಮಾರ್ಗ ಹುಡುಕುತ್ತಿದ್ದರು. ಇನ್ನೂ ಕೆಲವರು ಎಲ್ಲಾ ಹತ್ತಿರದಲ್ಲಿ ಆ ಅಂಗಡಿ ಇಲ್ಲದ ಕಾರಣ ಜೂಜಿನ ಚಟವನ್ನು ಮರೆತು ಹಣವನ್ನು ಕೂಡಿಹಾಕುವ ಯೋಚನೆಯಲ್ಲಿ ಸಿಕ್ಕ ಕೆಲಸ ಮಾಡಲಾರಂಭಿಸಿದರು. ಸಿದ್ಧಾನಾಯಕ್‌ನ ವರ್ತನೆಯಲ್ಲಿ ಬಹಳಷ್ಟು ಮಾರ್ಪಾಟಾಗಿತ್ತು. ಎಲ್ಲರೊಡನೆ ಕಲೆತು ಮೇಲೆತು ಇರತೊಡಗಿದ. ಉತೇಜ್‌ನ ಹೆಸರಿನಲ್ಲಿ ಆರಂಭವಾದ ಸಂಘ ಆಗಲೇ ಮೂರು ಒಳ್ಳೆ ಕಾರ್ಯಕ್ರಮಗಳನ್ನು ಕೊಟ್ಟು ಹೆಸರು ಮಾಡಿತ್ತು. ಬೇರೆ ಊರುಗಳಲ್ಲಿ ಅವರಿಗೆ ತಮ್ಮ ಕಾರ್ಯಕ್ರಮ ನಡೆಸಲು ಆಹ್ವಾನಗಳು ಬರಲಾರಂಭಿಸಿದ್ದವು. ವಾರಕ್ಕೊಂದು ಸಲ ತನ್ನ ಪರಿಧಿಯಲ್ಲಿದ್ದ ಹಳ್ಳಿಗಳನ್ನು ಒಂದು ಸಲ ಸುತ್ತಿ ಹಾಕಿ ಬರುತ್ತಿದ್ದ ತೇಜಾ, ಆ ಒಂದೂವರೆ ತಿಂಗಳಲ್ಲಿ ಕೇವಲ ಆರು ಸಲ ಕಲ್ಯಾಣಿಯನ್ನು ಪಟವಾರಿಯವರ ಮನೆಯಲ್ಲಿ ಭೇಟಿಯಾಗಿದ್ದ ತೇಜ.

ಆ ದಿನಗಳಲ್ಲಿ ನಡೆದ ಒಂದೇ ಒಂದು ವಿಶೇಷವೆಂದರೆ ಊರಿನ ಜನರನ್ನೆಲ್ಲಾ ಕರೆದು, ರಾಮನಗರದಿಂದ ಕಲೆಕ್ಟರ್ ಮತ್ತು ಎಸ್.ಪಿ.ಯವರಿಗೆ ಕೂಡ ಆಹ್ವಾನ ಕಳಿಸಿ ತೇಜಾನನ್ನು ತಾವು ದತ್ತಕಪುತ್ರನನ್ನಾಗಿ ಸ್ವೀಕರಿಸುಟ್ತಿರುವುದಾಗಿ ಘೋಷಿಸಿದ್ದರು ಪಟುವಾರಿಯವರು. ಅವರ ಮನೆ ಎದುರೇ ಎಲ್ಲರಿಗೂ ಹಬ್ಬದ ಅಡುಗೆಯ ಊಟವಾಗಿತ್ತು. ಉತೇಜ್ ದೇವನಹಳ್ಳಿಯ ರಾಮಚಂದ್ರ ಪಟವಾರಿಯವರ ದತ್ತು ಪುತ್ರನೆಂದೂ ದಾಖಲಾಗಿತ್ತು.

ಆ ದಿನ ಪಟವಾರಿಯವರ ಮನೆಗೆ ಹೋದಾಗ ಅವನನ್ನು ಬಿಗಿದಪ್ಪಿ ತಾನು ತಿಂಗಳು ತಪ್ಪಿ ಹದಿನೈದು ದಿನಗಳಾಯಿತೆಂದು ಹೇಳಿದಳು ಕಲ್ಯಾಣಿ. ಅವರಿಬ್ಬರ ಸಂತಸ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಕೂಡಲೇ ಈ ವಿಷಯವನ್ನು ಅಪ್ಪನಿಗೆ ತಿಳಿಸಬೇಕೆಂದು ಹೇಳಿದ ತೇಜಾ, ಪಟವಾರಿ ಮತ್ತವರ ಮಡದಿ ಈಗವನಿಗೆ ಅಪ್ಪ, ಅಮ್ಮ. ಅವನು ಬಂಡೇರಹಳ್ಳಿಯಿಂದ ದೇವನಹಳ್ಳಿಗೆ ತನ್ನ ವಾಸಸ್ಥಾನವನ್ನು ಬದಲಾಯಿಸಿದರೂ ಬಂಡೇರಹಳ್ಳಿಯ ಮನೆಯನ್ನು ಬಿಟ್ಟಿರಲಿಲ್ಲ. ತಾನು ತಾಯಿಯಾಗಲಿರುವ ವಿಷಯ ತನಗೆ ಹೇಳಲು ನಾಚಿಕೆ ಎಂದಳು ಕಲ್ಯಾಣಿ. ತಾನೇ ಹೇಳುತ್ತೇನೆಂದು ಅವಳನ್ನು ಅವರ ಕೋಣೆಗೆ ಬಲವಂತವಾಗಿ ಕರೆತಂದ. ಒಮ್ಮೆಲೆ ಮಗ ಸೊಸೆ ಬಂದದ್ದು ಆಶ್ಚರ್ಯ ಹುಟ್ಟಿಸಿತು ಹಿರಿಯರಲ್ಲಿ. ಅವರಿಬ್ಬರಿಗೂ ಕಾಲುಮುಟ್ಟಿ ನಮಸ್ಕರಿಸಿದಾಗ ಇನ್ನೂ ಆಶ್ಚರ್ಯ,

“ನಿಮ್ಮ ಆಸೆ ನೆರವೇರಲಿದೆಯಪ್ಪಾ” ಎಂದ ತೇಜಾ, ಆಗಲೂ ಅವರಿಗೆ ಅರ್ಥವಾಗಲಿಲ್ಲ.

“ಎಂತಹ ಆಸೆ” ಒಂದೂ ಅರ್ಥವಾಗದವರಂತೆ ಕೇಳಿದರು.

“ನಿಮ್ಮ ಮನೆಗೆ ಭಗತ್‌ಸಿಂಗ್ ಬರಲಿದ್ದಾನೆ… ಇವಳಿಗೆ ಹೇಳಲು ನಾಚಿಕೆಯಂತೆ”

ತೇಜಾನನ್ನು ಮರೆತ ಆ ಹಿರಿಯರು ಕಲ್ಯಾಣಿಯನ್ನು ಬಿಗಿದಪ್ಪಿ, ಅವಳ ಮುಖದ ಮೇಲೆಲ್ಲಾ ಮುದ್ದಿನ ಸುರಿಮಳೆ ಸುರಿಸಿದರು. ಆಗಿನಿಂದಲೇ ಅವಳು ಏನು ಮಾಡಬೇಕು, ಏನು ಮಾಡಬಾರದು ಏನು ತಿನ್ನಬೇಕು ಏನು ತಿನ್ನಬಾರದು ಎಂಬ ತಾಕೀತು ಆರಂಭಿಸಿದರು ಅಮ್ಮ. ಅಲ್ಲಿ ಅವರನೊಡನೆ ಮಾತು ಮುಗಿಸಿ ತನ್ನ ಕೋಣೆಗೆ ಮರಳುತ್ತಿದ್ದಾಗ ಹೇಳಿದ ತೇಜಾ.

“ಇದೆಲ್ಲಿಯ ನ್ಯಾಯ! ಕಷ್ಟ ನನ್ನದು, ಬಹುಮಾನ ನಿನಗೆ”

ಅವನನ್ನು ತಬ್ಬಿ ಹೇಳಿದಲು ಕಲ್ಯಾಣಿ.

“ಯಾಕೆಂದರೆ ಮುಂದೆ ಕಷ್ಟ ಅನುಭವಿಸುವವಳು ನಾನೇ. ಇನ್ನೂ ಎಂಟು ತಿಂಗಳು, ಏನೇನು ಕಷ್ಟಗಳನ್ನು ಅನುಭವಿಸಬೇಕೋ! ಇವತ್ತೇ ನನ್ನ ಸಹಚರರಿಗೆ ನೀನು ನನ್ನ ಪತಿ ಎಂಬ ವಿಷಯ ಹೇಳಿದೆ. ಹೇಗೂ ಮುಂದೆ ಅವರಿಗೆ ಗೊತ್ತಾಗುತ್ತದೆ”

“ಏನೆಂದರು?’ ಆಸಕ್ತಿಯಿಂದ ಕೇಳಿದ.

“ನಾಗೇಶನಿಗೆ ಬಹಳ ಸಂತೋಷವಾದಂತಿದೆ. ಮಿಕ್ಕವರಲ್ಲಿ ನಾನು ಪರಕೀಯಳಾಗುತ್ತಿದ್ದೇನೆಂಬ ಭಾಸ ಹುಟ್ಟಿರಬಹುದು. ಆದರೂ ಅದು ಹಾಗಲ್ಲವೆಂದು ಅವರಿಗೆ ಸಮಾಧಾನ ಹೇಳಿದೆ” ಹೇಳಿದಳು ಕಲ್ಯಾಣಿ.

“ಅವರಿಗೆ ನನ್ನ ಮೇಲೆ ಕೋಪ ಬಂದಿರಬಹುದು” ಹೇಳಿದ ತೇಜಾ.

“ಇಲ್ಲ, ಅಂತಹದೇನಿಲ್ಲ. ಅವರೆಲ್ಲಾ ಈಗ ನಿನ್ನ ಭಾವ ಎಂದು ಕರೆಯುತ್ತಾರೆ”

“ಇಷ್ಟು, ಭಾವ ಮೈದುನಂದಿರು!” ನಗುತ್ತಾ ಹೇಳಿದ ತೇಜಾ. ಅವನು ಮಾತಾಡಿದ ರೀತಿಗೆ ಕಲ್ಯಾಣಿಯೂ ನಕ್ಕಳು.

ದೇಹಗಳ ಕಾವು ಇಳಿದರೂ ಆ ರಾತ್ರಿ ಅವರಿಬ್ಬರೂ ಮಲಗಲಿಲ್ಲ. ಭವಿಷ್ಯದ ಚಿಂತನೆ, ಮುಂದೇನಾಗುವುದೋ ಎಂಬ ಗಾಬರಿ ಇದರ ಸುತ್ತ ಅವರ ಮಾತುಗಳು ಸಾಗಿದ್ದವು.

ಈಗ ತೇಜ ಪಟವಾರಿಯವರ ಮನೆಯಲ್ಲಿ ಇರುತ್ತಿದ್ದುದರಿಂದ ಅವರ ಭೇಟಿ ಸುಲಭವಾಗಿತ್ತು. ದೇವನಹಳ್ಳಿಯ ಯುವಕರನ್ನೂ ಒಗ್ಗೂಡಿಸಿ ಅವರಿಗೂ ಒಂದು ಸಾಂಸ್ಕೃತಿಕ ಸಂಘ ಕಟ್ಟುವಂತೆ ಪ್ರೇರೇಪಿಸಿದ. ದೇವನಹಳ್ಳಿ ಬಂಡೇರಹಳ್ಳಿಯಷ್ಟು ದೊಡ್ಡದಲ್ಲ. ಅದಕ್ಕೆ ಅಲ್ಲಿನ ಯುವಕರಲ್ಲಿ ಅದರ ಬಗ್ಗೆ ನಿರಾಸಕ್ತಿ, ಪಟವಾರಿಯವರ ಮನೆಯ ಬದಿಗೆ ಒಂದು ದೊಡ್ಡ ಕೋಣೆ ಇತ್ತು. ಅದರಲ್ಲಿ ಅವರ ಪೂರ್ವಜರ ಕಾಲದಲ್ಲಿ ಮನೆಯ ಕಾವಲುಗಾರರು ಮಲಗುತ್ತಿದ್ದರು. ಈಗ ಕೆಲಸಕ್ಕೆ ಬಾರದ ಸಾಮಾನುಗಳಿಂದ ತುಂಬಿತ್ತು. ಅದನ್ನು ಖಾಲಿ ಮಾಡಿಸಿ ಅದರಲ್ಲಿದ್ದ ಸಾಮಾನುಗಳನ್ನೆಲ್ಲಾ ತಮ್ಮ ಮನೆಗೆ ರವಾನಿಸಿದ್ದ. ಅಲ್ಲಿನ ಯುವಕರೊಡನೆ ತಾನೂ ಸೇರಿ ಆ ಕೋಣೆಯನ್ನು ಸ್ವಚ್ಛ ಮಾಡಿದ. ಯಾವ ಆಳನ್ನೂ ಆ ಕೆಲಸಕ್ಕೆ ಉಪಯೋಗಿಸಿರಲಿಲ್ಲ. ಪಟವಾರಿಯವರ ಮಗ ಅದೂ ಅಲ್ಲದೇ ಇನ್ಸ್‌ಪೆಕ್ಟರ್ ಸಾಹೇಬರು ಅಂತಹ ಕೆಲಸ ಮಾಡಲಾರಂಭಿಸಿದ್ದು ನೋಡಿ ದಂಗಾದ. ಯುವಕರು ಅವನು ಕಸ ಗುಡಿಸುವುದನ್ನು ನಿಲ್ಲಿಸಲು ಹೋಗಿದ್ದರು. ಪ್ರತಿ ಮನುಷ್ಯನೂ ಕಷ್ಟಪಡಬೇಕೆಂದು ಕೆಲಸ ಮಾಡಬೇಕೆಂದು ಧನವಂತರು, ಬಡವರು, ಜಮೀನುದಾರರು, ರೈತರು, ಬ್ರಾಹ್ಮಣರು, ಬೇರೆ ಜಾತಿಯವರೆಂಬ ಭೇದಭಾವವನ್ನು ಬಿಡಬೇಕೆಂದು, ಈ ಲೋಕದಲ್ಲಿ ಯಾವ ಮನುಷ್ಯನೂ ಕೀಳುಜಾತಿಗೆ ಸೇರಿದವನಲ್ಲವೆಂದು, ಪ್ರತಿ ಮನುಷ್ಯನಲ್ಲಿ ಇನ್ನೊಬ್ಬನಲ್ಲಿಲ್ಲದ ವಿಶಿಷ್ಟ ಗುಣವಿರುತ್ತದೆ ಎಂದು, ಎಲ್ಲರೂ ಅಂತಹ ಕೀಳರಿಮೆಯನ್ನು ಬಿಡಬೇಕೆಂದು ಹೇಳಿದ್ದ. ದೇವನಹಳ್ಳಿಯವರಿಗೆ ಆ ಮಾತೇನೂ ಹೊಸದಾಗಿರಲಿಲ್ಲ. ಪಟವಾರಿ ಸಾಹೇಬರು ಇಂತಹ ಮಾತುಗಳನ್ನಾಡುತ್ತಾರೆಂದವರು ಬೇರೆಯವರ ಬಾಯಿಂದ ಕೇಳಿದ್ದರು. ಆದರೆ ಅವನವರ್‍ಯಾರೂ ದೊಡ್ಡ ಮನುಷ್ಯರು ಇಂತಹ ಕೆಲಸ ಮಾಡುವುದನ್ನು ನೋಡಿರಲಿಲ್ಲ. ಆ ಕೋಣೆಯಲ್ಲಿ ಯುವಕರು ಕ್ಯಾರಮ್ ಮತ್ತು ಚೆಸ್ ಆಡುವ ಏರ್ಪಾಟು ಮಾಡಿದ.

ಆ ಯುವಕರ ಹತ್ತಿರವಾಗಲು, ಅವರಲ್ಲಿ ಒಬ್ಬನಾಗಲು ತೇಜಾನಿಗೆ ಸಾಕಷ್ಟು ಸಮಯ ಹಿಡಿದಿತ್ತು. ಈಗ ಅವರು ತೇಜಾನಿಲ್ಲದಾಗಲೂ ವಾರಕ್ಕೊಂದು ದಿನ ಪಟವಾರಿಯವರ ಮನೆಯಲ್ಲಿ ಸೇರುತ್ತಿದ್ದರು. ಅಲ್ಲಿ ಕಾಫಿ ಫಲಹಾರಗಳ ಉಪಚಾರವಾಗುತ್ತಿತ್ತು. ಪಟವಾರಿಯವರು ಅವರ ನಡುವೆ ಕುಳಿತು ತಮ್ಮ ಗತದಿನಗಳ ಅನುಭವಗಳನ್ನು ರಸವತ್ತಾಗಿ ಹೇಳುತ್ತಿದ್ದರು. ತಮ್ಮ ದೇಶ ಬ್ರಿಟಿಷರ ಕಪಿಮುಷ್ಟಿಯಿಂದ ಬಿಡುಗಡೆ ಹೊಂದಲು ಎಷ್ಟು ಕಷ್ಟವಾಯಿತು. ಎಷ್ಟು ಜನರು ನಿಷ್ಠೆಯಿಂದ ಹೋರಾಡಿ ತಮ್ಮ ಪ್ರಾಣವನ್ನು ಕಳೆದುಕೊಂಡರು. ಬಿಳಿಯರ ದಬ್ಬಾಳಿಕೆ ಹೇಗಿತ್ತು ಎಂಬ ವಿಷಯಗಳನ್ನು ಬಹಳ ರಸವತ್ತಾದ ಕಥೆಗಳನ್ನಾಗಿ ಮಾಡಿ ಹೇಳಿದ್ದರವರು. ಈಗ ಯುವಕರ, ಅವರ ನುಡವಿನ ಕಂದಕ ತೊಲಗಿ ಮಾತುಗಳ ಚಕಮಕಿ ನಡೆಯತೊಡಗಿತು. ಅದರಿಂದ ಪಟವಾರಿಯವರಲ್ಲೂ ಹೊಸ ಲವಲವಿಕೆ ಹುಟ್ಟಿ ಬಂದಿತ್ತು.

ಈಗ ಪಟವಾರಿಯ ಮಗನಾದ ತೇಜಾನ ಮೇಲೆ ಮನೆಯನ್ನು, ಹೊಲಗದ್ದೆಗಳನ್ನು ನೋಡಿಕೊಳ್ಳುವ ಭಾರ ಬಿದ್ದಿತು. ಅದನ್ನವನು ತನ್ನ ಅಪ್ಪನಿಂದ ಮತ್ತು ಅಲ್ಲಿಯ ಯುವಕರಿಂದ ಕಲೆತ. ಅಷ್ಟು ಆಸ್ತಿ, ಅಷ್ಟು ಹೊಲಗದ್ದೆಗಳನ್ನು ನೋಡಿದ ಅವನು ದೇವನಹಳ್ಳಿಗಾಗಿ ಏನೇನು ಮಾಡಬಹುದೆಂಬ ಕನಸುಗಳನ್ನು ಕಾಣತೊಡಗಿದ. ರಾಮನಗರದಲ್ಲಿದ್ದ ಪಟವಾರಿಯವರ ಬ್ಯಾಂಕ್ ಅಕೌಂಟು ಇವನ ಹೆಸರಿಗೆ ವರ್ಗವಾಯಿತು. ಆ ಬಹು ಕಡಿಮೆ ಸಮಯದಲ್ಲಿ ಆ ವೃದ್ಧರಿಬ್ಬರ ಬಹು ಅಕ್ಕರೆಯ ಮಗನಾಗಿ ಬಿಟ್ಟಿದ್ದ ತೇಜಾ, ಇದು ಕಲ್ಯಾಣಿಯಲ್ಲೂ ಎಲ್ಲಿಲ್ಲದ ಸಂತಸವನ್ನು ಹುಟ್ಟಿಸಿತ್ತು. ಅವನನ್ನು ದತ್ತಕ್ಕೆ ಸ್ವೀಕರಿಸುವ ಒಂದು ದಿನ ಮೊದಲೇ ತೇಜಾನನ್ನು ಬದಿಗೆ ಕೂಡಿಸಿಕೊಂಡು ಅಮೇರಿಕಾದಲ್ಲಿದ್ದ ತಮ್ಮ ಮಗಳಿಗೆ ಫೋನ್ ಮಾಡಿ ಅವಳಿಗೊಬ್ಬ ಬೆಳೆದ ತಮ್ಮ ಹುಟ್ಟಿಕೊಳ್ಳಲಿದ್ದಾನೆಂದು ಹೇಳಿ ಬೇಕಾದ ವಿವರ ಕೊಟ್ಟರು. ಅವನು ಪಕ್ಕದಲ್ಲೇ ಕುಳಿತಿದ್ದಾನೆಂದು ಅವನಿಗೆ ರಿಸೀವರ ಕೊಟ್ಟಿದ್ದರು ಪಟವಾರಿಯವರು. ಅಕ್ಕ ತಮ್ಮನದು ಇಂಗ್ಲೀಷಿನಲ್ಲೇ ಮಾತಾಯಿತು. ಬಹಳ ಸಂತಸ ತುಂಬಿದ ದನಿಯಲ್ಲಿ ಮಾತಾಡಿದ್ದಳವಳು. ಆದಷ್ಟು ಬೇಗ ತಾನಲ್ಲಿಗೆ ಬರುವುದಾಗಿ ಅವನ ಫೋಟೋ ತಕ್ಷಣ ಕಳುಹಿಸಬೇಕೆಂದು ಒತ್ತಾಯಿಸುವ ದನಿಯಲ್ಲಿ ಹೇಳಿದಳು.

ಪಟವಾರಿಯವರ ಮಗನಾದ ಉತ್ತೇಜ್‌ನ ಜೀವನಕ್ರಮದಲ್ಲಿ ಬಹಳಷ್ಟು ಬದಲಾವಣೆಗಳಾಗಿದ್ದವು. ಹೊಲ, ಗದ್ದೆಗಳ ಕೆಲಸ ನೋಡಿಕೊಳ್ಳಬೇಕು. ತಂದೆ, ತಾಯಿಯರ ಆರೋಗ್ಯದ ಮೇಲೆ ಯಾವಾಗಲೂ ಕಣ್ಣಿಟ್ಟಿರಬೇಕು. ಅಲ್ಲಿಯ ಯುವಕರೊಡನೆ ಸಮಯ ಕಳೆಯಬೇಕು. ಅದರೊಡನೆಯೇ ಎಲ್ಲವನ್ನೂ ಆಧುನೀಕರಣಪಡಿಸಬೇಕೆಂಬ ಬಗ್ಗೆ ಯೋಚಿಸುತ್ತಿದ್ದ. ಪಟ್ಟಣಕ್ಕೆ ಹೋಗಿ ತನ್ನ ಅಲ್ಲಿನ ಮನೆ ಖಾಲಿ ಮಾಡಿ ಅಲ್ಲಿದ್ದ ತನ್ನ ಸಾಮಾನನ್ನು ರವಾನಿಸುವುದು ಯಾವಾಗ ಎಂಬ ಚಿಂತೆಯೂ ಅವನನ್ನು ಕಾಡುತ್ತಿತ್ತು.

ಪೋಲಿಸ್ ಸ್ಟೇಷನ್‌ನ ತನ್ನ ಕುರ್ಚಿಯಲ್ಲಿ ಕುಳಿತು ಕಲ್ಯಾಣಿ ಕೊಟ್ಟ ಸಂತಸದ ಸುದ್ದಿಯನ್ನು ಯಾರೊಡನೆ ಹಂಚಿಕೊಳ್ಳಬೇಕೆಂಬ ಬಗ್ಗೆ ಯೋಚಿಸುತ್ತಿದ್ದ. ಎಂತಹ ಅನ್ಯಾಯ ತನ್ನ ಮದುವೆಯಾಗಿದೆ ಯಾರಿಗೂ ತಿಳಿಸುವ ಹಾಗಿಲ್ಲ. ತಾವಿಬ್ಬರೂ ಕಲೆತು ಎಲ್ಲೂ ತಿರುಗಾಡುವ ಹಾಗಿಲ್ಲ. ಮದುವೆಯ ನಂತರ ಇಂತಹ ಅವಸ್ಥೆಯನ್ನು ತಾನು ಅನುಭವಿಸಬೇಕಾಗುತ್ತದೆ ಎಂದು ಊಹಿಸಿರಲಿಲ್ಲ. ಹಾಗೆಯೇ ಈ ವಿನೂತನ ವಿಧಾನದಲ್ಲಿ ಕಲ್ಯಾಣಿಯಂತಹ ಹೆಣ್ಣು ತನ್ನ ಮಡದಿಯಾಗುತ್ತಾಳೆಂದೂ ಅಂದುಕೊಂಡಿರಲಿಲ್ಲ. ಸಾಯುವವರೆಗೂ ಇದೇ ಅವಸ್ಥೆ ಅನುಭವಿಸಬೇಕಾಗುತ್ತದೆಯೇನೋ ಎಂದುಕೊಳ್ಳುತ್ತಿರುವಾಗ ಗಂಟೆಯ ನಾದ ಕೇಳಿಸಲಾರಂಭಿಸಿತು. ಯಾಂತ್ರಿಕವಾಗಿ ರಿಸೀವರನ್ನು ಎತ್ತಿಕೊಂಡ

“ಹಲೋ”

“ಯಾಕೋ ನನ್ನ ಮರೆತೇಬಿಟ್ಟಿಯೇನೊ?” ಕುಶಾಲನ ಕಂಠ. ಅದು ತೇಜಾನಲ್ಲಿ ಎಲ್ಲಿಲ್ಲದ ಸಂತಸನ ಹುಟ್ಟಿಸಿತ್ತು. ಭಾವುಕ ದನಿಯಲ್ಲಿ ಹೇಳಿದ.

ನಿಜ ಕಣೋ ಮರೆತೇಬಿಟ್ಟಿದ್ದೆ. ಇಲ್ಲಿ ನನ್ನ ಸ್ಥಿತಿ ಹಾಗಿದೆ. ದಯವಿಟ್ಟು ಇಲ್ಲಿ ಬಾ. ನಿನಗೆ ಬಹಳ ಹೇಳಬೇಕು. ಬಹಳ ಮಾತಾಡಬೇಕು”

“ಈ ನಡುವೆ ದಯವಿಟ್ಟು ಎಲ್ಲಿಂದ ಬಂತು”

“ನೋಡೋ ಅದೇ ನನ್ನ ಮನಸ್ಥಿತಿಯ ಅವಸ್ಥೆಯನ್ನು ತೋರಿಸುತ್ತದೆ. ತಕ್ಷಣ ಹೊರಟು ಬಾ” ಅವಸರದ, ಆತುರದ ದನಿಯಲ್ಲಿ ಹೇಳಿದ ತೇಜಾ.

“ನೀನ್ಯಾರದೊ ಮಗನಾಗಿ ಬಿಟ್ಟಿದ್ದೀಯಂತೆ… ಇಲ್ಲೆಲ್ಲಾ ಅದೇ ಸುದ್ದಿ…”

“ಅದೇ ಅಲ್ಲ ಇನ್ನೂ ಬಹಳ ವಿಷಯಗಳು ಮಾತಾಡಬೇಕು ಯಾವಾಗ ಬರುತ್ತಿ” ಅವನ ಮಾತನ್ನು ನಡುವೆಯೇ ತಡೆದು ಹೇಳಿದ ತೇಜಾ.

“ತಕ್ಷಣ ಬರದಿದ್ದರೆ ನೀನೆಲ್ಲಿ ಸತ್ತು ಹೋಗುತ್ತಿಯೋ ಎಂಬ ಭಯ ಹುಟ್ಟಿದೆ. ಎಲ್ಲಿಗೆ ಬರಲಿ”

“ದೇವನಹಳ್ಳಿಗೆ ಬಾ! ಅಲ್ಲಿ ಪಟವಾರಿಯವರ ಮನೆ ಎಂದರೆ ಯಾರಾದರೂ ತೋರಿಸುತ್ತಾರೆ. ದೇವನಹಳ್ಳಿ ರಾಮನಗರಕ್ಕೆ ಹೋಗುವ ದಾರಿಯಲ್ಲೇ ಇದೆ” ಮತ್ತೆ ಅವಸರದ ದನಿಯಲ್ಲಿ ಹೇಳಿದ.

“ನೀನು ಮೊದಲೆಂದೂ ಹೀಗೆ ಮಾತಾಡಿದ್ದನ್ನು ಕೇಳಿರಲಿಲ್ಲ. ಯಾವುದೋ ಅನಾಹುತವಾದಂತೆ ಕಾಣುತ್ತದೆ. ಈಗ ಹೊರಟೆ” ಎಂದ ಕುಶಾಲ ಸಂಪರ್ಕ ಮುರಿದ.

ಕುಶಾಲ ಬರುತ್ತಿದ್ದಾನೆಂಬ ಅನಿಸಿಕೆಯಿಂದಲೇ ಸಂತಸ ತುಂಬಿಬಂದಿತ್ತು. ತಾನವನನ್ನು ಇಷ್ಟು ದಿನ ಹೇಗೆ ಮರೆತೆ. ಅದಕ್ಕೆ ಕಾರಣ ಇಲ್ಲಿನ ಆಗುಹೋಗುಗಳು ಮತ್ತು ಕಲ್ಯಾಣಿ, ಎಂದು ತನಗೆ ತಾನೇ ಹೇಳಿಕೊಂಡ ತೇಜಾ. ಹತ್ತೂ ಕಾಲು ಅವನು ತನ್ನ ಕಾರಿನಲ್ಲೇ ಬರಬಹುದು. ಎರಡೂವರೆ ಗಂಟೆಯ ದಾರಿ, ಅಂದರೆ ಅವನು ಬಂದು, ಒಂದೂವರೆಯೊಳಗೆ ಬರಬಹುದು. ಅದರ ಲೆಕ್ಕಾಚಾರ ಮುಗಿಯುತ್ತಲೆ ಮನೆಗೆ ಫೋನ್ ಮಾಡಿದ. ಅವನ ತಾಯಿಯೇ ರಿಸಿವರ್‌ ಎತ್ತಿದ್ದು.

“ನಾನಮ್ಮ ತೇಜಾ! ಪಟ್ಟಣದಿಂದ ತನ್ನ ಅಪ್ತ ಗೆಳೆಯನೊಬ್ಬ ಬರುತ್ತಿದ್ದಾನೆ. ಆಳಿಗೆ ಒಳ್ಳೆಯ ಅಡುಗೆ ಮಾಡಲು ಹೇಳು”

“ನೀ ಯಾವಾಗ ಬರುತ್ತಿ?” ಕೇಳಿದರವರು

“ಹನ್ನೆರಡು ಗಂಟೆಗೆಲ್ಲಾ ಬಂದು ಬಿಡುತ್ತೇನೆ”

“ತಡ ಮಾಡಬೇಡ, ತಡವಾಗುವ ಹಾಗಿದ್ದರೆ ಫೋನ್ ಮಾಡು” ಪ್ರತೀ ಮಾತನ್ನು ಒತ್ತಿ ಹೇಳಿದರವನ ತಾಯಿ, ಆ ವೃದ್ಧ ದಂಪತಿಯರಿಗೆ ಅವನದೇ ಚಿಂತೆ.

“ಇಲ್ಲಮ್ಮ ಎಂತಹುದೇ ಕೆಲಸವಿದ್ದರೂ ತಡವಾಗುವುದಿಲ್ಲ. ಇಡಲೆ”

“ಹೂಂ!” ಎಂದ ಅವರು ರಿಸೀವರನ್ನು ಕೆಳಗಿಟ್ಟ ಶಬ್ದ ಕೇಳಿಸಿದ ಮೇಲೆ ತಾನು ಹಾಗೇ ಮಾಡಿದ.

ಇಷ್ಟು ಬೇಗ ತಾನವರ ಹತ್ತಿರವಾಗಲು, ಅವರು ತನ್ನನ್ನು ಹುಟ್ಟಿದಾಗಿನಿಂದ ಸಾಕಿದ ಮಗನಂತೆ ನೋಡಿಕೊಳ್ಳಲು ಕಾರಣವೇನಿರಬಹುದೆಂಬ ಯೋಚನೆ ಆರಂಭವಾಯಿತು. ಅದಕ್ಕೆ ಕಾರಣವಿಷ್ಟೆ, ಅವರಿಗೆ ತನ್ನ, ತನಗೆ ಅವರ ಅವಶ್ಯಕತೆ ಇದೆ. ಅಂದರೆ ತನಗೆ ತನ್ನ ತಂದೆ ತಾಯಿಯ ಪ್ರೇಮ ಸಿಕ್ಕಿಲ್ಲ. ಅವರು ಯಾರು ದಿಕ್ಕಿಲ್ಲದವರಂತೆ ದೇವನಹಳ್ಳಿಯಲ್ಲಿ ಏಕಾಕಿಗಳಾಗಿದ್ದಾರೆ. ಅವರಿಗೆ ಒಬ್ಬ ಮಗ ಬೇಕು. ಹಾಗೆ ನೋಡಿದರೆ ಅವರು ತಮ್ಮ ಬಂಧು ಬಳಗದವರಲ್ಲಿ ಯಾರನ್ನಾದರೂ ದತ್ತುಕ್ಕೆ ತೆಗೆದುಕೊಳ್ಳಬಹುದಾಗಿತ್ತು. ತಾನು, ತನ್ನ ವಿಚಾರಗಳು ಅವರಿಗೆ ಇಷ್ಟವಾಗಿವೆ. ಇದು ಕೂಡ ಕಲ್ಯಾಣಿಯೊಡನೆ ಹುಟ್ಟಿದ ಪ್ರೇಮ ದಂತಹುದೇ ಇನ್ನೊಂದು ರೂಪ ಎಂದುಕೊಂಡ. ಕಲ್ಯಾಣಿ ತನ್ನ ಮಡದಿಯಾಗುವುದು, ಪಟವಾರಿಯವರು ಮತ್ತು ಲಕ್ಷ್ಮಿ ತನ್ನ ತಂದೆ ತಾಯಿಯಾಗುವುದು ತನ್ನ ಪೂರ್ವಜನ್ಮದ ಫಲವೇನೋ ಎನಿಸಿತು.

ಇವತ್ತು ಎರಡು ಹಳ್ಳಿಗಳಿಗೆ ಹೋಗಿ ಅಲ್ಲಿನ ವ್ಯವಸ್ಥೆಯನ್ನು ನೋಡಬೇಕೆಂದುಕೊಂಡಿದ್ದ. ಅದೀಗ ಆಗುವುದಿಲ್ಲ. ತಾನು ಸ್ವಲ್ಪ ಮೊದಲೇ ಹೊರಟುಬಿಟ್ಟಿದ್ದರೆ ಕುಶಾಲನ ಫೋನು ಮಿಸ್ ಆಗುತ್ತೇನೋ ಎನಿಸಿ ಬೇಸರ ಕಳೆಯಲು ಹೊರಬಂದ. ತಮಗೆ ದಾರಿ ಗೊತ್ತಿದ್ದಂತೆ ಗುಂಡು ತಾತನ ಮನೆಯಕಡೆ ಬೀಳತೊಡಗಿದವು ಹೆಜ್ಜೆಗಳು.

ಯಾವುದೋ ಕೆಲಸದಲ್ಲಿ ತೊಡಗಿದ್ದ ತಾತನ ಮುಖ ತೇಜಾನನ್ನು ನೋಡುತ್ತಲೇ ಸಂತಸದಿಂದ ಅಗಲವಾಯಿತು. ಹಾರ್ದಿಕ ದನಿಯಲ್ಲಿ ಹೇಳಿದ

“ಬಾ… ಬಾ… ಏನು ಹೀಗೆ ಅನಿರೀಕ್ಷಿತ…”

“ಬೇಸರವಾಗುತ್ತಿತ್ತು ತಾತ ಬಂದೆ. ಕಾಫಿ ಕೊಡಲು ಹೇಳಿ” ಅವರ ಮನೆಯೊಳಗಡಿ ಇಡುತ್ತಾ ಹೇಳಿದ. ಅಲ್ಲಿಂದ ಕೂಗಿ ಎರಡು ಲೋಟಾ ಕಾಫಿ ತರುವಂತೆ ಹೇಳಿ ಕೈ ತೊಳೆದು ಅವನೊಡನೆ ಹಜಾರಕ್ಕೆ ನಡೆದರು.

“ಏನಾದರಾಗಲಿ! ನೀನು ಪಟವಾರಿಯವರ ಮಗನಾದದ್ದು ನಮ್ಮ ಪುಣ್ಯ! ಇನ್ನು ನಿನ್ನಂತೂ ನಮ್ಮನ್ನು ಬಿಟ್ಟು ಎಲ್ಲಿಯೂ ಹೋಗುವ ಹಾಗಿಲ್ಲ. ಅವನ ಬದಿಯಲ್ಲಿ ಕೂಡುತ್ತಾ ಸಂತಸದ ದನಿಯಲ್ಲಿ ಹೇಳಿದ್ದರು. ಈ ಮೊದಲು ಅವರು ಅದೇ ಮಾತನ್ನು ಹೇಳಿದ್ದರು. ಇದು ಎಷ್ಟನೆ ಸಲವೆಂಬುವುದು ಅವರಿಗೆ ನೆನಪಿರಲಿಕ್ಕಿಲ್ಲ.

“ಬಹಳ ಬೇಜಾರಾಗುತ್ತಿದೆ ತಾತ! ಏನು ಮಾಡಲಿ?” ಏನಾದರೂ ಮಾತಾಡಬೇಕೆಂಬಂತೆ ಮಾತಾಡಿದ್ದ ತೇಜಾ. ಯಾವುದೋ ಹೊಸದೊಂದು ವಿಚಾರ ಅವರಿಗೆ ಹೊಳೆದಂತೆ ಹಿಗ್ಗಿನ ಮುಖ ಮಾಡಿ ಕೇಳಿದರು.

“ನಾನೊಂದು ವಿಷಯ ಹೇಳುತ್ತೇನೆ! ಅದು ಮಾಡುತ್ತಿಯಾ?”

“ಏನು ಹೇಳಿ” ತೇಜಾನ ಈ ಮಾತಿನಲ್ಲೂ ಬೇಸರವಿತ್ತು.

“ಮದುವೆಯಾಗಿಬಿಡು. ಬೇಸರ ತಾನಾಗೇ ದೂರವಾಗುತ್ತದೆ” ಗೆಲುವಿನ ದನಿಯಲ್ಲಿ ಹೇಳಿದರು ಅವನ ಮದುವೆಯ ಯೋಚನೆಯಿಂದಲೇ ಅವರಲ್ಲಿ ಉತ್ಸಾಹ ತುಂಬಿ ಬಂದಂತಿತ್ತು. ಹೆಂಡತಿ ಬೇಸರ ನೀಗಿಸುವ ವಸ್ತುವೇ ಎಲ್ಲರೂ ಅದೇ ಸಲಹೆ ಕೊಡುತ್ತಾರೆ ಎಂದುಕೊಂಡ ತೇಜಾ, ಈಗ ಅದರ ಕಾರಣವಾಗೇ ಬಿಡಿಸಿಕೊಳ್ಳಲಾಗದಂತಹ ಗಂಟುಗಳಲ್ಲಿ ಸಿಕ್ಕಿ ಕೊಂಡಿದ್ದೇನೆಂದು ಹೇಳಲೇ ಎಂದುಕೊಂಡ. ಅವರ ಮೊಮ್ಮಗಳು ಎರಡು ಕಾಫಿಯ ಲೋಟಗಳನ್ನು ಹಿಡಿದು ಬಂದಳು. ಅದನ್ನು ಕುಡಿಯುತ್ತಾ ಲೋಕಾಭಿರಾಮ ಹರಟೆಯಲ್ಲಿ ತೊಡಗಿದ.

ಕೆಲಸಕ್ಕೆ ಬಾರದ ಮಾತುಗಳಲ್ಲಿ ಸಮಯ ದೂಡಿ ಪೋಲಿಸ್ ಸ್ಟೇಷನ್ನಿಗೆ ಮರಳಿದಾಗ ಹನ್ನೊಂದೂವರೆ, ಬಾಗಿಲಿನಿಂದಲೇ ತಾನು ಮನೆಗೆ ಹೋಗುತ್ತಿರುವುದಾಗಿ ಏನಾದರೂ ವಿಶೇಷವಿದ್ದರೆ ಅಲ್ಲಿಗೆ ಫೋನ್ ಮಾಡಬೇಕೆಂದು ಹೇಳಿದ.

ಜೀಪು ಅವನನ್ನು ಮನೆಗೆ ತಲುಪಿಸುವುದರಲ್ಲಿ ಹನ್ನೆರಡಾಗಿಬಿಟ್ಟಿತ್ತು ಸಮಯ. ಅವನ ಬರುವಿಗಾಗೇ ಕಾಯುತ್ತಿದ್ದರು ತಂದೆ ತಾಯಿ.

“ಯಾರೋ ನಿನ್ನ ಆ ಸ್ನೇಹಿತ?” ಕೇಳಿದರು ಪಟವಾರಿ.

“ನನ್ನ ಡಿಪಾರ್ಟ್‌ಮೆಂಟ್‌ನ ಆಪ್ತ ಸ್ನೇಹಿತನಪ್ಪ!” ಬಟ್ಟೆ ಬದಲಿಸಿ ಬಂದ ತೇಜಾ ಅವರ ಬದಿಗೆ ಕೂಡುತ್ತಾ ಹೇಳಿದ.

“ನಿನ್ನ ಡಿಪಾರ್ಟ್‌ಮೆಂಟ್ ಅಂದರೆ?” ಅನುಮಾನದ ದನಿಯಲ್ಲಿ ಪ್ರಶ್ನಿಸಿದರವರು.

“ನನ್ನ ಡಿಪಾರ್ಟ್‌ಮೆಂಟ್ ಅಂದರೆ ಪೋಲಿಸ್ ಖಾತೆ, ಪಟ್ಟಣದ ಹೊರವಲಯದ ಯಾವುದೋ ಪೋಲಿಸ್ ಸ್ಟೇಷನ್ನಿನಲ್ಲಿ ಅವನನ್ನು ಹಾಕಿದ್ದಾರೆ. ಅಲ್ಲಿ ಅವನಿಗೇನೂ ಕೆಲಸವಿಲ್ಲ.”

ಅವರ ಅನುಮಾನವನ್ನು ಪೂರ್ತಿ ನಿವಾರಿಸುವಂತೆ ಹೇಳಿದ.

“ಅವನನ್ನು ನಂಬಬಹುದೇ?” ಇನ್ನೂ ತಮ್ಮ ಅನುಮಾನ ಹೋಗಿಲ್ಲವೆಂಬಂತೆ ಕೇಳಿದರವರು.

“ನಂಬಬಹುದಪ್ಪಾ! ನನ್ನ ನಂಬಿದಷ್ಟೆ, ನೀವು ಅವನನ್ನೂ ನಂಬಬಹುದು. ಅವನು ನಮಗೆ ಸಮಯ ಬಿದ್ದರೆ ಬೇಕಾದ ಸಹಾಯವನ್ನೂ ಮಾಡುತ್ತಾನೆ” ಪೂರ್ತಿ ವಿಶ್ವಾಸದ ದನಿಯಲ್ಲಿ ಹೇಳಿದ ತೇಜಾ. ಸ್ವಲ್ಪ ಹೊತ್ತು ಸುಮ್ಮನಿದ್ದ ಅವನ ತಂದೆ ತಮಗೆ ತಾವೇ ಹೇಳಿಕೊಳ್ಳುವಂತೆ ಮಾತಾಡಿದರು.

“ಏನೇ ಆಗಲಿ ಈ ಪೋಲಿಸ್‌ನವರನ್ನು ನಂಬುವುದು ಕಷ್ಟ.”

ನಗುತ್ತಾ ಹೇಳಿದ ತೇಜಾ,

“ನೀವು ನನ್ನ ನಂಬಲಿಲ್ಲವೇ. ನಿಮ್ಮ ಮಗನಾಗಿ ಮಾಡಿಕೊಳ್ಳಲಿಲ್ಲವೇ?”

ಗಂಭೀರ ದನಿಯಲ್ಲಿ ಹೇಳಿದರು ಅವನ ತಂದೆ.

“ನೀನೊಬ್ಬ ಅಪರೂಪದ ವ್ಯಕ್ತಿ. ಎಲ್ಲರೂ ನಿನ್ನಂತಿರುವುದಿಲ್ಲ” ಆ ಮಾತೂ ಅವರು ತಮಗೆ ತಾವೇ ಹೇಳಿಕೊಂಡಂತಿತ್ತು. ಮತ್ತೆ ನಕ್ಕು ಹೇಳಿದ ತೇಜಾ.

“ನಿಮ್ಮ ಬಾಯಿಂದ ನನ್ನ ಹೊಗಳಿಕೆ ಕೇಳಿದರೆ….”

“ಸಾಕು! ಸಾಕು! ಉಬ್ಬಿಹೋಗಬೇಡ. ಎಲ್ಲಿ ನಿಮ್ಮಮ್ಮ ಏನು ಕಾರುಭಾರ ಮಾಡುತ್ತಿದ್ದಾಳೋ ನೋಡು” ಅವನ ಮಾತನ್ನು ನಡುವೆಯೋ ತಡೆದು ಹೇಳಿದರವನ ತಂದೆ. ಅವರ ಆಜ್ಞೆ ಪಾಲಿಸಲು ಎದ್ದ ತೇಜಾ.

ಒಂದು ಮುಕ್ಕಾಲಿಗೆ ತೇಜಾನ ಮನೆ ಎದುರು ಅವನ ಜೀಪಿನ ಬದಿಗೆ ಬಂದು ನಿಂತಿತು ಕುಶಾಲನ ಮಾರುತಿ ಕಾರು. ಅವನು ಕಾರಿನೊಳಗಿಂದ ಇಳಿಯುತ್ತಿದ್ದಂತೆ ಬಂದ ತೇಜಾ ಅವನನ್ನು ಅಪ್ಪಿದ, ಅಚ್ಚರಿಯ ನೋಟದಲ್ಲಿ ಮಿತ್ರನ ಉದ್ವಿಗ್ನ ಮುಖ ನೋಡಿ ಹೇಳಿದ ಕುಶಾಲ.

“ಏನಾಗಿ ಹೋಗಿದೆಯೋ ನಿನಗೆ… ಏನಾಗಿದೆ… ಅಲ್ಲಿಂದ ಬರುವಾಗ ಚೆನ್ನಾಗಿದ್ದಿ”

“ಏನೇನು ಆಗಬೇಕೋ ಎಲ್ಲಾ ಆಗಿ ಹೋಗಿದೆ. ಮುಂದೇನಾಗುತ್ತದೆಯೋ ಆ ದೇವರಿಗೇ ಗೊತ್ತು… ಬಾ” ಎಂದ ತೇಜಾ ಅವನ ಹೆಗಲಲ್ಲಿ ಕೈ ಹಾಕಿ ಮನೆಯೊಳ ಕರೆದೊಯ್ದ.

ಅತಿಥಿಗಾಗಿ ಮುಂದಿನ ಕೋಣೆಯಲ್ಲಿ ಕಾದಿದ್ದರು ಹಿರಿಯರಿಬ್ಬರೂ

“ಇವರು ನನ್ನ ತಂದೆ ರಾಘವೇಂದ್ರ ಪಟವಾರಿ. ಇವರು ತಾಯಿ ಲಕ್ಷ್ಮೀದೇವಿ… ಇವನು ಕುಶಾಲ ನನಗಿರುವ ಒಬ್ಬನೇ ಆಪ್ತಮಿತ್ರ” ಹೇಳಿದ ತೇಜಾ. ಅವರಿಬ್ಬರ ಕಾಲಿಗೆ ನಮಸ್ಕರಿಸಿ ಮಾತಾಡಿದ ಕುಶಾಲ್.

“ಇಂತಹ ಮಗನನ್ನು ಪಡೆಯಲು ನೀವು ಪುಣ್ಯ ಮಾಡಿದ್ದೀರಿ ಸರ್”

“ತಪ್ಪು! ಇಂತಹ ತಂದೆ, ತಾಯಿಯರನ್ನು ಪಡೆಯಲು ನಾನು ಪುಣ್ಯ ಮಾಡಿದ್ದೆ. ನಿನಗಿನ್ನೂ ಅವರ ಬಗ್ಗೆ ಏನೂ ಗೊತ್ತಿಲ್ಲ. ಅವನ ತಪ್ಪನ್ನು ಸರಿಪಡಿಸುತ್ತಿರುವಂತೆ ಮಾತು ಮುಗಿದ ಕೂಡಲೇ ಹೇಳಿದ ತೇಜಾ.

“ಅದೇನೇ ಆಗಲಿ ಅವನಿಂದ ಈ ಮನೆಗೊಂದು ಕಳೆ ಬಂದಿದೆ. ನಡಿಯಿರಿ ಆಗಲೇ ಬಹಳ ತಡವಾಗಿದೆ ಊಟ ಮಾಡುವಿರಂತೆ” ಎಂದಳು ತೇಜಾನ ತಾಯಿ. ತನ್ನ ಬೂಟುಗಳನ್ನು ಕುಶಾಲ್ ಬಿಚ್ಚಿದ ಮೇಲೆ ಎಲ್ಲರೂ ಮೇಲೆ ಹೋದರು. ಆಳು ಮುಂಬಾಗಿಲನ್ನು ಹಾಕಿದ.

ತೇಜಾನ ತಂದೆ ತಾಯಿಯರ ಊಟ ಸಮಯಕ್ಕೆ ಸರಿಯಾಗಿ ಆಗಿಹೋಗಿತ್ತು. ಆದರೂ ಅವರು ಕುಶಾಲ ಮತ್ತು ತೇಜಾ ಊಟ ಮಾಡುವಾಗ ಅಲ್ಲಿ ಕುಳಿತಿದ್ದರು. ಟೇಬಲ್ಲಿನ ಮೇಲಿದ್ದ ಅಡುಗೆಯನ್ನು ಲಕ್ಷ್ಮಿದೇವಿಯವರೇ ಬಡಿಸುತ್ತಿದ್ದರು. ಊಟ ಮಾಡುತ್ತಾ ಹೇಳಿದ ಕುಶಾಲ್

“ಏನು ಹಬ್ಬದ ಅಡುಗೆ ಮಾಡಿಬಿಟ್ಟಿದ್ದೀರಿ”

ಇವನು ನನ್ನ ಮಗನಾದಾಗ ಏರ್ಪಡಿಸಿದ್ದ ಔತಣಕ್ಕೆ ನೀನು ಬಂದಿರಲಿಲ್ಲವಲ್ಲ ಅದಕ್ಕೆ” ಹೇಳಿದರು ಪಟವಾರಿ. ತೇಜಾನ ತಾಯಿ ಬಲವಂತಪಡಿಸಿ ಅವರಿಬ್ಬರಿಗೆ ಬಡಿಸುತ್ತಿದ್ದರು. ಆಗಾಗ ಕುಶಾಲ್‌ನ ನೋಟ ಆ ಇಬ್ಬರು ಹಿರಿಯರಿಂದ ತೇಜಾನ ಮೇಲೆ ಹರಿದಾಡುತ್ತಿತ್ತು. ಸಿಹಿ ಬಡಿಸುವಾಗ ಬಲವಂತವಾಗಿ ಇನ್ನೂ ಬಡಿಸಲು ಹೋದಾಗ ತನ್ನ ಎರಡೂ ಕೈಗಳನ್ನು ಅಡ್ಡ ತಂದು ಹೇಳಿದ ಕುಶಾಲ

“ಇಷ್ಟು ಮಾಡಿದ್ದೆ ಹೆಚ್ಚಾಗಿದೆ. ಇನ್ನೂ ತಿಂದರೆ ಇಲ್ಲಿಂದ ಏಳಲಾಗುವುದಿಲ್ಲ”

“ಸಾಕಮ್ಮ ಅವನಿಗೆ ಹೆಚ್ಚು ಬಲವಂತಪಡಿಸಬೇಡ. ಎಲ್ಲಾದರೂ ಕಾರು ನಡೆಸುತ್ತಲೇ ನಿದ್ದೆ ಹೋದಾನು”.

ಅವನ ತಟ್ಟೆ ಬಿಟ್ಟು ಮಗನಿಗೆ ಬಡಿಸಿದರವನ ತಾಯಿ. ಇನ್ನೂ ಹಾಕಲು ಹೋದಾಗ ಯೋಚಿಸುವಂತಹ ದನಿಯಲ್ಲಿ ಹೇಳಿದ ತೇಜಾ.

“ಸಾಕಮ್ಮ ಸಾಕು. ಮತ್ತೆ ನಾನು ಸ್ಟೇಷನ್ನಿಗೆ ಹೋಗಬೇಕು”

“ಸಾಕುಮಾಡೇ ದಿನದಿನಕ್ಕೆ ನಿನ್ನ ಆಸೆ ಹೆಚ್ಚಾಗುತ್ತಿದೆ” ಹಗುರ ಗದರುವ ದನಿಯಲ್ಲಿ ಹೇಳಿದರು ಪಟವಾರಿ.

“ನಿಮಗೇನು ಗೊತ್ತು ಬಿಡಿ! ಯಾಕೊ ಈ ನಡುವೆ ಅವನ ಊಟ ಕಡಿಮೆಯಾಗಿದೆ” ಎಂದು ತಮ್ಮನ್ನು ಸಮರ್ಥಿಸಿಕೊಂಡು ಬಡಿಸುವುದನ್ನು ನಿಲ್ಲಿಸಿದರು. ಮಗ ಮತ್ತು ತಂದೆ, ತಾಯಿಯರ ವರ್ತನೆಯನ್ನು ನೋಡುತ್ತಲೇ ಊಟ ಮಾಡುತ್ತಿದ್ದ ಕುಶಾಲ್.

ಅವರ ಊಟ ಮುಗಿದ ಮೇಲೆ ಹಿರಿಯರು ತಮ್ಮ ಕೋಣೆಗೆ ಹೋದರು. ತೇಜಾನ ಕೋಣೆ ಸೇರುತ್ತಲೇ ಅಚ್ಚರಿಯ ದನಿಯಲ್ಲಿ ಕೇಳಿದ ಕುಶಾಲ.

“ಏನಾಗಿದೆಯೋ ಯಾ…”

“ನನ್ನ ಮದುವೆಯಾಯಿತು” ಅವನ ಮಾತು ಮುಗಿಯುವ ಮುನ್ನ ಹೇಳಿದ ತೇಜಾ, ಅದನ್ನು ನಂಬಲಾಗದವನಂತೆ ಅವನು ಮಿತ್ರನ ಮುಖವನ್ನೇ ನೋಡುತ್ತಿದ್ದಾಗ ಬಾಗಿಲಿಗೆ ಬೋಲ್ಟ್ ಎಳೆದು ಕೇಳಿದ ತೇಜಾ,

“ಯಾರೊಡನೆ ಊಹಿಸು ನೋಡುವ?”

ಅವನ ಮುಖಭಾವ, ವರ್ತನೆ ಕಂಡು ದಂಗಾದ ಕುಶಾಲ್. ಅಂತಹದೇನು ಗುಟ್ಟು ಎಂದುಕೊಳ್ಳುತ್ತಾ ಹೇಳಿದ.

“ಈ ಪಟವಾರಿಯವರ ಯಾವ ಹತ್ತಿರದ ಬಂಧುವನ್ನೊ ಮದುವೆ ಯಾಗಿರಬಹುದು”

ತೇಜಾನ ಮುಖದಲ್ಲಿ ಒಮ್ಮೆಲೆ ಸಿಟ್ಟು ನೋವುಗಳ ಭಾವ ತುಂಬಿಬಂತು ಹೇಳಿದ.

“ಇವರ ಆಸ್ತಿ ಲಪಟಾಯಿಸಲು ದತ್ತು ಪುತ್ರನಾಗಿ ಇವರ ಬಂಧುವನ್ನು ಮದುವೆಯಾಗಿರಬಹುದೆಂದಲ್ಲವೇ ನೀ ಯೋಚಿಸುತ್ತಿರುವುದು. ಇಷ್ಟೇನೇನೋ ತೇಜಾನನ್ನು ನೀ ಅರ್ಥ ಮಾಡಿಕೊಂಡಿರುವುದು… ಅದು ನಿನ್ನ ತಪ್ಪಲ್ಲ ಬಿಡು. ಎಲ್ಲರೂ ಹಾಗೆ ತಿಳಿಯುತ್ತಾರೆ ಅವರಲ್ಲಿ ನೀನೊಬ್ಬ”

ತಕ್ಷಣ ತನ್ನ ತಪ್ಪನ್ನು ತಿದ್ದಿಕೊಳ್ಳುವಂತೆ ತೇಜಾನ ಹೆಗಲ ಮೇಲೆ ಕೈಹಾಕಿ ಹೇಳಿದ ಕುಶಾಲ್

“ಐಯಾಮ್ ಸಾರಿ… ಹಾಗಾದರೆ ಯಾರನ್ನು ನೀ ಮದುವೆಯಾದದ್ದು”

“ಕಲ್ಯಾಣಿಯನ್ನು” ಕುರ್ಚಿಯ ಹತ್ತಿರ ಹೆಜ್ಜೆ ಹಾಕುತ್ತಾ ಹೇಳಿದ ತೇಜಾ. ಕುಶಾಲನ ಮುಖ ದಿಗ್ಭ್ರಾಂತಿಯಿಂದ ಅಪನಂಬಿಕೆಯ ಭಾವಗಳಿಂದ ತುಂಬಿತು. ಅವನಿಗೆ ಕೂಡಲೇ ಏನು ಮಾತಾಡಬೇಕೋ ತೋಚಲಿಲ್ಲ. ಹಿಂದಿದ್ದ ಆರಾಮ ಕುರ್ಚಿಯಲ್ಲಿ ಕುಸಿದು ಕುಳಿತು ಉದ್ಗರಿಸಿದ.

“ಕಲ್ಯಾಣಿ, ಕಲ್ಲಕ್ಕ, ಕಾಳಿ, ಜಗದಾಂಭ, ಅವಳೀಗ ನನ್ನ ಮಡದಿ ಅವನಿಗೆ ಸ್ಪಷ್ಟವಾಗಲಿ ಎಂಬಂತೆ ಹೇಳಿದ. ಕುಶಾಲನ ಮುಖ ಇನ್ನಷ್ಟು ರಂಗುಗಳನ್ನು ಬದಲಿಸಿತು. ಈನ್ನಷ್ಟು ಸಮಯ ತೆಗೆದುಕೊಂಡು ಮತ್ತೆ ಉದ್ಧರಿಸಿದ.

“ಯಾರನೆಂದೆ!”

“ಕಲ್ಯಾಣಿ, ಕಲ್ಲಕ್ಕ, ಕಾಳಿ, ಜಗದಾಂಭೆ, ಅವಳೀಗ ನನ್ನ ಮಡದಿ” ಅವನಿಗೆ ಸ್ಪಷ್ಟವಾಗಲಿ ಎಂಬಂತೆ ಹೇಳಿದ. ಕುಶಾಲನ ಮುಖ ಇನ್ನಷ್ಟು ರಂಗುಗಳನ್ನು ಬದಲಿಸಿತು. ಇನ್ನಷ್ಟು ಸಮಯ ತೆಗೆದುಕೊಂಡು ಮತ್ತೆ ಉದ್ಗರಿಸಿದ.

“Have you gone mad!”

“Yes I have! I have gone mad in love”

ಆ ಮಾತು ಕುಶಾಲನ ಮೆದುಳಿಗಿಳಿದು ಅವನು ಅದನ್ನು ಅರಗಿಸಿಕೊಳ್ಳಲು ಸಮಯ ಹಿಡಿಯಿತು. ನಂತರ ಸರಾಗವಾಗಿ ಸಾಗಿದವು ಮಾತುಗಳು. ಮೊದಲಿನಿಂದ ಕೊನೆಯವರೆಗೆ ಅವನಿಗೆ ಎಲ್ಲವನ್ನೂ ವಿಚಾರಿಸಿದ ತೇಜಾ, ಪಟವಾರಿಯವರ ಮಾತು ಬಂದಾಗ ಅವರ ಬಗ್ಗೆ ಭಾವುದಕದನಿಯಲ್ಲಿ ಹೇಳಿದ ಅವನು ತನ್ನಲ್ಲೇ ಇರಿಸಿಕೊಂಡಿದ್ದ ಅವರ ಹಳೆಯ ಫೋಟೋಗಳನ್ನು ತೋರಿಸಿದ. ಪ್ರತಿ ಫೋಟೋವನ್ನು ತದೇಕಚಿತ್ತದಿಂದ ನೋಡಿದ ಕುಶಾಲ, ಒಮ್ಮೆಲೆ ಅಷ್ಟೆಲ್ಲಾ ಅನಿರೀಕ್ಷಿತ ಸಂಗತಿಗಳನ್ನು ಕೇಳಿದ ಅವನು ಏನೂ ಮಾತಾಡುವ ಸ್ಥಿತಿಯಲ್ಲಿ ಇರಲಿಲ್ಲ. ಆರಾಮ ಕುರ್ಚಿಯ ಹಿಂದೆ ಒರಗಿ ಕಣ್ಣು ಮುಚ್ಚಿದ. ಅವನಿಗೇ ಯಾವುದೋ ಅಪಘಾತವಾದಂತಹ ಭಾವವನ್ನು ಹೊರಗೆಡಹುತ್ತಿತ್ತು ಮುಖ. ಅದನ್ನು ಕಂಡ ತೇಜಾನೂ ಏನೂ ಮಾತಾಡಲು ಹೋಗಲಿಲ್ಲ. ಹಾಗೇ ಸುಮಾರು ಐದು ನಿಮಿಷಗಳು ಉರುಳಿದವು. ಆಗ ಸಾಮಾನ್ಯ ದನಿಯಲ್ಲಿ ಕೇಳಿದ ಕುಶಾಲ.

“ಕಲ್ಯಾಣಿ ಈಗ ಗರ್ಭಿಣಿಯೇ?”

“ಹೂಂ! ಅವಳಿದ್ದಿದ್ದರೆ ನಿನ್ನ ಪರಿಚಯಿಸುತ್ತಿದ್ದೆ” ಹೇಳಿದ ತೇಜಾ.

“ಆ ಅದೃಷ್ಟ ನನಗಿರಲಿಕ್ಕಿಲ್ಲ. ನಡಿ ನಿನ್ನ ತಂದೆ ತಾಯಿಯರೊಡನೆ ಮಾತಾಡುತ್ತಾ ಕೂಡುವ” ಎಂದ ಕುಶಾಲ.

ಕುರ್ಚಿಯಿಂದೆದ್ದ ತೇಜಾ, ಆಗ ಅಲ್ಲಿದ್ದ ಫೋನ್ ಶಬ್ದ ಮಾಡ ತೊಡಗಿತ್ತು. ತನ್ನ ಕೋಣೆಯಲ್ಲಿ ಎಕ್ಸ್‌ಟೆನ್ಸನ್ ಒಂದನ್ನು ಇರಿಸಿಕೊಂಡಿದ್ದ ತೇಜಾ, ರಿಸೀವರ ಎತ್ತಿದ ಅವನು “ಹಲೋ” ಎಂದ.

ಅತ್ತ ಕಡೆಯಿಂದ ಹಗುರವಾಗಿ ಕೆಮ್ಮಿದ ಸದ್ದು. ಅದು ಅವನ ಕಲ್ಯಾಣಿಯ ನಡುವೆ ಉಪಯೋಗಿಸಲ್ಪಡುವ ಸಂಕೇತ ಭಾಷೆ. ಅವಳು ಬಹು ಅಪರೂಪವಾಗಿ ಫೋನ್ ಮಾಡುತ್ತಿದ್ದಳು.

“ಯಾರೊ ಅತಿಥಿಯರು ಬಂದಂತಿದೆ?” ದನಿ ಬದಲಿಸಿ ಕೇಳಿದಳು. ಇಲ್ಲೇ ಹತ್ತಿರದಿಂದ ಮಾತಾಡುತ್ತಿದ್ದಾಳೆಂಬುವುದು ಗೊತ್ತಾಯಿತು ತೇಜಾನಿಗೆ. ಅವನ ಮುಖ ಸಂತಸದಿಂದ ಅಗಲವಾಯಿತು.

“ಎಲ್ಲಾ ನಮ್ಮವರೇ ಯಾರು ಬೇಕಾದರೂ ಬರಬಹುದು” ಹೇಳಿದ ತೇಜಾ. ಅವನ ಆ ಅರ್ಥವಿಲ್ಲಂದಂತಹ ಮಾತು ಅವಳಿಗೆ ಮಾತ್ರ ಅರ್ಥವಾಗುತ್ತಿತ್ತು.

“ಕಾದಿರಿ” ಎಂಬ ಮಾತಿನ ನಂತರ ಸಂಪರ್ಕ ಮುರಿದ ಸದ್ದು. ಅವನು ಕುಶಾಲನ ಕಡೆ ತಿರುಗುತ್ತಿದ್ದಂತೆ ಅವನೇ ಹೇಳಿದ.

“ಕಲ್ಯಾಣಿಯ ಫೋನ್ ಅಲ್ಲವೆ!”

“ಹೌದು ಅವಳೀಗ ಬರುತ್ತಾಳೆ” ಹೇಳಿದ ತೇಜ.

“ನಡಿ ಅಲ್ಲೇ ಕುಳಿತು ಮಾತಾಡುತ್ತಿರುವ”

ಅವರಿಬ್ಬರೂ ಕೋಣೆಯಲ್ಲಿ ಬಂದಾಗ ಹಿರಿಯ ದಂಪತಿಯರು ಹಳೆಯದಾವುದೋ ವಿಷಯವನ್ನು ನೆನುಹಿಸಿಕೊಂಡು ನಗುತ್ತಿದ್ದರು. ನೇರವಾಗಿ ಪಟವಾರಿಯವರ ಬಳಿ ಹೋದ ಕುಶಾಲ ಅವರ ಕಾಲಿಗೆ ನಮಸ್ಕರಿಸಿ ಹೇಳಿದ

“ನೀವು ಇಂತಹ ಮಹಾಪುರುಷರೆಂದು ಗೊತ್ತಿರಲಿಲ್ಲ. ಸರ್! ನನ್ನಿಂದ ಏನಾದರೂ ತಪ್ಪಾಗಿದ್ದರೆ ಕ್ಷಮಿಸಬಿಡಿ!… ನಿಜವಾಗಲೂ ತೇಜಾ ಅದೃಷ್ಟವಂತ ನಿಮ್ಮಂತಹವರ ಸೇವೆ ಮಾಡುವ ಅವಕಾಶ ಅವನಿಗೆ ಸಿಕ್ಕಿದೆ”

ಅವನನ್ನು ಎಬ್ಬಿಸಿ ತಮ್ಮ ಬದಿಗೆ ಕೂಡಿಸಿಕೊಂಡರು ಪಟವಾರಿಯವರು ತಾಯಿಯ ಬದಿಗೆ ಕುಳಿತ ತೇಜ.

“ಇವನು ನಿನಗೆಲ್ಲಾ ಹೇಳಿರಬಹುದು. ಈಗ ನೋಡು ನಮ್ಮ ಗೋಳು! ಗರ್ಭಿಣಿಯಾದ ಸೊಸೆ ಕಾಡಿನಲ್ಲಿ ಅಲೆಯುತ್ತಾಳೆ. ಇವನು ಪೋಲಿಸ್ ಸ್ಟೇಷನ್ ನಲ್ಲಿರುತ್ತಾನೆ” ಹೇಳಿದರು ತೇಜಾನ ತಾಯಿ.

“ನೀ ಒಂದು ಮಾತು ಹೇಳಮ್ಮ ನಾ ಕೆಲಸ ಬಿಟ್ಟು ಬಿಡುತ್ತೇನೆ” ಕೂಡಲೇ ಹೇಳಿದ ತೇಜಾ.

“ಅದೆಲ್ಲಾ ಏನು ಮಾಡಬೇಕೋ ನೀವು ತಂದೆ, ಮಗ ಕುಳಿತು ಮಾತಾಡಿಕೊಳ್ಳಿ. ಆಗಂತೂ ಇವರು ಬಿಳಿಯರ ವಿರುದ್ಧ ಹೋರಾಡುತ್ತಾ ನನ್ನ ಒಂಟಿಯಾಗಿ ಬಿಟ್ಟಿದ್ದರು. ಈಗ ಸೊಸೆಯದೂ ಈ ಗತಿ” ಸ್ವಲ್ಪ ಮುನಿಸಿನ ದನಿಯಲ್ಲಿಯೇ ಹೇಳಿದರವನ ತಾಯಿ.

ಆ ಮಾತು ಅಷ್ಟು ಮುಖ್ಯವಲ್ಲವೆಂಬಂತೆ ಹೇಳಿದರು ಪಟವಾರಿ ಸಾಹೇಬರು.

“ನೀನೇ ಹೇಳು ಕುಶಾಲ್ ಕಲ್ಯಾಣಿ ಮಹಾ ಅಪರಾಧಿಯಾಗಿ ಕಾಣುತ್ತಾಳೆಯೇ”

“ಕಾನೂನಿನ ದೃಷ್ಟಿಯಲ್ಲಿ ಅಪರಾಧಿಯಾಗಿರಬಹುದು ಸರ್! ಆದರೆ ಈ ಯುಗದಲ್ಲಿ ಅಂತಹ ಧೈರ್ಯಶಾಲಿ ಹೆಣ್ಣು ಇದ್ದಾಳೆಂದೂ ಊಹಿಸುವುದು ಕಷ್ಟ. ಆಕೆಯ ಜನಪ್ರಿಯತೆ ಎಷ್ಟಿದೆ ಎಂದರೆ ಪೋಲಿಸ್ ಖಾತೆಯಲ್ಲೂ ಆಕೆಯ ಭಕ್ತರಿದ್ದಾರೆ” ಅವರ ಮಾತಿಗೆ ಕಲ್ಯಾಣಿಯ ಬಗೆಗಿನ ತನ್ನ ಅಭಿಪ್ರಾಯವನ್ನು ಹೇಳಿದ ಕುಶಾಲ.

“ಧೈರ್ಯದ ಮಾತು ಬಿಡು ನಿನಗೆ, ನನಗೆ ತೇಜಾನಿಗೆ ಧೈರ್ಯವಿಲ್ಲವೇ? ಕಾಡಿನಲ್ಲಿ ಕಾಡುಪ್ರಾಣಿಯಂತೆ ಅಲೆಯುತ್ತಾ ಸರಿಯಾದ ಸಮಯಕ್ಕೆ ಅನ್ನ ನೀರುಗಳಿಲ್ಲದೇ ದೇಶ ಸೇವೆ ಮಾಡುತ್ತಿದ್ದಾಳೆ. ದೇಶವನ್ನು ಹೆಗ್ಗಣಗಳಂತೆ ತಿಂದೂ ತಿಂದೂ ಮಜಾ ಮಾಡುತ್ತಿರುವ ಈ ಭ್ರಷ್ಟರನ್ನು ಮುಗಿಸುವುದು ದೇಶಸೇವೆಯಲ್ಲವೇ, ಒಂದು ರೀತಿಯಲ್ಲಿ ಅವಳು ನಿಮ್ಮ ಕೆಲಸವನ್ನು ಸುಲಭ ಮಾಡುತ್ತಿದ್ದಾಳೆ. ಇನ್ನು ಕಾನೂನಿನ ವಿಷಯ, ಎಷ್ಟು ಮುಖ್ಯಮಂತ್ರಿಯ ವಿರುದ್ಧ, ಎಷ್ಟು ಜನ ಪ್ರಧಾನಮಂತ್ರಿಯರ ವಿರುದ್ಧ ಕಾನೂನು ರೀತ್ಯಾ ಮೊಕದ್ದಮೆಗಳಿಲ್ಲ. ಆದರೆ ಕಾನೂನು ತನ್ನದೇ ಗತಿಯಲ್ಲಿ ತೆವಳುತ್ತದೆ. ಆವರೆಗೆ ಅವರುಗಳು ಇಹಲೋಕಯಾತ್ರೆ ಮುಗಿಸಿ ಅಮರರಾಗಿಬಿಡುತ್ತಾರೆ. ಮುಂದೆ ಅವರ ಫೋಟೋಗಳ ಪೂಜೆ ನಡೆಯುತ್ತದೆ. ಕಲ್ಯಾಣಿ ಪೂಲನ್‌ದೇವಿಯಂತೆ ದರೋಡೆಗಳನ್ನಂತೂ ಮಾಡಿಲ್ಲ” ಕುಶಾಲನ ಮಾತಿಗೆ ಭಾಷಣದಂತಹ ವಿವರ ಕೊಟ್ಟರು ಪಟವಾರಿಯವರು. ಅವರ ಮಾತಿನ ಮಾರುದನಿ ಕೋಣೆಯಲ್ಲಿ ನಂದುತ್ತಿದ್ದಂತೆ ಹೇಳಿದ ಕುಶಾಲ.

“ನೀವು ಹೇಳುವುದೆಲ್ಲಾ ನಿಜ ಸರ್! ಆದರೆ ರಾಜಕಾರಣ ಅಂತಹದು. ನಾವು ರಾಜಕಾರಣಿಯರಿಗೆ ಗುಲಾಮರಾಗಿದ್ದೇವೆ.”

“ಗುಲಾಮರಾಗಿ ನೀವೂ ಧನವಂತರಾಗುತ್ತಿದ್ದೀರಿ ಅಲ್ಲವೆ?” ಅವನ ಮಾತು ಮುಗಿದ ಕೂಡಲೇ ಮಾತಾಡಿದರು ತೇಚಾನ ತಂದೆ.

“ಕೆಲವರನ್ನು ಬಿಟ್ಟು ಬಹಳ ಜನ ಹಾಗಾಗುತ್ತಿದ್ದಾರೆ. ಅದನ್ನು ಒಪ್ಪಿಕೊಂಡ ಕುಶಾಲ.

“ಅಂದರೀಗ ಇಲ್ಲಿ ಬಂದರೆ ತಮ್ಮ ಗುಂಪಿನೊಡನೆ ಬಂದರೆ ತೇಚಾನನ್ನು, ಕಲ್ಯಾಣಿಯನ್ನು ಅರೆಸ್ಟ್ ಮಾಡಿ ಪಾರಿತೋಷಕ ತೆಗೆದುಕೊಳ್ಳುವುದಿಲ್ಲವೇ?”

ಅವರು ತನ್ನನ್ನೇ ಉದ್ದೇಶಿಸಿ ಮಾತಾಡುತ್ತಿದ್ದಾರೆಂದುಕೊಂಡ ಕುಶಾಲ ಹೇಳಿದ.

“ನನ್ನದು ತೇಜಾನದು ಎರಡು ದೇಹಗಳು ಸರ್! ಆದರೆ ಪ್ರಾಣ ಒಂದೇ. ನನ್ನ ನಿಮ್ಮ, ತೇಜಾನ ವಿಚಾರಗಳೂ ಒಂದೇ. ಅಂತಹ ಪ್ರಶ್ನೆ ಕೇಳಿ ನೀವು ನನ್ನ ಅವಮಾನ ಮಾಡುತ್ತಿದ್ದೀರಿ ಸರ್!” ಅವನ ಮಾತಿನಲ್ಲಿ ನೋವಿತ್ತು. ಕೂಡಲೇ ಹೇಳಿದರು ಪಟವಾರಿಯವರು

“ನಾ ನಿನ್ನ ಉದ್ದೇಶಿಸಿ ಹೇಳಿರಲಿಲ್ಲ. ನಿನಗದು ಹಾಗನಿಸಿದ್ದರೆ ನನ್ನ ಕ್ಷಮಿಸು. ನಿನ್ನ, ತೇಜಾರಂತೆ ಕೆಲವರಿದ್ದಾರೆಂದೇ ಈ ದೇಶ ಇನ್ನೂ ನಾಶವಾಗಿಲ್ಲ”

ಅದಕ್ಕೆ ಕುಶಾಲ ಉತ್ತರಿಸಲು ಹೋದಾಗ ಬಂದಳು ಕಲ್ಯಾಣಿ. ಅವಳನ್ನು ನೋಡುತ್ತಲೇ ಅಚ್ಚರಿ ಸಂತಸದ ಭಾವ ತುಂಬಿಬಂತು ಹಿರಿಯರ ಮುಖದಲ್ಲಿ. ಒಬ್ಬ ಅಪರೂಪದ ವ್ಯಕ್ತಿಯನ್ನು ನೋಡುತ್ತಿರುವಂತೆ ನೋಡುತ್ತಿದ್ದ ಕುಶಾಲ ಅವಳು ಬಹಳ ದಣಿದವಳಂತೆ ಕಂಡುಬರುತ್ತಿದ್ದಳು. ಅವಳ ಕೈ ಹಿಡಿದು ಕರೆತಂದು ಸೋಫಾದಲ್ಲಿ ಕೂಡಿಸಿದ ತೇಜಾ, ಉಕ್ಕಿಬಂದ ಪ್ರೇಮದಿಂದ ಅವಳ ತಲೆಯ ಮೇಲೆ ಕೈಸವರುತ್ತಾ ಕೇಳಿದರು ಅತ್ತೆ.

“ಏನಾಯಿತಮ್ಮ… ನನ್ನ ಕೂಸಿಗೆ ಏನಾಯಿತೇ… ಹಸಿವಾಗಿದೆಯೇ?”

ಸೊಸೆಯನ್ನು ಉದ್ದೇಶಿಸಿದ ಮಾತು ಮುಗಿದ ಮೇಲೆ ಆಳಿಗೆ ದೊಡ್ಡ ಲೋಟದಲ್ಲಿ ಬಿಸಿಬಿಸಿ ಹಾಲು ತರುವಂತೆ ಹೇಳಬೇಕೆಂದು ಮಗನಿಗೆ ಆಜ್ಞಾಪಿಸಿದರು. ಅದನ್ನು ಮಾಡಲು ಎದ್ದು ಹೋದ ತೇಜ, ಅವನು ಹೋಗುತ್ತಿದ್ದಂತೆ ಹೇಳಿದರು ಅವಳ ಮಾವ.

“ನೋಡಮ್ಮ ಇನ್ನೂ ಒಂದೆರಡು ತಿಂಗಳು ಕೆಲಸ ಕಡಿಮೆ ಮಾಡಿಕೊ! ಈ ಸಮಯದಲ್ಲಿ ನಿನಗೆ ರೆಸ್ಟ್ ಬೇಕು…”

“ನನಗೇನೂ ಆಗಿಲ್ಲ ಅಪ್ಪ! ಬರೀ ರೆಸ್ಟ್ ತೆಗೆದುಕೊಳ್ಳುತ್ತಾ ಕೂತರೆ ನಿಮ್ಮ ಮನೆಗೆ ಭಗತ್‌ಸಿಂಗ್‌ ಬರುತ್ತಾನೆಯೇ” ಅವರ ಮಾತನ್ನು ನಡುವೆಯೇ ತಡೆದು ಮಾತಾಡಿದಳು ಕಲ್ಯಾಣಿ. ಅವಳ ದನಿಯಲ್ಲಿ ದಣಿವಿನ ಅಂಶವು ಲವಲೇಶವೂ ಇರಲಿಲ್ಲ. ಬಹಳ ಪ್ರಭಾವಿ ಕಂಠ ಎನಿಸಿತು. ಕುಶಾಲನಿಗೆ ಮತ್ತೆ ಬಂದ ತೇಜಾ ಅವರಿಬ್ಬರ ಪರಿಚಯ ಮಾಡಿಸಿದ. ಕೈಜೋಡಿಸಿ ನಮಸ್ಕಾರ ಮಾಡಿದ ಕುಶಾಲ ಹೇಳಿದ.

“ನೀವು ನನಗಿಂತ ಚಿಕ್ಕವರಾದರೂ ನಾನು ನಿಮಗೆ ಕಾಲು ಮುಟ್ಟಿ ನಮಸ್ಕರಿಸುವ ಮಟ್ಟಕ್ಕೆ ಬೆಳೆದುಬಿಟ್ಟಿದ್ದೀರಿ….”

“ಛೇ… ಛೇ… ಅಂತಹ ಮಾತಾಡಬಾರದು. ನಾನೊಬ್ಬ ಸಾಮಾನ್ಯ ಹೆಣ್ಣು ನಿಮ್ಮ ಮಿತ್ರನ ಮಡದಿ” ಅವನ ಮಾತನ್ನು ನಡುವೆಯೇ ತಡೆದು ಹೇಳಿದಳು ಕಲ್ಯಾಣಿ.

“ಅದೇನೇ ಹೇಳಿ ನಿಮ್ಮನ್ನು ಮದುವೆಯಾಗಲು ನಮ್ಮ ತೇಜ ಪುಣ್ಯ ಮಾಡಿದ್ದ” ತನ್ನ ಮಾತು ನಿಜವೆಂಬಂತಹ ದನಿಯಲ್ಲಿ ಮಾತಾಡಿದ ಕುಶಾಲ ವ್ಯಂಗ್ಯದ ನೋವಿನ ನಗೆ ನಕ್ಕು ಹೇಳಿದಳು ಕಲ್ಯಾಣಿ.

“ಅಮ್ಮಾ ಹೀಗೆ ನಿನ್ನ ತೊಡೆಯಲ್ಲಿ ತಲೆ ಇಟ್ಟು ಶಾಶ್ವತವಾಗಿ ಮಲಗಿಬಿಡಬೇಕೆನಿಸುತ್ತಿದೆ.”

“ಅದೇನದು ಕೆಟ್ಟ ಮಾತು! ಇನ್ನೊಂದು ಸಲ ಅಂತಹ ಮಾತಾಡಬಾರದು” ಸಿಟ್ಟಿನಿಂದ ಎತ್ತರದ ದನಿಯಲ್ಲಿ ಹೇಳಿದರವರ ಅತ್ತೆ. ಸರಿಯಾಗಿ ಕುಳಿತ ಕಲ್ಯಾಣಿಯ ಮುಖದಿಂದ ದಣಿವಿನ ಭಾವ ಪೂರ್ತಿ ಇಳಿದುಬಿಟ್ಟಿತು. ಅಕ್ಕರೆಯಿಂದ ಪಟವಾರಿಯವರ ಕಡೆ ನೋಡುತ್ತಾ ಕೇಳಿದಳು.

“ಅಪ್ಪಾ! ನಾ ನಿಮ್ಮ ಮಗನೊಡನೆ ಸ್ವಲ್ಪ ಮಾತಾಡುವುದಿತ್ತು ಅವರನ್ನು…”

“ಹೋಗಿ! ಹೋಗಿ… ಏನು ಮಾತಾಡವುದಿದೆಯೋ ಮಾತಾಡಿ” ಅವಳು ಮಾತು ಮುಗಿಯುವ ಮುನ್ನ ಅಪ್ಪಣೆ ಕೊಟ್ಟರು ಪಟವಾರಿ.

ತೇಜಾ, ಕಲ್ಮಾಣಿ ಎದ್ದು ತಮ್ಮ ಕೋಣೆಯ ಕಡೆ ನಡೆದರು ಆ ಕೋಣೆಯಿಂದ ಹೊರಬೀಳುತ್ತಲೇ ಕಲ್ಯಾಣಿಯ ಮುಖಭಾವ ಬದಲಾಗಿತ್ತು. ಯಾವುದೋ ವಿಪತ್ತು ಸಂಭವಿಸಿದೆ ಎಂದುಕೊಂಡ ತೇಜಾ, ತಮ್ಮ ಕೋಣೆಯೊಳಗೆ ಹೋಗುತ್ತಲೇ ಬಾಗಿಲ ಬೋಲ್ಟ್ ಹಾಕಿ ಕೇಳಿದಳು ಕಲ್ಯಾಣಿ.

“ನಿಮ್ಮ ಸ್ನೇಹಿತನನ್ನು ನಂಬಬಹುದೇ?”

“ಎಂತಹ ಹುಚ್ಚು ಪ್ರಶ್ನೆ ಕೇಳುತ್ತಿ ಅಷ್ಟು ನಂಬಿಕೆ ಇಲ್ಲದಿದ್ದರೆ ನಿನ್ನ ಭೇಟಿ ಮಾಡಿಸುತ್ತಿದ್ದೆನೆ”

“ಯಾಕೋ ಬದುಕಿನ ಮೇಲೆ ಆಸೆ ಬೆಳೆಯುತ್ತಾ ಹೋದ ಹಾಗೆಲ್ಲಾ ಇಲ್ಲದ ಅನುಮಾನಗಳು ಹುಟ್ಟಿಕೊಳ್ಳತೊಡಗಿವೆ… ನಾ ನಿನಗೆ ಒಂದು ವಿಶೇಷ ಸುದ್ದಿ ಕೊಡಲು ಬಂದೆ. ಚಲ್ಲಪ್ಪನ ತಂಡದವರು ಬಂಡೇರಹಳ್ಳಿಗೆ ಬಂದಿದ್ದಾರೆ. ಅವರು ಒಂದು ಸಲ ಸಿದ್ದಾನಾಯಕ್‌ನ ಮನೆಯಲ್ಲಿ ಸಭೆ ಸೇರಿದ್ದರಂತೆ. ಬಂಡೇರಹಳ್ಳಿಗೆ ಇದನ್ನು ಹೇಳಲು ಶಂಕರನನ್ನು ಕಳಿಸಿದ್ದೆ. ನೀನಿಲ್ಲಿ ಬಂದಿದ್ದಿ ಎಂದು ಗೊತ್ತಾಗಿ ನಾನೇ ಬಂದೆ” ಅವನನ್ನೂ ಎಚ್ಚರಿಸುವಂತಿತ್ತು ಮಾತು. ಅದರ ಬಗ್ಗೆಯೇ ಯೋಚಿಸುತ್ತಾ ಕೇಳಿದ ತೇಜಾ

“ಅವರುಗಳ್ಯಾಕೆ ನಾಯಕನ ಮನೆಗೆ ಬಂದಿರಬಹುದು. ಎಂತಹ ಸಂಚು…”

“ಚೆಲ್ಲಪ್ಪ ಕ್ರಾಂತಿಕಾರಿಯರ ಹೆಸರಿನಲ್ಲಿ ದರೋಡೆ ಮಾಡುತ್ತಾನೆಂದು ನಿಮ್ಮ ಪೋಲಿಸ್ ಖಾತೆಯವರಿಗೂ ಗೊತ್ತು. ನಾಯಕ್ ನಿನ್ನ ಮೇಲಿನ ದ್ವೇಷ ತೀರಿಸಿಕೊಳ್ಳಲು ಅವರನ್ನು ಕರೆಸಿದ್ದಾನೇನೋ ಎಂದು ನನ್ನ ಅನುಮಾನ… ನಾವೇ ಅವರನ್ನು ಮುಗಿಸಿಬಿಡಬೇಕೆ” ಈ ಸಲ ಯೋಜನೆ ಹಾಕುತ್ತಿರುವಂತೆ ಮಾತು ಮುಗಿಸದಳು ಕಲ್ಯಾಣಿ. ಕೂಡಲೇ ಆತುರದ ದನಿಯಲ್ಲಿ ಹೇಳಿದ ತೇಜಾ.

“ಬೇಡ… ಬೇಡ.. ನೀವೇನೂ ಮಾಡಬೇಡಿ ನಾನೇ ಎಲ್ಲಾ ನೋಡಿಕೊಳ್ಳುತ್ತೇನೆ. ಅವರು ಎಷ್ಟು ಜನರಿದ್ದಾರೆ. ಅವರ ಬಳಿ ಎಂತಹ ಆಯುಧಗಳಿರಬಹುದು”

ಅದಕ್ಕೆ ಅವಳಲ್ಲಿ ಉತ್ತರ ಸಿದ್ಧವಾಗಿತ್ತು.

“ನಾಲ್ಕು ಜನರಿದ್ದಾರೆ. ಚೂರಿ, ಚಾಕು, ಬರ್ಜಿಯಂತಹ ಆಯುಧಗಳು ಮಾತ್ರ ಇರುತ್ತವೆ ಎಂದು ನನಗೆ ಗೊತ್ತು. ನಾಯಕ ಅವರುಗಳಿಗೆ ರಿವಾಲ್ವರ್ ಕೊಟ್ಟಿದ್ದರೂ ಕೊಟ್ಟಿರಬಹುದು. ಅವು ಕಳಪೆ ದರ್ಜೆಯವು”

ಕೆಲ ಕ್ಷಣಗಳು ಯೋಚಿಸಿ ಕೇಳಿದ ತೇಜ

“ಎ.ಕೆ.೪೭ ಸ್ಟನ್‌ಗನ್‌ನಂತಹವು…”

“ಛೇ… ಛೇ… ತಿಂದು ಕುಡಿದು ಮಜಾ ಮಾಡುವವರಿಗೆ ಅದೆಲ್ಲಿಂದ ಬರುತ್ತದೆ. ಸರಿಯಾಗಿ ಯೋಚಿಸು…”

“ಎಲ್ಲಾ ಯೋಚಿಸಿದ್ದೇನೆ. ನೀ ನಡುವೆ ಬರಬೇಡ. ನನ್ನ ರಕ್ಷಣೆಗೂ ನೀನ್ಯಾವ ಮನುಷ್ಯರನ್ನೂ ಕಳಿಸಬೇಡ. ಇದು ನಮ್ಮ ಭವಿಷ್ಯದ ಪ್ರಶ್ನೆ” ಕಲ್ಯಾಣಿಯ ಮಾತನ್ನು ತಡೆದು ದೃಢವಾದ ದನಿಯಲ್ಲಿ ಹೇಳಿದ ತೇಜಾ.

“ಜಾಗ್ರತೆಯಾಗಿರು. ನಿನಗೇನಾ…”

“ಎಂತಹ ಮಾತಾಡುತ್ತಿ ಕಲ್ಯಾಣಿ… ನೀ ನಿಶ್ಚಿಂತೆಯಿಂದಿರು. ಬೆಳಗಾಗುವುದರೊಳಗೆ ಅವರ ಗತಿ ಏನಾಗಿದೆ ಎಂಬುವುದು ನಿನಗೆ ಗೊತ್ತಾಗುತ್ತದೆ. ಆತ್ಮವಿಶ್ವಾಸದ ದನಿಯಲ್ಲಿ ಹೇಳಿದ ತೇಜಾ. ಅವನ ಕೊರಳ ಸುತ್ತೂ ಕೈಹಾಕಿ ಗಾಢವಾದ ಮುದ್ದು ಕೊಟ್ಟು ಹೇಳಿದಳು ಕಲ್ಯಾಣಿ

“ನಾನಿಲ್ಲಿಂದಲೇ ಹೊರಟುಹೋಗುತ್ತೇನೆ. ಅಮ್ಮ ಅಪ್ಪನಿಗೆ ಏನಾದರೂ ಸುಳ್ಳು ಹುಟ್ಟಿಸಿ ಹೇಳು… ಜಾಗ್ರತೆ.”

ಮಾತು ಮುಗಿಸಿದ ಅವಳು ಬೋಲ್ಟನ್ನು ತೆಗೆಯುತ್ತಿರುವಾಗ ಹೇಳಿದ ತೇಜಾ

“ನೀನೂ ಜಾಗ್ರತೆ. ಈಗ ನೀನೊಬ್ಬಳೇ ಅಲ್ಲ. ನಿನ್ನೊಡನೆ ಅಪ್ಪನ ಭಗತ್‌ಸಿಂಗನೂ ಇದ್ದಾನೆ”

ಅವನು ಅವಳನ್ನು ಬೀಳ್ಕೊಡುವ ಮುದ್ದಿನಂತೆ ಗಾಢವಾಗಿ ಮುದ್ದಿಸಿದ. ಬಾಗಿಲು ತೆಗೆದ ಅವಳು ಮಟ್ಟಲಿನಿಂದ ಕೆಳಗಿಳಿದಳು. ತೇಜಾ ಅಪ್ಪ, ಅಮ್ಮ ಮತ್ತು ಮಿತ್ರ ಕುಳಿತಿರುವ ಕೋಣೆಯ ಕಡೆ ಹೆಜ್ಜೆ ಹಾಕಿದ.

ಅವನು ಕೋಣೆಯೊಳ ಹೋಗುತ್ತಲೇ ಕೇಳಿದಳವನ ತಾಯಿ.

“ಅವಳೆಲ್ಲಿ?”

“ಯಾರೊ ಬಡವ ಅವಳಿಗಾಗಿ ಎಲ್ಲೊ ಕಾಯುತ್ತಿದ್ದಾನಂತಮ್ಮ ಅದಕ್ಕೆ ಅವಸರದಲ್ಲಿ ಹೊರಟುಹೋದಳು ನಿಮ್ಮೆಲ್ಲರ ಕ್ಷಮೆ ಕೇಳಿದ್ದಾಳೆ” ಯಾರೆ ಆಗಲಿ ನಂಬುವಂತಹ ದನಿಯಲ್ಲಿ ಹೇಳಿದ ತೇಜಾ. ಅತಿಯಾದ ಸಿಟ್ಟಿನ ಎತ್ತರದ ದನಿಯಲ್ಲಿ ಹೇಳಿದರವನ ತಾಯಿ.

“ತಂದೆ ಮಗ ಕಲೆತು ಅವಳನ್ನು ತಲೆಯ ಮೇಲೆ ಹತ್ತಿಸಿಕೊಂಡಿದ್ದೀರಿ! ಲೋಕದ ಚಿಂತೆ ಅವಳಿಗ್ಯಾಕೆ? ಇವರು ನನ್ನ ದೇಶ ನನ್ನ ದೇಶ ಅಂತ ಅಲೆಮಾರಿಗಳ ಹಾಗೆ ಊರೂರು ಸುತ್ತಾಡಿದ್ದರು. ಅವರಿಗೇನು ಬಂತು ಭಾಗ್ಯ. ಇನ್ನು ಮುಂದೆ ಮನೆಯಲ್ಲೇ ಇರಲಿ ಯಾವ ಪೋಲಿಸಿನವನು ಬರುತ್ತಾನೋ ನಾನೂ ನೋಡಿಕೊಳ್ಳುತ್ತೇನೆ” ಅವರ ಸಿಟ್ಟಿನ ಮಾತಿನಲ್ಲಿ ಅತಿಯಾದ ಮಮಕಾರವೂ ತುಂಬಿತ್ತು. ಶಾಂತ ದನಿಯಲ್ಲಿ ಹೇಳಿದರು ಪಟವಾರಿ.

“ಅಷ್ಟ್ಯಾಕೆ ಕೂಗುತ್ತಿ ಲಕ್ಷ್ಮಿ, ನಿನ್ನ ಸೊಸೆ ಏನೂ ಸಾಮಾನ್ಯ ಹೆಣ್ಣಲ್ಲ. ಅವಳು ಕಾಳಿ, ಅವಳಿಗೇನೂ ಆಗುವುದಿಲ್ಲ, ನೀನು ಸುಮ್ಮನೆ ಕೊರಗಿ ನಿನ್ನ ಆರೋಗ್ಯ ಕೆಡಿಸಿಕೊಳ್ಳಬೇಡ.”

“ಅಪ್ಪಾ ಹೇಳುತ್ತಿರುವುದು ನಿಜವಮ್ಮ! ನೀ ಸುಮ್ಮನೆ ಕೊರಗಬೇಡ” ತಂದೆಯ ಮಾತಿಗೆ ತನ್ನ ದನಿಯನ್ನೂ ಸೇರಿಸಿದ ತೇಜಾ, ತಂದೆ, ಮಗ ಇಬ್ಬರ ಕಡೆ ಒಂದೊಂದು ನೋಟ ಬೀರಿ ಕುಶಾಲನ ಕಡೆ ತಿರುಗಿ ಹೇಳಿದರು ಲಕ್ಷ್ಮೀದೇವಿ.

“ನೋಡಿದಯೇನಪ್ಪಾ, ನೀನೇ ನೋಡು ಒಬ್ಬರ ಮಾತಿಗೆ ಒಬ್ಬರು ದನಿ ಹೇಗೆ ಕೂಡಿಸುತ್ತಿದ್ದಾರೋ”

ಎಲ್ಲರನ್ನೂ ನೋಡಿ ನಕ್ಕು ಹೇಳಿದ ಕುಶಾಲ.

“ನಿಮ್ಮ ಜಗಳದ ನಡುವೆ ನಾ ಬರುವುದಿಲ್ಲವಮ್ಮ! ಇಲ್ಲದಿದ್ದರೆ ನೀವೂ ನನ್ನ ಬೈಯುತ್ತೀರಿ”

ಅದೇ ಸಮಯವೆಂಬಂತೆ ಹೇಳಿದ ತೇಜಾ.

“ಅಪ್ಪಾ! ನಾನಿವನಿಗೆ ನಮ್ಮ ಹಳ್ಳಿ ತೋರಿಸಿಕೊಂಡು ಬರುತ್ತೇನೆ”

“ಹೋಗಿ! ನೋಡಪ್ಪಾ ನಮ್ಮ ದೇವನಹಳ್ಳಿ ಹೇಗಿದೆ ಎಂಬುದು ನೋಡು” ಕೂಡಲೇ ಅಪ್ಪಣೆ ನೀಡಿದರವನ ತಂದೆ.

ಕುಶಾಲ್ ಮತ್ತು ತೇಜಾ ಮನೆಯಿಂದ ಹೊರಬಿದ್ದು ಚಿಕ್ಕದಾರಿಯ ಮೂಲಕ ಹೊಲಗಳ ಕಡೆ ನಡೆಯುತ್ತಿರುವಾಗ ಹೇಳಿದ ತೇಜಾ.

“ಇವತ್ತು ರಾತ್ರಿ ನೀನಿಲ್ಲೆ ಇದ್ದು ಬಿಡು”

“ಯಾಕೆ ನಿನ್ನ ಸಮಸ್ಯೆಗೆ ಪರಿಹಾರ ಹುಡುಕಲೋ?” ಕೇಳಿದ ಕುಶಾಲ.

“ನನ್ನ ಸಮಸ್ಯೆಗೆ ಯಾವ ಪರಿಹಾರವೂ ಇಲ್ಲ. ಸಮಯವೇ ಅದನ್ನು ನಿರ್ಣಯಿಸುತ್ತದೆಂದು ಸುಮ್ಮನಿದ್ದು ಬಿಡಬೇಕಷ್ಟೆ… ಕೆಲವರು ಕ್ರಾಂತಿಕಾರಿಯರ ಹೆಸರಿನಲ್ಲಿ ದರೋಡೆ ಮಾಡುವವರನ್ನು ಬಂಧಿಸಬೇಕಾಗಿದೆ. ಅವರೀಸಲ ನನ್ನ ಕೊಲೆ ಮಾಡಲು ಬಂಡೇರಹಳ್ಳಿಗೆ ಬಂದಿರಬಹುದು. ಅದೇ ವಿಷಯ ಹೇಳಲು ಬಂದಿದ್ದಳು ಕಲ್ಯಾಣಿ”

ಗಂಭೀರವಾಯಿತು ಕುಶಾಲನ ಮುಖ. ಕೆಲಕ್ಷಣಗಳು ಕಳೆದ ಬಳಿಕ

“ನಾ ಮನೆಗೆ ಫೋನ್ ಮಾಡುತ್ತೇನೆ”

“ಈ ವಿಷಯ ಅಪ್ಪ ಅಮ್ಮನಿಗೆ ತಿಳಿಯಬಾರದು’

ಹುಚ್ಚನನ್ನು ನೋಡುವಂತೆ ತೇಜಾನ ಕಡೆ ನೋಡಿದ ಕುಶಾಲ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಛಲ
Next post ಮಾಗು

ಸಣ್ಣ ಕತೆ

 • ರಾಮಿ

  ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

 • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

  ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…

 • ಸಂಶೋಧನೆ

  ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

 • ಧನ್ವಂತರಿ

  ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

 • ಅಜ್ಜಿಯ ಪ್ರೇಮ

  ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

cheap jordans|wholesale air max|wholesale jordans|wholesale jewelry|wholesale jerseys