ಮುತ್ತಿನಂಥಾ ಮಾತಿದು ಕೇಳೇ ಗೆಳತಿ
ನಿಮ್ಮತ್ತಿಮಾವಗಳಿಗುತ್ತರ ಏನ ಹೇಳತಿ ||ಪ||

ಗೊತ್ತುಗೇಡಿ ಮಗಳೆ ವ್ಯರ್ಥ
ಹೊತ್ತುಗಳಿಯುತ್ತೀ
ಅತ್ತ ಇತ್ತ ತಿರುಗಿ ಭವದೊಳ್ ಬೀಳತೀ
ಛೀ ಛೀ ಕೆಡತೀ ||೧||

ನಾದುನಿ ಮೈದುನ ಭಾವಗೇನ ಹೇಳತೀ
ಒಬ್ಬ ಮಾದರವನ ಸ್ನೇಹಮಾಡಿ ಮತಿಗೆಡತೀ
ಬಿಡು ಬಿಡು ತರವಲ್ಲಾ ಈ ನಡತೀ
ಸುಳ್ಳೇ ಬಾಯ್ಬಿಡತೀ ||೨||

ಮುಟ್ಟದಿರು ಎನ್ನ ಎಂದು ದೂರ ಹೋಗತೀ
ನಿಲ್ಲೋ ಖೊಟ್ಟಿಗಂಡಾ ಎಂದು ಬಾಯಿಲೆ ಆಡತೀ
ಬಿಟ್ಟು ಬಿಟ್ಟು ಊರ ಕಡೆ ಓಡಿ ಹೋಗತೀ
ಜಾರತನ ತೋರತೀ ||೩||

ಶಿಶುನಾಳಧೀಶನ ಕಸಾ ಬಳಿದು
ಹಸನಾಗಿ ನೀ ಕಾಲಕಳಿದು
ಅಲ್ಲೇ ಹುಸಿ ಮಾತನಾಡದೆ ಇರು ತಿಳಿದು
ಒಳ್ಳೇ ಮಾತಿದು ||೪||

****