ಹಳಿಗಳ ಮೇಲೆ ಅಲೆದು
ಅಲೆದು ತಿರುವಿನ ಪಯಣ
ನನ್ನೊಳಗಿನ ಮಿತಿ ಮೀರಿ
ಬೀಸುಗಾಳಿಗೆ ಉಸಿರಾಡಿದ ಕನಸುಗಳು
ನಾನಿಳಿದ ನಿಲ್ದಾಣದ ತುಂಬ ಬರೀ ಅಪರಿಚಿತರು.

ಯಾರೊಳಗೆ ಯಾರಿಲ್ಲ ಬರೀ
ಕಣ್ಣೋಟಗಳು ಹೆಜ್ಜೆ ಹೆಜ್ಜೆಗೂ
ತವಕಗಳು ಅರಳಿದ ಹೂವಿನಿಂದ
ಒಮ್ಮೆಲೇ ಘಮ್ಮೆಂದು ಜೀವಧಾತು
ಮಿತಿ ಮೀರಿದ ಆಶೆಗಳು ಕೇಳಿದವು ಕಾರಣವ.

ಅಂತಃಪುರದ ಹೊರಗೆ ಅಂತರಂಗದ
ಒಳಗೆ ಬಯಲು ತಪಿಸಿ ಕಣ್ಮುಚ್ಚಿ
ಧ್ಯಾನಿಸಿದವು ಮಳೆಯ ಮಂಜನ ಸ್ನಾನ
ನಡೆದ ಪಾದ ಶಿರ ಭುಜಗಳೆಲ್ಲಾ
ದಂಗಾಗಿ ನಿಂತವು ತಮ್ಮ ಬಿರು ಚಲನೆಗೆ ಬೆರಗಾಗಿ.

ದುಃಖದ ಬೇಸರದ ವಿಷಾದದ ಖುಷಿಯ
ನೆರಳು ಹಿಂಬಾಲಿಸಿ ಯಾರ ಸ್ಮರಣೆಯಲಿ
ಸಿಹಿ ನಿದೆಯ ಆಳಕೆ ಇಳಿದ ಮುಖಗಳು
ಯಾವುದೂ ಕಹಿಯಲ್ಲ ಈ ಪ್ರೀತಿಯ ಜಗದಲಿ
ಕಾರಣವಿಲ್ಲದೇ ಸುಮ್ಮನೆ ಪಯಣಿಸಬೇಕಾಗಿದೆ.
*****

ಕಸ್ತೂರಿ ಬಾಯರಿ
Latest posts by ಕಸ್ತೂರಿ ಬಾಯರಿ (see all)