ದೇವಗಿಂದು ಭಾವಪೂಜೆ,
ಮಂಗಳಾರತಿ;
ಚಿತ್ತಭಿತ್ತಿಯಿಂದ ತಂದ
ಕವನದಾರತಿ.
ಮುಗಿಲು ಬಟ್ಟೆ, ಭೂಮಿ ತಟ್ಟೆ,
ವಿಶ್ವ – ಮೂರುತಿ,
ತಟ್ಟೆಯಲ್ಲಿ ಸುಮದ ರಾಜಿ,
ಪುಣ್ಯ ಭಾರತಿ.
ಪರ್ವತಗಳ ಶ್ರೇಣಿಯಿಂದ
ಗುಡಿಯ ಕಟ್ಟುವೆ;
ಗಗನ-ವಸ್ತ್ರದಿಂದ ಮೇಲೆ
ಹೊದಿಕೆ ಹಾಕುವೆ.
ಭೃಂಗ ರವವು ವೇದಮಂತ್ರ;
ಗುಡುಗು ಭೇರಿಯು;
ಪುಣ್ಯ ಸ್ನಾನವಾಗಲೆಂದು
ಮೇಘ-ವಾರಿಯು.
ಮೋಡದಲ್ಲಿ ಮಾಯವಾದ
ಮುಗಿಲ ಹೂವನು
ಮಿಂಚುಗೋಲಿನಿಂದ ಹುಡುಕಿ,
ನಿನ್ನಲಿಡುವೆನು !
ಇಂದ್ರಚಾವ ಮಾರ‍್ಗದಿಂದ
ಮುಗಿಲನೇರುವೆ;
ಚಂದ್ರನನ್ನು ಹಿಡಿದು, ತಿಲಕ
ಹಣೆಗೆ ಹಚ್ಚುವೆ.
ಮಂದಪವನ ಬೀಸಣಿಕಯು;
ಕಡಲು ದರ‍್ಪಣ !
ನನ್ನ ತೊದಲುನುಡಿಯ ಕವನ
ನಿನಗೆ ಅರ‍್ಪಣ !
ಇಂತು ನಾನು ನಿನಗೆ ಕೊಡುವ
ಕಿರಿಯ ಕಾಣಿಕೆ !
ಮಗುವು ಭಾವಸ್ವಪ್ನದಲ್ಲಿ
ನೇಯ್ದ ಮಾಲಿಕೆ !
+ + + +
ಮರುಳ ನಾನು; ನಿಜವ ಮರೆತೆ.
ಕ್ಷಮಿಸು ದೇವನೆ,
ನಿನ್ನ ಒಡವೆಗಳನೆ ನನ್ನ-
ವೆಂದು ಕೊಡುವೆನೆ !
*****









