Home / ಬಾಲ ಚಿಲುಮೆ / ಕಥೆ / ಕೀಲು ಕಿತ್ತ ಕೋತಿಯ ಕಥೆ

ಕೀಲು ಕಿತ್ತ ಕೋತಿಯ ಕಥೆ

ಒಂದು ಊರಿನಲ್ಲಿ ಒಬ್ಬ ವರ್ತಕನು ಒಂದು ತೋಪಿನಲ್ಲಿ ಒಂದು ದೇವರ ಗುಡಿಯನ್ನು ಕಟ್ಟಬೇಕು ಎಂದುಕೊಂಡನು. ಅದಕ್ಕಾಗಿ ಬೇಕಾದ ಕೆಲಸಗಾರರನ್ನೆಲ್ಲ ಕರೆಸಿ ಕಲಸವನ್ನು ಆರಂಭಿಸಿದನು. ಅಲ್ಲಿನ ಕೆಲಸಗಾರರನ್ನೆಲ್ಲ ದಿನವೂ ನಡು ಹಗಲಿನಲ್ಲಿ ಕೆಲಸವನ್ನು ಬಿಟ್ಟು ಊಟಕ್ಕೆ ಹೋಗುವರು.

ಒಂದುದಿನ ಅವರು ಹೀಗೆ ಊಟಕ್ಕೆ ಹೋಗಿದ್ದಾಗ ಅಲ್ಲಿಗೆ ಒಂದು ಕಪಿಗಳ ಹಿಂಡು ಬಂತು. ಅಲ್ಲಿ ಒಬ್ಬ ಬಡಗಿಯು ಒಂದು ತೊಲೆಯನ್ನು ಅರ‍್ಧ ಸೀಳಿ ಅದಕ್ಕೆ ಒಂದು ಬೆಣೆಯನ್ನು ಸಿಕ್ಕಿಸಿ ಹೋಗಿದ್ದನು. ಆ ಹಿಂಡಿನಲ್ಲಿ ಒಂದು ತುಂಟು ಕಪಿಯು ಅಲ್ಲಿಗೆ ಹೋಗಿ ಆ ಬೆಣೆಯನ್ನು ಕೀಳಲು ಆರಂಭಿಸಿತು. ಬೆಣೆ ಕೀಳುವ ಅವಸರದಲ್ಲಿ ತನ್ನ ಅಂಡಗಳು ಸೀಳಿದ ತೂತಿನಲ್ಲಿ ಸಿಕ್ಕಿ ಕೊಂಡಿರುವುದನ್ನು ಅದು ನೋಡಲಿಲ್ಲ. ಎರಡು ಕೈಯಿಂದಲೂ ಹಿಡಿದು ಅಲ್ಲಾಡಿಸಿ ಅಲ್ಲಾಡಿಸಿ ಆ ಬೆಣೆಯನ್ನೇನೋ ಕಿತ್ತೇ ಬಿಟ್ಟಿತು. ಆದರೆ ಆ ಸೀಳಿದ್ದ ಭಾಗಗಳು ಸಂಧಿಸಿದುವು. ಅಂಡಗಳು ಅಪ್ಪಚ್ಚಿಯಾದವು. ಕಪಿಯು ಕೂಡಲೇ ಪ್ರಾಣಬಿಟ್ಟಿತು.

ಅದರಿಂದ “ಮಾಡಬಾರದ ಕೆಲಸ ಮಾಡಲು ನರನು ಕೇಡನು ಪಡೆವನು” ಎಂದು ಹೇಳಿದೆನು. ಯೋಚಿಸಿ ನೋಡು. ಹೇಗಿದ್ದರೂ ಈ ಸಿಂಹವು ತಿಂದು ಬಿಟ್ಟ ಆಹಾರವು ನಮಗೆ ಇದ್ದೇ ಇದೆ. ಆದರಿಂದ ಈ ಕೆಲಸಕ್ಕೆ ಏಕೆ ಕೈಯಿಡಬೇಕು?

ದಮನಕನು ಹೇಳಿತು:- ಹಾಗಾದರೆ ನೀನು ಈ ಅರಸನನ್ನು ಓಲೈಸುವುದು. ಕೇವಲ ಆಹಾರಕ್ಕಾಗಿಯೇ ಏನು? ಹಾಗೆಂದು ಕೊಳ್ಳುವುದು ಸರಿಯಲ್ಲ. ಕೇಳಿಲ್ಲವೆ?

ಗೆಳೆಯರಿಗೆ ಉಪಕಾರ ಮಾಡಬಹುದು ॥
ಹಗೆವರಿಗೆ ಅಪಕಾರ ಗೈಯಲಹುದು॥
ಅದರಿಂದ ನರಪನನು ಆಶ್ರಯಿಪರೈ ॥
ಹಿಡಿವರೇ ಹೊಟ್ಟೆಗೆನೆ ಭೂಪತಿಯನು? ॥ ೧೪॥

ಯಾವನ ದೆಸೆಯಿಂ ಬಹುಜನ ಬದುಕುವುದೋ ॥
ಅವನೊಬ್ಬನ ಬದುಕೇ ಬದುಕೈ ॥
ಉಳಿದರು ಬದುಕಿದರೇ ಹೊಟ್ಟೆಯ ತುಂಬವೆ ॥
ಕೊಕ್ಕುಗಳಿಂದಲೆ ಹಕ್ಕಿಗಳುಂ ॥ ೧೫ ॥

ಎಸೆದೆ ಎಂಜಲ ತಿಂದುಕೊಂಡು | ಬದುಕಿ ಫಲವೇಂ ಕಾಗೆಯಂತೆ ॥?
ಕಾಯಬೇಕು ಧೀನರನ್ನು | ಬಾಳಬೇಕು ಶೂರನಾಗಿ ॥
ತೋರಬೇಕು ಆರ್ಯಗುಣವ | ಏರಬೇಕು ವಂಶಯಷ್ಟಿ ॥೧೬॥

ವಂಶಯಷ್ಟಿ = ಅರ್ಯಗುಣಗಳು = ಪಾಂಡಿತ್ಯ, ಶೌರ್ಯ, ವಿಭವ, ದಾನ, ದಯಾ ಧರ್ಮ, ಕರುಣ, ಇವು. ವಂಶಯಷ್ಟಿ = ವಂಶವೆಂಬ ಕೋಲು ಅದನ್ನು ಏರುವುದು ಎಂದರೆ ವಂಶಕ್ಕೆ ಯಶಸ್ಸು ತರುವುದು.

ನದಿಯ ತೀರದಲ್ಲಿ ಹುಟ್ಟಿದ ಹುಲ್ಲೂ ಕೂಡ ನೀರಲ್ಲಿ ಬಿದ್ದವರು ಹತ್ತಿ ಬರಲು ಸಹಾಯ ಮಾಡಿ ತನ್ನ ಜನ್ಮವನ್ನು ಸಫಲ ಮಾಡಿಕೊಳ್ಳುವುದು. ಹುಟ್ಟಿದುದಕ್ಕೆ ಹಾಗೆ ಇತರರಿಗೆ ಸಹಾಯ ಮಾಡದಿದ್ದರೆ ಫಲವೇನು? ಕೇಳು. ತಾನು ಏರುವುದೂ ಬೀಳುವುದೂ ಕಾಣದೆ ಮುಂದೆ ಮುಂದೆ ಹೋಗುತ್ತ, ತನ್ನ ಕೈಯಲ್ಲಾದಷ್ಟು ಜನರ ಸಂತಾಪವನ್ನು ಪರಿಹರಿಸುತ್ತ, ಇರುವ ಮೋಡಗಳಂತೆ ಇರುವ ಸಜ್ಜನರು ಲೋಕದಲ್ಲಿ ಬಹಳ ಇರುವುದಿಲ್ಲ. ಹುಟ್ಟಿದುದಕ್ಕೆ ಹಿರಿಯ ತನದ ಬಾಳು ಬಾಳಬೇಕು. ಹಾಗಾಗಬೇಕಾದರೆ ತನಗಿರುವ ಶಕ್ತಿಯನ್ನು ತೋರಿಸಿಕೊಳ್ಳಬೇಕು. ಕಡ್ಡಿಯಲ್ಲಿರುವ ಬೆಂಕಿಯನ್ನು ಗಮನಿಸುವರು ಯಾರು? ಉರಿಯುತ್ತಿರುವ ಬೆಂಕಿಯನ್ನು ಗಮನಿಸದವರು ಯಾರು?”

ಕರಟಕ:- ಆಯಿತು. ನಾವು ಈಗ ದೊರೆಯ ಬಳಿ ಮುಖ್ಯರಲ್ಲ. ಅದರಿಂದ ನಾವು ಈಗ ಈ ದೊರೆಯ ಕೆಲಸದಲ್ಲಿ ಕೈ ಹಾಕಬಾರದು. ಅರಸರ ಬಳಿಯಲ್ಲಿ ಮಾತನಾಡಬೇಕಾದರೆ ಅವನು ಮುಖ್ಯನಾಗಿರಬೇಕು: ಗಣ್ಯನಾಗಿರಬೇಕು. ಅವನ ಮಾತು ನಡೆಯುವಂತಿರಬೇಕು. ಇಲ್ಲವಾದರೆ ಅವನು ನಿಜವಾಗಿಯು ಬುದ್ದಿ ಹೀನನು: ಅವನಿಗೆ ತಪ್ಪದೆ ಅಪಮಾನವಾಗುವುದು. ಫಲವಾಗುವ ಮಾತನ್ನೇ ಆಡಬೇಕು. ಬಣ್ಣ ಹಾಕುವುದು ಬಿಳಿಯ ಬಟ್ಟೆಗೇ ಅಲ್ಲವೆ?

ಧಮನಕ:- ಹಾಗಲ್ಲ, ಕರಟಕ, ಅರಸನನ್ನು ಸೇರಿದವನು ಮುಖ್ಯನಲ್ಲದಿದ್ದರೂ ಮುಖ್ಯನಾಗೇ ಆಗುವನು. ಆರಸನನ್ನು ಬಿಟ್ಟವನು ಮುಖ್ಯನಾಗಿದ್ದರೂ ಅಮುಖ್ಯನಾಗುವನು. ಕೇಳಿಲ್ಲವೆ?

ಬಳಿಯಲಿರೆ ಭೂಪತಿಯು ಬಾರೆಂಬನು |
ಕೃಪೆತೋರೆ ವಿದ್ಯೆ ಕುಲ ಬೇಕಿಲ್ಲ॥
ಭೂಮಿಪತಿಯಂಗನೆಯು ಬಳ್ಳಿಗಳು ॥
ಹಿಡಿವರೈ ಮಗ್ಗುಲಲ್ಲಿದ್ದವನನೇ ॥ ೧೭॥

ಆನೆಗಳನ್ನು ಭಲೇ ಭಲೇ ಎಂದು ಹೊಗಳುತ್ತ ಹೊಗಳುತ್ತಲೇ ಮೇಲೆ ಹತ್ತಿಕೊಳ್ಳುವಂತೆ, ಅರಸನಿಗೆ ಕೈ ಮುಗಿಯುತ್ತ ಮುಗಿಯುತ್ತಲೇ ಹಿಡಿದುಕೊಳ್ಳಬೇಕು. ಚೆನ್ನಾಗಿ ಬದುಕಬೇಕು ಎನ್ನುವವರಿಗೆ, ವಿದ್ಯಾವಂತರಿಗೆ, ಶಿಲ್ಪ, ವಿಕ್ರಮ, ಸೇವೆ, ಇವುಗಳನ್ನು ಬಲ್ಲವರಿಗೆ, ಅರಸನಲ್ಲದೆ ಬೇರೆ ಆಶ್ರಯುವುಂಟೆ? ಇಂತಹ ದೊಡ್ಡ ಆಶ್ರಯವು ಬೇಡ ಎನ್ನುವವರಿಗೆ ಭಿಕ್ಷವು ಎಂದೂ ತಪ್ಪಿದ್ದಲ್ಲ. ಅರಸರ ಆಶ್ರಯದಲ್ಲಿ ಅಪಾಯವು ತಪ್ಪಿದ್ದಲ್ಲ ಎಂದರೆ, ಹಾವು, ಹುಲಿ, ಆನೆ, ಸಿಂಹಗಳನ್ನು, ವಶಪಡಿಸಿಕೊಂಡು ಹೇಳಿದ ಹಾಗೆ ಆಡಿಸುವವರಿಗೆ ರಾಜನೆಂಬುದು ಒಂದು ದೊಡ್ಡ ವಿಷಯವೇ? ಅದರಿಂದ ನಾವು ಈಗ ಈ ಕೆಲಸದಲ್ಲಿ ಕೈ ಹಾಕಲೇಬೇಕು.

ಆದನ್ನು ಕೇಳಿ ಕರಟಕನು ಕೇಳಿತು: “ಆಯಿತು. ನೀನು ಅರಸನ ಬಳಿಗೆ ಹೋಗಿ ಏನು ಮಾಡಬೇಕಿಂದೆರುವೆ?”

ದಮನಕ:- ಕೇಳು, ಅರಸನಾದ ಪಿಂಗಲಕನು ಹೆದರಿರುವನು. ಆತನ ಬಳಿಯಿರುವವರೂ ಹೆದರಿರುವರು. ಅದರಿಂದ ಅಲ್ಲಿಗೆ ಹೋಗಿ ಅವರೆಲ್ಲ ಏಕೆ ಹೆದರಿರುವರು ಎಂಬುದನ್ನು ಮೊದಲು ತಿಳಿಯಬೇಕು. ಅನಂತರ ಏನು ಮಾಡುವುದು ಎಂಬುದನ್ನು ಗೊತ್ತು ಮಾಡುವುದು.

ಕರಟಕ:- ಅರಸನಿಗೆ ಭಯವಾಗಿರುವುದೆಂದು ನಿನಗೆ ಹೇಗೆ ತಿಳಿಯಿತು.

ದಮನಕ:- ಕಾಣಿಸುವುದಿಲ್ಲವೇನು? ಕೇಳಿಲ್ಲವೆ?

ಬಾಯಲ್ಲಿ ಹೇಳಿದರೆ ಪಶುವು ತಿಳಿಯುವುದು ॥
ಚುಚ್ಚಿದರೆ ತಿಳಿಯುವುವು ಆನೆ ಕುದುರೆಗಳು ॥
ನುಡಿಯಾಗಿ ನುಡಿಯದೆಯು ತಿಳಿವ ಪಂಡಿತನು ॥
ಪರರ ಮನವನು ತಿಳಿವುದೇ ಬುದ್ದಿ ಫಲವು ॥ ೧೮ ॥

ಆಕಾರದಿಂದ, ಮುಖದಿಂದ, ನಡಗೆಯಿಂದ, ಮಾಡುವ ಕೆಲಸದಿಂದ, ಆಡುವಮಾತಿನಿಂದ, ಕಣ್ಣು ಬಾಯಿಗಳ ಚೇಷ್ಟೆಯಿಂದ, ಪರರ ಮನಸ್ಸಿನಲ್ಲಿರುವುದನ್ನು ಅರಿತುಕೊಳ್ಳಬೇಕು ಎಂದು ಮನುವೂ ಹೇಳಿರುವನು. ಅದರಿಂದ, ಈತನ ಬಳಿಗೆ ಹೋಗಿ ಭಯಪಟ್ಟಿರುವ ಈತನ ಭಯವನ್ನು ತಪ್ಪಿಸಿ, ಇವನನ್ನು ನನ್ನ ವಶ ಮಾಡಿಕೊಂಡು, ನಮ್ಮ ಹಿಂದಿನ ಸಚಿವ ಪದವಿಯನ್ನು ಮತ್ತೆ ಪಡೆಯುವೆನು.

ಕರ:- ನೀನು ಪ್ರಭುಗಳನ್ನು ಸೇವಿಸುವುದು ಹೇಗೆ ಎಂಬುದನ್ನು ಬಲ್ಲೆಯಾ?

ದಮ:- ನನಗೆ ತಿಳಿಯದೆ? ನಾನು ತಂದೆಯ ತೊಡೆಯ ಮೇಲೆ ಕುಳಿತು ಆಡುತ್ತಿದ್ದಾಗಲೇ ನೀತಿ ಶಾಸ್ತ್ರವನ್ನೆಲ್ಲಾ ಕಲಿತೆನು. ಬೇಕಾದರೆ ಕೇಳು:-

ಧರೆಯು ಚಿನ್ನವ ಬೆಳೆವ ಹದವನು |
ಅರಿತ ಜಾಣರು ಮೂವರು ॥
ಶೂರನೊಬ್ಬನು ವಿದ್ಯೆ ಕಲಿತವ |
ಸೇವೆ ಮಾಡಲು ಬಲ್ಲವ ॥ ೧೯॥

ಪ್ರಭುವು ಒಪ್ಪಿದ ಸೇವೆ ಸೇವೆಯು ॥
ಪ್ರಭುವ ಹಿಡಿಯುವ ದಾರಿ ಸೇವೆಯು ॥೨೦ ॥
ಗುಣವನರಿಯದ ನೃಪಗೆ ಸೇವೆಯೆ?
ಬಂಜೆ ನೆಲವನ್ನುಳುವದುಂಟೆ ? ॥ ೨೧ ॥

ಗುಣವನುಳ್ಳವನ ಸೇವೆ ಮಾಡಲು ॥
ಎಂದಿಗಾದರು ಫಲವು ತಪ್ಪದು ॥ ೨೨ ॥
ಜೂಜು ಹೆಂಡವು ಹೆಂಗಳೆಂಬರ ॥
ದೂರ ಮಾಡಲು ನರಪನೊಲಿವನು ॥ ೨೩ ॥

ನಾನು ಸೇವೆಯ ಮರ್ಮವನ್ನು ಬಲ್ಲೆನು. ಅರಸನನ್ನು ನನ್ನೆ ಕಡೆಗೆ ತಿರುಗಿಸಿಕೊಂಡು ನಾನು ಹೇಳಿದಂತೆ ಕೇಳುವ ಹಾಗೆ ಮಾಡಿಕೊಳ್ಳುವೆನು. ಸಂಶಯ ಪಡಬೇಡ.

ಕರ:- ಆಯಿತು. ನೀನು ಅಲ್ಲಿಗೆ ಹೋಗಿ ಆತನೊಡನೆ ಏನು ಹೇಳುವೆ?

ದಮ:- ಕೇಳು, ಚೆನ್ನಾಗಿಬೆಳೆದ ಚಿಳೆಯಿಂದ ಕಾಳನ್ನು ತೆಗೆದು ಕೊಂಡು, ಅದರಿಂದ ಮುಂದಿನ ಬೆಳೆಯನ್ನು ತೆಗೆಯುವುದಿಲ್ಲವೆ? ಹಾಗೆಯೆ, ಮಾತನಾಡುತ್ತ ಆಡುತ್ತ ಮಾತಿಗೆ ಮಾತು ಜೋಡಿಸಿ ಕೊಂಡು ಹೋಗುವುದು ಬುದ್ಧಿವಂತಿಕೆಯು. ಕೆಲವರಿಗೆ ಮಾತು ಆಡುವುದಕ್ಕೆ ಬರುತ್ತದೆ ಆದರೆ ಏನು ಆಡಬೇಕೋ ತಿಳಿದಿರುವುದಿಲ್ಲ: ಇನ್ನು ಕೆಲವರು ಏನು ಆಡಬೇಕು ಎಂಬುದನ್ನು ಬಲ್ಲರು. ಆದರೆ ಹೇಗೆ ಆಡಬೇಕೋ ತಿಳಿಯರು. ಯಾರು ಏನು ಆಡಬೇಕು? ಹೇಗೆ ಆಡ ಬೇಕು ಎಂಬ ಎರಡನ್ನೂ ಬಲ್ಲರೋ ಅವರು ಗೆದ್ದೇ ಗೆಲ್ಲುವರು- ಅಲ್ಲದೆ ಅರಸರ ಬಳಿಯಲ್ಲಿ ಇರುವವರು ಅಕಾಲದಲ್ಲಿ ಮಾತನಾಡಬಾರದು. ಯಾವ ಕಾಲದಲ್ಲಿ ಯಾವ ಮಾತನಾಡಬೇಕು ಎಂಬುದೇ ಒಂದು ಬುದ್ದಿವಂತಿಕೆ. ಆದನ್ನು ನಾನು ನಮ್ಮ ತಂದೆಯಿಂದ ಕಲಿತಿರುವೆನು.

ಕರ:- ಸೋದರ, ಅರಸುಗಳು ಎಂದರೆ ಸಾಮಾನ್ಯರಲ್ಲ ಅವರು ಪರ್ವತಗಳ ಹಾಗೆ, ಕಠಿಣರು, ದುಷ್ಟರಿಗೆ ಆಶ್ರಯರಾದವರು, ಸುಲಭವಾಗಿ ಸಿಕ್ಕುವರಲ್ಲ. ಅಷ್ಟೆ ಅಲ್ಲ ರಾಜರಿಗೆ ಹಾವಿನ ಹಾಗೆ ಎರಡು ನಾಲಗೆ. ಅವರಿಗೆ ಕೊಂಚ ಕೋಪ ಬಂದರೆ ಬೆಂಕಿಗಳಂತೆ ಸುಟ್ಟು ಬಿಡುವರು ಅದನ್ನು ಮರೆಯಬೇಡ.

ದಮ:- ನಾನು ಅದನ್ನೂ ಬಲ್ಲೆನು ಆದರೂ ಅರಸನನ್ನು ಒಲಿಸಿಕೊಳ್ಳುವುದು ಸುಲಭ. ಅರಸನು ಕೋಪಿಸಿಕೊಂಡರೆ ಹೊಗಳುವುದು. ಆತನಿಗೆ ಯಾರಮೇಲೆ ಪ್ರೇಮವಿದ್ದರೆ ಅವರನ್ನು ಸೇರು ವುದು. ಆತನು ಯಾರನ್ನು ದ್ವೇಷಿಸುವನೋ ಅವರನ್ನು ದೂರವಿಡುವುದು. ಅವನು ಕೊಟ್ಟುದನ್ನು ಹೊಗಳುವುದು. ಇದಿಷ್ಟು ಮಾಡಿದರೆ, ಯಾವ ಅರಸೇ ಆಗಲಿ ಹೇಳದೆ ಕೇಳದೆ ವಶನಾಗುವನು.

ಕರ:- ಹೀಗಿದ್ದರೆ ನೀನು ಅರಸನ ಆಸ್ಥಾನದಲ್ಲಿ ಬದುಕುವೆ. ಹೋಗಿ ಬಾ. ನಿನಗೆ ಒಳ್ಳೆಯದಾಗಲಿ.

ಹೀಗೆ ಅಣ್ಣನ ಆಶೀರ್ವಾದವನ್ನು ಪಡೆದುಕೊಂಡು. ದಮನಕನು ಪಿಂಗಲಕನ ಬಳಿಗೆ ಬಂದನು. ಅದು ಬರುತ್ತಿರುವುದನ್ನು ಕಂಡು ಆ ಸಿಂಹವು ಬಾಗಿಲಲ್ಲಿದ್ದವನನ್ನು ಕರೆದು, “ಬರುತ್ತಿರುವವನು ನಮ್ಮ ಹಿಂದಿನ ಮಂತ್ರಿಯ ಮಗನಾದ ದಮನಕನು. ಅವನನ್ನು ತಡೆಯಬೇಡಿ” ಎಂದು ಅಪ್ಪಣೆ ಮಾಡಿದನು. ದಮನಕನು ಒಳಕ್ಕೆ ಹೋಗಿ ಅರಸನಿಗೆ ವಂದನೆಯನ್ನು ಮಾಡಿ, ಆತನ ಅಪ್ಪಣೆಯನ್ನು ಪಡೆದು ತನಗೆ ಗೊತ್ತಾಗಿದ್ದ ಆಸನದಲ್ಲಿ ಕುಳಿತುಕೊಂಡನು. ಪಿಂಗಲಕನು ವಜ್ರದಂತಿರುವ ಉಗುರುಗಳಿಂದ ಅಲಂಕಾರವಾಗಿರುವ ತನ್ನ ಬಲಗೈಯನ್ನು ದಮನಕನ ಭುಜದ ಮೇಲಿಟ್ಟು ಗೌರವಿಸಿ “ಚೆನ್ನಾಗಿದ್ದೀಯಾ? ಏಕೆ? “ನಿನ್ನನ್ನು ನೋಡಿ ಬಹು ದಿನವಾಯಿತಲ್ಲ?’” ಎಂದು ಕೇಳಿದನು.

ದಮನಕನು ಹೇಳಿತು:- “ದೇವರಿಗೆ ನಮ್ಮಿಂದ ಆಗಬೇಕಾದ ಕೆಲಸವು ಏನೂ ಇರಲಿಲ್ಲ. ಅಲ್ಲದೆ, ರಾಜರಾದವರಿಗೆ ಉತ್ತಮರು, ಮಧ್ಯಮರು, ಅಧಮರು, ಎಲ್ಲರಿಂದಲೂ ಆಗಬೇಕಾದ ಕಾರ್ಯಗಳು ಇದ್ದೇ ಇರುತ್ತವೆಯಾಗಿ, ದೇವರ ಅಪ್ಪಣೆಯಾದಾಗ ಮಾತನಾಡೋಣ ಎಂದು ದೂರದಲ್ಲಿಯೇ ಇದ್ದೆನು. ಜೊತೆಗೆ, ದೇವ, ನಾವು ಬಹು ಕಾಲದಿಂದ ತಮ್ಮಲ್ಲಿ ಮಂತ್ರಿಗಳಾಗಿದ್ದವರು. ತಮ್ಮ ಒಂದೆ ಹಿಂದೆಯೇ ಬರುವವರು. ಆದರೂ ನಮ್ಮ ಪದವಿಯು ನಮಗೆ ಸಿಕ್ಕದ ಹೋದರೆ ನಾವೆಂತು ಸಮೀಪದಲ್ಲಿ ಕಾಣಿಸಿಕೊಳ್ಳುವುದು? ನಾವು ಎಲ್ಲಿರಬೇಕೋ ಅಲ್ಲಿ ನಮನ್ನು ಇಡದಿರುವುದು ನಮ್ಮ ದೋಷವೆ? ದೇವ, ಕುಂದಣದಲ್ಲಿ ಕಟ್ಟಬೇಕಾದ ರತ್ನವನ್ನು ಸೀಸದಲ್ಲಿ ಬೆಸೆದರೆ ರತ್ನವು ಅಳುವುದೂ ಇಲ್ಲ: ಪ್ರಕಾಶಿಸುವುದೂ ಇಲ್ಲ. ಆದರೆ ಹಾಗೆ ಮಾಡುವುದು ರತ್ನವನ್ನು ಕಟ್ಟಿಸಿದವನಿಗೆ ಅಪಯಶಸ್ಸು. ಅದರಂತೆ “ಸ್ವಾಮಿಯು ನೋಡಿ ಬಹು ದಿನವಾಯಿತು.” ಎಂದು ಅಪ್ಪಣೆ ಕೊಡಿಸೋಣವಾಯಿತು. ಕೇಳಬೇಕು. ಎಡಗೈ, ಬಲಗೈ, ಗಳಿಗೆ ಭೇದವಿಲ್ಲ ಎಂದ ಮೇಲೆ ಆ ಸ್ಥಳದಲ್ಲಿ ಯಾರು ತಾನೇ ಇರಬಹುದು?

ಗಾಜನ್ನು ಮಣಿಯೆಂದು ಮಣಿಯ ಗಾಜೆಂಬ ನಾಥನಲ್ಲಿ॥
ಭೃತ್ಯನಿರಬಹುದೇನು ಮಾನ ಬೇಕೆಂಬನಾಗಿರಲು ॥ ೨೪ ॥
ಕೊಳ್ಳುವರಿಲ್ಲದ ದೇಶದೊಳು | ಕಡಲಿನ ರತ್ನವ ಮಾರುವರೆ ॥
ಶಶಿಕಾಂತದ ಮಣಿ ಮಾರುವರು | ಮೂರೇ ಕವಡೆಗೆ ಗೋವಳರು. (ದನಕಾಯುವವರು) ॥೨೫॥

ದೇವ, ತಲೆಯ ಮೇಲೆಯೇ ಇದ್ದರೂ ಕೂದಲುಕೂಡ ಸ್ನೇಹ (ವಿಶ್ವಾಸ, ಎಣ್ಣೆ) ದಿಂದ ಕೂಡದಿದ್ದರೆ ಕೆದರುವುದು. ಇನ್ನು ಸೇವಕರ ಮಾತೇನು? ಒಂದು ವೇಳೆ, ಏನು ಮಹಾ? ಇದೂ ಒಂದು ನರಿ ಎಂದು ಸ್ವಾಮಿಯು ನಮ್ಮನ್ನು ತಿರಸ್ಕಾರ ಮಾಡಿದ್ದರೆ ಅದೂ ಸರಿಯಲ್ಲ ಪ್ರಭು, ಕೇಳಿಲ್ಲವೆ? ರೇಶಿಮೆಯು ಹುಟ್ಟುವದು ಹುಳುವಿನಿಂದ ಚಿನ್ನವು ಸಿಕ್ಕುವುದು ಕಲ್ಲಿನಲ್ಲಿ. ಹುಲ್ಲು ಆಗುವುದು ಹಸುವಿನ ರೋಮದಿಂದ. ಕೆಸರಿನಲ್ಲಿ ತಾನು ಉದಯಿಸುವುದು. ಚಂದ್ರನು ಕಡಲಿನ ಮಗನು. ಸಗಣಿಯಿಂದ ಇಂದೀವರವೆಂಬ ಮಣಿಯಾಗುವುದು. ಬೆಂಕಿಯು ಕಟ್ಟಿಗೆಯಿಂದ ಆಗುವುದು. ಹಾವಿನ ಹೆಡೆಯಲ್ಲಿ ಮಣಿಯು ಸಿಕ್ಕುವುದು. ಗೋವಿನ ಪಿತ್ತದಿಂದ ರೋಚನವು ಸಿಕ್ಕುವುದು. ಪ್ರತಿಯೊಬ್ಬರೂ ತಮ್ಮ ತಮ್ಮ ಗುಣಗಳಿಂದ ಪೂಜ್ಯರಾಗುವರೇ ಹೊರತು ಜನ್ಮದಿಂದಲ್ಲ. ಇಲಿಯು ಮನೆಯಲ್ಲಿ ಹುಟ್ಟಿದರೂ ಅಪಕಾರ ಮಾಡುವುದೆಂದು ಕೊಲ್ಲುವರು. ಎಲ್ಲಿಯೋ ಹುಟ್ಟಿದ್ದರೂ ಬೆಕ್ಕನ್ನು ಉಪಕಾರಿಯೆಂದು ತಿಂಡಿ ತೀರ್ಥ ಕೊಟ್ಟು ಕಾಪಾಡುವರು.

ಪಿಂಗಲಕನು ಅದನ್ನು ಕೇಳಿ, ಹೇಳಿತು: “ಆಗಲಿ ನೀನು ಸಮರ್ಥನೇ ಆಗು, ಅಸಮರ್ಥನೇ ಆಗು, ನಮ್ಮ ಹಳೆಯ ಸೇವಕನು. ಮಂತ್ರಿ ಪುತ್ರನು. ಅದರಿಂದ ಏನು ಹೇಳಬೇಕಾದರೂ ಧೈರ್ಯವಾಗಿ ಹೇಳು”

ದಮಕನು ಹೇಳಿತು: “ಹೌದು ಮಹಾಸಾ ಸ್ವಾಮಿ, ಹೇಳ ಬೇಕಾದುದು ಇದೆ. ಎಂತಹ ಸಣ್ಣ ಕೆಲಸವಾದರೂ ಅರಸರಗೆ ಸಭಾ ಮಧ್ಯದಲ್ಲಿ ತಿಳಿಸಬಾರದು ಎಂದು ಬೃಹಸ್ಪತಿಯು ಹೇಳುವನು. ಅಲ್ಲದೆ,

ಮಾತು ಕಿವಿಗಳ ನಾರ ಮುಟ್ಟಲು ಕೆಡುವುದು ॥
ನಾಲ್ಕು ಕಿವಿಗಳ ಮಾತು ನೆಟ್ಟನೆ ನಿಲುವುದು ॥
ಅದರಿಂ ನಾರ ಬಿಟ್ಟು ನಾಲ್ಕನು ಹಿಡಿ ಜಾಣ ॥ ೨೬ ॥

ಎಂದು ಹಿರಿಯರು ಹೇಳುವರು.” ಎಂದು ಕೈ ಮುಗಿದನು.

ಸಿಂಹವು ಎಲ್ಲರನ್ನೂ ಕಳುಹಿಸಿ ತಾನೊಬ್ಬನೇ ಆಗಲು, ದಮನಕನು ಕೈ ಮುಗಿದುಕೊಂಡು “ಪ್ರಭು, ನೀರು ಕುಡಿಯುವುದಕ್ಕೆ ಬಂದವರು ನೀರು ಕುಡಿಯದೆಯೇ ಇಲ್ಲಿಯೇ ಏಕೆ ನಿಂತಿರಿ?” ಎಂದು ಕೇಳಿದನು. ಪಿಂಗಲಕನು ಅದನ್ನು ಮನಸ್ಸಿಗೆ ಹಾಕಿಕೊಳ್ಳದೆ “ಏನೋ ಕಾರಣವವಿತ್ತು” ಎನ್ನಲು, ನರಿಯು ಮತ್ತೆ “ದೇವ, ಅದು ರಹಸ್ಯವಾದರೆ ಹಾಗೇ ಇರಲಿ” ಎಂದು ಸುಮ್ಮನಾಯಿತು. ಆಗ ಸಿಂಹವು “ಈ ಮಂತ್ರಿಪುತ್ರನು ಯೋಗ್ಯನಂತಿದೆ, ನಮ್ಮ ಮನಸ್ಸಿನಲ್ಲಿರುವುದನ್ನು ಇವನಿಗೆ ಹೇಳೋಣ `ಸ್ನೇಹಿತನಿಗೆ ಗುಣವಂತನಾದ ಭೃತ್ಯನಿಗೆ, ಪ್ರಿಯಳಾದ ಹೆಂಡತಿಗೆ, ತನಗೆ ಬೇಕಾದ ಒಡೆಯನಿಗೆ ತನ್ನ ದುಖಃವನ್ನು ತಿಳಿಸಿದವನು ನೆಮ್ಮದಿಯನ್ನು ಪಡೆಯುವನು’ ಎಂದು ಹೇಳುತ್ತಾರೆ: ಅದರಿಂದ ಇವನಿಗೆ ತಿಳಿಸಬೇಕು.” ಎಂದುಕೊಂಡು, “ದಮನಕ, ನೀನು ದೂರದಿಂದ ಬಂದ ಆ ಮಹಾಶಬ್ದವನ್ನು ಕೇಳಿದೆಯಲ್ಲವೆ?” ಎಂದು ಕೇಳಿತು.

“ಕೇಳಿದೆ ಪ್ರಭು.”
“ನಾನು ಈ ಕಾಡನ್ನು ಬಿಟ್ಟು ಹೊರಟು ಹೋಗಬೇಕು ಎಂದಿರುವೆನು.”
“ಎಕೆ?”
“ಈ ಮಹಾಶಬ್ದವನ್ನು ಮಾಡುವ ಅಪೂರ‍್ವ ಪ್ರಾಣಿಯೊಂದು ನಮ್ಮ ಕಾಡಿಗೆ ಬಂದಿದೆ. ಅದಕ್ಕೆ ಶಬ್ದಕ್ಕೆ ತಕ್ಕಂತೆ ಪರಾಕ್ರಮವೂ ಇರಬೇಕು.

“ಶಬ್ದವನ್ನು ಕೇಳಿದ ಮಾತ್ರದಿಂದಲೇ ಮಹಾ ಸ್ವಾಮಿಯು ಹೆದರಿಕೊಳುವುದು ತಕ್ಕುದಲ್ಲ ಅಷ್ಟೇ ಅಲ್ಲದೆ, ಕೇವಲ ಇದಿಷ್ಟಕ್ಕಾಗಿ ಬಹುದಿನದಿಂದ ತಮ್ಮದಾಗಿರುವ ಅರಣ್ಯವನ್ನು ಬಿಡುವುದೂ ಯುಕ್ತವಲ್ಲ. ಎಂತಹ ಆಪತ್ತು ಬಂದರೂ ಅರಸುಗಳು ಹೆದರಕೂಡದು ಅಲ್ಲದೆ, ಪ್ರಭುಗಳು ಕೇಳಿಲ್ಲಿವೆ?

“ಒಳಹೊಕ್ಕು ನೋಡಿದರೆ | ಕಟ್ಟಗೆಯು ಚಕ್ಕಳ”
“ಹಾಗೆಂದರೇನು?”
ನರಿಯು ಹೇಳಿತು:-
*****
ಹೆದರಿದ ನರಿಯ ಕಥೆ ಓದಿ

Tagged:

Leave a Reply

Your email address will not be published. Required fields are marked *

ಭೋಜನ ಭೀಮಾಚಾರರ ಮಕ್ಕಳೇತಾನೆ ಆ ವೇದಾಂತ ಡಿಂಡಿಮ ರಾಜಾಚಾರ್‍ಯರು. ಭೀಮಾಚಾರ್‍ಯರು ತಮ್ಮ ಬಿರುದನ್ನು ಸ್ವಪ್ರಯಾಸದಿಂದಲೇ ಸಂಪಾದಿಸಿದರು. ತಮ್ಮ ಮಕ್ಕಳಲೊಬ್ಬನಾದರೂ ಸರಸ್ವತಿಯ ಕೈಹಿಡಿಯಲೆಂದು ಆಶೆಬಿಟ್ಟು ರಾಜಾಚಾರ್‍ಯರನ್ನು ಬಿರುದೊಣ್ಣೆಯ ವಶಕ್ಕೆ ಕೊಟ್ಟರು. ಇತ್ತಲಾಗಿ ರಾಜಾಚಾರ್‍ಯರಿ...

ಶಠಗೋಪ ಹದಿನಾರಾಣೆ ಶ್ರೀವೈಷ್ಣವ. ಒಂದುದಿನ ಅವನ ಅತ್ತಿಗೆ ಅಡುಗೆಯ ಕೆಲಸದಲ್ಲಿದ್ದು ವೀಳೆಯದೆಲೆಯ ವರ್ತನೆಯವಳು ಬಂದಾಗ ಎಲೆ ತೆಗೆಯಲು ಶಠಗೋಪನಿಗೆ ಹೇಳಿದಳು. ಶಠಗೋಪನು ಹೊರಗೆ ಬಂದು, ಎದುರಿಗಿದ್ದ ವೀಳೆದೆಲೆಯವಳನ್ನು ನೋಡಿದ. ಅವಳು ಸಾಧಾರಣದ ಹೆಣ್ಣು. ರತಿಯಲ್ಲ, ಚಪ್ಪನ್ನಾರು ದೇಶದಲ್ಲ...

ಕೋರ್‍ಟಿನಿಂದ ಬಂದ ಮೀರಾ ಬಳಲಿದವಳಂತೆ ಕುಸಿದು ಕುಳಿತಳು. ದೇಹ ಬಳಲಿದ್ದರೂ ಸಂತಾಪದಿಂದ ಎದೆ ಕುದಿಯುತ್ತಿತ್ತು. ಎದೆಯಲ್ಲಿ ಕುದಿತ, ಮುಖ ಕಣ್ಣುಗಳನ್ನು ಕೆಂಪು ಮಾಡಿ, ಇಡೀ ದೇಹ ಕೋಪದಿಂದ ಕಂಪಿಸುವಂತೆ ಮಾಡಿತ್ತು. ಕಾಲಲ್ಲಿದ್ದ ಚಪ್ಪಲಿಗಳನ್ನು ಕೂಡಾ ಕಳಚದೇ, ಕೈಯಲ್ಲಿದ್ದ ಪರ್ಸ್, ಪುಸ...

ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...