೧
ದೂರವಾಯಿತು ಇಲ್ಲವಾಯಿತು
ಇನ್ನೆನಗೆ ಭದ್ರಾವತಿ
‘ರಸದ ಮಡುವನು ತೊರೆದು ಬಂದೆನೆ’
ಎಂದು ತುಡಿವುದು ಮನ್ಮತಿ
ಎಂದಿಗೋ ಇನ್ನಂಥ ತಾಣವ
ನಾನು ಕಾಂಬುದು ಕಣ್ಣೊಳು?
ತೊಳಲುವುದು ಮನ ಮಿಲಮಿಲನೆ ಹುಳು
ಹೊರಳುವೊಲು ಹಿಡಿನುಣ್ಣೊಳು!
ದೂರವಾದುದು ಮೋಡಗಳು ತಂ-
ಗುತ್ತಲಿದ್ದಾ ಶೃಂಗವು
ಇಲ್ಲವಾದುದು ಎನಗೆ ಇನ್ನಾ
ಕೆಳೆಯರೊಲನಿನ ಸಂಗವು
ದೂರವಾದುದು ಗಗನದೊಡಲಿಗೆ
ಹೊಗೆಯ ತೂರುವ ಚಿಮಣಿಯು!
ದೂರವಾದಳು ಪ್ರೇಮ ಪುತ್ಥಳಿ-
ಯೆನಿಸಿ ಮೆರೆದಾ ರಮಣಿಯು!
ಹೊನ್ನ ಬಿಸಿಲೊಳು ಮಿಂದು ನಿಂದಿಹ
ಪಚ್ಚೆ ಹಸುರಿನ ಬಯಲೊಳು
ಜುಳುಜುಳನೆ ಹಾಡುತ್ತ ಭದ್ರೆಯು
ಹರಿಯುತಿರೆ ಬಿಳಿ ಮರಳೊಳು
ಸೂರ್ಯನುರಿ ಮಿತಿ ಮೀರಿರಲು ತಂ-
ಪೀವ ಹೊಂಗೆಯ ನೆರಳೊಳು
ಕಾಲ ಕಳೆದೆನಗೇನು ತೋರದು
ಸಾಂದ್ರ ಜನದೀ ಪುರದೊಳು!
೨
ಓವೊ! ಭದ್ರಾವತಿಯೆ! ನಿನ್ನಯ
ಮಡಿಲೊಳೆನ್ನಯ ಬಾಲ್ಯವ
ಕಳೆದೆನೆನ್ನಯ ಮನವು ತಳೆವುದೆ
ಆ ದಿನಗಳಾನಂದವ?
ಕಾಲದಾ ನೆರೆ ನನ್ನ ನಿಲ್ಲಿಗೆ
ನಿಷ್ಕರುಣೆಯಿಂ ಸೆಳೆದುದು
ರಕ್ತ ಮಾಂಸಗಳುಳಿದ ದೇಹದ
ಉಸುರಿನೊಲು ನೆನಪುಳಿದುದು!
ಅಲ್ಲಿಯೇ ನಾ ವಿಫಲನಾದುದು
ದೊಗಳೆ ಮೆಟ್ಟೊಳು ನಡೆಯಲು;
ಕೋಪವೇರಲು ಮನವಗೈದುದು
ಹಲ್ಲಿನೊಳು ಕೆರ ಕಡಿಯಲು;
‘ಊರಿಗೊಬ್ಬನು ಚಂದ್ರನಿರುವನೆ’
ಎಂಬ ಪ್ರಶ್ನೆಯ ಕೇಳ್ದುದು;
ನಗುತಲಪ್ಪನ ಗುಂಡಿಗಳನೇ
ಬುಗುರಿಯೊಲು ತಿರುಗಿಸಿದುದು!
ಅಲ್ಲಿಯೇ ನಾ ವರ್ಣಮಾಲೆಯ
ಮೊದಲ ಅಕ್ಷರ ಕಲಿತುದು;
ಗೋಡೆಗಳೊಳೇ ಕಲಿತ ವಿದ್ಯೆಯ-
ನೆಲ್ಲ ಮೆರೆಸುತ ನಲಿದುದು;
ಬಳಪ ಹಲಗೆಯ ಕೊಂಡು ತಂದರು
ಬೇಡವೆನ್ನು ತಲೆಸೆದುದು!
‘ಗೋಡೆಯೇ ಸರಿ’ ಎಂಬ ಭಾವವು
ನನ್ನ ಮನದೊಳು ಮಸೆದುದು!
‘ಬನ್ನಿರೋ ಹೊತ್ತಾಯಿತೆಲ್ಲರು’
ಎಂದರಚೆ ಕಾರ್ಖಾನೆಯು
ಮಸಿಯನಣಕಿಪ ವಸ್ತ್ರ ಧರಿಸಿಹ
ಕೂಲಿಗಾರರ ಸೇನೆಯು
ಕರದಿ ಬುತ್ತಿಯ ಹಿಡಿದು ಹೋಗುತ
ಲಿರಲು ಇರುವೆಯ ಸಾಲೊಲು
ಅದನೆ ನೋಡುತ ನಿಲ್ವೆನಹಹಾ
ಬಾಗಿಲೊಳೆ ನಾ ಶಿಲೆಯೊಲು!
ಈ ಜನ ನಡೆವರಿದೇನನು ಗೈಯಲು
ಎಂಬ ಕುತೂಹಲವೆನ್ನನು ಕಾಡಲು
`ಬಾರೆಲೊ ಹೋಗುವ’ ಎನ್ನಲು ತಂದೆ
ಅಂಜುತಲಂಜುತ ನಡೆದೆನು ಹಿಂದೆ!
ಅಲ್ಲೇನಗ್ನಿಯ ರೋಷವೆ ರೋಷ!
ಕರ್ಣಕಠೋರ ಯಂತ್ರದ ಘೋಷ!
ಭೋರೆನ್ನುತಲಿ ಪಿಶಾಚ ಚಕ್ರ
ತಿರುಗಲು ನಡುಗುವವೋಲಾ ಶಕ್ರ
ಮಂದಗಮನದೊಳೆ ಮೇಲಕೆ ಹತ್ತಿ
ನೋಡುತ್ತಿರೆ ತಲೆ ತಿರುಗಲು ಸುತ್ತಿ
ಇದ್ದಿಲದಿರುಗಳ ಶಕಟವು ಸುರಿಯಲು
ಕುಲುಮೆಯೆ ಕಂಡಿತು ನರಕದ ಬಾಯೊಲು!
ಸಿಡಿಲಿನ ಹುತ್ತವೆ ಪುಡಿಪುಡಿಯಾದೊಲು
ಮಿಂಚ ಗೂಡೊಡೆದು ಕಿಡಿ ಚೆದರುವವೊಲು
ಅಚ್ಚರಿಯೆನ್ನಯ ಬಾಯನು ತೆರೆಸಲು
ಕುಲುಮೆಯು ‘ಆ’ ಎನೆ ಆಕಳಿಸುವವೊಲು
ಅಗ್ನಿದೇವನೇ ನೀರಾದನೊ ಎನೆ
ಬಂಧಿತ ಪಾವಕನೇ ಹೆತ್ತನೊ ಕೆನೆ
ಎಂಬೊಲು ನುಗ್ಗಿತು ಕುಂಕುಮ ಲೋಹ
ನಡೆದಿರೆ ಮಿಂಚು ಸಿಡಿಲ್ಗಳ ಕಲಹ!
ಭಯ ಕೌತುಕಗಳಿಗಾಗಲು ಸಂಗ
ಮನ್ಮನವವುಗಳ ನರ್ತನ ರಂಗ!
ಎಂತೋ ಮರೆವುದು ನಾನೀ ಕಣಸ?
ಬಾಲ್ಯದೊಳಾನನುಭವಿಸಿದ ಹರುಷ!
೩
“ತಿರೆವೆಣ್ಣ ಮೊಲೆವಾಲಿನೊಳೆ ಬೆಳೆದ ನಮ್ಮ
ಸವಿಯ ಬನ್ನಿರಿ” ಎಂದು ತೋಳ್ಬೀಸಿ ತಮ್ಮ
ಆಹ್ವಾನವೀಯುತಿರೆ ಕಬ್ಬಿನಾ ತೋಟ
ಬೇಲಿಹಾರುತ ಕಬ್ಬ ಕದಿವುದೆಮಗಾಟ!
ಆಲೆಮನೆ ಹೊಗೆ ಮುಗಿಲಿಗೋಡುತ್ತಲಿರಲು
ಕೀಚುದನಿಯೊಳು ಗಾಣ ಹಾಡುತ್ತಲಿರಲು
ಚಾವಟಿಯ ರವ ಕೇಳಿ ಬೆಚ್ಚುತಿರಲೆತ್ತು
“ಹೈ! ಹಚಾ!” ಎಂಬವನದೇನಹಹ ಗತ್ತು!
“ಬನ್ನಿ ಬುದ್ದೀ” ಎಂದು ಉಪಚರಿಸುತೆಮ್ಮ
“ತಂಬಿಗೆ ತಗೊಂಬಾರೊ ಬಿರ್ನೆಲೋ ತಮ್ಮ!”
ಎಂದಾಜ್ಞೆಯಿತ್ತು, ತಂಬುಲದ ರಸವುಗುಳಿ
“ಯಾಕ್ಲ ಇಷ್ಟೊತ್ತು?” ಎಂದವನನ್ನು ತೆಗಳಿ,
ನನುಗೋಸುಗವೆ ಗಾಣವನ್ನು ಸಲೆ ತೊಳೆದು
ರಸಭರಿತ ಕಬ್ಬನವ ಕಣ್ಣಿನೊಳೆ ಅಳೆದು
ತಾನೆ ಎತ್ತನು ಹಾಡಿ ಮುಂದಕ್ಕೆ ತಂದು
ನಾವು ಮೊದಲೇ ಬರದೆ ಇದ್ದುದಕೆ ನೊಂದು
ಕಬ್ಬ ಜೊತೆಗೊಂದು ನಿಂಬೆಯ ಹಣ್ಣನಿಕ್ಕಿ
ಚಾವಟಿಯ ಚಟ್ ಎನಿಸಿ ಗಾಳಿಯೊಳು ಕುಕ್ಕಿ
-ರಸವ ಸೋದಿಸೆ ನಮ್ಮ ಕೈವಸ್ತ್ರವಿರಲು-
ಹಲ್ಲಕಿರಿಯುತಲಿದ್ದು ರಸ ನೀಡುತಿರಲು
“ಚೆಂಬೆರಡೆ ಸಾಕಾಯ್ತೆ” ಎಂದೆಮ್ಮ ನಕ್ಕು
ಕುಡಿಸುವನು ಆನಂದ ಹರಿಯುತಿರೆ ಮಿಕ್ಕು!
“ಉಂಡ್ರೆ ಉಣಬೇಕೆಮ್ಮ ಬಿಸಿಬೆಲ್ಲ ಬುದ್ದಿ!
ಮಿಕ್ಕೋರ ಆಲೇಲಿ ಸಿಕ್ಕೋದು ಲದ್ದಿ!”
ಎಂದು ಕೊಪ್ಪರಿಗೆಯೊಳು ಕುದಿಯುತಿಹ ರಸವ
ತೋರಿ ಬಣ್ಣಿಪ ತನ್ನ ಬೆಲ್ಲದಾ ಜಸವ!
“ನಾನೇಳಿದುದು ಸುಳ್ಳೆ ಬುದ್ದಿ ನೀವ್ನೋಡಿ”
ಎಂದು ಬೆಲ್ಲವ ಚಪ್ಪರಿಸುವನಕ ಕಾಡಿ
ಕಂಕುಳಿಗೆ ಎರಡು ಜತೆ ಕಬ್ಬು ತುಂಡನ್ನು
ತುರುಕಿ ನಮ್ಮನು ಕಳುಹುತಿರಲೆಷ್ಟು ಚೆನ್ನು!
ಇಂತು ಭದ್ರಾವತಿಯೊಳಿರೆ ರಸದ ತಿನಿಸು!
ಓ! ಅವುಗಳೆಲ್ಲ ನನಗಿನ್ನು ಬರಿ ಕನಸು!
೪
ಕಾಲೇಜಿಗೋಸುಗವೆ ರೈಲಿನೊಳು ನುಗ್ಗಿ
ನಿತ್ಯ ಕಾಣುತಲಿದ್ದೆವಾವು ಶಿವಮೊಗ್ಗಿ.
“ಉಗಿಬಂಡಿ ಹೊರಟರೆ ಸಲಾಕಿಯನು ಜಗ್ಗಿ
ಠೀವಿಯೊಳು ಹತ್ತುತಿರಲೆಮಗದುವೆ ಸುಗ್ಗಿ!
ಅಲ್ಲಿ ವಿಧವಿಧದ ಜನ ತುಂಬಿರಲು ನೆರೆದು
ಗಾಡಿಗಳ ವೈಶಾಲ್ಯವನು ನಗುತ ಜರೆದು
ವೇಗದಿಂದೋಡುತಿರೆ ಗಾಲಿಗಳು ಹರಿದು
ಕಂಬಿಗಳನೊಡಗೂಡಿ ಕಟಕಟನೆ ಮೊರೆದು
ಅದರ ತಾಳಕೆ ದನಿಯ ಕೂಡಿಸುತಲಂಧ
ಲಾವಣಿಯ ಹಾಡೆ ಕೇಳುವುದೆನಿತು ಚೆಂದ!
ರೈಲ ವೇಗವು ಕಣ್ಗೆ ಮಂಕನ್ನು ತೂರೆ
ತಿರಿವೆಣ್ಣ ಹಸುರುಡುಗೆಯೊಲು ಪೈರು ತೋರೆ
ಗುಡ್ಡಮರಗಳಿಗೆಲ್ಲ ಚಲನೆಯನ್ನಿತ್ತು
ದಿನಬಳಕೆಯಾ ತೆಂಗಿಗೇನೊ ಸೊಬಗಿತ್ತು
ಹಳ್ಳಿ ಹೆಂಗಳ ಕಣ್ಣ ಕುಡಿನೋಟಗಳನು
ಕಂಡು ಉಸ್ಸೆನ್ನುತಲಿ ನಿಟ್ಟುಸಿರುಗಳನು
ಬಿಡುತಲಿರೆ, ಮೊಗಕೆ ಮೊಗವಿತ್ತು ನಿಲಲಲ್ಲಿ
ಹಸರುಗರಗಸದೋಲು ಪಾಪಾಸ ಕಳ್ಳಿ,
ಜರೆದದನು ನಗುನಗುತ ಮುಂದಕಡಿಯಿಟ್ಟು
ಮುಗಿಲನಿರಿಯುನ ತೆರದಿ ಕೂಗೊಂದನಿಟ್ಟು
ಇಕ್ಕೆಲದಿ ಪೈರಿರಲು, ನಡುವಿನೊಳು ಕಂಬಿ
ಬೈತಲೆಯವೋಲಿರಲು ಅದರೊಳೇ ನಂಬಿ
ತುಂಗೆಯನು ದಾಟುತಿರೆ ಗೌರವದಿ ನಡೆದು
ಸೇತುವೆಯ ಕೆಳಗೊಂದು ಚಿತ್ರವನೆ ಕಡೆದು
ವೇಗದಿಂದೋಡುತಿರೆ ರೈಲು ಬಿಡುವಿರದೆ
ತಂತಿ ಕಂಬಗಳಿಣಿಕಲಾಗಾಗ ಬಿಡದೆ-
ಇವೆ ನಮ್ಮ ಪಯಣದಾ ಬೇಸರಕೆ ಸೋಡಿ,
ಓ! ಏನು ಒಂದೆರಡೆ ರೈಲಿನಾ ಮೋಡಿ!
ತರಗತಿಯ ಬಿಡಲೆಂದಿಗಿಂತಲೂ ಮುಂದೆ
ಹಿಂದಿರುಗುತಿದ್ದೆವಲ ತುಂಗೆಯೊಳು ಮಿಂದೆ!
ಓ! ತುಂಗೆ! ಮಲೆನಾಡಿನೊಳು ಹರಿವ ಗಂಗೆ!
ಭದ್ರೆ ನಿನ್ನೊಡನೆ ಜನಿಸಿದ ಕಿರಿಯ ತಂಗೆ!
ಎಷ್ಟು ವಿಧವಮ್ಮ ನೀ ತೋರಿದ್ದ ಭಂಗಿ!
ಮಳೆ ಬೀಳೆ, ಹೆಬ್ಬಂಡೆಗಳನು ನೀ ನುಂಗಿ
ಉಕ್ಕುತಿರಲೊತ್ತರಿಸಿ ದಡಗಳನು ಮೀರಿ
ಹುಸಿ ಮುನಿಸುಗೊಂಡಿರುವ ದೇವಿಯೊಲು ತೋರಿ,
ಬೇಸಗೆಯೊಳೇ ನೀನು ಬರಿಮರಳೆ ಆಗಿ
ಮರಳಿನೊಳು ರಜತರೇಖೆಯ ಹೋಲಿ ಬೆಳಗಿ
ಕತ್ತಿಯಲಗಿನ ಹೊಳಹ ಜರಿದು ನೀ ಹರಿದೆ
ಮಾಸಮಾಸಕೆ ವಿವಿಧ ಭಂಗಿಗಳ ಮೆರೆದೆ!
ಶುಷ್ಕೋಪನ್ಯಾಸದೊಳು ಬೆಂದೆಮಗೆ ತಂಪ
ನೀಡಿ ಉಳಿಸಿದೆ ಬರಿಯ ನೆನಹುಗಳ ಕಂಪ!
ಇಲ್ಲದಿರೆ ನಡಿಗೆಯೊಳೆ ಪಯಣವನು ಬೆಳೆಸಿ
ಹೊರಟಿರಲು ಗೊತ್ತುಗುರಿಯಿಲ್ಲದೊಲು ಬಳಸಿ
“ನಮಗೆ ನಾವೇ ದೊರೆಗಳಿನ್ನಾರ ತಡೆಯು”
ಎಂಬ ಭಾವಕ್ಕಿಂಬನೀಯುತಿರೆ ನಡೆಯು
ಗುರಿಯೇನೊ ಭದ್ರಪುರಿ! ತನು ಮಾತ್ರ ಮರದಿ!
ಇಲ್ಲದಿರೆ ಬೀದಿಗಳ ಕಲ್ಲುಗಳು ಕರದಿ!
ಮಳೆ ಬಂದು ಜಾರಿದರು ನೇರಳೆಯ ಮರವು
ಏರುತಲಿ, ಮರದೆಡೆಗೆ ಉಜ್ಜುತಿರಲುರವು
ಹೊಟ್ಟೆಯಳತೆಯ ಮೀರಿ ತುಂಬುತಲಿ ಹಣ್ಣ
ಬೆನ್ನ ಹಿಂದೈತರುತ ನೇರಳೆಯ ಬಣ್ಣ-
ವನು ತಿಳಿಯದೊಲು ಹಚ್ಚಿ ಗೆಳೆಯನಿಗೆ ನಗುತ
ನೇರಳೆಯ ಬೀಜಗಳೊಳೇಟುಗಳ ತಿನುತ
ಅಲ್ಲೆ ಹಳ್ಳಿಯ ಬಾವಿಯೊಳು ನೀರ ಕುಡಿದು
ಸೇರುತಿದ್ದೆವು ಕೊನೆಗೆ ನಮ್ಮೂರ ನಡೆದು.
ಇಂತು ಭದ್ರಾವತಿಯೊಳಿರೆ ರಸದ ತಿನಿಸು-
ಓ! ಅವುಗಳೆಲ್ಲ ನನಗಿನ್ನು ಬರಿ ಕನಸು!
೫
ಕೂಲಿಗಾರರ ತಂಡ ಪೋಗುತಿಹ ‘ಜರಬು’
ಕಂಡುದಿಸುತಿತ್ತೆನಗೆ-ಬಾಲ್ಯದೊಳು-ಕರುಬು!
ಅಂದೆನ್ನ ನಿಷ್ಕಪಟ ಮನಕೇನು ಗೊತ್ತು?
ಅವರ ಕೊರೆ? ಅಧಿಕಾರಿಗಳ ಮದದ ಮತ್ತು?
‘ಸಂಬಳವನೇರಿಸಿರಿ’ ಎಂದು ಚಣಚಣಕೆ
ಮುಷ್ಕರವು ನಡೆಯೆ ಹಿನ್ನೆಲೆಯಂತೆ ರಣಕೆ
ಅದೆ ತಾನೆ ದೇಶದೊಳು ಸ್ವಾತಂತ್ರ್ಯ ಘೋಷ
ಹಬ್ಬಿತ್ತು ಮಿತಿಯ ಮೀರಿರೆ ಜನರ ರೋಷ.
ಬಿದ್ದರಲ ಗುಂಡಿನೇಟಿನೊಳು ಜನ ಸತ್ತು!
ಸಾಮ್ರಾಜ್ಯಶಾಹಿಯೊಲು ರೂಹಾಂತು ಮೃತ್ಯು
ತಾಂಡವವನಾಡುತಿರೆ ದೇಶದಾದ್ಯಂತ
ಏರುತಿರಲಮಿತ ಜನ ಸೆರೆಮನೆಯ ಹಂತ
ಮಲಗಿ ನಿದ್ರಿಸಿದೆನ್ನ ಭಾವಗಳಿಗಂದು
ಚಾವಟಿಯೊಳೇಟ ಬಿಗಿದಂತಾಗೆ, ನಿಂದು
ತಾಂಡವವನಾಡುತಿರೆ ಮನ-ರಂಗದಲ್ಲಿ
ಮಿಂಚ ಗೊಂಚಲು ಸಂಚರಿಸಿತಂಗದಲ್ಲಿ!
ಬಿಡಿ ಮುಖಂಡರನೆಂಬ ದನಿ ಸೀಳೆ ಮುಗಿಲ
ಮುಷ್ಕರಗಳೆಲ್ಲೆಲ್ಲು ಹಬ್ಬಿಸಿರೆ ದಿಗಿಲ
ಅಃ! ಇದರ ಬಿಸಿಯು ಭದ್ರಾವತಿಗು ತಟ್ಟಿ
ಮುಗಿಲೊಳೇ ನಿಂದಿತಧಿಕಾರಿಗಳ ದಿಟ್ಟ!
ತಮ್ಮ ಮೆಚ್ಚಿನ ನಾಯಕರ ದಸ್ತಗಿರಿಯ
ಕೇಳಿ, ರವಿ ಮುಳುಗುತ್ತಲಿರಲಸ್ತಗಿರಿಯ
ಕೆಂಪ, ಮೀರಲು ಕೂಲಿಗಳ ಕಣ್ಣ ಕೆಂಡ
ಮುತ್ತಿತಾ ಚಣವೆ ಠಾಣೆಯನವರ ತಂಡ!
ಆಗ ಬಂದಿತು ಕರೆಯು ಮಾರಿಯೌತಣಕೆ
ಲಾಠಿಗಳು ಬರಲು ಬರಿಗೈಯೊಡನೆ ರಣಕೆ!
‘ಉಹು! ಇಷ್ಟು ಸಾಲದೋ’ ಎಂಬವೊಲು ಬರಲು
ರೈಲೊಂದು ಚುಕುಪುಕನೆ, ಬೊಂಬು ತುಂಬಿರಲು
ನುಗ್ಗಿ ನಿಲ್ಲಿಸಿ ರೈಲ ಬೊಂಬುಗಳ ತರಲು
ಝಳಪಿಸುತ ‘ಜೈ’ ಎಂದು ಕೂಗುತೈತರಲು
ಅಧಿಕಾರಿಗಳು ಹಲ್ಲ ಕಟಕಟನೆ ಕಡಿಯೆ
ಗುಂಡುಗಳನೆಡೆಬಿಡದೆ ಮಳೆಯವೊಲು ಜಡಿಯೆ
ಓಡಿದರಲಾ ಮೂಳೆ ಚಕ್ಕಳಗಳುಳಿಸೆ
ಬೇರೆಯೇನೂ ಇರದೆ ತಮ್ಮ ಬಳಿಯುಳಿಸೆ!
ಜನರ ಬೇಟೆಯು ತಡೆಯೆ ಇಲ್ಲದೊಲು ಸಾಗಿ
ಎಲ್ಲೊ ಆಡುತಲಿದ್ದ ಮಗು ಗುಂಡು ತಾಗಿ
ಸತ್ತುಬಿದ್ದರು ತೃಪ್ತಿಗೊಳ್ಳದೆಯೆ ಗುಂಡ
ಮುಗಿಸಿ ಕುಳಿತರು ಚೆದರೆ ಕೂಲಿಗಳ ತಂಡ!
ಹಾಲ ಕಾಸುತಲಿರಲು ಬುಸ್ಸೆಂದು ಉಕ್ಕೆ
ಮರುಚಣವೆ ನೀರಿನಿತ ಉಫ್ಫೆಂದು ಕುಕ್ಕೆ
ಎಂತೊ ಶಾಂತಿಯ ತಾಳ್ವ ಹಾಲ ತೆರವೆಲ್ಲ
‘ಶಾಂತವಾಯಿತು’- ಗುಂಡುಗಳು ವಿಫಲಮಲ್ಲ!
ಎಂತು ಮರೆವುದು ಮನವು ಆ ರುದ್ರ ಕಣಸ!
ನಡುಗುವುದು ಎದೆ ರಾತ್ರಿ ಕಂಡರಾ ಕನಸ!
೬
ನಿನ್ನನೆಂತಗಲಿರಲಿ ಓ ನನ್ನ ಭದ್ರೆ!
ನಿನ್ನನುಳಿದೆನಗಿನ್ನು ಬಾರದಲ ನಿದ್ರೆ!
ಬಣ್ಣ ಬಣ್ಣದ ಮೀನುಗಳು ಕುಣಿಯೆ ನಿನ್ನ
ನೋಡುತಿರೆ-ಊರಾಚೆ-ಆಹ! ಏನು ಚೆನ್ನ!
ಊರ ಮಧ್ಯದಿ ಮಾತ್ರ ರೂಪವನು ನೀನು
ತ್ಯಜಿಸಿರುವೆ ತಾಯಿ ಈ ನಿನ್ನ ಹದನೇನು?
ಮೂಡುವೆಳೆ ನೇಸರನ ಹೊಂಗಿರಣ ನಿನ್ನ
ಎದೆ ಮೇಲೆ ನರ್ತಿಸದು, ಏನಿದೀ ಬನ್ನ?
ಹೊರಗಿನೊಲು ಹಳ್ಳಿ ಹೆಣ್ಣುಗಳೆಲ್ಲ ಬಂದು
ಕೈಗಡಗ ದನಿಗೈಯೆ, ಕೊಡಗಳನು ತಂದು
ನೀರಿಗೋಸುಗ ದಡದಿ ನಿಂತಿರುವ ನೋಟ
ಕಾಣದಲ! ಏಕಿಂತು? ಯಾರದೀ ಮಾಟ?
ಊರಾಚೆ ನಿನ್ನೊಳೇ ತೊಂಡು ತಿರುಗುತ್ತ-
ಲಿದ್ದ ನಕ್ರಗಳೆಲ್ಲಿ? ಅಡಸಿತೇ ಕುತ್ತ?
ಕಡೆಗೊಂದು ಎಮ್ಮೆಯೂ ಕಾಣದಲ ಇಲ್ಲಿ!
ಮರದ ತೋಪಿನ ನೆರಳ ವೈಚಿತ್ರ್ಯವೆಲ್ಲಿ?
ಹಳ್ಳಿ ರೈತನು ನೆಲಸೆ ಊರೊಳಗೆ ಬಂದು
ಗತಿಗೆಟ್ಟು ನಿಂದಿಹನು ಕೂಲಿಯಾಗಿಂದು!
ಅಂತೆ ನೀನೂರಾಚೆ ಮೆರೆವ ಸುಂದರಿಯು!
ಊರೊಳಗೊ? ಕೊಳಕು ಪಾಚೆಗಳ ಮಂದಿರೆಯು!
ಯೋಚನೆಯಿದೊಂದೆ ಮನರಂಗದಲಿ ಸುಳಿಯೆ
ಕಣ್ಣೀರ ಕಾರುವೆನು ಹೃದಯ ಬಸವಳಿಯೆ!
೭
ಅಲ್ಲೆ ಪ್ರೇಮದ ಮೊಟ್ಟ ಮೊದಲನೆ
ಪಾಠವನು ನಾ ಕಲಿತುದು
ಹೆಣ್ಣಿನೊಲನಿನ ಮಡುವಿನಾಳವ-
ನಲ್ಲಿಯೇ ನಾನರಿತುದು!
ಅಲ್ಲೆ ಎನ್ನಯ ಒಲವಿನಾ ಗಣಿ
ದೊರಕದಿರೆ ನಾ ನೊಂದುದು!
ಅಲ್ಲೆ ಕಮಲೆಯ ಕಣ್ಣ ನೋಟದೊ
ಳೆನ್ನ ಹೃದಯವು ಬೆಂದುದು!
ಒಲವಿನೂರನು ತೊರೆದ ದುಃಖದಾ ಸಂತೆ
ಸಾಲದೇಂ? ಕಾಡುತಿದೆ ಕಾದಲೆಯ ಚಿಂತೆ!
ತಾಯ ಮಡಲಿನ ತಂಪಿನಾಸರೆಯ ಬಿಟ್ಟು
ವಿರಹದುರಿಯೊಳು ನಾನು ಬೇಯುತಿಹೆ ಸುಟ್ಟು!
ಅಲ್ಲಿತ್ತು ಒಲಿದವಳ ಸವಿಮಾತಿನುಣಿಸು!
ಓ! ಅವುಗಳೆಲ್ಲ ನನಗಿನ್ನು ಬರಿ ಕನಸು!
೮
ಕೀರಿನೊಳು ಅಲ್ಲಲ್ಲಿ ಸುಳಿಯುವ
ದ್ರಾಕ್ಷಿ-ಗೋಡಂಬಿಗಳೊಲು
ಜೇನುತುಪ್ಪದಿ ಮಿಂದು ಬಂದಿಹ
ತೋರ ಹಲಸಿನ ತೊಳೆಯೊಲು
ಮೋದವೆನ್ನೊಳು ಉದ್ಭವಿಸುವುದು
ನಗೆಯು ಅಧರದಿ ಮಿನುಗಲು
ಯೋಚಿಸುತ್ತಲಿ ಮನವು ಸುಮ್ಮನೆ
ನೆನಪ ಮೆಲುಕನು ಹಾಕಲು!
ಕೆರದ ಒಡಲೊಳೆ ಮನೆಯ ಮಾಡುತ
ಹಿಂಸಿಸುವ ಮೊಳೆಯಂದದಿ
ಮಧುರ ದಧಿಯನ್ನ ದೊಳೆ ಹುದುಗಿಹ
ನೊರಜುಗಲ್ಲುಗಳಂದದಿ
ಕೆಸರ ಬಸಿರೊಳಗವಿತುಕೊಂಡಿಹ
ಮುಳ್ಳುಗಳವೊಲು ಚುಚ್ಚುತ
ಮರು ಚಣವೆ ಉಕ್ಕುತ್ತ ದುಃಖವು
ಬಹುದು ಕರುಳನು ಹಿಂಡುತ!
ಇಂತು ಸುಖ-ದುಃಖಗಳ ಉಯ್ಯಲೆ-
ಯೊಳಗೆ ಆಡುತಲಿದೆ ಮನ
ಕರತಲವು ಚುಬುಕಾಗ್ರದಲ್ಲಿರೆ
ಸುಳಿಯೆ ನೆನಹುಗಳಾ ಸ್ವನ.
ಕಾಲದಾ ನೆರೆ ನನ್ನನಿಲ್ಲಿಗೆ `
ನಿಷ್ಕರುಣೆಯಿಂ ಸೆಳೆದುದು
ರಕ್ತಮಾಂಸಗಳುಳಿದ ದೇಹದ
ಉಸುರಿನೊಲು ನೆನಪುಳಿದುದು!
ದೂರವಾಯಿತು ಇಲ್ಲವಾಯಿತು
ಇನ್ನೆನಗೆ ಭದ್ರಾವತಿ
‘ರಸದ ಮಡುವನು ತೊರೆದು ಬಂದೆನೆ’
ಎಂದು ತುಡಿವುದು ಮನ್ಮತಿ.
ಎಂದಿಗೋ ಇನ್ನಂಥ ತಾಣವ
ನಾನು ಕಾಂಬೆನು ಕಣ್ಣೊಳು?
ತೊಳಲುವುದು ಮನ ಮಿಲಮಿಲನೆ ಹುಳು
ಹೊರಳುವೊಲು ಹುಡಿಮಣ್ಣೊಳು!
*****
ದಿವಂಗತ ಶ್ರೀಮಾನ್ ಬಿ.ಎಂ. ಶ್ರೀಕಂಠಯ್ಯನವರು ಏರ್ಪಡಿಸಿದ “ರಜತೋತ್ಸವ ಕನ್ನಡ ಸ್ಪರ್ಜಪದಕ” ಸ್ಫರ್ಧೆಯಲ್ಲಿ ೧೯೪೮ರಲ್ಲಿ ಬಹುಮಾನ ಪಡೆದ ಕವಿತೆ.





