ಯಾಕೆ ಮೂಕತೆಯೆನ್ನ ಚಿತ್ತವನು ಮುತ್ತಿಹುದು ?
ಯಾಕೆ ಹಾಡಿನ ಹಕ್ಕಿ ಕತ್ತರೆತ್ತದೆ ಇಹುದು ? ಪ
ತೆರೆದೊಲಿದ ಕಣ್ಣಿಂದ ಬಾಳ ನೋಡುತಲಿಹೆನು
ಚೆಲುವಿಕೆಯನಂತ-ನವಲೀಲೆಯಲಿ ಮುಳುಗಿಹೆನು
ಕಲೆಯ ಕಡಲಿನ ಕನ್ನೆ ಸನ್ನೆಯಲಿ ಕರೆಯುತಿರೆ
ಒಲಿಯದೇಕೀ ಕರುಳು, ಉಲಿಯದೇ ಕೀ ಕೊರಳು ? ೧
ಚಣಚಣಕೆ ಕಣ್ಣಿದಿರು ಕಾಣುವ ಪವಾಡವನು
ದಿನದಿನದ ನೋವುನಲಿವಿನಗಾಧದೃಶ್ಯವನು
ಹೆಣೆಯಲಿಕೆ ಕೃತಿಯಾಗಿ ಹಂಬಲಿಸುತಿರೆ ಜೀವ
ಅಣಿಯಾದ ರಸಝರಿಯ ಹರಿವ ತಡೆಯುವುದೇನು ? ೨
ಸಂಜೆಮುಂಜಾವುಗಳ ಮುಗಿಲ ಬಂಗಾರವನು
ಕಣ್ಣಕೋಶದೊಳಿರಿಸಿ ಚೆಂದೊಡವುಗಳ ಗೆಯ್ದು
ನುಣ್ಣನೆಯ ರಸಿಕಹೃದಯಕೆ ತೊಡಿಸಿ ಮೆರೆವೆನೆನೆ
ಅಂಜಿಸುವುದಾವುದದು ವಿಹರಿಸುವ ವಾಣಿಯನು ? ೩
ಜೀವನದ ತರತರದ ಘೋರ ಸುಂದರ ಕಥೆಯ
ಭಾವಸಾಗರದೊಳದ ಲೇಸುಮೋಸಗಳನ್ನು
ತೀವೆ ಬಣ್ಣನೆಯಿಂದ ಸಾಲದೀ ಮುಗಿಲೆನಲು
ಹೇವವಾವುದು ಕೈಯ ಕಟ್ಟಿಹುದು ಬೆಟ್ಟತಾಗಿ. ೪
ಕವಿಯಾಗಿ ಕಂಡುದದು ಕಾಂಬುದದು ನಿಜನಿಜವು
ಹವೆಗಿಂತ ಹಗುರಾಗೆ ನಲಿವುಕ್ಕಿ ಸೂಸುವುದು
ನಿಚ್ಚನಾರದನಾಗಿ ವಿಶ್ವಸಂಗೀತವನು
ಮೆಚ್ಚಿ ಹಾಡುವೆನೆಂದು ಹಾತೊರೆಯುತಿಹುದದೆಯು. ೫
ಎಚ್ಚರಾದರು ಕೂಡ ಮಾತೇಳದವನಂತೆ
ಹೆಚ್ಚುತನದಲಿ ನಿಯತಿ ಚಕ್ರದಲಿ ನಾ ನಡೆಯೆ
`ಮೂಕತೆಯು ಪಾಕಕ್ಕೆ ; ತಡೆ ಮಿಗಿಲು ಪಡೆ’ ಯೆಂಬ
ಮೂಕಪ್ರಕೃತಿಯ ಮಾತೆ ಇಂದಿನಾಸರೆಯಾಯ್ತೆ? ೬
*****








