ನಿನ್ನ ಕರುಣಾವಲಂಬನ
ನನ್ನ ಈ ತರಳ ಜೀವನ
ಅರಿತರಿತು ಜಾರುತಿರುವೆನು
ಮರೆಮರೆತು ದೂರುತಿರುವೆನು
ನೀನಿತ್ತ ದೇಹಯಾತ್ರೆಯ
ತುಂಬಿದೀ ಪುಣ್ಯ ಪಾತ್ರೆಯ
ತಿರುತಿರುಗಿ ತೆರವು ಮಾಡುವೆ
ಮರಳಿ ನೀ ತುಂಬಿ ನೀಡುವೆ
ಮಸುಳಿಸಿರೆ ನನ್ನ ಕಾಣಿಕೆ
ಹುಸಿಯಾಗೆ ಹಲವು ಹೂಣಿಕೆ
ಕಳವಳಿಸಿ ಕುಗ್ಗಿ ನಾನಿರೆ
ಹೊಸ ಹುರುಪುಬುಗ್ಗೆ ನೀ ಬರೆ
ಕುಣಿಕುಣಿದು ಮುಂದೆ ಸಾಗುವೆ
ಕಣಕಣವು ನಿನ್ನದೆನ್ನುವೆ.
ಮೋಹ ಮಮತೆಗಳ ಮಾಲೆಯು
ಇದುವೆಲ್ಲ ನಿನ್ನ ಲೀಲೆಯು.
*****








