ಇಳಿ ಹೊತ್ತು ಆದಾಗ
ಎಳೆ ಸೂರ್‍ಯ ನಡೆದಾಗ
ತಳ ತಳ ಹೊಳೆಯುವಾ ಸೊಗಸನ ನೋಡು || ೧ ||
ಇಕೊ ಬನ ವನ ಸಿರಿಯು
ನೂಕುವದು ಎದೆಯಲ್ಲಿ
ಬೇಕಾದ ಒಸ್ತುಗಳು ನೋಡುವವು ನಮ್ಮ || ೨ ||
ಬಳ್ಳಿಯಾ ಬನವೆಂದು
ಎಳೆಮಲರು ಹೂವುಗಳು
ಇಳಿ ಹೊತ್ತು ಕಂಡು ಬಿಸಿ ಉಸಿರಪಡುವವು || ೩ ||
ಬಾಬಾರೆ ಚೆಲುವನಲ್ಲೆ
ಬಾರೇ ಎನ್ನ ಬಳೀ
ಕರೆತಿಹದು ಮಲ್ಲಿಗೆ ನಲ್ಲ ತನ್ನ ಬಳಿ || ೪ ||
ಚೆಂದದ ಸೊಗಸಿನಾ
ಸೌಂದರ್‍ಯ ನೋಡುತ
ಮಂದಹಾಸನಲಿಯುವವು ಹೂಬಳಗವು || ೫ ||
ಮೃದುವಾದ ಪಕಳಿಗಳು
ತಿದ್ದಿಹವು ಮೈತುಂಬ
ಮುದ್ದಾಗಿ ಬೆಳೆದಿರುವ ಹೂಚಲುವಿಗೆ || ೬ ||
ಮನದಲ್ಲಿ ಮೂಡಿರುವಾ
ಬನಸಿರಿಯ ಹೂವುಗಳು
ಮನುಜರ ಸುಳುವಿಗೇ ಬಾಗಿಹವೋ ಏನು || ೭ ||
ಹೊತ್ತು ತಾಕಡೆಹಾಯ್ತು
ಇತ್ತ ತಾ ಚಂದಿರನು
ಸುತ್ತುತಾ ಆಕಾಶ ಮಧ್ಯದಲಿ ಬಂದ || ೮ ||
ಚಂದಿರನ ದರ್‍ಶನಕೆ
ಅಂದದಲಿ ಹೂವುಗಳು
ಒಂದೊಮ್ಮೆ ಭಾರಿ ನೋಡಿ ನಕ್ಕವೋ || ೯ ||
ಸೊಗಸಿನಾ ಬಾಳಿದೋ
ಆಗುವದು ಕ್ಷಣ ಮಾತ್ರ
ಹೋಗುವದ ಹೂ ಜೀವ ವಿಶ್ವ ಬಲ್ಲದೇ ||೧೦||
ಸೆರೆ ಸಿಕ್ಕ ಹೂವುಗಳು
ಮರಮರನೆ ಮರಗಿದವು
ಉರಿನಾ ಎದೆ ನೋವು ಚಂದ್ರನೇ ಬಲ್ಲ || ೧೧ ||
ಭೂದೇವಿ ತೊಟ್ಟಿಹ
ಮೃದು ಹೂವ ಮಾಲೇ
ಎದುರಾಯ್ತು ಮಾರುತನ ಬಡಿತಕ್ಕೇನೋ || ೧೨ ||
ಇಂತು ಅವುಗಳ ಮರಣ
ಸಂತಸವ ಕೊಡಲಿಲ್ಲ
ನಿಂತು ಅವುಗಳ ನೋಡಿ ಮರಳಿದೆವುಮನೆಗೆ || ೧೩ ||
*****








