ಭಾಸಹಾಸಗಳಲ್ಲಿ ಜೀವ ತೇಲುತ್ತಿರಲು
ನಿನ್ನ ನಾಮವು ಬಂತು ಸಿಡಿಲು ಸಿಡಿದಂತೆ
ಹೇಸಿಗೆಯ ಹೂವ ಮೂಸಿಡುವ ತುಂಬಿಗೆ ದೂರ-
ದಲ್ಲಿರುವ ನಂದನದ ಕಂಪು ಬಡಿದಂತೆ
ಪ್ರೇಮಸಂಕೇತಗಳನೆಂದು ಧಾಳಾಧೂಳಿ-
ಯಿಂದ ಕುಣಿದೆನು ನಾನು ವ್ರಾತ್ಯಶುಕದಂತೆ
ಮಾಮರನ ಚಿಗುರನ್ನು ಕನಸಿನಲ್ಲಿಯೆ ಕಂಡು
ಕಣ್ಮುಚ್ಚಿ ಕುಕಿಲುತಿಹ ತರುಣ ಪಿಕದಂತೆ
ಹಿರಿ ಬೆಳಕು ಬರುತಿಹುದು, ನರುಗಂಪ ತರುತಿಹದು
ಇನ್ನು ಇಂದಿಗು ಗುಪ್ತಗಂಗೆ ಹರಿದಂತೆ
ಅರಿತಿಲ್ಲ ಆ ನೇಹ, ಮರೆತಿಲ್ಲ ಆ ನೆನಹು,
ಏಕೆಯಿರುವದೊ ಮೊದಳಿಗಿದ್ದಕಿದ್ದಂತೆ
‘ಒಂದೆ ಒಂದೇ’ ಎಂದು ರಸಸಿದ್ಧಿಗಾಗೆಂದು
ಸಿದ್ಧನಾಗಾರ್ಜುನನು ತಿರುಗಿದಂತೆ
‘ಒಂದೆ ಮಾತಾಡು ಪತಿ’ ಎಂದು ವಿರಹಿಣಿ ತನ್ನ
ಮೃತ್ಯುಶಯ್ಯೆಯ ಮೇಲೆ ಮರುಗಿದಂತೆ.
ಇಂದು ಎನ್ನುತ್ತಿರುವೆ ಗುಟುಕು ಕೊಡು ತೊಟಕು ಕೊಡು,
ಆತ್ಮಘಾತಕಿಯಾದ ಕಾಡಬೇಗೆ
ನಂದಿಸೈ, ಭಕ್ತಿಯಲಿ ಸಂಧಿಸೈ, ಕುಡಿವೆ ನಾ
ಹಸಿದು ಬಂದವ ಹಾಲು ಕುಡಿದ ಹಾಗೆ
*****








