ಒಮ್ಮೆ ಸತ್ಯದ ಬಳಿಗೆ ಹೋದೆ.
‘ನಾನು ನಿನ್ನ ವರಿಸಿರುವೆ. ನಿನ್ನ ಜೊತೆ ಇರಲು ಬಯಸಿರುವೆ’ ಎಂದೆ.
‘ನನ್ನ ಮನೆಗೆ ಬರುವೆಯಾದರೆ, ನೀ ಸಕಲ ಸಜ್ಜಿತನಾಗಬೇಕು’.
‘ಹಾಗಾದರೆ ನೀ ದೂರೆಯುವೆಯಾ’ ಎಂದೆ.
‘ಇದು ಮೊದಲ ಸೋಪಾನ. ನೀ ಬರೀ ಸಾಧಕನಷ್ಟೆ!
‘ಇನ್ನೆಷ್ಟು ಸೋಪಾನವಿದೆ?’ ಎಂದಿತು ಮನ
‘ನಿನ್ನ ಬುದ್ಧಿ ಎಂಬ ಎರಡನೆಯ ಸೋಪಾನದಿಂದ ಮೇಲೆ ಹತ್ತು’
‘ಹತ್ತುತ್ತಲೇ ಹೋಗಬೇಕೆ?’ ಕೇಳಿತು ಮನ
‘ತರ್ಕ ವಿತರ್‍ಕ ಬೇಡ’ ಎಂದಿತು ಸತ್ಯ.
‘ಮೂರನೇ ಸೋಪನವಾದ ಸಮತೂಕಕ್ಕೆ ಬಾ’ ಎಂದಿತು ಸತ್ಯ.
‘ಕುಂಟುತ್ತಾ ಬರುತ್ತಿರುವೆ’ ಎಂದಿತು ಮನ.
‘ನಾಲ್ಕನೆಯ ಸೋಪಾನದ ಚಿಂತೆಯ ಜಾಲದಲ್ಲಿ ಜಾರಬೇಡ’- ಎಂದು ಮತ್ತೆ ಎಚ್ಚರಿಸಿತು ಸತ್ಯ.
‘ಕತ್ತಲೆ ಕವಿದಿರುವಾಗ ಇನ್ನೆಷ್ಟು ಮೆಟ್ಟಿಲು ಹತ್ತಲಿ’ ಎಂದಿತು ಮನ.
‘ಕವಿದು ಕೊಂಡಿರುವ ಕಲ್ಪಿತ ವಾತಾವರಣ ಸ್ಫೋಟವಾಗಲಿ, – ಕಾಣುತ್ತದೆ ನಿನಗೆ ನನ್ನ ಹತ್ತಿರಕ್ಕೆ ಬರುವ ಸೋಪಾನ’ ಎಂದಿತು ಸತ್ಯ.
‘ಕಣ್ಣು ಮಂಜಾಗುತ್ತಿದೆ. ಕಾಲು ನಡುಗುತ್ತಿದೆ’ ಎಂದಿತು ಮನ
‘ಮುಸಕ ತೆರೆ. ದೃಢ ಹೆಜ್ಜೆ ಇಡು, ಭಯಬೇಡ’
‘ತಲೆ ತಿರುಗುತ್ತಿದೆ’ ಎಂದಿತು ಮನ
‘ಧೈರ್‍ಯ ಸ್ಥೈರ್‍ಯವಿರಲಿ. ಧರ್ಮಕರ್ಮವ ಕೈಪಿಡಿ, ಜ್ಞಾನ ಜ್ಯೋತಿಯ ಹಿಡಿದು ಮುಂದೆ ನಡೆ. ಮತ್ತೆ ಸೋಪಾನ ಹತ್ತು ತೋರು ಬೆರಳನ್ನುನೋಡು. ಹಾಡುವ ಕೊರಳನು ಕೇಳು. ಹೃದಯ ತುಡಿತಮಿಡಿತವ ಆಲಿಸು. ಮಣ್ಣಲ್ಲಿ ಹುಡುಕು. ಕಣ್ಣಲ್ಲಿ ನೋಡು, ಮೋಡ, ಗುಡುಗು, ಮಿಂಚನ್ನು ನೋಡು, ಗಿಡ, ಬಳ್ಳಿ, ಹೂವು, ಮುಳ್ಳು, ಕಲ್ಲು, ಶೋಧಿಸು, ಕೆಡಕು, ಒಡಕು, ತೊಡಕು ಭೇದಿಸು. ಸುಖ, ದುಃಖ ನೋವು, ನಲಿವು ಛೇದಿಸು. ಶೃತಿ ಸಾರ ಝೇಂಕಾರದಲಿ ನಡೆ. ತಾಳಲಯ ಬದ್ಧದಲ್ಲಿ ಹತ್ತು ಮತ್ತಷ್ಟು ಸೋಪಾನ’ ಎಂದಿತು ಸತ್ಯ.
‘ಕೈಕಾಲು ಸೋಲುತಿದೆ’ ಎಂದಿತು ಮನ
‘ಧೃತಿಗೆಡಬೇಡ, ಮತಿಗೆಡಬೇಡ- ನೀತಿನಿಯಮಕ್ಕೆ ದೂರ ಯಾವುದೂ ಇಲ್ಲ’.
‘ನಡೆ ಮುಂದೆ, ನಡೆ ಮುಂದೆ’ ಎಂದಿತು ಸತ್ಯ.
‘ಎದೆ ಬಡಿತ ತಾಳ ತಪ್ಪುತ್ತಿದೆ’ ಎಂದಿತು ಮನ.
‘ಸತ್ಯಕ್ಕೆ ಮುಖಾಮುಖಿಯಾಗುತ್ತಿರುವೆ. ಪ್ರಜ್ಞೆ ಜಾಗೃತವಾಗಿಸಿಕೋ. ಗುರು ಎರವಾಗುತ್ತಾನೆ. ನಿಲ್ಲಬೇಡ, ಕೂಡಬೇಡ ನಡೆ. ಅಲ್ಲೇ ಇಲ್ಲೇ ಇದೆ ಸತ್ಯದಮನೆ. ನಿನ್ನ ಸ್ವಂತ ಮನೆ, ನಿನ್ನ ಸನಾತನ ಮನೆ. ನಿನ್ನದು ನನ್ನದು ಅದು ಎಲ್ಲರ ಮನೆ. ಅದು ಸತ್ಯದ ಅರಮನೆ’, ಅಲ್ಲಿ ಬಂದು ಸೇರಿದಾಗ ಮನ, ಸತ್ಯಕ್ಕೆ ಕೈ ಜೋಡಿಸಿ ಹೇಳಿತ್ತು ನಮನ.
*****








