ಡೊಂಬರಾಟ! ಡೊಂಬರಾಟ!
ಧನಿಯಮುಂದೆ ಡೊಂಬರಾಟ!
ಕೋಟಿಗೋಡೆ ಮಧ್ಯದಲ್ಲಿ
ಕಾಡುಕಿಚ್ಚು ಬಿಸಿಲಿನಲ್ಲಿ
ಹೊಟ್ಟೆಹಸಿದ ಹೊತ್ತಿನಲ್ಲಿ
ಒಳಗೆ ಒಳಗೆ ಒಡಲಿನಲ್ಲಿ!
ಡೊಂಬರಾಟ! ಡೊಂಬರಾಟ!
ಧನಿಯಮುಂದೆ ಡೊಂಬರಾಟ!
ಪೊಳ್ಳುಡೊಳ್ಳು ಢೋಲುಬಡೆದ!
ಕೂಗಿ ಕೂಗಿ ಕೇಕೆ ಹೊಡೆದ!
ಕರುಳುತಂತಿ ಮೇಲೆ ನಡೆದ!
ಜೋಲಿಹಿಡಿದು ಜೀಕಹೊಡೆದ!
ಡೊಂಬರಾಟ! ಡೊಂಬರಾಟ!
ಧನಿಯಮುಂದೆ ಡೊಂಬರಾಟ!
ಹಾರಿ, ಇಳಿದು, ಹತ್ತಿ ದಣಿದ!
ತಿರುವು ಮುರುವು ಲಾಗಹೊಡೆದ!
ಕೈಯ, ಕಾಲು, ಕೀಲು ಮುರಿದ!
ಮುದುಡಿ, ಮುದುಡಿ ಮುದ್ದಿಯಾದ!
ಡೊಂಬರಾಟ! ಡೊಂಬರಾಟ!
ಧರಿಯಮುಂದೆ ಡೊಂಬರಾಟ!
ಕೋಲಮೇಲೆ ನಿಂತುಕೊಂಡ!
ಮುಗಿಲಮೇಲೆ ಮಲಗಿಕೊಂಡ!
ಅತ್ತು, ಅತ್ತು, ಅರಚಿಕೊಂಡ!
ಹೊಟ್ಟೆ ಹೊಟ್ಟೆ ಹೊಡೆದುಕೊಂಡ!
ಧನಿಯು ದುಡ್ಡು ಒಗಿಯಲಿಲ್ಲ!
ಡೊಂಬರಾಟ ಮುಗಿಯಲಿಲ್ಲ!!
*****








