Home / ಕವನ / ಕವಿತೆ / ನೆನಪುಗಳೇ!

ನೆನಪುಗಳೇ!

ನೆನಪುಗಳೇ
ಬಾರದಿರಿ! ಬಾರದಿರಿ!

ಸೊಂಡಿಲಾಡಿಸುತ್ತ ಬಂದು
ಮೊದಲೆ ಕದಡಿಹೋದ ಕೊಳವ
ಮತ್ತೆ ಮತ್ತೆ ಕದಡುತ,
ಎರಡೆ ದಿನಕೆ ತಾನೆ ಬಾಡಿ-
ಹೋಗಲಿರುವ ಒಂದೊ ಎರಡೊ
ಹೂವುಗಳನು ಕಿತ್ತು ಬಿಸುಟು
ಘೀಳಿಡುವ ಆನೆಯಂತೆ
ಬಾರದಿರಿ! ಬಾರದಿರಿ!
ಮನದ ಕೊಳವು ತನಗೆ ತಾನೆ
ಬತ್ತಿಹೋಗಲನುವು ಕೊಡಿ!
ನುಗ್ಗದಿರಿ! ನುಗ್ಗದಿರಿ!
ನೆನಪುಗಳೇ:
ಬಾರದಿರಿ! ಬಾರದಿರಿ!

ಎದೆಯ ಬಸಿರು ಒಂದೆ ಸಮನೆ
ನಿಟ್ಟುಸಿರಿನ ಕೂಸುಗಳನು
ಹೆತ್ತು ಹೆತ್ತು ಹೆರಿಗೆನೋವಿನಿಂದ ನರಳುವಂತೆ
ಮಾಡಬೇಡಿರಿ!
ನದಿಯ ತಡಿಯ ಮಳಲ ಕೆರೆದು ಕೆರೆದು ಬಗೆದು ಬಗೆದು
ನೀರುಕ್ಕಿಸುವಂತೆಯೇ,
ಕಣ್ಣಿನೊಳಗೆ
ಇಲ್ಲದಿರುವ ಕಂಬನಿಗಳ
ತಾರದಿರಿ! ತಾರದಿರಿ!
ಬಾರದಿರಿ! ಬಾರದಿರಿ!
ನೆನಪುಗಳೇ!

ಅಂದು-ನಿಮ್ಮನಿಂದು ಹೆರುವ
ಅನುಭವಗಳ ಸವಿಯುವಂದು-
ಮನಕಾಸರೆಯಾಗಿ ದೇಹ
ನಿಂತು ನರಳಿತು,
ಅಂದನುಭವದಗ್ನಿ ಕುಂಡ-
ದಲ್ಲು ದೇಹ ಕಲ್ಲಿನಂತೆ
ನಿಂತು ಮನನ ಕಾದಿತು!

ಇಂದು ನಿಮ್ಮ ಧಾಳಿಗೆಲ್ಲ
ಮನವದೊಂದೆ ಗುರಿಯು ಕಣಾ!
ನೆನಪ ಶಾಖವೊಂದೆ ಸಾಕು
ಮನದಣುವನು ಸಿಡಿಸಲು!
ಇರುವ ಒಂದೊ ಎರಡೊ ಆಸೆಗಳನು
ಸುಟ್ಟು ಕರಿಕು ಮಾಡಲು!
ನೆನಪುಗಳೇ ಬಾರದಿರಿ!
ಬಾರದಿರಿ! ಬಾರದಿರಿ!
* * *

ಯಾರು?
ಸರಿ ನೀನೋ?
ಅಂದು ನನ್ನ ಬಾಳನೋಡಿನಲ್ಲಿ
ಅರಳ ತೆರದಿ ಹುರಿದುದೊಂದೆ
ಸಾಲದೇನೆ?
ನೆನಪನೇರಿ ಬರುವೆಯೇಕೆ?
“ನಾನೆ ಬಂದರೇನೊ ಎಂತೊ?”
ಎಂಬ ಭಯವೆ?
ಅಂದು ನಿನ್ನನಂತೆ ಬಿಟ್ಟು
ತಪ್ಪ ಮಾಡಿದೆ.
ಹೇಡಿ! ತೊಲಗು ಸಾಕು! ಸಾಯಿ!
“ಸಾಯಿ”!
ಸಾವು?
ಓ ಗೆಳೆಯನೆ ಎಂಥ ಸಾವೊ ನಿನ್ನದು?
ತಂದೆ ತಾಯಿಗಳನು ಬಿಟ್ಟು
ಸಾಯ್ವುದಕೇ ಊರಿನಿಂದ
ನಗುತ ಬಂದೆ!
ಸಾವೆಂದರೆ ನಿನ್ನ ನೆನಪು!
ನೀನೆಂದರೆ
ನಿನ್ನ ನಗೆ ನಿನ್ನ ಮಾತು
ನಿನ್ನ ಒಲವು, ನಿನ್ನ ಸರಸ-
ಇವುಗಳೊಂದು ಮನಕೆ ಬಾರವು!
ಬರುವುದೊಂದೆ!
ಅದೇ ನಿನ್ನ ಹೆಣದ ಚಿತ್ರ!
ನಿನ್ನ ಮಾತು ಬಂದರೆ ಸರಿ
ನಿನ್ನ ಹೆಣವೆ ಕಣ್ಣ ಮುಂದೆ!
ಓ ಗೆಳೆಯನೆ! ಏಕೆ ಸತ್ತೆ?
‘ಬದುಕಿ’ದೆನ್ನ ನೇಕೆ ಕೊಲುವೆ?
ಹೆಣದ ನೆನಪ ತಂದು ನೀನು
“ಹಾಳು ಗೆಳೆಯನಿವನ ಸ್ನೇಹ
ಯಾವ ಶಾಪದೊಂದು ಫಲವೊ!”
ಎಂಬನುಚಿತ ನುಡಿಯ ಬಾಯ್ಗೆ
ತಾರದಿರು! ತಾರದಿರು!
ಕರಗು ಕರಗು ಕರೆಗೆಲೆ!
* * *

ಶುದ್ಧ ಹುಚ್ಚು!
ಕರಗೆಂದರೆ ತೊಲಗೆಂದರೆ ಸಾಯೆಂದರೆ
ಕರಗುವವೇ, ತೊಲಗುವವೇ, ಸಾಯುವವೇ
ಮನದ ಗೋರಿಯಿಂದೇಳುವ
ನೆನಪ ಪ್ರೇತ ಪಂಕ್ತಿಯು?

ನೆನಪುಗಳೇ!
ನಿಮ್ಮ ಕಾಲ ಹಿಡಿದು ಬೇಡುವೆ!
ಇಂತು ಒಂದೆ ಸಮನೆ ಬಗೆಗೆ
ಬಾರದಿರಿ! ಬಾರದಿರಿ!
ದುಗುಡವನ್ನು
ತಾರದಿರಿ! ತಾರದಿರಿ!
ಎಲ್ಲಿಂದಲೊ
ಸೋರದಿರಿ! ಸೋರದಿರಿ!
ಬಂದಂತೆಯೆ ಮಾಯವಾಗಿ
ಮತ್ತೆ ಇತ್ತ ಬಾರದಿರಿ!
*****

Tagged:

Leave a Reply

Your email address will not be published. Required fields are marked *

ಶಠಗೋಪ ಹದಿನಾರಾಣೆ ಶ್ರೀವೈಷ್ಣವ. ಒಂದುದಿನ ಅವನ ಅತ್ತಿಗೆ ಅಡುಗೆಯ ಕೆಲಸದಲ್ಲಿದ್ದು ವೀಳೆಯದೆಲೆಯ ವರ್ತನೆಯವಳು ಬಂದಾಗ ಎಲೆ ತೆಗೆಯಲು ಶಠಗೋಪನಿಗೆ ಹೇಳಿದಳು. ಶಠಗೋಪನು ಹೊರಗೆ ಬಂದು, ಎದುರಿಗಿದ್ದ ವೀಳೆದೆಲೆಯವಳನ್ನು ನೋಡಿದ. ಅವಳು ಸಾಧಾರಣದ ಹೆಣ್ಣು. ರತಿಯಲ್ಲ, ಚಪ್ಪನ್ನಾರು ದೇಶದಲ್ಲ...

ಕೋರ್‍ಟಿನಿಂದ ಬಂದ ಮೀರಾ ಬಳಲಿದವಳಂತೆ ಕುಸಿದು ಕುಳಿತಳು. ದೇಹ ಬಳಲಿದ್ದರೂ ಸಂತಾಪದಿಂದ ಎದೆ ಕುದಿಯುತ್ತಿತ್ತು. ಎದೆಯಲ್ಲಿ ಕುದಿತ, ಮುಖ ಕಣ್ಣುಗಳನ್ನು ಕೆಂಪು ಮಾಡಿ, ಇಡೀ ದೇಹ ಕೋಪದಿಂದ ಕಂಪಿಸುವಂತೆ ಮಾಡಿತ್ತು. ಕಾಲಲ್ಲಿದ್ದ ಚಪ್ಪಲಿಗಳನ್ನು ಕೂಡಾ ಕಳಚದೇ, ಕೈಯಲ್ಲಿದ್ದ ಪರ್ಸ್, ಪುಸ...

ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...