Home / ಬಾಲ ಚಿಲುಮೆ / ಕಥೆ / ಮರ್ಮಗಳನ್ನು ಭೇದಿಸಿ ಕೆಟ್ಟ ಹಾವುಗಳ ಕಥೆ

ಮರ್ಮಗಳನ್ನು ಭೇದಿಸಿ ಕೆಟ್ಟ ಹಾವುಗಳ ಕಥೆ

ಒಂದಾನೊಂದು ನಗರದಲ್ಲಿ ದೇವಶಕ್ತಿಯೆಂಬ ಅರಸನಿದ್ದನು. ಅವನ ಮಗನಿಗೆ ಹೊಟ್ಟೆಯೊಳಗೆ ಒಂದು ಹಾವು ಸೇರಿಕೊಂಡು ಅದೇ ಕಾರಣವಾಗಿ ಸವೆಯುತ್ತ ಬಂದನು. ಏನೇನೋ ವೈದ್ಯಗಳನ್ನು ಮಾಡಿದರೂ ಅದು ಗುಣವಾಗಲಿಲ್ಲ.  ಅದರಿಂದ ಅವನಿಗೆ ಬೇಸರವಾಗಿ ದೇಶಾಂತರ ಹೋದನು. ವೇಶಾಂತರವನ್ನು ಧರಿಸಿಕೊಂಡು ಭಿಕ್ಟಾಟನ ಮಾಡಿಕೊಂಡು ಒ೦ದು ಊರಿಗೆ ಹೋದನು.
ಆಲ್ಲಿ ಬಲಿಯೆಂಬ ಅರಸನಿದ್ದನು. ಅವನಿಗೆ ಇಬ್ಬರು ಹೆಣ್ಣು ಮಕ್ಕಳು. ಇಬ್ಬರೂ ದಿನವೂ ಬೆಳಗೆದ್ದು ಬಂದು ಆತನಿಗೆ ಕಾಲು ಹಿಡಿದು ನಮಸ್ಕಾರ ಮಾಡುವರು. ಒಬ್ಬಳು “ಮಹಾರಾಜ,
ವಿಜಯಿಸು, ನಿನ್ನಕೃಪೆಯಿದ್ದರೆ ಎಲ್ಲವೂ ಲಭಿಸುವುದು” ಎನ್ನುವಳು. ಇನ್ನೊಬ್ಬಳು “ಮಹಾರಾಜ, ನೀನು ಮಾಡಿದ್ದನ್ನು  ಭೋಜಿಸು” ಎನ್ನುವಳು.
ಒಂದು ದಿನಸ ಆ ರಾಜನಿಗೆ ಎರಡನೆಯ ಮಗಳಮೇಲೆ ಕೋಪ ಬಂತು: “ಇವಳು ನಿತ್ಯವೂ ಮಾಡಿದ್ದನ್ನು ಭೋಜಿಸು ಎನ್ನುತ್ತಾಳೆ ಇವಳು ತಾನು ಮಾಡಿದ್ದನ್ನು ಉಪಭೋಗಿಸಲಿ. ಈ ಕೆಟ್ಟ ಮಾತಿನವಳನ್ನು ಯಾವನಾದರೂ ಪರದೇಶಿಗೆ ಕೊಟ್ಟು ಮದುನೆ ಮಾಡಿ” ಎಂದನು. ಅವಳೂ ಹಾಗೆಯೇ ಆಗಲಿ ಎಂದು ಒಪ್ಪಿಕ್ಕೊಂಡಳು. ಯಾವುದೋ ದೇವಾಲಯದಲ್ಲಿದ್ದ ಭಿಕ್ಷುಕ ರಾಜಕುಮಾರನಿಗೆ ಇವಳನ್ನು ಕೊಟ್ಟು ಮದುವೆ ಮಾಡಿಬಿಟ್ಟರು. ಅವನೇ ಹೊಟ್ಟೆ ನೋವಿನ ಅರಸು ಮಗನು. ಇವಳು ಅವನನ್ನೇ ದೈವವೆಂದು ನಂಬಿಕೊಂಡು ತನ್ನ ತಂದೆಯು ಕೊಟ್ಟ ಅಲ್ಪಸ್ವಲ್ಪವನ್ನು ತೆಗೆದುಕೊಂಡು ಗಂಡನೊಡನೆ ದೇಶಾಂತರ ಹೊರಟು ಹೋದಳು.
ಹೀಗೆಯೇ ತಿರುಗುತ್ತಿರುವಾಗ ಒಂದು ದಿನ ಒಂದು ಕೆರೆಯ ಮಗ್ಗುಲಲ್ಲಿ ಗಂಡಹೆಂಡಿರು ಇಳಿದುಕೊಂಡರು. ಗಂಡನನ್ನು ಅಲ್ಲಿ ಕಾವಲಿಟ್ಟು ತಾನು ಉಪ್ಪು ಬೇಳೆ ಮೊದಲಾದುವುಗಳನ್ನು ತರಲು ಅಂಗಡಿಗೆ ಹೋದಳು.
ಅವಳು ಅಂಗಡಿಯಿಂದ ಬರುವ ವೇಳೆಗೆ ಅಲ್ಲಿಯೇ ಮಗ್ಗುಲಲ್ಲಿದ್ದ ಹುತ್ತದ ಮೇಲೆಯೇ ತಲೆಯಿಟ್ಟುಕೊಂಡು ರಾಜಪುತ್ರನು ಮಲಗಿದ್ದಾನೆ ಅವನ ಬಾಯಿಂದ ಒಂದು ಹಾವು ಈಚೆಗೆ ಬಂದು ಹೆಡೆಯನ್ನು ಬಿಟ್ಟುಕೊಂಡು ಗಾಳಿಯನ್ನು ಕುಡಿಯುತ್ತಿದೆ. ಹುತ್ತದಿಂದ ಇನ್ನೊ೦ದು ಹಾವು ಬಂದು ಅದೂ ಗಾಳಿ ಕುಡಿಯುತ್ತಿದೆ. ಇವೆರಡೂ ಒ೦ದನ್ನೊ೦ದು ಕಂಡು ಎರಡಕ್ಕೂ ಕೋಪಬಂದು ಒಂದನ್ನೊ೦ದು ಬಯ್ದಾಡುತ್ತಿವೆ. ಹುತ್ತದ ಹಾವು: “ಛೇ, ನಿನ್ನಂತಹ ದುಷ್ಟನಿನ್ನಿಲ್ಲ. ಪಾಪ, “ಈ ರಾಜಪುತ್ರನ ಹೊಟ್ಟೆಯಲ್ಲಿ ಸೇರಿಕೊಂಡು ಅವನನ್ನು ಬದುಕಿದ್ದರೂ ಸತ್ತವನನ್ನಾಗಿ ಮಾಡಿದ್ದೀಯೆ. ಪಾಪಿ” ಎಂದು ಬಯ್ದಿತು. ಹೊಟ್ಟೆಯ ಹಾವು “ನೀನು ಮಾತ್ರ ಯೋಗ್ಯನೇನೋ?: ಹುತ್ತದಲ್ಲಿರುವ ಎರಡು ಕೊಡ ಹಣವನ್ನು ಇನ್ನೊಬ್ಬರೂ ಮುಟ್ಟದ ಹಾಗೆ ಮಾಡಿದ್ದೀಯೆ” ಎಂದಿತು. ಹುತ್ತದ ಹಾವಿಗೆ ರೇಗಿ” ಪಾಪ; ಆ ರಾಜಪ್ರತ್ರನಿಗೆ ಗೊತ್ತಿಲ್ಲ. ಹಳಸಿದ ಗಂಜಿಯನ್ನು ಕುಡಿದರೆ ನೀನು ಧ್ವಂಸವಾಗಿ ಹೋಗುವೆಯೆಂದು. ಏನು, ಮಾಡುವುದು?” ಎಂದಿತು. ಹೊಟ್ಟೆಯ ಹಾವು “ನಿನ್ನ ಗುಟ್ಟು ನಾನು ಕಾಣನೇನೋ? ಕಾದ ಎಣ್ಣೆಯನ್ನೋ ಬಿಸಿಬಿಸಿ ನೀರನ್ನೋ, ಸುರಿದರೆ ನೀನೂ ಧ್ವಂಸವಾಗುವೆ. ಅದನ್ನು ಮರೆತೆಯೇನೋ?” ಎಂದಿತು.
ರಾಜಪುತ್ರಿಯು ಮರೆಯಲ್ಲಿ ನಿಂತು ಈ ಎರಡು ಹಾವುಗಳ ಮರ್ಮವನ್ನು ಕೇಳಿದಳು. ಹಾಗೆಯೇ ಮಾಡಿ ಗಂಡನ ರೋಗವನ್ನೂ ನೀಗಿಕೊಂಡು, ಹುತ್ತದಲ್ಲಿದ್ದ ನಿಧಿಯನ್ನು ತೆಗೆದುಕೊಂಡು, ಗಂಡನನ್ನು ರಾಜಧಾನಿಗೆ ಕರೆದುಕೊಂಡು ಹೋಗಿ ಸುಖವಾಗಿದ್ದಳು.
ಅದರಿಂದ ನಾನು “ಒಬ್ಬರೊಬ್ಬರ ಮರ್ಮವನು” ಎಂದು ಮುಂತಾಗಿ ಹೇಳಿದೆನು.
ಇದೆಲ್ಲವನ್ನೂ ಕೇಳಿ ಅರಿಮರ್ದನನು ಸ್ಥಿರಜೀವಿಗೆ ಅಶ್ರಯ ಕೊಡುವುದೇ ಸರಿ ಎಂದು ಗೊತ್ತು ಮಾಡಿಕೊಂಡು ಹಾಗೆಯೇ ಮಾಡಿದನು. ರಕ್ತಾಕ್ಷನು ಮಾತ್ರ “ಅಯ್ಯೋ, ನೀವೆಲ್ಲರೂ ಸೇರಿ ನಮ್ಮ ಅರಸನನ್ನು ಕೊಂದಿರಿ. ಎಲ್ಲಿ ಪೂಜ್ಯರಿಗೆ ಪೂಜೆಯು ಇಲ್ಲವಾಗುವುದೋ, ಅಪೂಜ್ಯರಿಗೆ ಪೂಜೆಯು ದೊರೆಯುವುದೋ ಅಲ್ಲಿ ದುರ್ಭಿಕ್ಷ, ಮರಣ, ಭಯ ಎಂಬ ಈ ಮೂರು ತಪ್ಪದೆ ಆಗುವುವು. ತನ್ನ ಎದುರಿಗೇ ಪಾಪ ಮಾಡಿದ್ದರೂ ಮೂರ್ಖನು ಒಳ್ಳೆಯ ಮಾತಿಗೆ ಸೋತು ಹೋಗುವನು ಎಂದು ಬಲ್ಲವರು ಹೇಳುವರು. ಈಗ ಅದು ನಿಜವಾಯಿತು. ಶತ್ರುವಾಗಿ, ನಂಬಿಕೆಗೆ ಅರ್ಹನಲ್ಲದ್ದ ಇವನನ್ನು ನಂಬಿ ನೀವು ನಮ್ಮ ತಲೆಯ ಮೇಲೆ ಕಲ್ಲುಹಾಕಿದಿರಿ, ಅಷ್ಪಿಲ್ಲದೆ ಹೇಳಿದೆಯೆ?
ದೇಶ ಕಾಲಗಳರಿಯದ| ಮೊಂಕು ಮಂತ್ರಿಯ ಪಡೆಯಲು ॥  
ಇದ್ದ ಅರ್ಥವು ವ್ಯರ್ಥವು| ಉದಯಕಾಲದ ತಮದೊಲು ॥೩೦॥ 
ಎಂದು ಹೇಳಿದರೂ ಗೂಗೆಗಳು ಕೇಳದೆ ಸ್ಥಿರಜೀವಿಯನ್ನು ತಮ್ಮ ದುರ್ಗಕ್ಕೆ ಕರೆದೊಯ್ಯಲು ಸಿದ್ಧ‌ರಾದರು. ಆಗ ಸ್ಥಿರಜೀವಿಯು “ದೇವ, ನಾನು ಈಗ ಏನೂ ಮಾಡಲಾರೆ ನನ್ನಂತಹವರನ್ನು ಕರೆದುಕೊಂಡು ಹೋಗಿ ತಮಗೆ ಏನು ಉಪಕಾರವಾದೀತು? ಅದರಿಂದ ನಾನು ಅಗ್ನಿ ಪ್ರವೇಶ ಮಾಡುವೆನು. ನನಗೆ ಅಪ್ಪಣೆಯಾಗಲಿ” ಎಂದನು. ರಕ್ತಾಕ್ಷನು ಅದನ್ನು ಕೇಳಿ “ಅಯ್ಯಾ, ಅದೇಕೆ ಅಗ್ನಿ ಪ್ರವೇಶ ಮಾಡುವೆ?” ಎಂದು ಕೇಳಲು, ಸ್ಥಿರಜೀವಿಯು, “ನಾನು ಈ ಅವಸ್ಥೆಗೆ ಬಂದುದೇ ನಿಮಗಾಗಿ. ನನ್ನನು ಈ ಅವಸ್ಥೆಗೆ ತಂದ ಮೇಘವರ್ಣನ ಮೇಲೆ ವೈರವನ್ನು ತೀರಿಸಿಕೊಳ್ಳಬೇಕು. ಅದಕ್ಕಾಗಿ ಅಗ್ನಿ ಪ್ರವೇಶಮಾಡಿ, ಉಲೂಕವಾಗಿ ಹುಟ್ಟುವೆನು.” ಎಂದಿತು.
ರಾಜನೀತಿಕುಶಲನಾದ ರಕ್ತಾಕ್ಷನು ಅದನ್ನು ನಂಬಲಿಲ್ಲ. “ಅಯ್ಯಾ ನೀನು ಮೋಸಗಾರನು. ಮೋಸದ ಮಾತಿನಲ್ಲಿ ಚೆತುರನು. ನೀನು ಗೂಗೆಯಾದರೂ ಕಾಗೆಯ ಕುಲವನ್ನೇ ಗೌರವಿಸುವೆ:
ಕಥೆಯನ್ನು ಕೇಳಿಲ್ಲವೆ?
ರವಿಯು ಮೇಘವು ಗಾಳಿ ಬೆಟ್ಟವು | 
ಗಂಡನಾಗಲು ಬೇಡವೆಂದು ॥ 
ತನ್ನ ಜಾತಿಯ ಮದುವೆಯಾಯ್ತಿ ಲಿ | 
ಮೀರಲಳವೇ ತನ್ನ ಜಾತಿಯನು ॥ ೩೧ ॥
ಎಂದು ಹೇಳಲು, ಮಂತ್ರಿಗಳು “ಅದೇನು” ಎಂದು ಕೇಳಿದರು. ರಕ್ತಾಕ್ಷನು ಹೇಳಿದನು:-
*****
ಮೂಷಕ ಕನ್ಯೆಯ ಕಥೆ ಓದಿ
Tagged:

Leave a Reply

Your email address will not be published. Required fields are marked *

ಶಠಗೋಪ ಹದಿನಾರಾಣೆ ಶ್ರೀವೈಷ್ಣವ. ಒಂದುದಿನ ಅವನ ಅತ್ತಿಗೆ ಅಡುಗೆಯ ಕೆಲಸದಲ್ಲಿದ್ದು ವೀಳೆಯದೆಲೆಯ ವರ್ತನೆಯವಳು ಬಂದಾಗ ಎಲೆ ತೆಗೆಯಲು ಶಠಗೋಪನಿಗೆ ಹೇಳಿದಳು. ಶಠಗೋಪನು ಹೊರಗೆ ಬಂದು, ಎದುರಿಗಿದ್ದ ವೀಳೆದೆಲೆಯವಳನ್ನು ನೋಡಿದ. ಅವಳು ಸಾಧಾರಣದ ಹೆಣ್ಣು. ರತಿಯಲ್ಲ, ಚಪ್ಪನ್ನಾರು ದೇಶದಲ್ಲ...

ಕೋರ್‍ಟಿನಿಂದ ಬಂದ ಮೀರಾ ಬಳಲಿದವಳಂತೆ ಕುಸಿದು ಕುಳಿತಳು. ದೇಹ ಬಳಲಿದ್ದರೂ ಸಂತಾಪದಿಂದ ಎದೆ ಕುದಿಯುತ್ತಿತ್ತು. ಎದೆಯಲ್ಲಿ ಕುದಿತ, ಮುಖ ಕಣ್ಣುಗಳನ್ನು ಕೆಂಪು ಮಾಡಿ, ಇಡೀ ದೇಹ ಕೋಪದಿಂದ ಕಂಪಿಸುವಂತೆ ಮಾಡಿತ್ತು. ಕಾಲಲ್ಲಿದ್ದ ಚಪ್ಪಲಿಗಳನ್ನು ಕೂಡಾ ಕಳಚದೇ, ಕೈಯಲ್ಲಿದ್ದ ಪರ್ಸ್, ಪುಸ...

ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...