ಸುಗ್ಗಿಯೆಂದಿಗೆ ಸುಗ್ಗಿಯೆಂದಿಗೆ
ಮಾಗಿ ಕವಿದೀ ಚಿತ್ತಕೆ?
ಎಂದು ಕೊನೆ, ಹಾ! ಎಂದಿಗೋ ಕೊನೆ
ಬಗೆಯ ದುಗುಡದ ಮೊತ್ತಕೆ?
ಸೃಷ್ಟಿಯೆಲ್ಲಕು ತೆರೆಯ ಹಾಕಿದ
ತೆರದೊಳಿಬ್ಬನಿ ಕವಿದಿದೆ
ಅದನು ಕರಗಿಸಿ ಅತ್ತ ಸರಿಸುವ
ರವಿಗೆ ಮನ ಹಾತೊರೆದಿದೆ!
ಇದ್ದ ಒಂದೆರಡಾಸೆ ನನೆಗಳು
ಮಂಜ ಭಾರದಿ ಕುಗ್ಗಿವೆ
ಕಂಬನಿಗಳೊಲು ಹುಲ್ಲ ಮೇಗಡೆ
ಹಿಮದ ಹನಿ ತೂಗುತ್ತಿವೆ.
ಸಾವ ಶೀತಲ ಸ್ಪರ್ಶದೊಲು ಚಳಿ
ಮೂಳೆಯೊಳಗನು ಕೊರೆದಿದೆ
ದುಗುಡ ಚಿಮ್ಮುತ ರವವ ಗೈವೊಲು
ಹಲ್ಲಿದೋ ಕಟಿಕಟಸಿದೆ!
ಭರವಸೆಯ ಹೊಂಬಿಸಿಲು ಕಾಣದು;
ತನುವಿನಾಸೆಯು ಮಾಣದು
ಸಾವು ಕರೆಯದು ಬಾಳು ತೊರೆಯದು
ಅಕಟ ಎಂತಹ ನೇಣಿದು!
ಮನದ ಬನದೊಳು ಎಂದಿಗೋ ಮ-
ತ್ತೊಮ್ಮೆ ಪಿಕಗಳ ಗಾಯನ?
ಜಗವ ಸೆಳೆಯುವ ಕಂಪಿಗೆಂದಾ-
ಗುವುದೊ ಗಾಳಿಯು ವಾಹನ?
ಹೆಣ್ಣಿನೊಲವಿನ ರಂಗುರಂಗಿನ
ಹೂಗಳರಳುವುದೆಂದಿಗೆ?
ದುಂಬಿಗಳ ಹಿಮ್ಮೇಳ ಸಾಗಿರೆ
ಕಂಪ ಬೀರ್ವುದದೆಂದಿಗೆ?
ಸುಗ್ಗಿಯೆಂದಿಗೆ ಸುಗ್ಗಿಯೆಂದಿಗೆ
ಮಾಗಿ ಕವಿದೀ ಚಿತ್ತಕೆ?
ಎಂದು ಕೊನೆ, ಹಾ! ಎಂದಿಗೋ ಕೊನೆ
ಬಗೆಯ ದುಗುಡದ ಮೊತ್ತಕೆ!
*****








