೧
ಹೋಗಬಾರದೆ ನಾವು-
ಅವನು ನಾನು!
ಆಗ ಜಗದಲಿ ದುಃಖ
ಸವೆಯಬಹುದು.
ಕಣ್ಣಿಲ್ಲದವನವನು,
ತಿಳಿಯದವನು.
ನನ್ನ ಮನೆ ಮನೆಯಾಯ್ತೆ?
ಕೆಳೆ ಕೆಳೆಯರೆ?
ಬಾಳ ಬಂಡೆಗೆ ಬಡಿದು,
ಅಲೆ ಹೊಡೆದು, ಹೊಡೆದು,
ಆಳದಲಿ ಸೋತಿಹೆವು:
ನಿಲುವು – ಸಾವು!
೨
ಕ್ಷಮಿಸು, ಧೀರರ ದೇವ,
ಹೇಡಿಯೆದೆಯ;
ನೊಂದು ಸೊಕ್ಕಿದ ಮರುಳ
ಕೀಳುಬಗೆಯ;
ಊದು ಉಸಿರನು; ತುಂಬು
ನಂಬುಗೆಯನು.
ಜೀವ, ಕಾಳಗ ಕಾದು,
ಏಳು, ಗೆಲ್ಲು.
*****
ANON : Two moods
`Two moods’ ಮೂಲ ಇಂಗ್ಲಿಷ್ ಕವನವನ್ನು ಬರೆದವರು ಬಿ. ಎಂ. ಶ್ರೀಕಂಠಯ್ಯನವರು. Anon ಎಂಬುದಾಗಿ ಅವರು ಇಂಗ್ಲಿಷ್ ಗೀತಗಳಲ್ಲಿ ಪ್ರಕಟಿಸಿದ್ದರೂ ಈ ಕವನವನ್ನು ಬರೆದವರು ಬಿ.ಎಂ.ಶ್ರೀ ಅವರು. ಈ ಕವನದ ಬಿ.ಎಂ.ಶ್ರೀ ಹಸ್ತಾಕ್ಷರ ಪ್ರತಿ ದೆಹಲಿ ಕೇಂದ್ರ ಸಾಹಿತ್ಯ ಅಕಾಡೆಮಿಯಲ್ಲಿರುವ ಶ್ರೀ ಶಾ. ಬಾಲುರಾಯರ ಬಳಿ ಇದೆ. ಈ ವಿಷಯವನ್ನು ಸಂಪಾದಕ ಮಂಡಳಿಗೆ ತಿಳಿಸಿದವರು ಪ್ರೊ|| ಎಂ.ವಿ.ಸೀತಾರಾಮಯ್ಯ ಮತ್ತು ಡಾ|| ಬಿ.ಸಿ.ರಾಮಚಂದ್ರಶರ್ಮ. ಮೂಲ ಇಂಗ್ಲಿಷ್ ಕವನನ್ನು ಇಲ್ಲಿ ಪ್ರಕಟಿಸಲು ಅನಿವಾರ್ಯ ಕಾರಣಗಳಿಂದ ಸಾಧ್ಯವಾಗಲಿಲ್ಲ.






