Home / ಬಾಲ ಚಿಲುಮೆ / ಕಥೆ / ಪಾರಿವಾಳವು ಸಗ್ಗಕೈದಿತಲಾ

ಪಾರಿವಾಳವು ಸಗ್ಗಕೈದಿತಲಾ

ಒಬ್ಬನು ಬೇಡನಿದ್ದನು. ಅವನು ಹಕ್ಕಿಗಳನ್ನು ಹಿಡಿಯುವನು ಸಿಕ್ಕಿದ ಮೃಗಗಳನ್ನು ಕೊಲ್ಲುವನು. ಅವನನ್ನು ನೋಡಿದರೇ ಭಯವಾಗುವುದು.  ಅವನ ಕೈಯಲ್ಲಿ ಪಂಜರವೊಂದು, ದೊಣ್ಣೆಯೊಂದು ಯಾವಾಗಲೂ ಇರುವುದು. ಇಂಥಾ ನೀಚನು ಒಮ್ಮೆ ಅರಣ್ಯಕ್ಕೆ ಹೋದನು. ಅಲ್ಲಿ ಒಂದು ಹೆಣ್ಣು ಪಾರಿವಾಳವು ಸಿಕ್ಕಿತು. ಆದನ್ನು ಹಿಡಿದು ಪಂಜರಕ್ಕೆ ಕೂಡಿಕೊಂಡು ಹಾಗೆಯೇ ಮುಂದು ಹೋಗುತ್ತಿರಲು ದೊಡ್ಡ ಮಳೆಯು ಬಂತು. ದಿಕ್ಕು,  ದಿಕ್ಕುಗಳೂ, ಮೋಡಗಳಿಂದ ಮುಚ್ಚಿ ಹೋದುವು. ಮಳೆಯಲ್ಲಿ ನೆನೆದು, ಗಾಳಿಯಲ್ಲಿ ನಡುಗುತ್ತಾ ಇರುವುದಕ್ಕೊಂದು ನೆಲೆಯನ್ನು ಕಾಣದೆ ಹೋಗಿ, ಒಂದು ಹೆಮ್ಮರವನ್ನು ಆಶ್ರಯಿಸಿದನು.
ಅಲ್ಲಿಯೂ ಅವನಿಗೆ ಚಳಿಯು ಬಿಡಲಿಲ್ಲ. ಹಸಿವು ತಾನೇ ತಾನಾಯಿತು. ಪ್ರಾಣವೂ ಉಳಿಯುವುದೋ ಇಲ್ಲವೋ ಎನ್ನಿಸಿ, ಕೇಳಿಕೊಂಡನು: “ಈ ವೃಕ್ಷದಲ್ಲಿ ಯಾರು ಇರುವರೋ ಅವರಿಗೆ ನಾನು ಶರಣು ಬಂದಿರುವೆನು. ಅವರು ನನ್ನನ್ನು ಕಾಯಲಿ. ನನಗೆ ಚಳಿ, ಹಸಿವು. ಪ್ರಾಣಹೋಗುತ್ತಿದೆ” ಎಂದು ಕೂಗಿಕೊಂಡನು.
ಆ ಮರದಲ್ಲಿ ಒ೦ದು ಪಾರಿವಾಳವು ಬಹುಕಾಲದಿಂದ ಇತ್ತು. ಆದರ ಹೆಂಡತಿಯು ಆ ದಿನಬೆಳಗ್ಗೆ ಎದ್ದು ಹೊರಗೆ ಹೊಗಿದ್ದುದು ಮತ್ತೆ ಮರಳಿ ಬಂದಿರಲಿಲ್ಲ. ಆ ಹೆಂಡತಿಯನ್ನು ನೆನೆದು ಅದು ಇಂತಹ ದೊಡ್ಡ ಮಳೆಯಲ್ಲಿ ಅವಳು ಏನಾದಳೊ? ಇನ್ನೂ ಬರಲಿಲ್ಲವಲ್ಲ ಅವಳು ಬರದಿದ್ದರೇನುಗತಿ? ನನ್ನ ಮನೆಯೇ ಇಲ್ಲವಾಗುವುದು. ನನ್ನ ಹೆಂಡತಿಯು ನನ್ನನ್ನೇ ತನ್ನ ಪ್ರಾಣವಾಗಿ ನಂಬಿರುವವಳು. ಯಾವಾಗಲೂ ನನಗೆ ಹಿತವನ್ನೇ ಆಚರಿಸುವವಳು. ಅಂತಹ ಹೆಂಡತಿಯು ಸಿಕ್ಕಬೇಕಾದರೆ ಪುಣ್ಯವನ್ನು ಮಾಡಿರಬೇಕು. ಮನೆಯೆಂದರೆ ಕಲ್ಲುಮಣ್ಣಿನ ಮನೆಯು ಮನೆಯೆ? ಹೆಂಡತಿಯೇ ಮನೆಯು! ಅಂತಹ ಹೆಂಡತಿಯು ಇಲ್ಲದಿದ್ದರೆ ಮನೆಯೂ ಕಾಡೇ ಆಗುವುದು.” ಎಂದು ಅಳುತ್ತಿತ್ತು.
ಆ ಅಳುವನ್ನು ಬೇಡನ ಪಂಜರದಲ್ಲಿದ್ದ ಹೆಣ್ಣು ಕೇಳಿತು. ಅದನ್ನು ಕೇಳಿ ನನ್ನ ಗಂಡನು ನನ್ನ ಮೇಲೆ ಇಷ್ಟು ಪ್ರೀತಿಯನ್ನು ಇಟ್ಟುಕೊಂಡಿರುವನಲ್ಲಾ! ನನಗಿಂತ ಇನ್ನು ಪುಣ್ಯವತಿ ಯಾರು? ಗಂಡನು ಮೆಚ್ಚಿಕೊಂಡ ಹೆಂಡತಿಯೇ ಹೆಂಡತಿಯು. ಗ೦ಡನನ್ನು ಮೆಚ್ಚಿಸದ ಹೆಣ್ಣು ಬೆಂಕಿಯ ಪಾಲಾದರೆ ತಾನೇ ಏನು? ಹೆಂಗುಸಿಗೆ ತಂದೆಯಿಂದಲೂ, ಒಡಹುಟ್ಟುಗಳಿಂದಲೂ, ಮಕ್ಕಳಿಂದಲೂ ಅಗುವದೆಲ್ಲಕ್ಕಿ೦ತಲೂ ಹೆಚ್ಚಾದ ಸುಖವನ್ನು ಕೊಡುವ ಗಂಡನ್ನು ಯಾರು ತಾನೇ ಪೂಜೆ ಮಾಡುವದಿಲ್ಲ?” ಎಂದು ಸಂತೋಷ ಪಟ್ಟುಕೊಂಡು, ಗಂಡನಿಗೆ ಹೇಳಿತು: “ಎಲೈ ಪತಿಯೆ, ನಾನು ಹೇಳುವ ಹಿತವಚನವನ್ನು ಕೇಳು. ಈ ಹಕ್ಕಿ ಬೇಟೆಗಾರನು ನಿನ್ನ ಮನೆ ಬಾಗಿಲಿಗೆ ಬಂದಿರುವನು. ಚಳಿ, ಹಸಿವು, ಎಂದು ಅತ್ತಿರುವನು. ನೀನು ಇವನನ್ನು ಪೂಜೆಮಾಡು. ಈ ಶರಣಾಗತನನ್ನು ಪ್ರಾಣವನ್ನಾದರೂ ಕೊಟ್ಟು ಕಾಪಾಡು. ಇವನು ನನ್ನ ಹೆಂಡಿತಿಯನ್ನು ಹಿಡಿದು ಬಂಧಿಸಿರುವನೆಂದು ಇವನಲ್ಲಿ ಕೋಪ ಮಾಡಿಕೊಳ್ಳಬೇಡ. ದಾರಿದ್ರ್ಯ ರೋಗ, ದುಃಖಗಳೂ ಬಂಧನ ವ್ಯಸನಗಳೂ ತನ್ನ ಪಾಪವೆಂಬ ಮರದ ಫಲಗಳು. ಅದರಿಂದ ಧರ್ಮವನ್ನು ನೋಡು ಧರ್ಮವನ್ನು ಮಾಡು”
ಹೆಂಡತಿಯ ಮಾತನ್ನು ಕೇಳಿ ಪಾರಿವಾಳವು ಬೇಡನಿಗೆ ಹೇಳಿತು. “ಎಲೈ ನಿನಗೆ ಸ್ವಾಗತವು, ನೀನು ದುಃಖ ಪಡಬೇಡ. ನಿನ್ನ ಮನೆಯಲ್ಲಿಯೇ ಇರುವಂತೆ ಭಾವಿಸಿಕೊ. ನಾನು ಏನು ಮಾಡಬೇಕು ಹೇಳು” ಎಂದು ಕೇಳಿತು. ಬೇಡನು ಅದನ್ನು ಕೇಳಿ “ನನಗೆ ಬಹಳ ಚಳಿಯಾಗುತ್ತಿದೆ. ಅದಕ್ಕೇನಾದರೂ ಮಾಡು” ಎಂದು ಕೇಳಿಕೊಂಡನು. ಪಾರಿವಾಳವು ಹಾರಿಹೋಗಿ ಎಲ್ಲಿಂದಲೋ ಉರಿಯುತ್ತಿದ್ದ ಕಡ್ಡಿಯನ್ನು ಕಚ್ಚಿಕೊಂಡು ಬಂದು ಅವನ ಮುಂದೆ ಹಾಕಿತು. ಅದರ ಮೇಲೆ ಒಣಗಿದ ಎಲೆಗಳನ್ನು ಹುಡುಕಿಕೊಂಡು ಬಂದು ಹಾಕಿ ಅದನ್ನು ತನ್ನ ರೆಕ್ಕೆಗಳಿಂದ ಬೀಸಿ ಉರಿಮಾಡಿತು. “ನೀನು ಈ ಬೆಂಕಿಯಲ್ಲಿ ಮೈ ಕಾಯಿಸಿಕೊ, ನಾನು ಬಡವನು. ನಾನು ನಿನಗೆ ಏನೂ ಕೊಡಲಾರೆ, ಒಬ್ಬ ಅತಿಥಿಗಾದರೂ ಅನ್ನವನ್ನು ಕೊಡಲಾರದ ಗೃಹಸ್ಥನಿದ್ದರೇನು? ಹೋದರೇನು? ಅದರಿಂದ ಈ ದೇಹವನ್ನೇ ನಿನಗೆ ಕೊಡುವೆನು, ಒ೦ದು ಗಳಿಗೆ ತಡೆ” ಎಂದು ಆ ಬೆಂಕಿಯನ್ನು ಪ್ರದಕ್ಷಿಣೆ ಮಾಡಿ, ತನ್ನ ಗೂಡಿಗೆ ಹೋಗುವಷ್ಟು ಸುಖವಾಗಿ ಹೊಕ್ಕಿತು.
ಅದನ್ನು ಕಂಡು ಬೇಡನಿಗೆ ನಾಚಿಕೆಯಾಯಿತು. “ಆಹಾ, ನೋಡಿದೆಯಾ? ಇದಕ್ಕೆ ಇರುವಷ್ಟು ತಿಳಿವಳಿಕೆಯೂ ನನಗೆ ಇಲ್ಲವಾಯಿತಲ್ಲಾ! ನಾನೆಂತಹ ಪಾಪಿಯು. ನನಗೆ-ನರಕವು ತಪ್ಪಿದ್ದಲ್ಲ. ಈ ಕಪೋತನೇ ನನಗೆ ಗುರುವಾಯಿತು. ಇದು ಮೊದಲು ಎಲ್ಲಾ ಭೋಗಗಳನ್ನೂ ಬಿಡುವೆನು. ಬೇಸಿಗೆಯಲ್ಲಿ ಒಣಗಿಹೋಗುವ ನೀರಿನಂತೆ ಈ ದೇಹವು ಒಣಗಿ ಹೋಗಲಿ. ಇನ್ನುಮುಂದೆ ಚಳಿ, ಗಾಳಿ, ಬಿಸಿಲು, ಮಳೆಗಳನ್ನು ಲಕ್ಷಿಸದೆ, ದೇಹದ ಸುಖವನ್ನು ಗಮನಿಸದೆ, ಉಪವಾಸಾದಿಗಳನ್ನು ಮಾಡುತ್ತ ಧರ್ಮವನ್ನು ಆಚರಿಸುವೆನು” ಎಂದು ನಿಶ್ಚಯ ಮಾಡಿಕೊಂಡು, ತನ್ನಲ್ಲಿದ್ದ ದೊಣ್ಣೆ, ಪಂಜರ ಮೊದಲಾದವುಗಳನ್ನು ಮುರಿದು ಹಾಕಿದನು. ಪಂಜರದಲ್ಲಿದ್ದ ಹೆಣ್ಣು ಹಕ್ಕಿಯನ್ನು ಬಿಟ್ಟು ಬಿಟ್ಟನು.
ಆ ಹಕ್ಕಿಯು ಬೆಂಕಿಗೆ ಬಿದ್ದ ಗಂಡನನ್ನು ಕಂಡು ಆಯ್ಯೋ ಎಂದು ಬಹುವಾಗಿ ಅತ್ತುಕೊಂಡು, ನೀನಿಲ್ಲದೆ ನಾನು ಇರುವುದಿಲ್ಲ.” ಎ೦ದು ನಿಶ್ಚಯಿಸಿ, ತಾನೂ ಬೆಂಕಿಗೆ ಬಿದ್ದು ಹೋಯಿತು.
ಹೀಗೆ ಅತಿಥಿಪೂಜೆಯನ್ನು ಸಲ್ಲಿಸಿ ಶರಣಾಗತನನ್ನು ಕಾಪಾಡಿದ ಆ ಎರಡು ಹಕ್ಕಿಗಳೂ ವಿಮಾನದಲ್ಲಿ ಕುಳಿತುಕೊಂಡು ಸ್ವರ್ಗಕ್ಕೆ ಹೋದುವು. ಬೇಡನು ಅದನ್ನು ಕಂಡು ಸ೦ತೋಷಸಪಟ್ಟು ಪ್ರಾಣಿಹಿಂಸೆಯನ್ನು ಬಿಟ್ಟು, ವನದಲ್ಲಿ ತಪಸ್ಸು ಮಾಡಿಕೊಂಡಿದ್ದು ಕೊನೆಗೆಕಾಡು ಕಿಚ್ಚಿನಲ್ಲಿ ಬಿದ್ದು ಪ್ರಾಣವನ್ನು ಬಿಟ್ಟು ಒಳ್ಳೆಯ ಗತಿಯನ್ನು ಹೊಂದಿದನು. ಅದರಿಂದ “ಪಾರಿವಾಳವು ಸಗ್ಗಕೈದಿತಲಾ” ಎಂದು ಹೇಳಿದನು. ಅದನ್ನು ಕೇಳಿ ಅರಿಮರ್ದನನು ದೀಪ್ತಾಕ್ಷನನ್ನು ಕೇಳಿದನು. ಅವನೂ, “ದೇವ, ಇವನನ್ನು ಕೊಲ್ಲಕೂಡದು” ಎಂದು ಕ್ರೂರಾಕ್ಷನ ಮಾತನ್ನು ಒಪ್ಪಿದನು.
ಅನಂತರ ಅರಸನು ವಕ್ರನಾಸನನ್ನು ಕೇಳಿದನು. ಅವನು “ದೇವ” ಇವನನ್ನು ಕೊಲ್ಲಕೂಡದು. ಕೇಳಿಲ್ಲವೆ?
ಜಗಳವಾಡುವ ಹಗೆಯೆಮಗೆ ಹಿತಕರನು ॥ 
ಕಳ್ಳನಿತ್ತನು ಪ್ರಾಣವನು ಹಾರುವಗೆ ॥ 
ರಾಕ್ಷಸನುಳಿಸಿದನವಗೆ ಗೋಯುಗವ ॥ ೨೮ ॥ 
ಅರಸನು ಅದೆಂತು ಎನಲ್ಕು ವಕ್ರನಾಸನು ಹೇಳಿದನು:-
*****
ದ್ರೋಣನ ಕಥೆ ಓದಿ
Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...