Home / ಕವನ / ಕವಿತೆ / ಬಡತನ ಸಿರಿತನ

ಬಡತನ ಸಿರಿತನ


ಬಡತನ ಸಿರಿತನ
ಕಡೆತನ ಕುಳದಾವೇನ?
ಅದಕಂತ ತನನನ ಹಾಡೋಣ!
ಬಾಳನ್ನು ಬಂಗಾರ ಮಾಡೋಣ!
ಗೋಳೀನ ಸಂತೆಯ ಮರೆಯೋಣ!


ಸಾವು ನೋವಿನ ಸುಗ್ಗಿ
ಯಾವ ಬಾಳಿಗೆ ನುಗ್ಗಿ
ಕಣ್ಣೀರ ಕರೆವಂತೆ ಮಾಡಿಲ್ಲ?
`ಅಯ್ಯೋ’ ಎಂದಾರನು ನುಡಿಸಿಲ್ಲ?
ಮುಯ್ಯೆಯೆ ಇದು ಎಂದು ಅನಿಸಿಲ್ಲ?


ಅದು ಇಲ್ಲ; ಇದು ಇಲ್ಲ
ಬದುಕೀಗೆ ಬೆಲೆಯಿಲ್ಲ
ಎಂದಂದು ಕೂಡುವ ದಿನವಲ್ಲ!
ಮನುಜನ ಶಕ್ತಿಯ ಮೀರಿಲ್ಲ
ಸಾಹಸ ಜೀವಿಗೆ ಇದೆ ಬೆಲ್ಲ!


ಬಂದದ್ದು ಬರಲೆಂದು
ತಿಂದದ್ದೆ ಬಂತೆಂದು
ನಮ್ಮ ಹಾದಿಯ ನಾವು ಹಿಡಿಯೋಣ
ಚಂದ ಚಂದ್ರಾಮನ್ನ ನೋಡೋಣ
ಸುಂದರ ಸೃಷ್ಟಿಗೆ ಬಾಗೋಣ


ಅವರೇನು ಅಂದಾರು?
ಇವರೇನು ತಂದಾರು?
ಎಂದಂದು ಧ್ಯೇಯವ ಮರೆತೇವು?
ಹಾಳು ರಾಗವ ಮತ್ತೆ ಹಾಡೇವು?
ಬೀಳುವ ಭಾರಕೆ ಸಿಕ್ಕೇವು?


ಹಾರಿ ಹೋಗುವ ಹಕ್ಕಿ
ದೂರ ಕಾಣುವ ಚಿಕ್ಕಿ
ನಮ್ಮ ಜೀವನ ಸುಧೆಯ ಬೇಡ್ಯಾವು
ತಮ್ಮ ಬಾಳಿನ ಕತೆಯ ಹೇಳ್ಯಾವು
ಒಮ್ಮೆಗೆ ನಮ್ಮನ್ನೆ ಮರಸ್ಯಾವು


ಸುಖ ದುಃಖ ಸರಿ ಸಮ
ಬಾಳಿದು ಘಮ ಘಮ-
ವೆಂದೆಂಬ ಹೂವೆಂದು ತಿಳಿಯೋಣ!
ಅದರ ಸುವಾಸನೆ ಬೇಡೋಣ!
ಕಿತ್ತೂಮ್ಮೆ ತಲೆಯಲ್ಲಿ ಮುಡಿಯೋಣ!


ಕಾಳಗ ಗೀಳಗ
ಕಾಲಾನ ಕಾಲಾಗ
ಮೇಲೆ ಕೆಳಗೆಲ್ಲೆಲ್ಲೊ ನಡೆದಿರಲಿ
ಹೆಣ್ಗಂಡಿನನುರಾಗ ಚಿಮ್ಮಿರಲಿ
ಕಣ್ಣಿಗೆ ಹೊಸಯುಗ ಹುಟ್ಟಿರಲಿ


ಶಾಂತಿಗೀಂತಿಯ ಮಂತ್ರ
ಕ್ರಾಂತೀಗೆ ಅತ್ತಂತ್ರ-
ಅಂತಂಬೋರೀ ಕಡೆ ಕಣ್ತೆರೀಲಿ
ಭ್ರಾಂತಿಯ ಹೆಣವನ್ನು ಹೂಳಿಡಲಿ
ಯಂತ್ರಕೆ ಕೊನೆಗೊಮ್ಮೆ ಶರಣೆನ್ನಲಿ

೧೦
ಮಾನವ ದಾನವ
ನಾಗಿಹ ಕಾಲವ
ಕಣ್ಣಾರ ಕಂಡೆವು ಈ ದಿನದಿ
ಮುನ್ನೇನೋ ಎಂತೆಂಬ ಎದೆಗುಽದಿ
ಕೈಚಾಚಿ ನಿಂತಿದೆ ಕ್ರೂರವಿಧಿ

೧೧
ಗೆಜ್ಜೆ ಕಾಲಿನ ಹೆಜ್ಜಿ
ವಜ್ಚೇನ ನೀ ಹುಚ್ಚಿ
ತ್ರಾಂ ತಥ ಥೈ ಥೈ! ಅಂತಿರಲಿ
ತಾಳಕ ಸರಿ ಹೆಜ್ಜಿ ಬೀಳ್ತಿರಲಿ
ಬಾಳಿನ ಸಿರಿ ಸುಗ್ಗಿ ಸುರಿದಿರಲಿ

೧೨
ಗಂಡನ ಕಣ್ಣಿಗೆ
ಹೆಂಡತಿ ಹೊನ್ನಾಗೆ
ಕಹಿಯೆಲ್ಲ ಸಿಹಿಯಾಗಿ ರುಚಿಸೀತು!
ಬೆಂಡು ಬೆತ್ತಾಸವ ಮರೆಸೀತು
ಕೆಂಡವು ತಣ್ಣಗೆ ಅನಿಸೀತು

೧೩
ಬಾಳೋಣ ನಗನಗತಾ
ಗೋಳನು ಚಿಮ್ಮುತಾ
ಚೆಂದ ಚೆಂದದ ಕತೆಯ ಹೇಳುತ್ತ!
ನೊಂದವರ ಪಾಡೀಗೆ ಮರುಗುತ್ತ!
ನಂದನವನವನ್ನು ಕಾಣುತ್ತ!

೧೪
ಮಾಡಿ ಬಾಳಿನ ಸುಗ್ಗಿ
ನೋಡಿ ಜೀವನ ಹಿಗ್ಗಿ
ಮುಂದೆಯೂ ಬಾಳೋಣ ಸುಖದಿಂದ
ಎಂದಾದರೇನಂತೆ ಜಗ ಚಂದ
ಹಿಂದಕೆ ಸರಿ ಬೇಡ ನೀನಿಂದ

೧೫
ಹೆಣ್ಣಿನ ಹೊನ್ನಿನ
ಮಣ್ಣಿನ ನಿಜವನ್ನ
ತಿಳಿದವರುಂಟೇನು ಜಗದಲ್ಲಿ?
ಕಳವಳವಾಯಿತೆ ಮನದಲ್ಲಿ?
ಹೆಣ್ಣಿಂದೆ ಜಗವಲ್ಲೆ ಹುಚಮಲ್ಲಿ!

೧೬
ಏನಿದ್ದರೇನಂತೆ
ಸಾಕು ಜೀವನ ಚಿಂತೆ-
ಕಯ್ಯಾಗ ಕೈಕೊಡು ನನ ಭಂಗಾರ
ಮೈಯ್ಯಾಗ ಮೈ ನೆಡಲದು ಶೃಂಗಾರ
ಆ ಬಾಳೆ ನಿಜವಾಗಿ ಬಹು ಸುಂದರ

೧೭
ಬಡತನ ಸಿರಿತನ
ಕಡೆತನಕುಳದಾವೇನ?
ಅದಕಂತ ತನನನ ಹಾಡೋಣ!
ಮುದವನ್ನೆ ಎಲ್ಲೆಡೆ ಚಿಮ್ಮೋಣ
ಹದವರಿತು ಕುಣಿಕುಣಿದು ದಣಿಯೋಣ
*****
ಬೆಂಗಳೂರು : ೧೯೪೩

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...