ಇಡಿಕಮ್ಮೆಂಬೂರಿಗೆ ಹೆಸರ್ಹ್ಯಾಂಗ ಬಂತು?
ಚೌಡಿಯ ಲಿಪಿಗಲ್ಲ ಸೇಳಾ ಕೋಲ.
ಮಲ್ಲಾಡದಡವಿಯ ಮಧ್ಯದಿ ನಿಂತು
ಘಟ್ಟದ ಕೆಳಗೂ ಮೆರೆದೂರ ಕೋಲ.
‘ಹೇಳ್ ತಮ್ಮ! ಏ ಪೀರ! ಎಲ್ಲೈತಿ ನಿನ ತಟ್ಟು
ಇಡಿಕಮ್ನೂರ ಜಾತ್ರಿಗೆ ಹೋಕ್ಕೇವಿ ಕೋಲ,
ಬಸವಣ್ಣಿ, ಸಣ್ಣಪ್ಪ, ಗೂರಣ್ಣಿ, ದವನಪ್ಪ,
ದೊಡ್ಡಪ್ಪ, ಸಣ್ಣಪ್ಪ,-ಎಲ್ಲಾರು ಕೋಲ. ‘
ಪೀರೆಂದ: ‘ಹೊಳ್ಳೆಂದು ಬಿಳಿಗುದುರಿ ತರತೀದಿ?’
‘ಶುಕ್ರಾರ ಶಣಿವಾರ ತರತೀನಿ ಕೋಲ.’
ಶುಕ್ರಾರ ಬಂದ್ಹೋತು ಶಣಿವಾರ ನಡುಹೊತ್ತು:
ಮುದಿಗುದುರಿ ಮನಿಗೇನು ಬರಲಿಲ್ಲ ಕೋಲ.
ಘಟ್ಟದ ಕೋಡೇರಿ ನೀರಣ್ಣ ನೋಡಿದ
ತಟ್ಟು ಬಿದ್ದಿತ್ತರೆಗಣ್ಣಾಗಿ ಕೋಲ.
ತಟ್ಟನೆ ಗೋಣ್‌ಚೆಲ್ಲಿ ಪ್ರಾಣವ ಬಿಟ್ಟಿತು
ಹಾಡಿಕೊಂಡತ್ತಾನ ಪೀರಣ್ಣ ಕೋಲ.
ಕಲ್ಲಮೇಲ್ಕೂತ್ಕೊ೦ಡು ಹಾಡಿಕೊಂಡತ್ತಾನ.
ಕುದುರಿ ಸತ್ತರು ಕತೆ ಮುಗಿದಿಲ್ಲ ಕೋಲ.
ಸತ್ತರು ಅದ ಹತ್ತಿಹೋದವರೆಲ್ಲಾರು
ತಟ್ಟುವಿನಡ್ಡಾಟ ಮುಗಿದಿಲ್ಲ ಕೋಲ.
ರಾತ್ರೆಲ್ಲಾ ಚಳಿಗಾಳಿ ಬೈಲಾಗ ರೊಂಯ್ಗುಟ್ಟಿ
ಜಾತ್ರಿಯ ಕರೆದಾಗ ಸಿಳ್ಹಾಕಿ ಕೋಲ.
ಪೀರನ ಕುದುರೀ ತಪ್ಪದೆ ಬಂದೂ
ಕೊನ್ನಾರದಡಿಗುಂಟ ಬೂದಿ-ಮೈ, ಕೋಲ.
ರಾತ್ರೆಲ್ಲಾ ರಂಬಾಟ ರಾತ್ರೆಲ್ಲಾ ನರಳಾಟ
ರಾತ್ರೆಲ್ಲಾ ಬೊಬ್ಬಾಟ ಬಯಲಾಟ ಕೋಲ.
ಜಾತ್ರಿಗೆಂದೂರೆಲ್ಲಾ ಹತ್ತಿಕೊಂಡ್ಹೋಗಿದ್ದ
ಪೀರನ ತಟ್ಟುವಿನೆಲುಬಿನ ಕೋಲ!
*****









