Home / ಲೇಖನ / ಇತರೆ / ದಿ ಡೈರಿ ಆಫ್ ಎ ಎಂಗ್ ಗರ್‍ಲ್ – ಆನ್‌ ಫ್ರಾಂಕ್ – ಗುರುವಾರ, ನವೆಂಬರ ೧೯, ೧೯೪೨

ದಿ ಡೈರಿ ಆಫ್ ಎ ಎಂಗ್ ಗರ್‍ಲ್ – ಆನ್‌ ಫ್ರಾಂಕ್ – ಗುರುವಾರ, ನವೆಂಬರ ೧೯, ೧೯೪೨

ಪ್ರೀತಿಯ ಕಿಟಿ,

ನಾವಂದುಕೊಂಡಂತೆ ಡಸೆಲ್ ತುಂಬಾ ಒಳ್ಳೆಯ ಮನುಷ್ಯ. ನನ್ನ ಸಣ್ಣ ಕೋಣೆಯನ್ನು ಶೇರ್ ಮಾಡಲು ಅವರಿಗೆ ತೊಂದರೆ ಇರಲಿಲ್ಲ.

ಆದರೆ ಪ್ರಾಮಾಣಿಕವಾಗಿ ಹೇಳಬೇಕೆಂದರೆ ನನ್ನ ವಸ್ತುಗಳನ್ನು ಅಪರಿಚಿತನೊಡನೆ ಶೇರ್ ಮಾಡುವುದು ನನಗೆ ಇಷ್ಟವಿರಲಿಲ್ಲ. ಆದರೆ ಒಂದೊಳ್ಳೆಯ ಕೆಲಸಕ್ಕೆ ಕೆಲವೊಮ್ಮೆ ತ್ಯಾಗ ಮಾಡಬೇಕಾಗುವುದು. ಹಾಗಾಗಿ ಒಳ್ಳೆಯ ಮನಸ್ಸಿನಿಂದ ನನ್ನ ಸಣ್ಣ ಸಹಾಯವನ್ನು ಮಾಡುವೆ. ನಾವು ಇನ್ನೊಬ್ಬರನ್ನು ಸಲುಹಬೇಕಾದ ಸಮಯದಲ್ಲಿ ಎದುರಾಗುವ ಸಂಗತಿಗಳು ಅಂತಹ ಮಹತ್ವದ್ದಾಗಲಾರವು ಎನ್ನುವ ಡ್ಯಾಡಿಯ ಮಾತು ನೂರಕ್ಕೆ ನೂರು ಸತ್ಯ.

ಇದ್ದ ಮೊದಲ ದಿನವೇ ಡಸೆಲ್ ನನಗೆ ಎಲ್ಲ ವಿಚಾರಗಳ ಕುರಿತು ಪ್ರಶ್ನಿಸತೊಡಗಿದರು. ಇದ್ದಿಲು ಮಾಡುವ ಹೆಂಗಸು ಬರುವುದೆಷ್ಟು ಹೊತ್ತಿಗೆ? ಬಾತರೂಮನ್ನು ಎಷ್ಟು ಹೊತ್ತಿಗೆ ಬಳಸಿದರೆ ಉತ್ತಮ? ಯಾವಾಗ ನಾವು ಶೌಚದ ಕೋಣೆ ಬಳಸಬಹುದು? ನಿನಗೆ ನಗು ಬರಬಹುದು. ಆದರೆ ಗುಪ್ತವಾಗಿ ಬದುಕಬೇಕಾದ ಸಂದರ್ಭದಲ್ಲಿ ಇವು ಸರಳ ಸಂಗತಿಗಳು ಎನ್ನಿಸಲಾರವು. ದಿನದ ಹೊತ್ತಲ್ಲಿ ನಾವು ಸಣ್ಣ ಸದ್ದು ಕೂಡಾ ಮಾಡುವಂತಿಲ್ಲ. ಅದು ಕೆಳಗಿನ ಕೋಣೆಗಳಿಗೆ ಕೇಳಿದರೆ, ಮತ್ತು ಒಂದಾನು ವೇಳೆ ಅಲ್ಲಿ ಇದ್ದಿಲು ಮಾಡುವ ಹೆಂಗಸಿನಂತೆ ಕೆಲಸ ಮಾಡುವ ಹೊರ ಅಪರಿಚಿತ ಜನರಿದ್ದರೆ,-ನಾವು ತುಂಬಾ ಕಾಳಜಿಯಿಂದ ಇರಬೇಕಾಗಿದೆ. ನಾನಿದನ್ನೆಲ್ಲಾ ಡಸೆಲ್‌ಗೆ ವಿವರಿಸಿದೆ. ಆದರೆ ಒಂದು ಸಂಗತಿ ನನಗೆ ಆಶ್ಚರ್ಯವೆನ್ನಿಸಿತು. ಆತ ಹೇಳಿದ್ದನ್ನು ಬಹುಬೇಗ ಅರ್ಥೈಸಿಕೊಳ್ಳಲಾರರು. ಪ್ರತಿಯೊಂದು ಸಂಗತಿಯನ್ನು ಎರಡೆರಡು ಬಾರಿ ಕೇಳುತ್ತಾರೆ. ಮತ್ತು ಅದನ್ನು ನೆನಪಿಟ್ಟುಕೊಳ್ಳಲು ಅವರಿಗೆ ಆಗದು. ಬಹುಶಃ ದಿನ ಕಳೆದಂತೆ ಇದು ಕಡಿಮೆ ಆಗಬಹುದು. ಏಕಾ‌ಏಕಿ ಉಂಟಾದ ಈ ಬದಲಾವಣೆಗಳಿಂದ ಅವರು ಕಂಗೆಟ್ಟಿರಲೂಬಹುದು.

ಹೀಗೆಲ್ಲ ಇದ್ದು, ಎಲ್ಲವೂ ಚೆನ್ನಾಗಿಯೇ ನಡೆಯುತ್ತಿದೆ. ಬಹಳ ಸಮಯದಿಂದ ದೂರವಿರುವ ಅದೆಷ್ಟೋ ಹೊರ ಜಗತ್ತಿನ ಸಂಗತಿಗಳ ಕುರಿತು ಡಸೆಲ್ ನಮಗೆ ತಿಳಿಸಿದರು. ಲೆಕ್ಕವಿಲ್ಲದಷ್ಟು ಸ್ನೇಹಿತರು, ಪರಿಚಯಸ್ಥರು ದುರಾದೃಷ್ಟಕ್ಕೆ ಬಲಿಯಾಗಿದ್ದಾರೆ. ಪ್ರತಿದಿನ ಸಂಜೆಯಾಗುತ್ತಲೇ ಹಸಿರು ಮತ್ತು ಬೂದುಬಣ್ಣದ ಸೇನಾ ವಾಹನದ ಚಕ್ರಗಳು ಸುತ್ತ ಉರುಳುತ್ತಲೇ ಇರುತ್ತವೆ. ಜರ್ಮನ್ನ್‌ರ ಪ್ರತಿಮನೆಯ ಮುಂದೆ ಆ ಮನೆಯೊಳಗೆ ಯಾರಾದರೂ ಯಹೂದಿಗಳು ಇರುವರೇ ಎಂದು ವಿಚಾರಿಸಲು ಸುತ್ತುವರೆಯುತ್ತಾರೆ. ಹಾಗೇನಾದರೂ ಸಿಕ್ಕರೆ ಇಡೀ ಕುಟುಂಬವನ್ನು ಒಂದೇ ಸಲಕ್ಕೆ ಎಳದೊಯ್ಯಲಾಗುತ್ತದೆ. ಒಂದೊಮ್ಮೆ ಸಿಗದಿದ್ದಾಗ ಮುಂದಿನ ಮನೆಯನ್ನು ಗುರಿಯಾಗಿಸಿಕೊಳ್ಳುತ್ತಾರೆ. ಅದಕ್ಕೆ ಗುಟ್ಟಾಗಿ ಬದುಕದಿದ್ದರೆ ಯಾರೂ ತಮ್ಮನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ. ಯಹೂದಿಗಳ ಪಟ್ಟಿ ಹಿಡಿದು ಈ ಜರ್ಮನ್ನ್‌ರು ಹೀಗೆ ಸುತ್ತು ಹಾಕುತ್ತಲೇ ಇರುತ್ತಾರೆ. ಎಲ್ಲಾದರೂ ಒಳ್ಳೆಯ ಬಲಿ ಇದೆಯೆಂದಾದರೆ ಇವರು ಅಲ್ಲಿ ಜಮಾಯಿಸುತ್ತಾರೆ. ಕೆಲವೊಮ್ಮೆ ಯಹೂದಿಗಳಿಂದ ತಲೆಗೊಂದಿಷ್ಟು ಹಣ ವಸೂಲಿ ಮಾಡಿ ಬಿಡಲಾಗುತ್ತದೆ. ಇದೊಂದು ರೀತಿ ಹಿಂದೆಲ್ಲಾ ಜೀತದಾಳುಗಳನ್ನು ಬೇಟೆಯಾಡುತ್ತಿದ್ದ ರೀತಿಯಂತೆ ಕಾಣುತ್ತಿದೆ. ಇದು ತಮಾಷೆಯಲ್ಲ! ಬದಲಿಗೆ ಬಹುದೊಡ್ಡ ದುರಂತ. ಅದೆಷ್ಟೋ ದಿನಗಳಲ್ಲಿ ಸಂಜೆಯಾಗುತ್ತಿದ್ದಂತೆ, ಕತ್ತಲಾವರಿಸುತ್ತಿದ್ದಂತೆ, ಮುಗ್ಧ, ಅಮಾಯಕ ಯಹೂದಿ ಜನರುಗಳು ಅಳುವ ಮಕ್ಕಳ ಸಮೇತ ದಾರಿಯುದ್ದಕ್ಕೂ ಬಡಿಸಿಕೊಳ್ಳುತ್ತ, ತಿವಿಸಿಕೊಳ್ಳುತ್ತ, ಇನ್ನೇನು ಬಿದ್ದರೆ ಏಳಲು ಸಾಧ್ಯವಿಲ್ಲ ಎನ್ನುವವರೆಗೂ ನೋಯುತ್ತ ಸರತಿಸಾಲುಗಳಲ್ಲಿ ಸಾಗುವ ದೃಶ್ಯವನ್ನು ನಾನು ಕಂಡಿದ್ದೇನೆ. ಜರ್ಮನ್ನ್‌ರು ಯಾರೊಬ್ಬರನ್ನೂ ಬಿಟ್ಟಿಲ್ಲ- ಮುದುಕರು, ಕಂದಮ್ಮಗಳು, ಬಸುರಿ ಹೆಣ್ಣುಗಳು, ರೋಗಿಷ್ಠರು, ಎಲ್ಲರೂ ಸಾವಿನ ಮೆರವಣಿಗೆಯಲ್ಲಿ ಜೊತೆಯಾಗಿದ್ದಾರೆ.

ನಾವೆಷ್ಟು ಅದೃಷ್ಟವಂತರು! ಯಾವ ತೊಂದರೆ ಇಲ್ಲದೇ ಹಾಯಾಗಿದ್ದೇವೆ. ನಾವು ಈ ದುಸ್ಥಿತಿಗಳಿಗೆ ಚಿಂತಿಸಬೇಕಾಗಿಲ್ಲ. ನಮ್ಮಿಂದ ಯಾವ ಕಾರಣಕ್ಕೂ ಸಹಾಯ ಮಾಡಲು ಆಗದಿರುವ ನಮ್ಮ ಹತ್ತಿರದವರ ಬಗ್ಗೆ ಅವರ ಸಂಕಟಗಳ ಬಗ್ಗೆ ಕೂಡಾ ಚಿಂತಿಸದೇ ಇರಬೇಕು.

ನನ್ನ ಆತ್ಮೀಯ ಗೆಳೆಯ ಗೆಳತಿಯರು ಕೊರೆವ ಚಳಿಯಲ್ಲಿ ಹೊರಗೆ ಗಟಾರುಗಳಲ್ಲಿ ತಳ್ಳಲ್ಪಡುತ್ತಾ, ನೂಕಲ್ಪಡುತ್ತಾ, ಇರುವಾಗ ನಾನೊಬ್ಬಳೆ ಇಲ್ಲಿ ನನ್ನ ಬೆಚ್ಚಗಿನ ಹಾಸಿಗೆಯಲ್ಲಿ ಮಲಗಿದಾಗಲೆಲ್ಲಾ ತಪ್ಪಿತಸ್ಥ ಮನೋಭಾವ ನನ್ನ ಕಾಡುತ್ತದೆ. ಈಗೀಗ ಈ ಭೂಮಿಯಲ್ಲಿ ಗಸ್ತು ತಿರುಗುತ್ತಿರುವ ಕ್ರೂರ ಪಾಪಿಗಳ ಕೈಗಳಿಗೆ ಸಿಕ್ಕು ನರಳುತ್ತಿರುವ ನನ್ನ ಸ್ನೇಹಿತರ ನೆನಪಾಗುತ್ತಲೇ ನಾನು ವಿಹ್ವಲಿತಳಾಗುತ್ತೇನೆ. ಮತ್ತು ಇವೆಲ್ಲ ಯಾಕೆಂದರೆ ಅವರೆಲ್ಲ ಯಹೂದಿಗಳು!

ನಿನ್ನ,
ಆನ್
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...