ಮುಟ್ಟಳಕಂಚಮ್ಮಾ ಮನ್ಯಾ ತಳುವನ ಬಿಟ್ಟೀ
ನಡ್ದಳೇ ಗಾರಾಹೂಳಿಗಿನ್ನೂ ಸುವ್ವೇ
ಹರ್‍ವಾನದೀಗೂಳಾ ಮುಳ್ಕೀ ಸಾನಮಾಡೀ
ಕನ್ನಿಯೋರಿಗೆ ಕಯ್ಯಾ ಮುಗಿದಳೆ ಸುವ್ವೇ ||೧||
ಕನ್ನಿಯೋರಿಗ್ ಕಯ್ಯಾ ಯೇನೇಳಿ ಮುಗೀದಳೇ
“ಸಂಜೀಲೀ ಕೊಡು ಸ್ವಾಮೀ ಮುಂಜಾಲೀ ವಯಸ್ವಾಮೀ,
ಬಂಜೆಂಬು ಸಬುದಾ ಮರ್‍ಸಿ ಸ್ವಾಮಿ ಸುವ್ವೇ
ತಾ ಬತ್ತೀ ಗಾರಾ ಹೊಳಿಗಿನ್ನೂ” ಸುವ್ವೇ ||೨||
ಅಟ್ಟಾರೂಲಿನ್ನೂ ನುಡಿದಳೆ ಕೆಂಚಮ್ಮ
ತನ್ನ ಮನೆಗಾರೂ ಬರೂವಳು ಸುವ್ವೇ
ಮುಟ್ಟಾಗೊಂದು ತಿಂಗಳಾ ಮುಟ್ಟಾಗೆರಡು ತಿಂಗಳಾ
ವಂಬತ್ತು ತಿಂಗಳಾ ಗಳಿದಾವೆ ಸುವ್ವೇ ||೩||
ವಂಬತ್ತೂ ತಿಂಗಳಾ ತುಂಬೂತನವಾ ಕೇಳೂ
ಹೆರುವಾ ಕೋಟೂಲಿಯೇ ತೊಡೂಗದೆ ಸುವ್ವೇ
ತೊಡ್ಗದೆ ಕೆಂಚಮ್ಮಾಗೆ
ಹಡದಳೆ ಗಂಡೂ ಕೊಮುರಾನಾ ಸುವ್ವೇ ||೪||
ವಾಲೆದ್ದೀ ನೀರಾ ಕಾಸದೆ ಕೆಂಚಮ್ಮಗೇ
ಉಂಗ್ಲೆದ್ದೀ ಬೆನ್ನಾ ತಿಕ್ಕದೇ ಸುವ್ವೇ
ಅರದಲರೂಸೀನಾ ಮೆರ್‍ದಾ ಸೀಗೆ ಹೊಡಿಯೆಲಿ
ಯಣ್ಣೀ ಕಂದಲವೇ ಬರೂವದೆ ಸುವ್ವೇ ||೫||
ಅಟ್ಟಾರೂಲಿನ್ನೂ ಲಾಗೂ ತನಕಾ ನೋಡೂ
ಕೆಂಚಮ್ಮ ಕರೂವದಕೇ ಬರೂವರೇ ಸುವ್ವೇ
“ಕಂದಯ್ಯಾ ಹುಟ್ಟೀ ಇಂದೀಗ್ ಮೂರೂ ದಿನಾ
ಇಂದಾರೂ ನಾನೂ ಬರೂನಾರೇ’ ಸುವ್ವೇ ||೬||
ಅಪ್ಪ್ ಹೇಳ್‌ದ್ರೂ ಕೇಳೂ ಕಂಚ್ಯಲ್ಲಾ ಅವ್ ಹೀಳ್‌ದ್ರೂ ಕೇಳೂ ಕಂಚ್ಯಲ್ಲಾ
ಪುರಿಸರ ತಡೂದಾರೂ ಕೇಳೂ ಕೆಂಚ್ಯಲ್ಲಾ ಸುವ್ವೇ
ಪುರಿಸರ ತಡೂದಾರೂ ಇರೂ ಕೆಂಚ್ಯಲ್ಲಾ, “ಕನ್ನಿ ಯೋರಾ
ಇಂದೆಗೇಳು ದಿನಕೇ ಬರೂತೆನೇ” ಸುವ್ವೇ ||೭||
ಐದಲೂ ದಿನವೇ ಸಾಗೂತನಕಾ ನೋಡೂ
ನೆಡ್ದಳೇ ಗಾರಾ ಹೊಳಿಗಿನ್ನೂ ಸುವ್ವೇ
ಅತ್ತೆಲಂಬದೂ, “ಕೇಳೂ ನೀನೂ ಸೊಸಿಯೇ,
ಯೆಟ್ಟೂ ಹೇಳಿದ್ರೂ ಕೇಳಬೇಕು ಸೊಸಿಯೇ
ಹೊಳಗಾರೂ ನೀನೂ ಹೋಗೂಕಾಗಾ ಸುವ್ವೇ ||೮||
ಕತ್ಯರು ನೀವ್ ಬನ್ನೀ, ಕೊವ್ಯಾರೂ ನೀವ್ ಬನ್ನೀ
ಕೆಂಚಮ್ಮ ಹೊಗ್ತದೆ ಗಾರಾ ಹೊಳಿಗಿನ್ನೆ” ಸುವ್ವೇ
“ಕತ್ಯರು ನಾ ಕೇಳುದಿಲ್ಲಾ, ಕೊವ್ಯರೂ ನಾ ಕೆಳುದಿಲ್ಲಾ
ನಾಹೋಗ್ತೇ ಗಾರಾ ಹೊಳಿಗಿನ್ನೂ” ಸುವ್ವೇ ||೯||
ಹರ್‌ವಾ ನದ್ಯಗೋಳಾ ಮಿಂದಳ್ ಕೆಂಚಮ್ಮ
ತನ್ನಲರೂಮನಿಗೇ ಬರೂವಳೇ ಸುವ್ವೇ
ತಾಯ್ ಬಳಗಕೆ ವಂದೋಲೇ ತಂದಿ ಬಳುಗಕೆ ವಂದೋಲೇ
ಗಂಡನ ಬಳಗದೋರಿಗೇ ವಂದೋಲೇ ಸುವ್ವೇ ||೧೦||
ಮೂರೂ ವಾಲೀ ಬರದೀ ಕಳಗಳೇ ಕೆಂಚಮ್ಮಾ
ತಾನೂ ಕಟ್ಟಿಗೇ ನಡಿದದೇ ಸುವ್ವೇ
ಅಪ್ಪಯ್ಯಂಬವ್ಗೇ ಸುದ್ದೀಲಾಗದೆ ನೋಡೂ
ಮಡದೀಕೂಡಿನ್ನೂ ನುಡೀತಾನೇ ಸುವ್ವೇ ||೧೧||
“ಬಿದ್ರೂರಲ್ಲಿ ವಂದೂ ಯಡಪುಂಡಾ ಇದ್ದೀದಾ
ನಿನ್ನೊಂದ್ ಹೆರೀಮಗಳಾ ಕೊಟ್ಯಲ್ಲೇ ಸುವ್ವೇ
ಇದ್ದೊಂದ ಹೆರೀಮಗಳಾ ಕೊಟ್ಯಲ್ಲೇ ಮಡದೀ
ಅವ ಹೊಳೀಗಾಹುತೀ ಕೊಡೂತಾನೇ” ಸುವ್ವೇ ||೧೨||
“ಮನ್ಯಲ್ಲೀಲನ್ನೂ ಮಡ್ದಿ ಇಲ್ಲಾ”ಲಂದೀ
ಕೇರೀಕೇರೀಯಾ ಹುಡುಕುತ ಬಂದಾ ಸುವ್ವೇ
“ಯಲ್ಲೆಲ್ಲೂಲಿನ್ನೂ ಮಡದಿಇಲ್ಲಾ” ಹೇಳೀ
ಕಟ್ಟೇಮೇನ್ ಹೋಗೀ ಕುಳೂವದೇ ಸುವ್ವೇ
ಕುಳ್ಳೂ ಸಮ್ಯಗಲ್ಲೀ ಕಟ್ಟೀಮೇನ್ ತಾನ್ ಹೋಗೀ ಕುಳೂವನೇ ಸುವ್ವೇ ||೧೩||
“ಬಂದೀರ್‍ಯಾಕ್ ಸ್ವಾಮೀ ಕಟ್ಟಿಮೇನ್‌ಯಂತಾಕ್ ಕುಳ್ತೀರೀ?
ಕಟ್ಟಿಕಲ ಹರ್‍ದಿ ಕೆಳಗೇ ಬೀಳುರೀ” ಸುವ್ವೇ
“ಕಟ್ಟಿ ಹರ್‍ದಿ ಬಿದ್ದಾರೇ ಕಟ್ಟಿ ಕಟ್ಟೂಕ್ ಬಲ್ಲೇ
ಮಾಳೂಗೀ ಮಡದೀ ಮನಿಗೋಗೇ ಸುವ್ವೇ ||೧೪||
ಇಪ್ಪತ್ ವರಾಕೊಟ್ಟೀ ಯಮ್ಮಿ ತಂದಿದೇ
ಅರುತಿಕೊಂದ್ ತುತ್ತಾ ಉಣಲಿಲ್ಲಾ ಸುವ್ವೇ
ಇಪ್ಪತ್ ವರೂ ಕೊಟ್ಟೀ ವಾಲೀಗೆಯ್ಯುಸೀದೋ
ವಂದಿನೂ ನೀನೂ ಇಡುಲಿಲ್ಲಾ ಸುವ್ವೇ ||೧೫||
ಕಂದಯ್ಯಾ ಹುಟ್ಟೀ ಇಂದೀಗ್ ಮೂರೂ ದೀನಾ
ಕಂದಯ್ಯಳ್ಳೂವಾ ಮನೀಗೋಗು” ಸುವ್ವೇ
“ಕಂದಯ ಅಳ್ಳದ್ರು ಅಳ್ಳೀ, ಪುಟ್ಟಯ್ಯ ಅಳ್ಳದ್ರೆ ಅಳ್ಳೀ
ಕಂದಯ್ಯನ ಗೊಡವೇ ನನುಗಿಲ್ಲ” ಸುವ್ವೇ “ದೇವರೇ ||೧೬||
ಕಂದಯ್ಯಳ್ಳುವಾ ನೀವ್ ಮನಿಗ್ ಹೋಗೀ” ಸುವ್ವೇ
ಅಟ್ಟಾರೂ ಅನ್ನೂ ಹೇಳೂ ತನ್ಕಾಕೇಳೂ
ಮಡ್ಡೀ ವಳೂಗ್ ಹಾಕೀ ಕದೂ ಹಾಕ್ದಾ ಸುವ್ವೇ
ತೀಡೂತಾದೇ ನೋಡೂ ಮರ್‌ಕುತಾದೇ ನೋಡೂ ||೧೭||
ಯೇನೇನ್ ಹೇಳಿದರೂ ಕೇಳೂದಿಲ್ಲಾ ಸುವ್ವೇ
“ಕೇಳ್ ಕೇಳೇ ಕೆಂಚಮ್ಮಾ, ಕೇಳಲೆ ಕೆಂಚಮ್ಮಾ
ಅಪ್ಪಯನಿನ್ಗೆ ಪಟ್ಟಯಾ ತರೂವನೆ” ಸುವ್ವೇ
“ಪಟ್ಟಿ ತಂದ್ರೂ ತರ್‍ಲೀ, ಹೂಂಗಾ ತಂದ್ರೂ ತರ್‍ಲೀ ||೧೮||
ಅಪ್ಪಯ್ಯನಾ ಗೊಡವೇ ನನುಗಿಲ್ಲಾ’ ಸುವ್ವೇ
“ಕೇಳ್ ಕೇಳೇ ಕೆಂಚಮ್ಮಾ, ಕೇಳಲೆ ಕೆಂಚಮ್ಮಾ
ನಿನ್ನ ತಾಯಿ ಬಂದದ್ಯೆ ಕರೂವಾಕೆ ಸುವ್ವೇ
ತಾಯಿ ಬಂದರ್‍ಯೇ ಕರವಕೆ ತಂಗಿ, ಕೇಳೂ ||೧೯||
ಕುಪ್ಸ ತಂದದ್ಯೇ ಲಿಡೂನಾಕೇ” ಸುವ್ವೇ
“ತಾಯೀ ಬಂದ್ರೆ ಬರ್‍ಲಿ ಕುಪ್ಸ ತಂದ್ರೆ ತರಲೀ
ತಾಯವ್ವೀಗೊಡವೀ ನನೂಗಿಲ್ಲಾ” ಸುವ್ವೇ ||೨೦||
“ಕೇಳ್ ಕೇಳೇ ಕೆಂಚಮ್ಮಾ, ಕೇಳಲೆ ಕೆಂಚಮ್ಮಾ,
ನಿನ್ನಣ್ಣ ಬಂದನೇ ಇಲುನೋಡೆ” ಸುವ್ವೇ
“ಅಣ್ಣ ಬಂದ್ರೆ ಬರಲೀ, ಹೂಗಾ ತಂದ್ರೆ ತರಲೀ
ಅಣ್ಣಯ್ಯನ ಗೊಡವೇ ನನುಗಿಲ್ಲ’ ಸುವ್ವೇ ||೨೧||
“ಅಪ್ಪಯ್ಯ ನಿನ್ನೂ ಕರದರೇ ಕೆಂಚಮ್ಮಾ
ಅಪ್ಪಯ್ಯನ ತೊಡೀ ಮೇನೇ ಕುಳೂವದೇ” ಸುವ್ವೇ
“ಕೇಳ್ ಕೇಳೊ ಲಪ್ಪಯ್ಯ, ಕೇಳಲಪ್ಪಯ್ಯಾ
ತಾನ್ ಹೋತೇ ಗಾರಾ ಹೊಳಿಗಿನ್ನು ಸುವ್ವೇ ||೨೨||
ನಾನೆ ಹೋಗೆ ಗಾರಾ ಹೊಳಿಗಿನ್ ಕಲುಜೇನಮ್ಮಾ
ಕಲುಜೇನ ತಂಗಮ್ಮಾ ಕಯುದಾರೀ ಸುವ್ವೇ
ತಂಗಮ್ಮ ಕೈದಾರೀ ಯೆರಕೂಡೊಲಪ್ಪಯ್ಯಾ”
ತಾಯೀ ಪಾದಕೇ ವಂದನೆ ಮಾಡಿದ್ದಾಳೇ ಸುವ್ವೇ ||೨೩||
ತಾಯೀ ಕೂಡಿನ್ನೂ ನುಡೀದದೇ ಸುವ್ವೇ
“ಕೇಳ್ ಕೇಳೆ ತಾಯವ್ವಾ ಕೇಳಲೆ ತಾಯವ್ವಾ,
ಕಲುಜೇನಾ ತಂಗಮ್ಮ ಕೈದಾರೀ ಯೊರಕೊಡೆ” ಸುವ್ವೇ
ಅಣ್ಣನ ಪಾದಕೇ ವಂದನೆ ಮಾಡಿದಾಳೇ ಸುವ್ವೇ ||೨೪||
ಅಣ್ಣನ ಕೂಡಿನ್ನೂ ನುಡಿದಾಳೇ ಸುವ್ವೇ
ಅಣ್ಣನ ಕೂಡಿನ್ನೂ ಯೇನೇಳಿ ನುಡಿದಾದೇ?
“ಕೇಳ್ ಕೇಳೂ ಅಣ್ಣಯ್ಯ, ಕೇಳಲೆ ಅಣ್ಣಯ್ಯ,
ಕಲುಜೇನ ತಂಗಮ್ಮ ದಾರೀ ಯರೂಕೊಡೀ” ಸುವ್ವೇ ||೨೫||
ಅಟ್ಟಾರೂಲಿನ್ನೂ ನುಡ್ದದೇ ಕೆಂಚಮ್ಮಾ
ನಡೆದಾಳೇ ಗಾರಾ ಹೊಳೀಗಿನ್ನೂ ಸುವ್ವೇ
ಅಪ್ನ ಬಳ್ಗ್ ವಂದ್ ಸಾವ್ರಾ, ಅವಿ ಬಳ್ಗ್ ವಂದ್ ಸಾವ್ರಾ
ಗಂಡನ ಬಳುಗೆದವರೂ ಐನೂರು ಸುವ್ವೇ ||೨೬||
ಲೈನೂರು ಸಯ್ತಲಾಗೀ
ಹಣ್ಣನಾ ಮುಟ್ಟೊ ಹದಿನಾರೂ ಸುವ್ವೇ
ಹದ್ನಾರೂ ಸಯ್ತಲಾಗೀ
ಕೆಂಚಮ್ಮ ಬೆನ್ನಿಗೂ ಬರೂವದೇ ಸುವ್ವೇ ||೨೭||
ಅಲ್ಲೇಲೋಗದೇ ಹಣ್ಣೀ ಹರೂಗಾದೇ
ಹೂಗಾರೂಲಿನ್ನೂ ಲಿಡೂವುದೇ ಸುವ್ವೇ
ಇಡ್ಸೆದೆ ಕೆಂಚಮ್ಮಾ
ಕಡ್ಡಿ ಕುಂಕುಮಿನ್ನೂ ಇಡೂವದೇ ಸುವ್ವೇ ||೨೮||
ಕಡ್ಡಿಕೂಕುಮಾ ಇಟ್ಟದೆ ಕೆಂಚಮ್ಮಾ
ಕಾಯೊಡುದೀ ಕಯ್ಯಾ ಮುಗೂದದೇ ಸುವ್ವೇ
ಮುಗ್ವಾ ತನ್ಕಾನೋಡೂ
ದೇವಲೋಕ ಸತ್ತುಗೀ ಬರೂವದೆ ಸುವ್ವೇ ||೨೯||
ಸತ್ತುಗಿಲತ್ತದೇ ದಂಡುಗಿಲ್ಲಿಡೂದದೇ
ಸವ್ಲುಯ್ಯಲಮೇಲೇ ಕುಳೂವದೆ ಸುವ್ವೇ
“ಕೇಳ್ ಕೇಳ್ ಕನ್ನಿಯೋರಾ, ಕೇಳಲಿ ಕನ್ನಿಯೋರಾ
ನಾನೊಂದಾ ಮಾತಾ ನುಡಿತೇನೇ ಸುವ್ವೇ ||೩೦||
ತಣ್ಣೀ ಉಂಡದಲ್ಲಾ (ತಾಯೀ) ಬಿಸ್ ನೀರ ಮಿಂದದ್ದಲ್ಲಾ
ಬಾಲರಪ್ಪಂತೇ ಸಲಿಕಳ್ಳಿ ಸುವ್ವೇ
ಸಲಿಕಳಿ” ಲಂದ್‌ಹೇಳಿ ಕನ್ನಿಯೋರಿಗೆ ಕಯ್ಯಾ ಮುಗೀದದೇ ಸುವ್ವೇ ||೩೧||
ಅಟ್ಟಾರಲನ್ನೂ ಹೇಳಿಕಂಡೀ ಕಂಡೀ
ಅಳಿಯನ ಕರೂಕಂಡೀ ನೆಡೂದರೂ ಸುವ್ವೇ
ಅಳಿಯನಾರೂ ಲಿನ್ನೂ ತಮ್ಮನಿಗೆ ಕರ್‍ಕಂಡ್ ಹೋಗೀ
ಕಲುಜೇನ ತಂಗಮ್ಮ ಕೈದಾರೀ ಯೆರೂಕೊಟ್ಟೂ ಸುವ್ವೇ ||೩೨||
“ಗಂಡಗ್ ಹಿಣ್ತೀಲಾಯ್ತೂ ಮಗನಿಗೆ ತಾಯೂಲಾಯ್ತೂ
ನೀವ್ ಹೋಗಿರ್ರೋ ನಿಮ್ಮ ಮನಿಯಲ್ಲೀ” ಸುವ್ವೇ
ಮನ್ಯಲ್ಲಿ ಅಂದ ಹೇಳೀ ಮಗಳೂವಾ ಅಳೀನಾ ಯೇನೇಳಿ ಕಳೂಗಾರೇ
“ನೀವ್ ಹೋಗಿರೊ ನಿಮ್ಮಾ ಮನಿಯಲ್ಲಿ ಸುವ್ವೀ ||೩೩||
*****
ಕೆಲವು ಪದಗಳ ವಿವರಣೆ
ಮೆರ್‍ದಾ = ಕುಟ್ಟಿದ
ವರೂ = ರೂಪಾಯ್
ಸತ್ತುಗಿ = ಪಲ್ಲಕಿ
ತಣ್ಣೀ = ತಣಿದ ಹಿಂದಿನ ದಿನದ ಅನ್ನ
ಹೇಳಿದವರು: ದಿ. ಬಳಿಯಮ್ಮ ಪುಟ್ಟುನಾಯ್ಕ, ಹೊಸಾಕುಳಿ
ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.
















