ಎದೆಯೆಂಬ

ಎದೆಯೆಂಬ ಹೊಲವನ್ನ ಹದವಾಗಿ ಹರಗೀನಿ
ಬೆದೆ ಮಳೆ ಬಂದಂಗೆ ಮಿದು ಮಾಡು ಬಾರೆ
ಮಿದುವಾದ ಹೊಲದಾಗ ಬೀಜಾನ ಬಿತ್ತೀನಿ
ಬೇರಿಗೆ ಕಸುವಾಗೊ ಸತುವನ್ನು ತಾರೆ  ||೧||

ಎದೆಯೆಂಬ ಮರುಭೂಮಿ ಬರಬಾರಾ ಒಣಗಿದೆ
ಹನಿಹನಿ ಸುರಿಸುತ್ತ ಹಸರಿಸು ಬಾರೆ
ಬಾಯೊಣಗಿ ಬೋರ್ಯಾಡಿ ಪ್ರಾಣಾ ಓಡಾಡ್ಯಾವೆ
ಜೀವಾನ ಉಳಿಸಾಕೆ ಮೇಲಿಂದ ಬಾರೆ  ||೨||

ಎದೆಯೆಂಬ ಪೀಠಾನ ಝಾಡಿಸಿ ಜಪ್ಪಿಸಿ
ಕಾದೀನಿ ನಿನಗಾಗಿ ಕುಂತುಗೊ ಬಾರೆ
ಸಭೆ ತುಂಬಿ ಕಾದೈತೆ ಕಣ್ಕಣ್ಣು ಬಿಡತೈತೆ
ಹಡದೀಯ ಹಾಸ್ಯೈತೆ ನಡಕೊಂತ ಬಾರೆ  ||೩||

ಎದೆಯೆಂಬ ನೆಲದಾಗೆ ಗಿಡಮರ ನರನರಾ
ಒಣಗ್ಯಾವೆ ಹಿಡಿದಾವೆ ಒಳಗೆಲ್ಲೋ ಜೀವಾ
ಈ ನೆಲಾ ಬಾಯ್ಬಿಟ್ಟು ಬಿರುಕೀನ ಮಕವಿಟ್ಟು
ನೀರೆ ಬಾರೇ ಬಾರೆ ಕೂಗ್ಯೈತೆ ಜೀವಾ  ||೪||

ಎದೆಯೆಂಬ ಗುಡಿಯಾಕೆ ಬಣಬಣ ಬರಿಗಂಟೆ
ಉರದೈತೆ ಇರುಳೆಲ್ಲಾ ದೀಪಾಧೂಪಾ
ಗರ್ಭಾಗುಡಿಯಾಗೆ ನೀ ಮನಿದೇವ್ತೆ ಇರದಾಗ
ಯಾರೀಗೆ ಈ ಗುಡಿ ಈಪೂಜಿ ಪಾಪಾ ||೫||

ಎದೆಯೆಂಬ ಪಂಜರದೊಳಗೊಂದು ಗಿಣಿರಾಮಾ
ಸಂಗಾತಿ ಬೇಕಂತಾ ಕರದೈತೆ ಬಾರೆ
ಹಣ್ಣನ್ನ ತಿನವಲ್ದು ಕಣ್ಣನ್ನ ಮುಚುವಲ್ದು
ಸೆಳ್ಳನ್ನೆ ಕುಕತೈತೆ ಅರಗಿಣಿ ಬಾರೆ  ||೬||

ಎದೆಯೆಂಬ ಬಾವ್ಯಾಗೆ ಬರಿತಳ ಕಂಡೈತೆ
ಬರಿಕೊಡ ಜೋತಾಡಿ ನೇತಾಡುತಾವೆ
ಬಾವೇನು ಜೀವಿಲ್ದ ಹೆಣಬಾಯಿಯಾಗ್ಯೈತೆ
ಅಂತಾರಾಗಂಗೀಬಾ ತುಳುಕಲಿ ಒಲವೇ ||೭||

ಎದೆಯೆಂಬ ಗಿಡದಾಗೆ ಎಲಿಯಿಲ್ಲ ಚಿಗುರಿಲ್ಲ
ಬರಲಾಗಿ ನಿಂತೈತೆ ರಸವಿಲ್ದ ಜೀವಾ
ಹಸಿರಿನ ಸೀರ್ಯುಟ್ಟು ಹೂಮುಡಿದು ಕಾಯಾಗಿ
ಹಣ್ಣಾಗಿ ಗಿಡತುಂಬು ಬಾರೆನ್ನ ಸತುವಾ  ||೮||

ಎದೆಯೆಂಬ ಹೊನ್ನಾಡು ರತ್ನ ಮುತ್ತಿನ ನಾಡು
ಹಾಳಾಗಿ ಹಂಪ್ಯಾಗಿ ಕೂಗ್ಯಾವೆ ಗೂಗಿ
ನಿನ್ನ ಗೆಜ್ಜಿ ಪಾದ ಸೋಕಿದರೆ ಈ ಕೊಂಪಿ
ನಂದಾನವಾದೀತು ಕೋಗಿಲೆ ಕೂಗಿ  ||೯||

ಎದೆಯೆಂಬ ಈ ಮನಿ ಕಸಕಾಗಿ ತೌರ್ಮನಿ
ಧೂಳು ದುಮ್ಮು ಮೂಲಿಮೂಲಿಗೆಲ್ಲ
ವಾರಣ ಸಾರಣಿ ಮಾಡಿ ಈ ಮನಿಯಾಗೆ
ಹಣತೆಯ ಹಚ್ಚು ಬಾ ಕಳೆಯಲಿ ಕತ್ಲಾ  ||೧೦||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಲಹೆ
Next post ನಗೆ ಡಂಗುರ – ೪೩

ಸಣ್ಣ ಕತೆ

 • ಜೀವಂತವಾಗಿ…ಸ್ಮಶಾನದಲ್ಲಿ…

  ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

 • ಯಿದು ನಿಜದಿ ಕತೀ…

  ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

 • ಮಿಂಚಿನ ದೀಪ

  ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

 • ಸಂಶೋಧನೆ

  ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

 • ಕರಿಗಾಲಿನ ಗಿರಿರಾಯರು

  ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…