ಕತ್ತಲು ಆವರಿಸಿದ ಕೋಣೆಯಲಿ
ಕಪ್ಪನೆ ಕಣ್ಣಗೊಂಬೆಯ ಕರಿನೆರಳ
ತುಂಬ ಅರಗಿಸಿಕೊಳ್ಳದ ನಿನ್ನ ಮುಖ
ಅಂಚಿನಲಿ ಬಸಿತು ಬೀಳಲು
ಕಾತರಿಸಿ ದಿಗಿಲುಗೊಂಡ ಸಣ್ಣಹನಿ.

ಕಾಳರಾತ್ರಿಯಲ್ಲು ಪ್ರೀತಿ ಬೆಳಕು ಚೆಲ್ಲದ
ಪ್ರಣತಿ ಬಾಚಿ ತಬ್ಬುವ ಅಲೆಗಳ ನೆನಪು
ಒಳಗೊಳಗೆ ತೊಳಲಾಡುವ ಮಿಡಿತ
ಕರಗಿ ಹನಿ ಹನಿಯಾಗಿ ಇಳಿದು ತಬ್ಬಿದ
ಬಿಳಿ ಮೊಂಬತ್ತಿ, ಹಾಡು ಹೇಳುವ ಸಂತ ಕವಿ.

ಬಾಹು ಬಂಧನಕೆ ಸಿಲುಕದ ನೀಲಿ ಆಕಾಶ
ಕನವರಿಸುವ ರಾತ್ರಿಯಲ್ಲಿ ಚೆಲ್ಲವೆ ಚಿಕ್ಕಿಗಳ
ತಲೆತುಂಬ ರಾಶಿರಾಶಿ, ಅಲ್ಲಿ ನಿನ್ನ ಕಣ್ಣೋಟ
ಬೆಳದಿಂಗಳು ಪಸರಿಸಿ ತಣ್ಣನೆಯ ಅನುಭವ
ಬೀಸಿದ ಗಾಳಿಗೆ ಕಣ್ಣ ರೆಪ್ಪೆ ದಪ್ಪ, ಎದೆ ಪದಗಳ ಕಾವ್ಯ.

ಗುಂಗು ಹಿಡಿದ ಪ್ರೇಮದ ದಾರಿ ಮರಳು
ಅಲೆಗಳಲಿ ಅಪ್ಪಳಿಸಿ ಹಾಯಿ ಹರಸಿದ ದೋಣಿ
ಕಣ್ಣತೆರೆಗೆ ಬಯಲ ಕೆರೆ ಕೊಳಲೂದಿದ ಕೃಷ್ಣ
ಸಾವಿರ ದಿನವೂ ಮೀಯಲಿ ಮನವು ನಿನ್ನೊಳಗೆ
ಗೋಪಿಯರು ಹಾಡಲಿ, ಕಣ್ಣಲ್ಲಿ ಇಳಿಯಲಿ ಪ್ರೇಮದಾರೆ.
*****