ಡಾ. ರಾಜಕುಮಾರ್‌ ಜನರಿಗೆ ಕೊಟ್ಟಿದ್ದೇನು?

ಡಾ. ರಾಜಕುಮಾರ್‌ ಜನರಿಗೆ ಕೊಟ್ಟಿದ್ದೇನು?

ರಷ್ಯಾದ ಲೇಖಕ ಪ್ಲಖನೋವ್ ಒಂದು ಕಡೆ ಹೀಗೆ ಹೇಳಿದ್ದಾರೆ: ‘ಕಲಾಕಾರರು ಜನರಿಂದ ಮನ್ನಣೆಯನ್ನು ಬಯಸುತ್ತಾರೆ. ಜನರು ಕಲಾಕಾರರಿಂದ ಜವಾಬ್ದಾರಿಯನ್ನು ಬಯಸುತ್ತಾರೆ. ನಿಜ, ಯಾವುದೇ ಕಲಾಕಾರರು – ಸಾಹಿತಿ, ಕಲಾವಿದ ಯಾರೇ ಆಗಿರಲಿ – ಜನಗಳಿಗೆ ಜವಾಬ್ದಾರರಾಗಬೇಕು. ಆಗ ಅವರಲ್ಲಿ ಸದಭಿರುಚಿ ಮತ್ತು ಸಮಕಾಲೀನ ಸಾಮಾಜಿಕ ನೆಲೆಗಳು ಜಾಗೃತವಾಗಿರುತ್ತವೆ. ಕೆಲವರಲ್ಲಿ ಸೈದ್ಧಾಂತಿಕತೆಯ ರೂಪದಲ್ಲಿ, ಮತ್ತೆ ಕೆಲವರಲ್ಲಿ ನೈತಿಕತೆಯ ರೂಪದಲ್ಲಿ ಈ ಅಂಶಗಳು ಅನಾವರಣಗೊಳ್ಳುತ್ತವೆ. ತಾವು ನಂಬಿದ ನೈತಿಕತೆಯನ್ನೇ ಸೈದ್ಧಾಂತಿಕತೆ ಯೆಂದು ಭಾವಿಸಿ ಜನರಿಗೆ ಜವಾಬ್ದಾರರಾಗಿ ಬದುಕಿದ ಕಲಾವಿದ ಡಾ. ರಾಜಕುಮಾರ್. ಜನರನ್ನು ‘ಅಭಿಮಾನಿ ದೇವರುಗಳೇ’ ಎಂದು ಸಂಬೋಧಿಸುತ್ತಲೇ ಅದನ್ನು ಸತ್ಯವಾಗಿಸಿದರು. ತಾವು ಯಾರನ್ನು ‘ದೇವರು’ ಎಂದು ಭಾವಿಸಿದ್ದರೋ ಆ ದೇವರುಗಳ ಮನಸ್ಸಿಗೆ ಅನ್ಯಾಯ ಮಾಡಬಾರದೆಂಬ ನೈತಿಕ ಪ್ರಜ್ಞೆಯಿಂದ ಸದಭಿರುಚಿಯ ಸಂರಕ್ಷಕರಾದರು. ನಿಜ, ಅವರ ಸದಭಿರುಚಿಯ ಕಲ್ಪನೆಯಲ್ಲಿ ಸಾಂದ್ರದಾಯಿಕತೆಯೂ ಇತ್ತು. ಆಧುನಿಕತೆಯೂ ಇತ್ತು. ತಾವೇ ಹಾಕಿಕೊಂಡ ಲಕ್ಷ್ಮಣ ರೇಖೆ ಸದಾ ಎಚ್ಚರಿಸುತ್ತಲೇ ಇತ್ತು.

ಚಲನಚಿತ್ರರಂಗದಲ್ಲಿ ತಾರಾಮೌಲ್ಯಗಳನ್ನು ಗಳಿಸಿದ ಮೇಲೆ ಕತೆಯ ಆಯ್ಕೆಯ ‘ಅಧಿಕಾರ’ ತಾನಾಗಿಯೇ ಕಲಾವಿದರ ಕೈಗೆ ಬಂದು ಬಿಡುತ್ತದೆ! ತಮಗೆ ಇಷ್ಟವಾದ ಕಥಾವಸ್ತುವುಳ್ಳ ಚಿತ್ರಗಳಿಗೆ ಮಾತ್ರ ಅವರು ಸಹಿ ಮಾಡುತ್ತಾರೆ. ತಾರಾಮೌಲ್ಯದ ಕಾರಣದಿಂದ ನಷ್ಟವಾಗುವುದಿಲ್ಲ ವೆಂದು ನಂಬಿದ ನಿರ್ಮಾಪಕ ನಿರ್ದೇಶಕರು ನಟರ ಇಷ್ಟಾನಿಷ್ಟಗಳಿಗೆ ಒಪ್ಪಿಬಿಡುತ್ತಾರೆ. ಡಾ. ರಾಜಕುಮಾರ್‌ ಅವರು ತಮಗೆ ಒದಗಿಬಂದ ‘ಆಯ್ಕೆಯ ಅಧಿಕಾರ’ವನ್ನು ಅನೈತಿಕಗೊಳಿಸಲಿಲ್ಲ ಎಂಬುದು ಬಹುದೊಡ್ಡ ಹೆಗ್ಗಳಿಕೆ. ತಾವು ಅಭಿನಯಿಸಿದ ಚಿತ್ರಗಳು ಜನರಿಗೆ ತಪ್ಪು ಸಂದೇಶ ನೀಡಬಾರದೆಂಬ ನೈತಿಕ ಪ್ರಜ್ಞೆಯು ಅವರ ಆಯ್ಕೆಯ ಅಧಿಕಾರವನ್ನು ಅಂತಃಕರಣವಾಗಿಸಿತ್ತು.

ಸಿದ್ಧ ಸಾಮಾಜಿಕ ಮೌಲ್ಯಗಳು ಮತ್ತು ಮನುಷ್ಯ ಸಂಬಂಧಗಳನ್ನು ಮಾದರಿಯಾಗಿ ಸ್ವೀಕರಿಸುತ್ತಲೇ ಚಲನಶೀಲತೆಯನ್ನು ಕಾಯ್ದುಕೊಂಡ ಮನಸ್ಸು ಅವರದಾಗಿತ್ತು. ಹೀಗಾಗಿ ರಾಜಕುಮಾರ್‌ ಚಿತ್ರಗಳು ಸದಭಿರುಚಿಯ ಸಾಮಾಜಿಕ ರೂಪಕಗಳಾದವು. ಇದು ಕಲಾವಿದರಾಗಿ ಡಾ. ರಾಜಕುಮಾರ್ ಅವರು ನೀಡಿದ ಮಹತ್ವದ ಕೊಡುಗೆ.

ಆದರೆ ಕೆಲವರಿಗೆ ರಾಜಕುಮಾರ್ ಅವರ ಕೊಡುಗೆಯ ಬಗ್ಗೆ ಅನಗತ್ಯ ಅನುಮಾನಗಳಿವೆ. ಅವರು ದೊಡ್ಡ ಕಲಾವಿದರೆಂಬುದು ನಿಜ, ಆದರೆ ಸಮಾಜಕ್ಕೆ, ಜನರಿಗೆ, ಅವರ ಕೊಡುಗೆ ಏನು? ಎಂಬ ಪ್ರಶ್ನೆಯನ್ನು ನಿರಂತರವಾಗಿ ಕೇಳುವವರು ಇದ್ದಾರೆ. ಕಲಾವಿದರಾಗಿ ಕಲೆಗೆ ಹಾಗೂ ಸದಭಿರುಚಿಗೆ ಅನ್ಯಾಯ ಮಾಡದಿದ್ದರೆ ಅದೇ ಒಂದು ಸಾಮಾಜಿಕ ಕೊಡುಗೆಯೆಂಬ ತಿಳುವಳಿಕೆ ಇಂಥವರಿಗೆ ಇಲ್ಲದಿರಬಹುದು. ಒಂದು ವೇಳೆ ಈ ತಿಳುವಳಿಕೆಯಿದ್ದರೂ ಜನರಿಂದ ಅಪಾರ ಮನ್ನಣೆ ಗಳಿಸಿದ ರಾಜಕುಮಾರ್ ಅವರಿಂದ ಒಂದಷ್ಟು ಲೌಕಿಕ ಸೇವೆಯ ಅಗತ್ಯ ವಿದೆಯೆಂದು ಭಾವಿಸಿರಬಹುದು. ರಾಜಕುಮಾರ್ ಅವರು ಏನೆಲ್ಲ ಮಾಡಿದರೆಂಬ ಮಾಹಿತಿ ಇಲ್ಲದೆ ಇರುವುದೂ ಇಂಥ ತಪ್ಪು ತಿಳುವಳಿಕೆಗೆ ಕಾರಣವಿರಬಹುದು. ಇಂತಹ ಸಕಾರಣಗಳ ಹೊರತಾಗಿ ಅಸಹನೆಯ ಆಕ್ಷೇಪಾನಂದರೂ ಕೆಲವರಿರಬಹುದು. ಈ ಎಲ್ಲ ಹಿನ್ನೆಲೆಯಲ್ಲಿ ರಾಜಕುಮಾರ್‌ ಅವರ ಕೆಲವು ಸಾಮಾಜಿಕ ಕಾರ್ಯಗಳನ್ನು ಸಾದರಪಡಿಸುವ ಅಗತ್ಯವಿದೆಯೆಂದು ಭಾವಿಸುತ್ತೇನೆ. ಡಾ. ರಾಜಕುಮಾರ್ ಅವರು ಸಮಾಜಕ್ಕೆ ಕೊಟ್ಟಿದ್ದೇನು. ಜನರಿಗೆ ಕೊಟ್ಟಿದ್ದೇನು ಎಂಬ ಪ್ರಶ್ನೆಗೆ ಆಯ್ದ ಕೆಲವು ಉದಾಹರಣೆಗಳ ಮೂಲಕ ಉತ್ತರಿಸಬಯಸುತ್ತೇನೆ.

೧. ರಾಜಕುಮಾರ್‌ ಅವರು ಚಲನಚಿತ್ರ ಕಲಾವಿದರಾದ ಮೇಲೆಯೂ ರಂಗಭೂಮಿಯನ್ನು ಮರೆಯಲಿಲ್ಲ. ಕಷ್ಟದಲ್ಲಿರುವ ವೃತ್ತಿ ರಂಗಭೂಮಿ ಸಂಸ್ಥೆಗಳಿಗಾಗಿ ಸಹಾಯಾರ್ಥ ನಾಟಕಗಳನ್ನಾಡಿ ಹೆಚ್ಚು ಹಣ ಸಂಗ್ರಹಕ್ಕೆ ಕಾರಣವಾದರು. ಬಿಡುವಿನ ಸಂದರ್ಭಗಳಲ್ಲಿ ಯಾರು ಕರೆದರೂ ಬಂದು ನಾಟಕಗಳಲ್ಲಿ ಅಭಿನಯಿಸಿದರು. ರಂಗಭೂಮಿ ಕಲಾವಿದರ ಮಕ್ಕಳ ಮದುವೆಗಳಿಗೂ ಸಹಾಯಾರ್ಥ ಪ್ರದರ್ಶನ ಕೊಟ್ಟ ಉದಾಹರಣೆಗಳಿವೆ. ಕರೆದ ಕಡೆಯೆಲ್ಲ ಹೋಗಲು ಸಾಧ್ಯವಾಗದೆ ಇದ್ದಿರಬಹುದಾದರೂ ಈ ಸಹಾಯಾರ್ಥ ನಾಟಕ ಪ್ರದರ್ಶನಗಳನ್ನು ಮರೆಯಲಾಗದು.

೨. ಕರ್ನಾಟಕದ ಜನರು ೧೯೬೧ರಲ್ಲಿ ಪ್ರವಾಹ ಪೀಡಿತರಾಗಿ ಕಷ್ಟನಷ್ಟಗಳಿಗೆ ಒಳಗಾದಾಗ ‘ಪ್ರಜಾವಾಣಿ’ ಪತ್ರಿಕೆಯ ಆಶಯದಂತೆ ರಾಜಕುಮಾರ್ ಅವರು ಕನ್ನಡದ ಎಲ್ಲ ಚಲನ ಚಿತ್ರ ಕಲಾವಿದರ ನೇತೃತ್ವ ವಹಿಸಿ ರಾಜ್ಯಾದ್ಯಂತ ಪ್ರವಾಸ ಮಾಡಿ ಸಂತ್ರಸ್ತ ಜನರಿಗಾಗಿ ನಿಧಿ ಸಂಗ್ರಹ ಮಾಡಿದರು. ಇದೊಂದು ಅಪರೂಪದ ಸಾಮಾಜಿಕ ಕಾರ್ಯವಾಗಿತ್ತು.

೩. ಡಬ್ಬಿಂಗ್ ಚಿತ್ರಗಳ ಹಾವಳಿಯಿಂದ ಕನ್ನಡ ಚಿತ್ರರಂಗಕ್ಕೆ ಧಕ್ಕೆಯಾದಾಗ ಡಬ್ಬಿಂಗ್ ವಿರೋಧಿ ಚಳವಳಿಗೆ ಬೆಂಬಲವಾಗಿ ನಿಂತರು. ಕಡೇ ಉಸಿರಿರುವವರೆಗೆ ಕನ್ನಡ ಚಿತ್ರಗಳ ಉಳಿವಿಗಾಗಿ ಚಿತ್ರೋದ್ಯಮದ ಹೋರಾಟಗಳಲ್ಲಿ ಭಾಗವಹಿಸಿದರು.

೪. ಬಹು ಮುಖ್ಯವಾದ ಅಂಶವೊಂದನ್ನು ಇಲ್ಲಿ ಹೇಳಬೇಕು. ಚಿತ್ರರಂಗದ ಯಾವುದೇ ಕಲಾವಿದರು – ತಂತ್ರಜ್ಞರು ಖಾಯಿಲೆ ಬಿದ್ದಾಗ ರಾಜಕುಮಾರ್ ಅವರು ಸ್ಪಂದಿಸುತ್ತಿದ್ದ ರೀತಿ ಅಪರೂಪದ್ದು. ತಾವಾಗಿಯೇ ಹೋಗಿ ಅಥವಾ ಶ್ರೀಮತಿ ಪಾರ್ವತಮ್ಮನವರನ್ನು ಕಳಿಸಿ ಒಂದಿಷ್ಟು ಧನ ಸಹಾಯ ಮಾಡಿ ಆರ್ಥಿಕ ಹಾಗೂ ನೈತಿಕ ಬೆಂಬಲ ನೀಡುತ್ತಿದ್ದರು. ಆದರೆ ಈ ಕೆಲಸಕ್ಕೆ ಪ್ರಚಾರ ಬಯಸುತ್ತಿರಲಿಲ್ಲ. ನಾನು ಈ ಬಗ್ಗೆ ಅವರಲ್ಲಿ ಕೇಳಿದಾಗ ‘ಬಲಗೈಯಲ್ಲಿ ಕೊಟ್ಟಿದ್ದು ಎಡಗೈಗೆ ಗೊತ್ತಾಗಬಾರದು. ಇದಕ್ಕೆಲ್ಲ ಪ್ರಚಾರ ಯಾಕೆ’ ಎಂದು ನಸುನಕ್ಕರು. ಇವರಿಂದ ನೂರಾರು ಜನರಿಗೆ ಸಹಾಯವಾದದ್ದು ಮಾತ್ರ ಪ್ರಚಾರ ರಹಿತ ಸತ್ಯ. ಈ ರೀತಿಯ ಸಹಾಯ ರಾಜ್ ಕುಟುಂಬದವರಿಂದ ಈಗಲೂ ಮುಂದುವರೆದಿದೆ.

೫. ತಮ್ಮ ಅಭಿನಯದ ಚಿತ್ರಗಳು ಸೋತಾಗ ನಿರ್ಮಾಪಕರಿಗೆ ನೆರವಾದ ನಟರ ಬಗ್ಗೆ ಈಗ ಸಾಕಷ್ಟು ಪ್ರಚಾರವಾಗುತ್ತಿದೆ. ಹೀಗೆ ನಿರ್ಮಾಪಕರಿಗೆ ರಾಜಕುಮಾರ್ ಅವರು ಅವತ್ತಿನ ದಿನಗಳಲ್ಲೇ ನೆರವು ನೀಡಿದ ಅಂಶ ಕೆಲವರಿಗೆ ಮಾತ್ರ ಗೊತ್ತಿದೆ. ರಾಜಕುಮಾರ್ ಅವರ ಚಿತ್ರಗಳಿಂದ ತಮಗೆ ಲಾಭವಾಗಲಿಲ್ಲ ಎಂದು ಕೆಲವರು ಗೊಣಗುತ್ತಿದ್ದ ಸುದ್ದಿ ರಾಜ್ ಕಿವಿಗೆ ಬೀಳುತ್ತದೆ. ಆದರಿದು ಪೂರ್ಣಸತ್ಯವಾಗಿರಲಿಲ್ಲ. ರಾಜಕುಮಾರ್ ಅವರು ಆಗ ಪ್ರಸಿದ್ಧರಾಗಿದ್ದ ಒಬ್ಬ ಪ್ರೊಡಕ್ಷನ್ ಮ್ಯಾನೇಜರ್ ಅವರನ್ನು ಕರೆದು ‘ಯಾರ್‍ಯಾರು ಹೀಗೆ ಮಾತಾಡುತ್ತಿದ್ದಾರೆ ಪತ್ತೆ ಹಚ್ಚಿ ಹೇಳಿ’ ಎಂದು ಕೇಳಿದರು. ಆ ಪ್ರೊಡಕ್ಷನ್ ಮ್ಯಾನೇಜರ್ ಒಟ್ಟು ಹನ್ನೊಂದು ಜನ ನಿರ್ಮಾಪಕರನ್ನು ಗುರುತಿಸಿದರು. ರಾಜ್ ಅವರು ಒಬ್ಬೊಬ್ಬ ನಿರ್ಮಾಪಕರನ್ನೂ, ಕರೆದು ‘ನಿಮಗೆ ಫ್ರೀ ಡೇಟ್ಸ್ ಕೊಡುತ್ತೇನೆ. ಮತ್ತೊಂದು ಸಿನಿಮಾ ಮಾಡಿ’ ಎಂದು ಸಹಾಯ ಹಸ್ತ ನೀಡಿದರು. ಈ ನಿರ್ಮಾಪಕರ ಮಾಹಿತಿ ನೀಡಿದ ಪ್ರೊಡಕ್ಷನ್ ಮ್ಯಾನೇಜರ್‌ಗೂ ‘ಫ್ರೀ ಡೇಟ್ಸ್ ಕೊಡುವೆ. ನೀವೇ ಒಂದು ಸಿನಿಮಾ ಮಾಡಿ’ ಎಂದು ವಾಗ್ದಾನ ಮಾಡಿದರು. ಹೀಗೆ ನಷ್ಟಕ್ಕೊಳಗಾದೆವೆಂದು ಪ್ರಚಾರ ಮಾಡುತ್ತಿದ್ದ ನಿರ್ಮಾಪಕರಿಗೆ ಅಂದಿನ ದಿನಗಳಲ್ಲೇ ಸ್ವಯಂ ಅಪೇಕ್ಷೆಯಿಂದ ನೆರವಿಗೆ ನಿಂತ ರಾಜಕುಮಾರ್ ಅವರು ತಮ್ಮ ಚಿತ್ರಗಳಿಂದ ಬೇರೆಯವರಿಗೇಕೆ ನಷ್ಟವಾಗ ಬೇಕೆಂದು ಭಾವಿಸಿ ಪಾರ್ವತಮ್ಮನವರಿಗೆ ಪ್ರೇರಣೆ ನೀಡಿದ ಫಲವಾಗಿ ವಜೇಶ್ವರಿ ಕಂಬೈನ್ಸ್ ಸಂಸ್ಥೆ ಹುಟ್ಟಿಕೊಂಡಿತು. ವಿತರಣೆ ಮತ್ತು ನಿರ್ಮಾಣಕ್ಕೆ ರಾಜ್ ಕುಟುಂಬ ಕೈ ಹಾಕಿತು.

೬. ಕರ್ನಾಟಕದ ಜಿಲ್ಲಾ ಕೇಂದ್ರಗಳಲ್ಲಿ ನಿರ್ಮಾಣವಾಗಿರುವ ಅನೇಕ ರಂಗಮಂದಿರಗಳಿಗೆ ಸಹಾಯಾರ್ಥ ರಸಮಂಜರಿ ಕಾರ್ಯಕ್ರಮಗಳನ್ನು ನೀಡಿದ ಕೀರ್ತಿ ರಾಜಕುಮಾರ್ ಅವರಿಗೆ ಸಲ್ಲುತ್ತದೆ. ಆಯಾ ಜಿಲ್ಲೆಗೆ ತಮ್ಮ ತಂಡದೊಂದಿಗೆ ಹೋಗಿ ಪ್ರದರ್ಶನ ನೀಡಿ ಧನಸಂಗ್ರಹ ಮಾಡಿಕೊಟ್ಟದ್ದು ಒಂದು ಸಾಂಸ್ಕೃತಿಕ ಕೆಲಸ.

೭. ರಾಜಕುಮಾರ್‌ ಅವರು ‘ರಸಮಂಜರಿ’ ಕಾರ್ಯಕ್ರಮಗಳಿಂದ ಬಂದ ಗೌರವಧನ ಹಾಗೂ ಗಾಯನದಿಂದ ಬಂದ ಸಂಭಾವನೆಯ ಬಹುಪಾಲನ್ನು ‘ಶಕ್ತಿಧಾಮ’ ಸಂಸ್ಥೆಗೆ ನೀಡುತ್ತಾ ಬಂದರು. ‘ಶಕ್ತಿಧಾಮ’ವು ಪಾರ್ವತಮ್ಮನವರ ನೇತೃತ್ವದಲ್ಲಿ ನಡೆಯುತ್ತಿರುವ ಸಂಸ್ಥೆ: ಬೀದಿಗೆ ಬಿದ್ದ ಹೆಣ್ಣು ಮಕ್ಕಳಿಗೆ ಪುನರ್ವಸತಿ ಕಲ್ಪಿಸುವ ಈ ಸಂಸ್ಥೆ ಮೈಸೂರಿನಲ್ಲಿದ್ದು ನೂರಾರು ಮಹಿಳೆಯರಿಗೆ ಆಶ್ರಯ ನೀಡಿದೆ; ನೀಡುತ್ತಿದೆ. ಇದೊಂದು ಶ್ಲಾಘನೀಯ ಸಾಮಾಜಿಕ ಕಾರ್ಯವಾಗಿದೆ.

೮. ದಾದಾಫಾಲ್ಕೆ ಪ್ರಶಸ್ತಿಯ ಹಣವನ್ನು ರಾಜಕುಮಾರ್ ಅವರು ಕನ್ನಡ ಸಾಹಿತ್ಯ ಪರಿಷತ್ತಿಗೆ ನೀಡಿದರು. ಒಂದು ಸಾಹಿತ್ಯ ದತ್ತಿ ಸ್ಥಾಪನೆಗೆ ಕಾರಣರಾದರು.

೯. ಗೋಕಾಕ್ ಚಳವಳಿಯೆಂದೇ ಪ್ರಸಿದ್ಧವಾದ ಕನ್ನಡಪರ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡ ರಾಜಕುಮಾರ್ ಅವರು ತಿಂಗಳಾನು ಕಾಲ ಕರ್ನಾಟಕದಾದ್ಯಂತ ಸಂಚರಿಸಿ ಜಾಗೃತಿ ಮೂಡಿಸಿದ್ದು ಎಂದೂ ಮರೆಯಲಾಗದ ಸನ್ನಿವೇಶವಾಗಿದೆ. ಇಡೀ ಕನ್ನಡ ಚಿತ್ರೋದ್ಯಮದ ತೊಡಗುವಿಕೆಯನ್ನು ಇಲ್ಲಿ ನೆನೆಯಬೇಕು. ಅಂತೆಯೇ ಕನ್ನಡ ಹಾಗೂ ಕರ್ನಾಟಕದ ವಿಷಯದಲ್ಲಿ ನಡೆಯುವ ಹೋರಾಟಗಳಿಗೆ ರಾಜಕುಮಾರ್ ಅವರ ಸಕ್ರಿಯ ಬೆಂಬಲ ಸದಾ ಇದ್ದದ್ದು ಇಲ್ಲಿ ಸ್ಮರಣೀಯ.

೧೦. ಅಪಾರ ಕೀರ್ತಿ ಮತ್ತು ಹಣ ಸಂಪಾದಿಸಿದ್ದ ರಾಜಕುಮಾರ್ ಅವರು ಚಿತ್ರೋದ್ಯಮದ ಮೂಲ ಸೌಕರ್ಯಗಳಿಗಾಗಿ ಏನು ಮಾಡಿದರು – ಎಂದು ಹಿಂದಿನಿಂದಲೂ ಕೆಲವರು ಕೇಳುತ್ತಿರುವುದುಂಟು. ರಾಜಕುಮಾರ್ ಅವರು ಕೀರ್ತಿ ಮತ್ತು ಜನರ ಪ್ರೀತಿಯನ್ನು ಸಂಪಾದಿಸಿದಷ್ಟು, ಹಣವನ್ನು ಸಂಪಾದಿಸಲಿಲ್ಲ. ತಾವು ಅಭಿನಯಿಸಿದ ಅನೇಕ ಚಿತ್ರಗಳಿಗೆ ಪೂರ್ಣ ಸಂಭಾವನೆಯನ್ನೂ ಪಡೆಯದೆ ಕೆಲಸ ಮುಗಿಸಿಕೊಟ್ಟರು. ನೂರಾರು ಚಿತ್ರಗಳಲ್ಲಿ ನಟಿಸಿದ ನಂತರವೂ ಅವರು ಬೆಂಗಳೂರಲ್ಲಿ ಮನೆಯನ್ನು ಖರೀದಿಸಿದಾಗ ೨ ಲಕ್ಷ ರೂಪಾಯಿಯ ಕೊರತೆಯುಂಟಾಗಿ ನಿರ್ಮಾಪಕರೊಬ್ಬರಿಂದ ಸಾಲ ಮಾಡಿದ್ದನ್ನು ಅವರೇ ನನಗೆ ಹೇಳಿದ್ದರು. ವೃತ್ತಿ ರಂಗಭೂಮಿ ಸಂಸ್ಥೆಗಳ ಮಾಲೀಕರು ಮತ್ತು ಚಿತ್ರ ನಿರ್ಮಾಪಕ ರನ್ನು ‘ಅನ್ನದಾತ’ರೆಂದು ಭಾವಿಸಿದ ರಾಜಕುಮಾರ್, ಅವರಿಗೆಂದೂ ಹಣಕ್ಕಾಗಿ ತೊಂದರೆ ಕೊಡಲಿಲ್ಲ.

೧೧. ತಮ್ಮ ಜೊತೆಯ ಕಲಾವಿದರಿಗೆ ರಾಜಕುಮಾರ್ ಅವರು ಹೇಗೆ ಸಹಾಯ ಹಸ್ತ ನೀಡುತ್ತಿದ್ದರು ಎಂಬುದಕ್ಕೆ ಎರಡು ಘಟನೆಗಳನ್ನು ಹೇಳಬಹುದು.

ಅ) ಶ್ರೀಮತಿ ಪಂಡರಿಬಾಯಿಯವರು ನಿರ್ಮಿಸಿದ ಒಂದು ಚಿತ್ರದಲ್ಲಿ ರಾಜಕುಮಾರ್ ಅವರು ನಾಯಕರಾಗಿ ಅಭಿನಯಿಸಿದ್ದರು. ಚಿತ್ರ ಬಿಡುಗಡೆಯಾದರೂ ಇವರ ಸಂಭಾವನೆಯ ಸ್ವಲ್ಪ ಭಾಗ ಬಾಕಿಯಿತ್ತು. ಪಂಡರಿಬಾಯಿಯವರು ಇನ್ನೊಂದು ಚಿತ್ರ ಆರಂಭಿಸಿದರು. ಈ ಚಿತ್ರಕ್ಕೆ ಬೇರೆ ನಟರನ್ನು ನಾಯಕರಾಗಿ ಗೊತ್ತು ಮಾಡಿದರು. ಆಗ ಮದ್ರಾಸಿನಲ್ಲಿ ಬೇರೆ ಭಾಷೆಯ ಚಿತ್ರಗಳಿಗಾಗಿ ಹಾಕಿದ ಸೆಟ್‌ನಲ್ಲಿ ಅಲ್ಪಸ್ವಲ್ಪ ಬದಲಾಯಿಸಿ ಕನ್ನಡ ಚಿತ್ರಗಳ ಚಿತ್ರೀಕರಣ ನಡೆಸಲಾಗುತ್ತಿತ್ತು. ಯಾಕೆಂದರೆ ಕನ್ನಡ ನಿರ್ಮಾಪಕರಿಗೆ ಶ್ರೀಮಂತ ಸೆಟ್ ಹಾಕುವುದು ದುಬಾರಿಯಾಗಿತ್ತು. ಆಗ ಸ್ಟುಡಿಯೋದಲ್ಲಿ ಸಿದ್ಧವಾಗಿದ್ದ ಒಂದು ಸೆಟ್ ಮೂರು ದಿನಗಳ ಕಾಲ ಬಿಡುವಾಗಿತ್ತು. ಆನಂತರ ಅದನ್ನು ತೆಗೆದು ಹಾಕಲಾಗುತ್ತಿತ್ತು. ಈ ಮೂರು ದಿನ ಪಂಡರಿಬಾಯಿಯವರ ಸಿನಿಮಾದ ಚಿತ್ರೀಕರಣ ಮಾಡಲು ನಾಯಕನಟರ ಒಪ್ಪಿಗೆಯೂ ಸಿಕ್ಕಿತ್ತು. ಆದರೆ ಆ ನಾಯಕನಟರು ನಾಳೆ ಚಿತ್ರೀಕರಣ ಎನ್ನುವಾಗ ಬರಲಾಗುವುದಿಲ್ಲ ಎಂದುಬಿಟ್ಟರು. ಈಗ ಸಿದ್ಧವಾಗಿರುವ ಸೆಟ್ ಬಿಟ್ಟರೆ ಅಂಥದನ್ನು ಸ್ವಂತವಾಗಿ ಹಾಕಿಸುವ ಶಕ್ತಿಯಿಲ್ಲ. ಏನು ಮಾಡುವುದು ? ಕಡೆಗೆ ರಾಜಕುಮಾರ್‌ ಅವರನ್ನೇ ಪಾತ್ರ ಮಾಡಲು ವಿನಂತಿಸೋಣವೆಂದುಕೊಂಡರು. ‘ಹಿಂದಿನ ಸಂಭಾವನೆ ಸ್ವಲ್ಪ ಬಾಕಿ ಇದೆ. ಜೊತೆಗೆ ಕೈ ಕೊಟ್ಟ ನಟನ ಜಾಗಕ್ಕೆ ಕೂಡಲೇ ಬನ್ನಿ ಎಂದು ಹೇಗೆ ಕೇಳುವುದು?’ ಎಂಬ ಚಿಂತೆ ಪಂಡರಿಬಾಯಿಯವರದು. ಅದಾಗಲೇ ರಾಜಕುಮಾರ್‌ ತಾರಾಮೌಲ್ಯ ಪಡೆದಿದ್ದರು. ಆದರೂ ಚಿತ್ರತಂಡ ಧೈರ್ಯಮಾಡಿ ರಾಜಕುಮಾರ್‌ ಬಳಿಗೆ ಹೋಯಿತು. ಪಂಡರಿಬಾಯಿಯವರು ಸತ್ಯವನ್ನೇ ತೆರೆದಿಟ್ಟರು. ರಾಜಕುಮಾರ್‌ ಅವರು ಕೂಡಲೇ ಒಪ್ಪಿದರು. ‘ಚಿಂತೆ ಮಾಡ್ಬೇಡಿ ಕಲಾವಿದರಾದ ನಿಮ್ಮ ಕಷ್ಟ ನನ್ ಕಷ್ಟಾನೂ ಹೌದು, ನಾಳೆಯಿಂದ ಮೂರುದಿನ ಹೇಗೊ ಬಿಡುವು ಮಾಡ್ಕೊಂಡ್ ಬರ್‍ತೇನೆ. ಆಮೇಲೆ ಬೇರೆ ಡೇಟ್ಸ್ ಕೊಡ್ತೇನೆ’ ಎಂದು ಹೇಳಿದರು. ಹಿಂದಿನ ಬಾಕಿ ಹಣವನ್ನೂ ಕೇಳಲಿಲ್ಲ. ಹೊಸ ಚಿತ್ರದ ಮುಂಗಡ ಹಣವನ್ನೂ ಕೇಳಲಿಲ್ಲ. ಈ ಘಟನೆಯನ್ನು ಪಂಡರಿಬಾಯಿಯವರ ಸೋದರಿ ಮೈನಾವತಿಯವರು ಹೇಳಿದ್ದರು.

ಆ) ಎಂ.ಪಿ. ಶಂಕರ್ ಅವರು ನಿರ್ಮಿಸಿದ ‘ಗಂಧದ ಗುಡಿ’ಯ ನಾಯಕ ಪಾತ್ರವನ್ನು ಕೇವಲ ಅರವತ್ತು ಸಾವಿರ ರೂಪಾಯಿ ಸಂಭಾವನೆಗೆ ಮಾಡಲು ರಾಜಕುಮಾರ್ ಒಪ್ಪಿದರು. ಚಿತ್ರ ಬಿಡುಗಡೆಯಾಗಿ ಶತದಿನ ಪೂರೈಸಿ ಯಶಸ್ವಿಯಾಯಿತು. ರಾಜಕುಮಾರ್ ಅವರು ಇನ್ನಿಲ್ಲವಾದ ಮೇಲೆ ಒಮ್ಮೆ ನನಗೆ ಸಿಕ್ಕಿದ ಎಂ.ಪಿ. ಶಂಕರ್ ನೋವು ತುಂಬಿ ಹೇಳಿದರು: ‘ನಾನು ಅರವತ್ತು ಸಾವಿರ ಕೊಡ್ತೇನೆ ಅಂದಿದ್ದೆ. ಕೊಟ್ಟಿದ್ದು ನಲವತ್ತು ಮಾತ್ರ. ಈಗಲೂ ಇಪ್ಪತ್ತು ಬಾಕಿ ಇದೆ. ರಾಜಣ್ಣ ಒಂದು ದಿನವೂ ಒತ್ತಾಯಿಸಲಿಲ್ಲ. ಈಗ ಅವರೇ ಇಲ್ಲ. ಅವರ ಸಹಕಾರ ಎಂದೂ ಮರೆಯೊಹಾಗಿಲ್ಲ ಇದು ರಾಜಕುಮಾರ್ ಮಾದರಿ.

೧೨. ರಾಜ್ಯ ಮತ್ತು ದೇಶಕ್ಕೆ ಸಂಕಷ್ಟ ಎದುರಾದಾಗ ತಮ್ಮ ವತಿಯಿಂದ ಸರ್ಕಾರದ ನಿಧಿಗೆ ಹಣ ನೀಡಿದ್ದಲ್ಲದೆ ಬೀದಿ ಸಂಚಾರದ ಮೂಲಕ ಧನ ಸಂಗ್ರಹ ಮಾಡಿಕೊಟ್ಟ ಅನೇಕ ಉದಾಹರಣೆಗಳಿವೆ (ಉದಾ : ಕಾರ್ಗಿಲ್ ಯುದ್ಧ – ಇತ್ಯಾದಿ).

೧೩. ನೇತ್ರದಾನವನ್ನು ಒಂದು ಚಳವಳಿಯ ನೆಲೆಗೆ ಕೊಂಡೊಯ್ದ ಕ್ರಿಯೆಗೆ ರಾಜಕುಮಾರ್ ಅವರ ಚಾಲಕ ಶಕ್ತಿಯೂ ಒಂದು ಮುಖ್ಯ ಕಾರಣವಾಯಿತೆಂಬುದನ್ನು ಮರೆಯಲಾಗದು.

೧೪. ತಾವು ೧೦೦ ಸಿನಿಮಾಗಳನ್ನು ಪೂರೈಸಿದ ಸಂದರ್ಭದಲ್ಲಿ ಬಡ ವಿದ್ಯಾರ್ಥಿಗಳಿಗಾಗಿ ಶಿಕ್ಷಣ ನಿಧಿ ಸ್ಥಾಪಿಸಿ ಆರಂಭಿಕ ಇಡುಗಂಟಾಗಿ ೧೦,೦೦೧ ರೂಪಾಯಿಗಳನ್ನು ನೀಡಿದರು. ಈ ನಿಧಿಗೆ ಸಂಬಂಧಿಸಿದ ಸಮಿತಿಯ ಅಧ್ಯಕ್ಷರಾಗಿ ಸಿ.ವಿ.ಎಲ್. ಶಾಸ್ತ್ರಿಯವರು ಕಾರ್ಯ ನಿರ್ವಹಿಸಿದರು.

೧೫. ತುಂಬಾ ಹಿಂದೆಯೇ ಮಾನಸಿಕ ಅಸ್ವಸ್ಥರೋಗಿಗಳ ಕಲ್ಯಾಣ ನಿಧಿಗೆ (೧,೦೦೦-೦೦) ಅಶಕ್ತ ಪೋಷಕರ ಸಭಾಗೆ (೧,೦೦೦-೦೦), ಮತ್ತು ಅನಾಥ ಮಕ್ಕಳ ಕಲ್ಯಾಣ ನಿಧಿಗೆ (೧,೦೦೦-೦೦) ಧನ ಸಹಾಯ ಮಾಡಿದರು.

೧೬. ಮೈಸೂರು ಸವಿತಾ ಸಾರ್ವಜನಿಕರ ವಿದ್ಯಾರ್ಥಿ ನಿಲಯಕ್ಕೆ ಧನ ಸಹಾಯ (೧,೫೦೦-೦೦).

೧೭. ಅನಾಥ ಮಕ್ಕಳಿಗೆ ಪುಸ್ತಕ ಕೊಡುವುದಕ್ಕಾಗಿ ಮಹಿಳಾ ಸೇವಾ ಸಮಾಜಕ್ಕೆ ಕೊಡುಗೆ (೧,೫೦೦-೦೦)

೧೮. ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಎಂ.ಎ. ಪದವೀಧರರಿಗೆ ಪದಕ ನೀಡಲು ಕೊಡುಗೆ (೫,೦೦೦-೦೦).

೧೯. ಕರ್ನಾಟಕ ವಿಶ್ವವಿದ್ಯಾಲಯದ ಇತಿಹಾಸ ವಿಭಾಗಕ್ಕೆ ಪದಕಕ್ಕಾಗಿ ಕೊಡುಗೆ (೪,೦೦೦-೦೦).

೨೦. ಕೃಷಿ ವಿಶ್ವವಿದ್ಯಾಲಯಕ್ಕೆ ವಿದ್ಯಾರ್ಥಿ ವೇತನಕ್ಕಾಗಿ ಕೊಡುಗೆ (೧೦,೦೦೦-೦೦).

೨೧. ಮಾರ್ಥಾಸ್ ಆಸ್ಪತ್ರೆಯ ಗ್ರಂಥಾಲಯಕ್ಕಾಗಿ ಕೊಡುಗೆ (೨,೦೦೦-೦೦).

೨೨. ಮೈಸೂರು ವಿಶ್ವವಿದ್ಯಾಲಯಕ್ಕೆ ನಾಟಕ ಕಲೆಯ ವಿಕಾಸಕ್ಕಾಗಿ ಕೊಡುಗೆ (೬,೦೦೦-೦೦)

ಹೀಗೆ ಉದಾಹರಿಸುತ್ತಾ ಹೋಗಬಹುದು. ಇವತ್ತಿಗೆ ಹೋಲಿಸಿದರೆ ಹಣದ ಮೊತ್ತ ಕಡಿಮೆ ಎನ್ನಿಸಬಹುದಾದರೂ ಸುಮಾರು ೬೦ ಮತ್ತು ೭೦ರ ದಶಕದ ಆವತ್ತಿಗೆ ಈ ಮೊತ್ತ ಹೆಚ್ಚು ಮೌಲ್ಯಯುತವಾದದ್ದು. ಅವತ್ತಿನ ಒಂದು ಸಾವಿರ, ಐದು ಸಾವಿರ, ಹತ್ತು ಸಾವಿರ ರೂಪಾಯಿಗಳು ಇವತ್ತಿನ ಎಷ್ಟು ರೂಪಾಯಿಗಳಿಗೆ ಸಮ ಎಂದು ಲೆಕ್ಕ ಹಾಕಿದರೆ ಮೊತ್ತದ ಮಹತ್ವ ಗೊತ್ತಾಗುತ್ತದೆ. ಹಣದ ಮೊತ್ತ ಎಷ್ಟು ಎನ್ನುವುದಷ್ಟೇ ಮುಖ್ಯವಲ್ಲ, ರಾಜಕುಮಾರ್ ಅವರ ಸಮಾಜಮುಖಿ ಮನಸ್ಸು ಮುಖ್ಯ ಎನ್ನುವುದನ್ನೂ ಅರ್ಥ ಮಾಡಿಕೊಳ್ಳಬೇಕು. ಅಲ್ಲದೆ ರಾಜಕುಮಾರ್ ಅವರು ಅಂದು ತೆಗೆದುಕೊಳ್ಳುತ್ತಿದ್ದ ಸಂಭಾವನೆಗೆ ಹೋಲಿಸಿದರೆ ಕೊಡುಗೆಗಳ ಮೊತ್ತದ ಮಹತ್ವ ಎಷ್ಟೆಂದು, ಮನಸ್ಸಿದ್ದವರಿಗೆಲ್ಲ ಮನವರಿಕೆಯಾಗುತ್ತದೆ.

ಕೆಲವು ‘ಬುದ್ಧಿವಂತರು’ ರಾಜಕುಮಾರ್ ಜನರಿಗೇನು ಕೊಟ್ಟರು ? ಎಂದು ಕುಚೋದ್ಯ ದಿಂದ ಕೇಳುತ್ತಿರುವಾಗಲೇ ಅಸಂಖ್ಯಾತ ಜನರು ಅವರ ಕೊಡುಗೆಯನ್ನು ಅನೇಕ ವಿಧದಲ್ಲಿ ನೆನೆಯುತ್ತಾರೆ. ನಾನು ಮೇಲೆ ಉದಾಹರಿಸಿದ ಲೌಕಿಕ ಕೊಡುಗೆಗಳಲ್ಲದೆ ಸದಭಿರುಚಿ ಮತ್ತು ಸಂಬಂಧಗಳ ಸ್ವರೂಪವನ್ನು ಅಂತಃಕರಣ ಪೂರ್ವಕವಾಗಿ ನೆನೆಯುವವರು ರಾಜ್ಯಾದ್ಯಂತ ಇದ್ದಾರೆ. ಒಮ್ಮೆ ನಾನು ಆಟೋದಲ್ಲಿ ಹೋಗುತ್ತಿದ್ದಾಗ ನನ್ನನ್ನು ಗುರುತು ಹಿಡಿದ ಚಾಲಕ ರಂಗನಾಥ್ – ರಾಜಕುಮಾರ್ ಅವರ ಬಗ್ಗೆ ಮಾತಾಡತೊಡಗಿದರು ‘ರಾಜಣ್ಣ ಒಬ್ಬ ಮಹಾತ್ಮ ಸಾರ್‌’ ಎಂದರು. ‘ಮಹಾತ್ಮ ಅನ್ನೋದು ಸ್ವಲ್ಪ ಜಾಸ್ತಿ ಆಯ್ತು?’ ಎಂದೆ ನಾನು, ‘ಸಾರ್ ನನ್ನಂಥೋರು ಅವರ ಸಿನಿಮಾ ನೋಡಿ ಬದುಕಿನ ಪಾಠ ಕಲ್ತಿದ್ದೇವೆ. ಅಣ್ಣತಂಗಿ ಹೇಗಿರ್‍ಬೇಕು. ಅಪ್ಪ ಅಮ್ಮನ್ನ ಮಕ್ಕಳು ಹೇಗ್ ನೋಡ್ಕೊಬೇಕು, ಅಣ್ಣ ತಮ್ಮಂದಿರ ಸಂಬಂಧ ಎಂಥದು. ಗಂಡ ಹೆಂಡ್ತಿ ಪ್ರೀತಿ ಎಷ್ಟು ಮುಖ್ಯ. ಗುರುಹಿರಿಯರನ್ನು ಹೆಂಗ್ ನಡಿಸ್ಕೋಬೇಕು, ನೀತಿ ಬಿಟ್ಕೊಡ್ದೆ ಜೀವನದಲ್ಲಿ ಹೆಂಗ್ ಮುಂದಕ್ ಬರ್‍ಬೇಕು – ಇದೆಲ್ಲ ನಮ್ಮಂಥೋರ್‌ ಕಲ್ತಿದ್ದು ರಾಜಣ್ಣೂರ್ ಸಿನಿಮಾಗಳನ್ನ ನೋಡಿ ಸಾರ್, ಪಾಠಗೀಟ ಓದಿ ಕಲೀಲಿಲ್ಲ’ ಎಂದು ಆ ಚಾಲಕ ವಿವರಿಸುತ್ತಾ ಹೋದರು. ಅವರ ಮಾತುಗಳು ರಾಜಕುಮಾರ್ ಅವರ ಭಾವಕೋಶ ದಷ್ಟೇ ಮೌಲ್ಯ ತುಂಬಿಕೊಂಡಿದ್ದವು. ರಾಜಕುಮಾರ್ ಅವರು ಜನರಿಗೆ ಕೊಟ್ಟ ಮೌಲ್ಯಮಾದರಿಗಳನ್ನು ಮುಂದಿಟ್ಟಿದ್ದವು.

ಡಾ. ರಾಜಕುಮಾರ್ ಅವರು ಹೆಚ್ಚು ಓದದೆ ವಿನಯವನ್ನೇ ವಿದ್ವತ್ತಾಗಿಸಿದರು; ಹಣಕ್ಕೆ ಅಂಟಿಕೊಳ್ಳದೆ ಶ್ರೀಮಂತರಾದರು; ಜಾತಿಯನ್ನು ಮೀರಿದ ಸಾಮಾಜಿಕ ರೂಪಕವೂ ಆದರು. ಇವರ ವಿನಯವಂತಿಕೆಯು ಶಿವರಾಜಕುಮಾರ್, ರಾಘವೇಂದ್ರ ರಾಜಕುಮಾರ್ ಮತ್ತು ಪುನೀತ್‌ರಾಜಕುಮಾರ್ ಅವರ ಬದುಕಿನ ಭಾಗವಾಗಿರುವುದನ್ನು ಮೆಚ್ಚಲೇಬೇಕು. ತಂದೆಯ ಕೆಲವು ಗುಣಗಳನ್ನು ಅಳವಡಿಸಿಕೊಂಡ ಈ ಮೂವರು ಮಕ್ಕಳು ತಮ್ಮ ಚಲನಚಿತ್ರಗಳ ಕಥಾವಸ್ತುಗಳ ಆಯ್ಕೆಯಲ್ಲೂ ತಂದೆಯ ಆದರ್ಶವನ್ನು ಪಾಲಿಸಬೇಕೆಂಬುದು ಜನರ ಆಶಯವಾಗಿದೆ. ಈ ಆಶಯವು ಆತಂಕಕ್ಕೊಳಗಾಗಿದೆ ಎಂಬ ವಿಷಾದ ನನ್ನದಾಗಿದೆ. ಆದರೂ ನನ್ನಂಥವರ ವಿಷಾದ ಅರ್ಥವಾದೀತೆಂಬ ಆಶಾವಾದ ಇನ್ನೂ ಉಳಿದಿದೆ. ಯಾಕೆಂದರೆ ರಾಜಕುಮಾರ್ ಅವರ ಸಾಂಸ್ಕೃತಿಕ ವಿವೇಕಕ್ಕೆ ಸಾವಿಲ್ಲ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಆಖೈರು ಎಚ್ಚರಿಕೆ
Next post ಕನ್ನಡದ ಸಿರಿಕಂಠ ಶ್ರೀ ಕಾಳಿಂಗರಾಯ

ಸಣ್ಣ ಕತೆ

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

cheap jordans|wholesale air max|wholesale jordans|wholesale jewelry|wholesale jerseys