ಬೇಕು-ಬೇಡ

ಬೇಕೆಂಬುವ ಬಡತನವ
ನ್ನೇಕೆ ಕರೆದುಕೊಳುವೆ?
ಬೇಡದೆ ಬಹ ಬಲುಧನವ
ನ್ನೇಕಕಟಾ ಕಳೆವೆ?
ಹಗಲ ಕುಮುದದಿಂದುಭಿಕ್ಷೆ,
ಶಿಶಿರಾಂತದ ಸುಮೋಪೇಕ್ಷೆ
ನೆರೆಯಲೆಂದುಮಳವೆ? ೭

ಬೇಕೆನೆ ನೀನೊಮ್ಮೆ ಬಳಿಕ
ಬೇಕೆನುವೆಲ್ಲವಂ-
ಬೇಡುವುದಿನ್ನೇಕೆ ತುಳುಕ
ಲಂಬುಧಿ ಸಲಿಲವಂ?
ಬೇಡುವಂತೆ ಬಡವನಾದೆ-
ಜಲಧಿಗೆ ಜಲಮೊಳವೆ ನಾದೆ
ಬಾಡಬಾನಲವಂ? ೧೪

ಬೇಕೆನುವೊಡನಿತ್ತೆ ಮೂಢ
ಮನಸೆ ಸಂಚಕರಂ
ಸ್ವನಾಶಕಿದೊ ನೆಗಳ ಬೀಡ
ನಳಿನಕೊಡ್ಡಿ ಕರಂ!
ನಳಿನವೊ ಅಳಿಯಾಸೆಯಲ್ಲಿ,
ಕರವೊ ನೆಗಳ ದಾಡೆಯಲ್ಲಿ-
ತೆರಳಲುಂಟೆ ತೆರಂ? ೨೧

ಬೇಕೆಂಬುದಣಂ ಸಮನಿಸೆ,
ತಟ್ಟನೊಡಕು ಬಿಟ್ಟೆ;
ಬಯಕೆಯೊಡನೆ ಬಯಕೆ, ಮನಸೆ,
ಎದೆಗೆ ನುಗ್ಗಿ ಕೆಟ್ಟೆ-
ಎಡೆಯೆಡೆಯಿಂದೊಸರುವಂದು,
ಕೊರೆದು ಬರುವ ನೆರೆಯ ಮುಂದು
ನಿಲಲಾಪುದ ಕಟ್ಟೆ? ೨೮

ಬೇಕೆಂಬುದು ದಕ್ಕಲಂತು
೧ಗೆಯ್ವ ನಾವನಲಂ?
ಮನದ ತೃಷ್ಣೆಗಡಸನೆಂತು
ಭೂಯೋ ಮೃಗಜಲಂ?
ಆಸೆಯ ನೆರಳಾ ನಿರಾಸೆ,
ಕುಡಿಯಲಾರದಾ ಪಿಪಾಸೆ-
ಪೆರತೇಂ ಪ್ರತಿಫಲಂ? ೩೫

ಬೇಕೆಂಬುದು ದಕ್ಕದೂಡನೆ
ಮಸಗನಾವ ನರಂ?
ಮರದ ಹಿಂದೆ ಮರವ ಸುಡನೆ
ಕೆರಳೆ ವನಜ್ವರಂ?
ವನದಗ್ನಿಯಿನೆಂತು ವನಂ,
ಮನದಗ್ನಿಯಿನಂತು ಮನಂ
ಭಸ್ಮಮೆ ಸತ್ವರಂ. ೪೨

ಬೇಕೆಂಬುವ ಬಲೆಯ ನೇದು
ಕಾದು ಬಯಕೆಯನ್ನ,
೨ನೆರವ ಸುಳಿವ ಕಂಡು ಹಾದು
ಜೇಡನುರುಳುವನ್ನ,
ಬಯಕೆಯ ಮೇಣ್ನೆರವ ನಡುವೆ
ಜಗುಳುವೆ ನೀನೆನಿತೊ ತಡವೆ
ಕಾಂಬ ಗುರಿಯ ಮುನ್ನ! ೪೯

ಬೇಕೆನುವಂತಿಹುದೆ ೩ದಕ್ಕು?
ನೀನೊಲ್ಲದನಾಂತೆ-
ಬೆಣ್ಣೆ ಗೆಂದು ನೆಗೆದ ಬೆಕ್ಕು
ಸುಣ್ಣ ಮುಕ್ಕಿದಂತೆ.
ಬಯಕೆಗೆ ಮುಂಗಂಡುದೊಂದು,
ಬೇಡುವ ಕೆಯ್ಗಡೆದುದೊಂದು-
ಬಯಕೆಯುದ್ದ ಚಿಂತೆ. ೫೬

ಬೇಕೆಂಬುದೆ ಮನದ ದ್ಯೂತ-
ಸುಖವೆ ಈಡಿಗಲ್ಲ?
ಗೆಲ್ಲಲೊಂದು ದಾಯ, ಸೋತ
ದಾಯದೆಣಿಕೆ ಇಲ್ಲ,
ಎರಗದು ಬಗೆದಂತೆ ದಾಯ,
ಇನ್ನು ಬಯಸಲಿನ್ನಪಾಯ-
ಸೋತು, ಸೋತೆ ಎಲ್ಲ! ೬೩

ಬೇಕೆಂಬವಗವನಪೇಕ್ಷೆ
ತುಷಾಗ್ನಿಯವ್ಯಯಂ;
ಬಯಕೆಯೆ ಗಡ ಮನದ ಶಿಕ್ಷೆ,
ತುಷ್ಟಿಯಾತ್ಮಜಯಂ.
ಬಾಳೆಯ ಕೇಡದರ ಗೊನೆಯೆ,
೪ಹೇಸರ ಕೇಡದರ ೫ತನೆಯೆ
ಬಯಕೆ ಮನಃಕ್ಷಯಂ. ೭೦

ಬೇಕೆಂದುರೆ ದುಡಿದುದೆಲ್ಲ
ಗೆದ್ದಲ ಸಂಚಿತಂ,
ಹುತ್ತ ಮರೆಯ ನಿಯತಿಗಲ್ಲ
ಬಯಕೆಯುಪಾರ್ಜಿತಂ?
ಬೇಕೆಂದವನುಂಡನಿಲ್ಲ,
ಬೇಡದವಂ ಹಸಿದನಿಲ್ಲ-
ಬಗೆಯ ಪ್ರತೀಕೃತಂ ೭೭

ಬೇಡವೆನಲು ಕೆಟ್ಟೆನೆಂಬು
ದೇತರ ವಿಭ್ರಮಂ?-
ಬೆಳಕ ಬೇಡದಿರುಳ ತುಂಬು
ತಿದೆ ತಾರಾಕ್ರಮಂ
ಬೇಡದೆ ಬೇಕಾದುದಡೆಯೆ,
ಬೇಡದುದಂ ಬೇಡಿ ಪಡೆಯೆ
ಏಕೆ ವೃಥಾ ಶೃಮಂ? ೮೪

ಬೇಕು ಬೇಡವೆಂಬ ಭೇದ
ಸುಲಭಸಾಧ್ಯವಲ್ಲ
೬ಒಂದೆಳೆಯಪನಾದ ನಾದ
ಮರಿತ ಕವಿಯೆ ಬಲ್ಲ,
ಬೇಗೆಯ ಬರಸಿಡಿಲ್ವೊಡೆಯೆ,
ತೃಷಿತಮನ್ಯ ಹಕ್ಕಿ ಸಿಡಿಯೆ,
ಮಳೆಯ ಹಕ್ಕಿಯೊಲ್ಲ. ೯೧

ಬೇಕು ಬೇಡವೆಂಬುದಿದುವೆ
ಸುರಾಸುರಾಂತರಂ-
ಬೇಕೆಂಬುದು ಮನಸಿಗೊದವೆ
ಸುರನಾದನಸುರಂ.
ಸುರರಿದರಿಂ ಕೆಡೆದರಂತೆ,
ನಿನ್ನನಾಸೆ ಕೆಡಿಸದಂತೆ
ಕಾದಿರು ಜಾಗರಂ. ೯೮

ನಿಶ್ವಸಿತೋಚ್ಛ್ವಸಿತದಂತೆ
ದ್ವಯಮಿದು ಸಂತತಂ-
ಬೇಕೆಂಬುದನುಳಿದ ಮುಂತೆ
ಬೇಡವಹುದೆ ಹಿತಂ?
ಬೇಕೆಂಬುದನೆದೆಯಿನೂದಿ,
ಬೇಡೆನೆಂಬುದೆದೆಗೆ ಸೇದಿ,
ಬಾಳವಿಶಂಕಿತಂ ೧೦೫

ಬೇಡಿದೆಯೇಂ ಕುಡಿವ ಜಲವ,
ಜೀವನಾನಿಲವಂ?
ತ್ರಿದಶಾಧಿಕ ಮನೋಬಲವ
ನವನಿಯ ನಿಲಯವಂ?
ನವನವೀನ ಭಾವನವಂ?
ನಿರವಶೇಷ ಜೀವನವಂ?
ತನುವನನೂನವಂ? ೧೧೨

ಬೇಡದೆ ಪಡೆದಿನಿತನೆಲ್ಲ,
ನಿನಗಿನ್ನೇನರಕೆ೭?
ನಿರಂತರ ವಸಂತವಿಲ್ಲ
ಜಗದೊಳೊಗೆದ ಮರಕೆ;

ಹೊತ್ತರಿತವನಿತ್ತ ಮುನ್ನ
ಬಗ್ಗಿಸುವುದೆ ಸುಗಿಯನ್ನ
ಮರದೆನಿತ್ತೊ ೮ಎರಕೆ? ೧೧೯

ಬೇಡದೆ ನಿನಗವಂ ನೀಡ
ಲಿದೇಂ ಬಯಸಿ ಬಂತೆ?
ಅಯ್ದನೆ ಗಾಲಿಯಂ ಪೂಡ
ಲಯ್ದಿತೆ ರಥ ಮುಂತೆ?
ಸಾಕೆ ನಿನ್ನ ಕಿರಿಯ ಸೇರೆ
ಸದಾ ಸುರಿಯೆ ಸುಧಾಧಾರೆ,
ಹಿಡಿವೆ ಎನಿತನಂತೆ? ೧೨೬

ಬೇಡದಯ್ದುದಳಿಯುವಂದು
ಹಲುಬಲುಂಟೆ ಜನಂ?
ಬಂದಂತೆಯೆ ಪೋದುದೆಂದು
ತಿಳಿಯಬಾರ ಮನಂ?
ಬೇಡದೆ ಬರುವಸ್ತೋದಯ,
ಏತವಿಳಿತ, ರಿತುಪರ್ಯಯ
ಮರುಗಿಸಿತಾವನಂ? ೧೩೩

ಇತ್ತವನದನೆತ್ತಲವಂ
ನಿನಗೇತರ ಭಯಂ?
ಒತ್ತರಿಸಲು ಬಿತ್ತಿದವಂ
ಮುಂಬೆಳೆ ನಿಶ್ಚಯಂ.
ಮಗುವ ಮುನ್ನ ಹಾಲನೀಯೆ,
ಬಲ್ಲನವನೆ? ಹೆರುವ ತಾಯೆ?-
ನೀಗು ಯೋಚನೆಯಂ ೧೪೦

ನದಿಯನಬ್ಧಿ ನೆರೆವುದೆಂತು
ನುಸುಳಿ ನದೀಮುಖಂ,
ಬಯಕೆಯ ಸಂಕಟದೊಳಂತು
ನಿನಗವನುನ್ಮುಖಂ;
ಬೇಕೆಂಬುವ ನಡುದಂಡೆಯ
ಹರಿವ ಮುನ್ನವನ ಕಂಡೆಯ?-
ಬಯಕೆ ಪರಾಙ್ಮುಖಂ. ೧೪೭

ತತ್ತಿಯ ಕತ್ತಲೆಗೆ ಸೊಕ್ಕಿ
ಹೊರಡದ ಮರಿಯನ್ನ
ಕಿರಿಚುವೊಡಂ ತಾಯಿ ಕುಕ್ಕಿ
ಹೊಂದಿಪಂತೆ ತನ್ನ,
ಬೇಕೆಂದುದನಲ್ಲಗಳೆದು,
ನಿಷ್ಠುರ ಕೃಪೆಯಿಂದ ತಳೆದು
ಕೊಳುವನವಂ ನಿನ್ನ. ೧೫೪

ಅವನನಲ್ಲದಾವುದೆಲ್ಲ
ಮನಸೆ ಬೇಡಲಿಲ್ಲ?
ಕತ್ತಿಯ ಬಿಟ್ಟೊರೆಯಿನಲ್ಲ
ಕಾದಲೆಲ್ಲಿ ಗೆಲ್ಲ?
ಬೇಡಿದೆ ನೀನವನನೆಂದು
ನೀಡೊಡೆಯಾ ನಿನ್ನನೆಂದು?-
ತನ್ನನಿತ್ತನಲ್ಲ? ೧೬೧

ತನ್ನನೆ ತಾನೀಯೆ ನಿನಗೆ,
ಇನ್ನೇಂ ನಿನಗಿಲ್ಲ?
ಮನಸೆ, ಬೇಡುವೊಡಿನ್ನೆನಗೆ
ಬೇಕೆನು ನೀನೆಲ್ಲ-
‘ಎಲ್ಲವೆನಲು ನೀನೆ ಬೇಕು,
ಇಲ್ಲವೆನಲು ನೀನೆ ಸಾಕು’-
ಇದೆ ಸಿದ್ಧಿಯ ಪಲ್ಲ. ೧೬೮

ನಿನ್ನನೊಲ್ಲದೆದೆಯೊಳಲ್ಲ
ಬಯಕೆಳೆಯೊಡೆಯ ಬಂತು?
ಶಮಿಯೊಳಲ್ಲದಗ್ನಿಯೆಲ್ಲ
ಮರಹೊಳಿರುವುದೆಂತು?
ಯಾವ ಸವುದೆಯಾದಡೇನು?
ಬೆಳಗುವುದೊಂದೇ ಕೃಶಾನು
ಬೆಳಗಿಸೆಹೆಯನಂತು! ೧೭೫

ಬೇಕೆನುವ ಸದಾ ದರಿದ್ರ
ನೆನ್ನ ಮನದ ಪುಟ್ಟಿ
ತುಂಬ ನೀಡ ಸದಾ ಭದ್ರ
ನಿನ್ನ ನೆನವ ತುಟ್ಟಿ ೯-
ಪಡೆದೊಲು ನೀ ಕೊಳುವನೆನ್ನ,
ಪಡೆವೊಲು ನಾ ಕೊಡುವ ನಿನ್ನ,
ಸೆಳೆಯೂ ಎದೆದಿಟ್ಟಿ ೧೮೨

ಬೇಡದೆನಗೆ ದಕ್ಕಿದುದೆನೆ
ನಿನ್ನ ದಯಾಧನಂ,
ಬೇಡದೆನಗೆ ಸಿಕ್ಕುವುದೆನೆ
ನಿನ್ನಯ ದರ್ಶನಂ;
ದಕ್ಕಿದುದೆನಗಿರಿಸುವಂತೆ,
ಸಿಕ್ಕುವುದನ್ನರಸುವಂತೆ
ಸಾಗಿಸು ಜೀವನಂ. ೧೮೯

ಬೇಡೊಡೆಯಾ ಬೇಕೆಂಬುವ
ತುಂಬಿಯ ೧೦ಬೆಚ್ಚರಂ,
ನೀಡೊಡೆಯಾ ಸಾಕೆಂಬುವ
ತಾವರೆಯೆಚ್ಚರಂ;

ನಿನ್ನಡಿದಾವರೆಯೆದೆಯಲಿ
ಮನ್ಮನೋಭ್ರಮರಕದೆಯಲಿ
ತೃಷಾಂತಮಚ್ಚರಂ೧೧ ೧೯೬
*****
೧ ಅಲಂ ಗೆಯ್‌=ಸಾಕುಮಾಡು
೨ ನೆರವು=ನೆರವೇರಿಕೆ
೩ ದಕ್ಕುವಿಕೆ
೪ ಹೇಸರಕತ್ತೆ
೫ ಮೃಗಗಳ ಗಬ್ಬ
೬ ಎಳೆ=ತಂತಿ
೭ ಅರಕೆ=ಅಪೂರ್ಣತೆ
೮ ಎರಕೆ=ಯಾಚನೆ
೯ ತುಷ್ಟಿ
೧೦ ಭ್ರಮಣ
೧೧ ಆಚ್ಚರ (ಅಕ್ಷರ)=ನಾಶವಾಗದ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗಾಲಿಗಳು
Next post ಸತ್ತು ಬದುಕಿರುವರು

ಸಣ್ಣ ಕತೆ

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…