ನಮ್ಮ ಕಿರಿದಾದ ಚಾವಡಿಗಳ
ಹಿತವಾದ ಲೇವಡಿಗಳ
ಹದದಲ್ಲಿ ಮುದಗೊಳ್ಳುತ್ತ
ನೀನು ನಡೆದೆ
ಆಜಾನುಬಾಹು
ನಿದ್ದೆಯಲ್ಲೂ ನಮ್ಮ ಎಚ್ಚೆತ್ತ ಪ್ರಜ್ಞೆ

ಶತಕೋಟಿ ನಕ್ಷತ್ರಗಳೆ ಸಾಕ್ಷಿಯಾದಂತೆ
ರಸ್ತೆಯ ಮೇಲೆ
ನಿನ್ನ ಧೀರೋತ್ತರ ಹೆಜ್ಜೆಗಳು
ಮೌನ ಕಂಪಿಸುವಂತೆ ಶೀಟಿಗಳು
ಚಂದಮಾಮದ ಕಥೆಗಳು ಧರೆಗಿಳಿದು ಬಂದಂತೆ
ಧೈರ್ಯವೇ ಸಾಹಸವೇ ಮೂರ್ತಿವೆತ್ತಂತೆ
ಓ ಆ ಡಾಂಬರು ರಸ್ತಗೆ ನಿನ್ನ
ಲಾರಿ ಅಪ್ಪಳಿಸುವೆ

ನೀ ನನ್ನ ಅಪೂರ್ಣ ಬಯಕೆ
ಡಬ್ಬಿಯ ತಗಡಿನ ಮನೆಯೊಂದರಲ್ಲಿ
ನಿನ್ನ ಹೆಂಡತಿ ನರಳುವ
ಥಟ್ಟನೆ ಎಚ್ಚೆತ್ತ ನಾಳಿನ ಗೂರ್ಖಾ
ಅಪ್ಪ ಎಲ್ಲೆಂದು ಹುಡುಕುವ
ನಿನ್ನ ದಟ್ಟ ಮೀಸೆಯಲ್ಲಿ, ದೃಡ ತೋಳುಗಳಲ್ಲಿ
ಏನೋ ಹುದುಗಿದಂತಿದೆ
ತಿಂಗಳ ಹಣ ಪಡೆಯಲು ಬೆಳಿಗ್ಗೆ ಬಂದಾಗ
ನೀನು ಮಾನವನಾಗಿಬಿಡುವೆ

ನಿನಗೆ ಹಗಲುಗಳು ಕಣ್ತೆರೆಯಲಿ
*****