ಸುಭದ್ರಾ ಪರಿಣಯ

-ಶ್ರೀಕೃಷ್ಣನ ಸಹಾಯದಿಂದ ಅರ್ಜುನನು ಸೋದರರೊಡಗೂಡಿ ನಾಗರ ಹಿಡಿತದಲ್ಲಿದ್ದ ಖಾಂಡವವನವನ್ನು ದಹಿಸಿ, ಯಮುನಾನದಿಯ ನೀರನ್ನು ಅತ್ತಕಡೆ ಹರಿಯಿಸಿ ಫಲವತ್ತಾದ ನೆಲವನ್ನಾಗಿ ಮಾಡಿದನು. ವ್ಯವಸಾಯ ಯೋಗ್ಯವಾದ ಆ ಪ್ರದೇಶಕ್ಕೆ ನಾಡಿನ ವಿವಿಧೆಡೆಗಳಿಂದ ವ್ಯವಸಾಯಗಾರರು, ವೈಶ್ಯರು, ಇತರೆ ವರ್ಗದವರು ಬಂದು ನೆಲೆಯೂರಿದರು. ಇದರಿಂದ ನಾಡು ಬೆಳೆಯಲು ಅವಕಾಶವಾಯಿತು. ಕೃಷ್ಣನ ಬೆಂಬಲದಿಂದ ಪಾಂಡವರು ಮಯಶಿಲ್ಪಿಯ ಸಹಾಯವನ್ನು ಪಡೆದುಕೊಂಡು ಸುಂದರವಾದ ನಗರವೊಂದನ್ನು ನಿರ್ಮಿಸಿ, ಆ ನಗರವನ್ನು ಇಂದ್ರಪ್ರಸ್ಥವೆಂದು ಕರೆದು, ತಮ್ಮ ರಾಜಧಾನಿಯನ್ನಾಗಿಸಿಕೊಂಡರು-

ತುಂಬಿದ ಊರದು ಇಂದ್ರಪ್ರಸ್ಥವು ಮಹಡಿಯ ಮನೆಗಳು ಹಲವಾರು
ಸಂದುಗೊಂದುಗಳ ಊರೇನಲ್ಲದು ವಿಶಾಲ ಬೀದಿಯ ತವರೂರು
ಮನೆಮನೆಯಲ್ಲೂ ಸ್ನಾನದ ಕೊಠಡಿಯು ಊರಿನ ಮಧ್ಯದಿ ಕೊಳ ಹಲವು
ಕೊಳಗಳ ಸುತ್ತಲೂ ಕಲ್ಲಿನ ಗೋಡೆಯು, ಪಕ್ಕದಿ ಹಸುರಿನ ಮರ ಚೆಲುವು
ಕಣ್ಮನ ಸೆಳೆಯುವ ಕಲೆಗಾರಿಕೆಯೂ ಕಂಡಿತು ನಾಡಿನ ಎಲ್ಲೆಡೆಯೂ
ಕಣ್ಣಿಗೆ ಹಬ್ಬವು ಮನಸಿಗೆ ಮುದವೂ ದೊರೆಯುತಿತ್ತು ಎಲ್ಲಾ ಕಡೆಯೂ!

ಓರೆಕೋರೆಗಳು ಇಲ್ಲದ ಊರದು ನೇರ ಹಾದಿಗಳ ಬೀದಿಯಲಿ
ಎರಡು ಗಾಡಿಗಳು ಏಕ ಕಾಲದಲ್ಲಿ ಸಂಚರಿಸಬಹುದು ಹಾದಿಯಲಿ
ಕುಶಲ ಶಿಲ್ಪಿಗಳ ಸಲಹೆಯ ಪಡೆಯದೆ ಯಾರೂ ಮಾಡರು ಏನನ್ನೂ
ಮಯಶಿಲ್ಪಿಯು ಅನುಮತಿ ಕೊಡದಿದ್ದರೆ ಕಟ್ಟಲೆಕೂಡದು ಮನೆಯನ್ನು
ಎತ್ತರ ಎತ್ತರ ಭವನಗಳಿಂದಲಿ ನಗರವು ಕಣ್ಮನ ಸೆಳೆದಿತ್ತು
ಬಿತ್ತರವಾಗಿಹ ಬೀದಿಗಳಿಂದಲಿ ನಗರದ ಶೋಭೆಯು ಬೆಳೆದಿತ್ತು
ಹಾದಿ ಬೀದಿಗಳ ಅಲಂಕಾರದಲ್ಲಿ ಸೌಂದರ್ಯವನೇ ಹೊರಸೂಸಿ
ದೂರದೂರುಗಳ ಮೇರೆಗಳಿಂದಲಿ ಕರೆಯಿತು ಜನರನು ಕೈಬೀಸಿ!

ಇಂತಹ ಸುಂದರ ನಗರಕೆ ಬಂದರು ವೈವಿಧ್ಯದ ಕಸುಬಿನ ಜನರು
ಕೃಷಿಕರು,ಅಗಸರು,ಬಡಗಿಯು,ಕುಂಬರ,ಶಿಲ್ಪಿಯು,ರಥನಿರ್ಮಿಸುವವರು
ತಮ್ಮತಮ್ಮಗಳ ಕಸುಬುಗಳಲ್ಲಿಯೆ ತನ್ಮಯರೆಲ್ಲರು ದುಡಿಮೆಯಲಿ
ರಾಜ್ಯದೇಳಿಗೆಗೆ, ಕಂಕಣ ಕಟ್ಟುತ ದುಡಿಯುತಲಿದ್ದರು ಒಲುಮೆಯಲಿ!
ಹೊಸತನು ರಚಿಸುವ ಹೊಸತನು ಕಟ್ಟುವ ಸಡಗರ ಸಂಭ್ರಮ ಸಲುಗೆಗಳು
ಹಳೆ ಊರಿಗೆ ಹೆಸರೊಂದುಳಿದಿದ್ದರೆ ಹೊಸ ಊರಲಿ ಅನುಕೂಲಗಳು
ನಾಡಿನ ನಾಲ್ಕೂ ದಿಕ್ಕುಗಳಿಂದಲಿ ನಗರಕೆ ಜನರಾಗಮಿಸಿದರು
ನಗರದ ಸೊಬಗನು ನೋಡಲು ಬಂದವರಲ್ಲಿಯೆ ನೆಲೆಯನು ಊರಿದರು
ನಗರವು ಬೆಳೆಯಿತು ನಾಡೂ ಬೆಳೆಯಿತು ಕನಸೆಲ್ಲವು ನನಸಾಗಿತ್ತು
ಪಾಂಡವರಲಿ ವಿಶ್ವಾಸವು ಬೆಳೆಯಿತು ನೆಮ್ಮದಿ ಜೀವನ ಸಾಗಿತ್ತು
ಪಾಂಡವರಾಳುವ ಖಾಂಡವಪ್ರಸ್ಥವು ಇಂದ್ರಪ್ರಸ್ಥವೆಂದಾಗಿತ್ತು
ಪಾಂಡವರಿಗೆ ಆ ಸುಂದರ ನಗರವು ರಾಜಧಾನಿ ತಾನಾಗಿತ್ತು!

ಇಂದ್ರಪ್ರಸ್ಥದ ಸಂಭ್ರಮ ಸಡಗರ ವರ್ಣಿಸಲಾಗದು ಮಾತಿನಲಿ
ಇಂದ್ರಪ್ರಸ್ಥಕೆ ಇಂದ್ರಪ್ರಸ್ಥವೆ ಸಾಟಿಯು ಕವಿಮನ ನುಡಿಯಲ್ಲಿ
ಪಾಂಡವರಿದ್ದರ ಕುಂತಿಯ ಸಂಗಡ ಇಂತಹ ಇಂದ್ರಪ್ರಸ್ಥದಲಿ
ಪಾಂಚಾಲಿಯು ಆನಂದವ ಹೊಂದುತ ಅಲ್ಲುಳಿದಿದ್ದಳು ಸುಖದಲ್ಲಿ
ಪಾಂಡವರೈವರಿಗೊಬ್ಬಳೆ ಹೆಂಡತಿ ಸರದಿಯಲವರಿಗೆ ಸತಿಯಾಗಿ
ಕುಂತಿಯ ಸೂಚನೆ ಮೇರೆಗೆ ವರುಷಕ್ಕೊಬ್ಬನು ಅವಳಿಗೆ ಪತಿಯಾಗಿ
ಪಂಚಪಾಂಡವರು ದ್ರೌಪದಿದೇವಿಗೆ ಪ್ರೀತಿಯ ಪತಿಗಳು ಎನಿಸಿದರು
ಐದು ವರುಷದಲಿ ದ್ರೌಪದಿ ಉದರದಿ ಐವರು ಮಕ್ಕಳು ಜನಿಸಿದರು
ಹುಟ್ಟಿದೈವರೂ ಗಂಡುಮಕ್ಕಳೇ ಕುಂತಿಗೆ ಸಂತಸವಾಗಿತ್ತು
ಮೊಮ್ಮಕ್ಕಳ ಜೊತೆ ಮಗು ತಾನಾಗುತ ನಲಿದಳು, ಕಾಲವು ಸರಿದಿತ್ತು!

ಬರುವ ಕಾಲಕ್ಕೆ ಬಂದೇ ಬರುವುದು ಎಲ್ಲಾ ವೈಭವ ತಾನಾಗಿ
ಇರುವ ಕಾಲಕ್ಕೆ ಇದ್ದೇ ಇರುವುದು ಎಲ್ಲೂ ಹೋಗದೆ ದಿವಿನಾಗಿ
ಆಪ್ತತನವು ಅತೃಪ್ತಿಯ ಅಳಿಸುತ ತೃಪ್ತಿಯು ಮನದಲಿ ಮೂಡುತ್ತ
ಆಪ್ತರೆಲ್ಲ ಪರಮಾಪ್ತರಾಗುವರು ಮನಸಿಗೆ ಹಿತವನು ನೀಡುತ್ತ

ಪಾಂಚಾಲಿಗೆ ಪರಮಾಪ್ತನೆನಿಸಿದವ ಆಜಾನುಬಾಹುವು ಬಲಭೀಮ
ಹೆಂಡತಿ ಮನವನು ಅರಿತವನವನೇ, ಅವನಲಿ ಅವಳಿಗೆ ಅತಿ ಪ್ರೇಮ
ಧರ್ಮನು ಬಿಂಕದ ಹಿರಿತನದೊಡೆಯನು ಅಮಳರು ಬರಿ ಲೆಕ್ಕಕ್ಕಷ್ಟೆ
ಅರ್ಜುನ ರಸಿಕಶಿಖಾಮಣಿಯಾದರೂ ಅವರಿಬ್ಬರಿಗಷ್ಟಕ್ಕಷ್ಟೆ!
ಕುಂತಿಯು ಎಲ್ಲವ ಗಮನಿಸುತಿದ್ದಳು ಮಾಡುತ ಮನದಲಿ ಚಿಂತೆಯನು
ಹೆಗಲಲಿ ಹೊತ್ತಿದ್ದಳು ಸರಿದೂಗಿಸಿ ಎಲ್ಲಾ ನಡೆಸುವ ಹೊಣೆಯನ್ನು
ಸೋದರರೆಲ್ಲರು ಒಗ್ಗಟ್ಟಾಗಿಯೆ ಇರುವುದು ಅವಳಿಗೆ ಬೇಕಿತ್ತು
ಒಡಕು ಮೂಡಿದರೆ ಎಡವಟ್ಟಾಗುವುದೆಂಬುದು ಅವಳಿಗೆ ಗೊತ್ತಿತ್ತು!
ಭೀಮನು ಗರಡಿಯ ಮನೆಯನ್ನು ಸೇರುತ ಸಾಧನೆಯಲ್ಲಿಯೆ ಮುಳುಗಿದನು
ಸಹದೇವನು ಪಶು ಸಂಪದ ಬೆಳೆಸುವ ಮಹತ್ಕಾರ್ಯದಲ್ಲಿ ತೊಡಗಿದನು
ನಕುಲನು ಕುದುರೆಯ ಮನವನು ಅರಿಯುವ ಶಾಸ್ತ್ರವ ಕಲಿಯಲು ತೆರಳಿದನು
ರಸಿಕಶಿಖಾಮಣಿ ಪಾರ್ಥನು ವರುಷದ ಸರದಿಗೆ ಮನದಲ್ಲಿ ಕೆರಳಿದನು!

ಒಂದಿನ ಪಾರ್ಥನು ಮುನಿಸಲಿ ಬಂದನು ಹಗಲಲಿ ಧರ್ಮನ ಅರಮನೆಗೆ
ದ್ರೌಪದಿ ಬಳಿಯಲಿ ಮನಸಿನ ಅಸಹನೆ ತೋಡಿಕೊಂಡನವನಾ ಘಳಿಗೆ-
“ಮತ್ಸ್ಯಯಂತ್ರವನ್ನು ಭೇದಿಸಿ ಆ ದಿನ ನಿನ್ನನು ಗೆದ್ದವ ಅರ್ಜುನನು
ಆದರೂ ಎಲ್ಲ ನಿನ್ನನು ಪಡೆದರು, ನಿರಾಕರಿಸುವೆನು ನಿಯಮವನು”
ದ್ರೌಪದಿ ನುಡಿದಳು- “ಅತ್ತೆಯ ಮಾತನು ಪಾಲಿಸಬೇಕಿದೆ ತಪ್ಪದಿದು
ಮನಸಿನ ಇಷ್ಟವು ಏನೇ ಇದ್ದರೂ ಒಪ್ಪಲೇಬೇಕು, ನಿಯಮವಿದು
ಸೋದರರೆಲ್ಲರ ಸಮದೃಷ್ಟಿಯಲಿ ನೋಡಿಕೊ ಎಂದಳು ಅವಳಂದು
ಯಾರಿಗೂ ದ್ರೋಹ ಬಗೆಯದೆ ನಡೆವೆನು ಅದುವೇ ಧರ್ಮವು ನನಗಿಂದು”
ಅರ್ಜುನ ಹೇಳಿದ- “ನಲ್ಲೆಯೆ, ನಿನಗೂ ಪ್ರೀತಿಯು ಇಲ್ಲವೆ ನನ್ನಲ್ಲಿ?
ವರುಷಗಳ ಕಾಲ ನೀನಿಲ್ಲದೆಯೇ ಹೇಗಿರುವುದು ಈ ವಿರಹದಲಿ?”
ಪಾರ್ಥನು ದೈನ್ಯದಿ ಕೇಳಿದ ಪ್ರಶ್ನೆಗೆ ಉತ್ತರವಿರಲಿಲ್ಲವಳಲ್ಲಿ
ತಲೆಯನು ತಗ್ಗಿಸಿ ಸುಮ್ಮನೆ ಕುಳಿತಳು ಕೊರಗುತ ತನ್ನಯ ಮನದಲ್ಲಿ!

ಮಾನವನೆದೆಯಲಿ ಮಾವಿನ ಜೊತೆಯಲ್ಲಿ ಬೇವು ಕೂಡ ಮನೆಮಾಡುವುದು
ಮಾನವನಾಸೆಯು ಮಾರ್ಮೊಳಗುತ್ತಲಿ ಹೀನತನವು ತೊನೆದಾಡುವುದು
ನಾನೇ ನನ್ನದು ನನಗೇ ಎನ್ನುವ ಭಾವವು ಮನದಲಿ ಮೂಡುವುದು
ಏನುಮಾಡಲೂ ಹೇಸದೆ ತನ್ನಯ ಸ್ವಾರ್ಥಕ್ಕೆ ಮನವನು ದೂಡುವುದು

ಧರ್ಮನು ಬಂದನು ಸಭೆಯನು ಮುಗಿಸುತ ಮಡದಿಯ ಕಾಣಲು ಅರಮನೆಗೆ
ಕಂಡನು ತನ್ನಯ ಕಿರಿಸೋದರನನು ಅಂತಃಪುರದಲಿ ಆ ಘಳಿಗೆ
ಕೇಳಿದನವನನು- “ಸೋದರ, ನಿನ್ನಯ ಮೊಗದಲ್ಲೇತಕೆ ದುಗುಡವಿದೆ?
ಅಣ್ಣನ ಬಳಿಯಲಿ ಹೇಳಿದೆಯಾದರೆ ಎಲ್ಲಕ್ಕೂ ಪರಿಹಾರವಿದೆ”
ಅರ್ಜುನ ಏನೂ ಮಾತನ್ನಾಡದೆ ಬಿರಬಿರ ನಡೆದನು ಹೊರಗಡೆಗೆ
ಹೇಳದೆ ಕೇಳದೆ ನಗರವ ತೊರೆದನು ಹೊರಟೇಬಿಟ್ಟನು ಬೇರೆಡೆಗೆ
ನಡೆದೂ ನಡೆದೂ ತಲುಪಿದ ಕಡೆಯಲಿ ದೂರದ ನಾಗರ ನಾಡನ್ನು
ಉತ್ತರ ದೇಶದ ಹುತ್ತದ ನಾಡದು ಎನ್ನುವ ಖ್ಯಾತಿಯ ಬೀಡನ್ನು
ಮಧ್ಯಮ ಪಾಂಡವ ಅರ್ಜುನನೆಂದರೆ ನಾಗರಾಜನಿಗೆ ಅಭಿಮಾನ
ಖಾಂಡವವನದಲಿ ಪ್ರಾಣವ ಉಳಿಸಿದ ಎನ್ನುತ ಮಾಡಿದ ಸನ್ಮಾನ!

ತೀರ್ಥಯಾತ್ರೆಗೆಂದಾಗಮಿಸಿರುವೆನು ಎನ್ನುತ ಹೇಳಿದ ಫಲುಗುಣನು
ನಾಗರಕನ್ಯ ಉಲೂಪಿಯ ಪ್ರೀತಿಯ ಮೋಹದ ಬಲೆಯಲಿ ಸಿಲುಕಿದನು
ನಾಗರ ರಾಜನ ಒಪ್ಪಿಗೆ ಪಡೆಯುತ ನಾಗರಕನ್ಯೆಯ ವರಿಸಿದನು
ಆರು ಮಾಸಗಳು ಅಲ್ಲಿ ಇದ್ದವನು ಮತ್ತೆ ಪಯಣವನು ಬೆಳೆಸಿದನು!

ಹೆಣ್ಣಿನ ಚಪಲವ ಹೊಂದಿರುವವನಿಗೆ ಹೆಂಡತಿ ಮನ ಅರಿವಾಗುವುದೆ?
ಮಣ್ಣಿನಾಸೆಯಲಿ ಮುಳುಗಿರುವವನಿಗೆ ಅನ್ಯರ ಸಂಕಟ ತಿಳಿಯುವುದೆ?
ಬಣ್ಣದ ಮಾತುಗಳಲ್ಲಿಯೇ ಮನವ ಗೆಲ್ಲುತ ಸಾಗುವ ನಯದಿಂದ
ಸಣ್ಣತನವನ್ನು ತೋರಿಸಿಕೊಳ್ಳದೆ ಮುನ್ನಡೆಯುವ ನಿರ್ದಯದಿಂದ!

ಮೂಡಣದಿಕ್ಕಿಗೆ ಸಾಗಿದ ಪಾರ್ಥನು ತಲುಪಿದ ಮಣಿಪುರ ಸೀಮೆಯನು
ಅಡವಿಯ ಮಾರ್ಗದಿ ಸಾಗುತಲಿರುತಿರೆ ಎದುರಲಿ ಕಂಡನು ರಮಣಿಯನು
ಬೇಟೆಯನಾಡಲು ಬಂದಿಹ ಮಣಿಪುರ ರಾಜ್ಯದ ರಾಜಕುಮಾರಿಯನು
‘ಚಿತ್ರಾಂಗದೆ’ ಎನ್ನುವ ಅಭಿಧಾನವ ಹೊಂದಿದ ಸುಂದರಿ ಚೆಲುವೆಯನು!
ಒಬ್ಬರಿಗೊಬ್ಬರು ಮನವನು ಸೋತರು ಬೆಸುಗೆಯಗೊಂಡವು ಹೃದಯಗಳು
ಜೊತೆಯಲಿ ಅವನನು ನಗರಕೆ ಒಯ್ದಳು, ತಾನಾಗಿದ್ದಳು ಮದುಮಗಳು
ಮಣಿಪುರದರಸನಿಗೊಬ್ಬಳೇ ಮಗಳು, ಪಾರ್ಥನ ವರಿಸಿದಳಂದವಳು
ಪಾರ್ಥನಿಗನಿಸಿತು ಅವಳೊಡನಿರುತಿರೆ ಅವಳೆಂದೆಂದೂ ತನ್ನವಳು!
ದಿನಗಳು ಉರುಳುತಲಿದ್ದವು, ಸುಖದಲಿ ಮೈಮರೆತಿದ್ದರು ದಂಪತಿಯು
ಹಬ್ಬದ ಸಡಗರವಾಯಿತು, ಗರ್ಭವ ಧರಿಸಲು ಪಾರ್ಥನ ಪ್ರಿಯಸತಿಯು
ಚಿತ್ರಾಂಗದೆ ಬಲು ಸಡಗರಪಡುತ್ತ ಸಂತಸದಿಂದಲಿ ಬೀಗಿದಳು
ತಂದೆಯ ವಂಶವ ಉಳಿಸಿದೆನೆನ್ನುತ ಹೆಮ್ಮೆಯಿಂದ ನಲಿದಾಡಿದಳು
ರಾಜ್ಯಕೆ ವಾರಸುದಾರನು ಬರುವನು ಎನ್ನುತ ಹಿಗ್ಗಿತು ನಾಡೆಲ್ಲ
ಮಣಿಪುರ ಸಿಂಹಾಸನ ಬರಿದಾಗದು ಹರುಷವ ಹೊಂದಿತು ಬೀಡೆಲ್ಲ
ಗಂಡು ಮಕ್ಕಳನು ಕಾಣದ ಮನೆಯಲಿ ಗಂಡಾಗಲಿ ಜನ ಬಯಸಿದರು
ಗಂಡೋ ಹೆಣ್ಣೋ ಮಗುವಾದರೆ ಸರಿ ಎಂದವರೆಲ್ಲರು ಕನಸಿದರು
ಮಣಿಪುರದರಸನು ಮುದ್ದಿನ ಮಗಳಿಗೆ ಮಾಡಲು ಬಯಸಿದ ಸೀಮಂತ
ಅಂತೆಯೆ ಪುರದಲಿ ಢಂಗುರ ಸಾರಿದ ಹಬ್ಬವಾಚರಿಸಿ ಎನ್ನುತ್ತ

ಒಂದು ಶುಭದಿನವು ಪುತ್ರೋತ್ಸವದಲ್ಲಿ ಹಿಗ್ಗಿದಳು ತಾಯಿ ಮುದದಿಂದ
ನಾಡಿಗೆ ನಾಡೇ ಸಂಭ್ರಮಿಸಿದ್ದಿತು ಸಂತಸ ತುಂಬಿದ ಮನದಿಂದ
ಮಣಿಪುರ ಸೀಮೆಗೆ ನಾಯಕ ಬಂದನು ಹರುಷವು ತುಂಬಿತು ನಾಡಿನಲಿ
ವಾರಸುದಾರನ ದರುಶನ ಪಡೆಯಲು ನೆರೆದರು ಮಂದಿಯು ಬೀಡಿನಲಿ
ಅರ್ಜುನ-ಚಿತ್ರಾಂಗದೆಯರ ಪುತ್ರನ ಕರೆದರು ‘ಬಬ್ರುವಾಹನ’ನೆಂದು
ನಾಡಿನ ಕೀರ್ತಿಯ ಬೆಳಗು ಎನ್ನುತ್ತ ಹರಸಿದರೆಲ್ಲರು ಬಳಿಬಂದು!

ವರುಷ ಕಳೆದರೂ ಅರ್ಜುನ ಬರದಿರೆ ಚಿಂತೆಯು ಮೂಡಿತು ಕುಂತಿಯಲಿ
ಹರುಷವು ಇಲ್ಲದೆ ಪಾಂಡವರೆಲ್ಲರು ಮುಳುಗಿದ್ದರು ಬಲು ಚಿಂತೆಯಲಿ
ಕುಂತಿಯು ಪಾರ್ಥನ ಪತ್ತೆಯ ಮಾಡಲು ಕೃಷ್ಣನ ನೆರವನು ಕೋರಿದಳು
ಕೃಷ್ಣನು `ಪತ್ತೆಯ ಮಾಡುವೆ’ನೆನ್ನಲು ಕುಂತಿಯು ಸಂತಸ ಹೊಂದಿದಳು
ಪಾರ್ಥನ ಪತ್ತೆಯ ಮಾಡುವ ಕಾರ್ಯದಿ ಕೃಷ್ಣನು ಕಾರ್ಯೋನ್ಮುಖನಾದ
ನಾಲ್ಕೂ ದಿಕ್ಕಿಗೆ ಚಾರರನಟ್ಟುತ ತಾನೂ ಉತ್ತರದೆಡೆ ನಡೆದ!
ಮುಂದಿನ ಒಂದೇ ವಾರದ ಕಾಲಕೆ ಕಂಡನು ಕಾರ್ಯದಿ ಯಶವನ್ನು
ಮಣಿಪುರದರಮನೆ ಅಂತಃಪುರದಲಿ ತಿಳಿದನು ಪಾರ್ಥನ ಇರವನ್ನು
ಮರುದಿನ ಮುಂಜಾವಿನ ಸಮಯದಲ್ಲಿ ಕೃಷ್ಣನು ಸಂಧಿಸಿ ಅರ್ಜುನನ
ಹೃದಯವ ಗೆಲ್ಲುವ ಮಾತನ್ನಾಡುತ ವಿವರದಿ ಅರಿತನು ಅವನ ಮನ
ಅಂದೇ ಅವನನು ರಥದಲ್ಲಿ ಕೂರಿಸಿ ಕರೆದೊಯ್ದನು ತನ್ನಯ ಜೊತೆಗೆ
ಅಣ್ಣನು ಬಲರಾಮನು ಇರುವಂತಹ ತನ್ನಯ ನೆಚ್ಚಿನ ದ್ವಾರಕೆಗೆ
ಅರಿಯದ ತೆರದಲಿ ಅರ್ಜುನನಿದ್ದನು ಕೃಷ್ಣನ ಸುಂದರ ನಗರದಲಿ
ಹುಸಿಸನ್ಯಾಸಿಯ ವೇಷವ ಧರಿಸುತ ಉಳಿದಿದ್ದನು ದ್ವಾರಕೆಯಲ್ಲಿ!

ಪಾರ್ಥನು ಕೃಷ್ಣನ ತಂಗಿಯ ಕಂಡನು ಪರಮಸುಂದರಿಯು ರೂಪಿನಲಿ
ಸ್ವಾರ್ಥಮನಸಿನಲಿ ಅವಳನು ಬಯಸಿದ ತನಗೇ ಬೇಕೆಂದೆನ್ನುತಲಿ
ಕೃಷ್ಣನ ತಂಗಿ ಸುಭದ್ರೆಯು ಮೊದಲೇ ಪಾರ್ಥನ ರೂಪಿಗೆ ಸೋತಿರಲು
ಅರ್ಜುನ ತಾನೂ ಅವಳನ್ನು ಪ್ರೀತಿಸಿ ವರಿಸೆಂದವಳನ್ನು ಕೇಳಿರಲು
ನುಡಿದಳು ಸುಂದರಿ- “ಕೃಷ್ಣೆಯ ತೆರದಲಿ ನನ್ನನು ಪರರಿಗೆ ಹಂಚದಿರು
ಎಂದಿಗೂ ನೀನು ನನ್ನವನಾಗಿರು, ಇನ್ನು ಸವತಿಯರ ತಾರದಿರು”

ಅರ್ಜುನ ಅವಳಿಗೆ ವಚನವ ನೀಡುತ ಕೃಷ್ಣನ ಬಳಿ ಪ್ರಸ್ತಾಪಿಸಿದ
ಕೃಷ್ಣನು ತಂಗಿಯ ಮನವನು ಅರಿತವ ತನ್ನ ಸಮ್ಮತಿಯ ಸೂಚಿಸಿದ
ಒಂದಿನ ಕೃಷ್ಣನ ಸೂಚನೆ ಮೇರೆಗೆ ಇರುಳು ಸುಭದ್ರೆಯ ಅಪಹರಿಸಿ
ಯಾರೂ ಅರಿಯದ ರೀತಿಯೊಳವಳನು ಕರೆದೊಯ್ದನು ದ್ವಾರಕೆ ಬಿಡಿಸಿ!

ಬಲರಾಮನು ಬಲು ಕಿಡಿಕಿಡಿಯಾದನು ಸನ್ಯಾಸಿಯ ಆ ಕಾರ್ಯಕ್ಕೆ
ಕೃಷ್ಣನು ಎಲ್ಲವ ಬಿಡಿಸಿ ಹೇಳಿದನು ಕರೆದು ಅವನನ್ನು ಸನಿಹಕ್ಕೆ-
“ಅಣ್ಣಾ, ಜೋಗಿಯ ವೇಷದೊಳಿದ್ದವ ಮಧ್ಯಮಪಾಂಡವ ಅರ್ಜುನನು
ನನ್ನನು ಕೇಳಿಯೆ ಕರೆದೊಯ್ದಿರುವನು ಸುಮ್ಮನೆ ದೂರದಿರವನನ್ನು
ರಕ್ಕಸಬುದ್ಧಿಯ ಜರಾಸಂಧನಿಗೆ ಹೆದರಿ ನಾವುಗಳು ಈಗಿಲ್ಲಿ
ಮಥುರೆಯ ತ್ಯಜಿಸಿ ಬದುಕುತಲಿರುವೆವು ಸಾಗರ ನಡುವಿನ ದ್ವೀಪದಲಿ
ಪಾಂಡವವೀರರ ಬಲ ನಮಗಿದ್ದರೆ ಜರಾಸಂಧನನು ಜಯಿಸುವೆವು
ಇಲ್ಲದೆಹೋದರೆ ಜೀವನವೆಲ್ಲವು ಹೆದರುತ ಇಲ್ಲಿಯೆ ಬದುಕುವೆವು”
ಕೃಷ್ಣನ ದೂರಾಲೋಚನೆ ಮಾತಿಗೆ ಬಲರಾಮನು ಸಮ್ಮತಿಸಿದನು
ತಂಗಿ ಸುಭದ್ರೆಯ ಮದುವೆಯ ಮಾಡಲು ತಮ್ಮನಿಗೇನೆ ತಿಳಿಸಿದನು
ಕೃಷ್ಣನು ಅಣ್ಣನ ಮಾತಿಗೆ ಒಪ್ಪುತ ‘ಅಲ್ಲಿಯೆ ಮದುವೆಯ ಮಾಡೋಣ’
ಎನ್ನಲು ಬಲರಾಮನು ಸಮ್ಮತಿಸಿದ ‘ನಡೆ ನಾವಲ್ಲಿಗೆ ಹೋಗೋಣ’
ಮಡದಿಯರೊಂದಿಗೆ ಹೊರಟರು ಕೂಡಲೆ ಇಂದ್ರಪ್ರಸ್ಥಕೆ ಜೊತೆಯಾಗಿ
ಮಧ್ಯಮಪಾಂಡವನೊಂದಿಗೆ ತಂಗಿಯ ಮದುವೆಯ ಮಾಡುವ ಸಲುವಾಗಿ!

ಪಾರ್ಥನು ಇಂದ್ರಪ್ರಸ್ಥವ ತಲುಪಿದ ನಲ್ಲೆ ಸುಭದ್ರೆಯ ಜೊತೆಯಲ್ಲಿ
ಮುಳಿದವ ಮರಳಿದನೆನ್ನುವ ಸಂತಸ ಕಂಡಿತು ಎಲ್ಲರ ಮೊಗದಲ್ಲಿ
ಪಾರ್ಥನ ಪ್ರೀತಿಯ ಹೆಣ್ಣಿಗೆ, ತುಂಬಿದ ಹೃದಯದ ಸ್ವಾಗತ ಕೋರಿದರು
ಕೃಷ್ಣನ ತಂಗಿ ಸುಭದ್ರೆಯು ಎನ್ನುತ ಗೌರವ ಅವಳಿಗೆ ತೋರಿದರು!
ಕೃಷ್ಣ ಬಲರಾಮರಿಬ್ಬರೂ ಬರಲು ತಮ್ಮ ಪರಿವಾರ ಜೊತೆಯಲ್ಲಿ
ಕೃಷ್ಣನು ಬಂದನು ಎಂದರೆ ಮುಗಿಯಿತು ಎಲ್ಲ ಸುಖಾಂತವು ಕೊನೆಯಲ್ಲಿ
ಪಾರ್ಥ-ಸುಭದ್ರೆಯರಿಬ್ಬರ ಮದುವೆಯ ಸಿದ್ಧತೆ ನಡೆಯಿತು ಭರದಿಂದ
ಯಾದವ ಕನ್ಯೆಯ ಮದುವೆಗೆ ಬಂದಿತು ಧನಕನಕವು ದ್ವಾರಕೆಯಿಂದ

ನಾಡಿನ ನಾನಾ ಭಾಗದ ರಾಜರು ಬಂದರು ಹರಸಲು ವದುವರರ
ಹಾಡುತ ಕುಣಿಯುತ ನಡೆಯಿತು ಮದುವೆಯು ಅಲ್ಲಿನ ಎಲ್ಲವು ಮಧುರತರ
ಹಲವು ಮಡದಿಯರ ಒಡೆಯ ಪಾರ್ಥನನು ಆಸೂಯೆಯಿಂದಲಿ ಹರಸಿದರು
ಬಲದ ಎದುರಿನಲಿ ಎಲ್ಲವೂ ಗೌಣ ಎಂದು ಮೌನವನು ಧರಿಸಿದರು
ಯದುಕುಲ ಸಂಬಂಧವು ದೊರೆತಿರಲಲ್ಲಿ ಪಾಂಡವ ಬಲವೂ ವೃದ್ಧಿಸಿತು
ಕೃಷ್ಣನ ಬೆಂಬಲ ಬೆನ್ನಿಗೆ ಇದ್ದುದು ಎಲ್ಲರ ಮೆಚ್ಚುಗೆಯಾಗಿತ್ತು!

ದ್ರುಪದನಂದನೆಯ ಮೇಲಿನ ಕೋಪಕೆ ಪಾರ್ಥನು ಮನೆಯನ್ನು ತ್ಯಜಿಸಿದ್ದ
ಹಲವು ಕನ್ಯೆಯರ ಮದುವೆಯಾಗುತಲಿ ಸುಭದ್ರೆಯೊಂದಿಗೆ ಬಂದಿದ್ದ
ಆದರೆ, ಸುಭದ್ರೆ ಅವನ ಚಪಲಕ್ಕೆ ಹಾಕಿದ್ದಳು ಕಡಿವಾಣವನು
ಬೇರೆಯ ಹೆಂಗಳ ಸಂಗವ ಮಾಡದ ತೆರದಲಿ ಮುಂದೆಂದೂ ಅವನು
ಕೃಷ್ಣನ ಭಯವೂ ಇದ್ದಿತು ಅವನಿಗೆ ತಂಟೆಯ ಮಾಡಲು ಹೋಗಿಲ್ಲ
ತನ್ನ ಮನಸ್ಸನು ನಿಯಂತ್ರಿಸಿದ್ದನು ದಾರಿಯ ತಪ್ಪಲು ಆಗಿಲ್ಲ!

ವರುಷವು ತುಂಬುವ ಮೊದಲೇ ದಂಪತಿಗಾಯಿತು ಪುತ್ರೋತ್ಸವವಲ್ಲಿ
ಹರುಷದ ಹೊಳೆಯಲಿ ಮಿಂದಿತು ಅರಮನೆ ನಡೆಯಿತು ಮಹೋತ್ಸವವಲ್ಲಿ
‘ಅಭಿಮನ್ಯು’ವು ಎನ್ನುವ ಹೆಸರನ್ನು ಕೊಟ್ಟನು ಕೃಷ್ಣನು ಅಳಿಯನಿಗೆ
ಇಂದ್ರಪ್ರಸ್ಥದ ಅರಮನೆಯೊಳಗಡೆ ಅರಳಿತು ಮಗುವಿನ ಸಿರಿಯ ನಗೆ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗುಹೇಶ್ವರ
Next post ವಚನ ವಿಚಾರ – ಕೊಟ್ಟ ಕುದುರೆ

ಸಣ್ಣ ಕತೆ

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ವಿಷಚಕ್ರ

    "ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

cheap jordans|wholesale air max|wholesale jordans|wholesale jewelry|wholesale jerseys