ಹಗಲಿನಾಚೆಯ ಇರುಳಿನಾಚೆಯ ಪ್ರಪಂಚಕ್ಕೆ
ಜೀವ ಸಾಗಿದ್ದಾಗ
ರಾತ್ರಿ ಹನ್ನೆರಡಕ್ಕೆ
ಗಂಟೆ ಮಿನಿಟಿನ ಮುಳ್ಳುಗಳು ಕೈಕುಲುಕಿಕೊಂಡವು
ಕೈ ಗಡಿಯಾರದ ಜಾದೂಗಾರ
ಎಂದೂ ಮಲಗುವುದಿಲ್ಲ
ಕಾರ್ಯತತ್ತರ ರೈಲ್ವೆ ಸಾರನ್ನಿಗೆ
ಮಲಗಿಕೊಂಡವರ ಚಿಂತೆಯೇ ಇಲ್ಲ
ಭೂಮಿ ತನ್ನ ಅಕ್ಷದ ಸುತ್ತ ಸುತ್ತುತ್ತಿದೆ
ಹಾಗೂ ಸೂರ್ಯನ ಸುತ್ತ

ಉಸಿರಾಟದ ಆಮದು ರಫ್ತಿನ ನಡುವೆ
ನಡೆದಿರುತ್ತದೆ ದಿನಗಳ ಲೆಕ್ಕ
ಬೊಗಳುವುದು ನಾಯಿಗಳ ಆಜೀವ ಹಕ್ಕು
ಬೆಳ್ಳಿ ಪರದೆಯ ಸರಿಸಿ
ದಿನದ ಆಟಕ್ಕೆ ಬರುವ ಸೂರ್ಯ
ನಿನ್ನೆ ಮರೆಯುವುದಿಲ್ಲ ನಾಳೆ ತೊರೆಯುವುದಿಲ್ಲ

ಬೆಳಕಾಯಿತು
ಇವತ್ತಿನ ಪೇಪರ ಸುದ್ದಿ
ಮೂರು ತಲೆಯ ವಿಚಿತ್ರ ಮಗುವಿನ ಜನನ
ಹಾಗೂ
ಅಲ್ಲೊಂದು ಕಡೆ ಚಿನ್ನ ನಿಕ್ಷೇಪ
ಖನನ …..
*****