ಬಾಯ ಬಂಧಿಸಿದ ಬಸವ

(ಒಂದು ರೂಪಕ ಕಥನ)

ತಿರುಗುತ ತಿರುಗುತ ಹೊರಟೆನು ಕುಮರಿಯ ಹೊಲದ ಕಡೆಗೆ ನಾನು,
ಇಳಿನೇಸರ ವೇಳೆಯಲಿ ನೋಡಲಿಕೆ ಸೃಷ್ಟಿಯ ಶೋಭೆಯನು.
ಶರತ್ಕಾಲದಾ ಭೂರಮಣಿಯ ಮೆಯ್‌ಸಿರಿಯನು ನೋಡುತಲಿ
ಹರುಷವು ಹೆಚ್ಚುತ ಹೃದಯದಿ ಹಿಡಿಸದೆ ಹೊಮ್ಮಿತಾಕ್ಷಣದಲಿ!

ಹುರುಳಿ ಹೆಸರು ಅಲಸಂದೆಯವರೆಗಳ ಬಳ್ಳಿಯು ಬಿತ್ತರಿಸಿ,
ಧರಣಿಯು ಧರಿಸಿದ ಹಸಿರುಡಿಗೆಯ ತೆರ ತೋರಿತು ಕಂಗೊಳಿಸಿ,
ಕರಿಯ ಕುಪ್ಪಸಕೆ ಹಸಿರು ನವಿರೆಳೆಯ ಸುಳಿವು-ಮೊಗ್ಗೆ ತಗೆದು,
ಧರಿಸಿದ ಪರಿಯಲಿ ಎರೆಯ ನೆಲದ ಹತ್ತಿಯ ಬೆಳೆ ಮಿರುಗಿದುದು.

ಕಿರುಮುತ್ತುಗಳೊಳು ಸಮೆದ ಪೆಂಡೆಯದ ದಂಡೆಯ ತೆರದಿಂದೆ
ಹುರಿನವಣೆಯ ತೆನೆಗಳು ತೊನೆದಾಡುತ ಮೆರೆದುವಂದದಿಂದೆ.
ಜೋಳದ ಬೆಳೆಯನು ಕೊಯಿದೊಟ್ಟಿದ ಗೂಡುಗಳೋರಣದಿಂದೆ
ತೋರಿದುವಾ ಭೂರಮಣಿಯ ಧಾನ್ಯಾಗಾರದಂದದಿಂದೆ.

ಇಂತಿದನೆಲ್ಲವ ನೋಡುತ ನಡೆದಿರೆ, ಬಾಯಿಜಾಳಿಗೆಯಲಿ
ಬಾಯನು ಬಿಗಿದಾ ಹೋರಿಯೊಂದು ನಿಂದಿಹುದಾ ಹೊಲದಲ್ಲಿ.
ಸುತ್ತಲೆಲ್ಲವೂ ಕತ್ತಲಿಸಿರೆ ಬೆಳೆ, ಅದನು ನೋಡದಿಹುದು;
ಕುದಿ ಸಿಲುಕಿದವೊಲು ಕಂಬನಿಗಳ ಸುರಿಸುತ ತಾನಿಹುದು

ಮರುಕ ಮೂಡೆ ನಾನದರ ಬಳಿಗೆ ನಡೆತಂದು ವಿಚಾರಿಸಿದೆ :
ಹಿರಿಯ ಹೋರಿ ನೀನೇತಕೆ ಅಳುತಿಹೆ ? ಹೇಳೆನ್ನಯ ಮುಂದೆ
ಇನಿತು ಕೇಳಲಾ ಬಸವನು ಬಿಸಿಯುಸಿರನ್ನು ಬಿಡುತಲಂದು,
ಬಿತ್ತರಿಸಿತು ತನ್ನಯ ಬನ್ನದ ಕತೆಯನು ಬಗೆಯೊಳು ಬೆಂದು:

‘ಏನು ಹೇಳುವುದು ನನ್ನ ಬವಣೆಯನು ದೀನಜೀವಿ ನಾನು,
ಮಾನವರೆನ್ನನು ಕಾಡುವ ರೀತಿಯನ್ನು ಬಣ್ಣಿಸುವೆನು?
ಸಕಲ ಜೀವಿಗಳ ಸಲಹಲು ದೇವನು ನೆಲವನು ನಿಲಿಸಿಹನು;
ವಿಕಲಮತಿಯ ಮನುಜರು ತಮ್ಮೊಬ್ಬರದೆಂದು ತಿಳಿವರಿದನು.

ಉತ್ತು ನೆಲವ ನಾ ಬಿತ್ತುವೆ; ಕಸ-ಕಳೆ ಕಿತ್ತು ಬೆಳೆಗಳನ್ನು
ನಿತ್ಯದಿ ಸಲಹುತ ಹೊತ್ತಿಗೆ ಹೊಸ ಹೊಸ ತುತ್ತ ನೊದವಿಸುವೆನು.
ಹವಳದಂತೆ ಹಸನಾದ ಗೋದಿಗಳು ಹವಣದ ಕಡಲೆಗಳು.
ನವಣೆ-ರಾಗಿಗಳು ಮುತ್ತಿನ ತೆರದಲಿ ಮಿನುಗುವ ಜೋಳಗಳು!

ಮಲ್ಲಿಗೆ ಮೊಗ್ಗೆಯ ಪೋಲ್ವ ಕುಸಿಬೆ, ಮೆಲ್ಲುವ ನೆಲಗಡಲೆಗಳು
ಎಲ್ಲವು ನನ್ನಯ ದುಡಿಮೆಯಿಂದಲೇ ಮನುಜಗೆ ದೊರೆಯುವವು.
ಹಿರಿಹಿರಿಗಾಳನು ಹರುಷದಲೊಯ್ಯುತೆ ಹೊರೆಯುವರೊಡಲನ್ನು,
ತವುಡು ಸಿವುಡು ಕಸಗಾಳು, ಹೊಟ್ಟ ನೆನಗೀವರು ಕೆಟ್ಟುದನು.

ಮಿದುವಾಸಿಗೆ ಬಗೆಬಗೆಯ ಬೆಲೆಯ ಬಟ್ಟೆಗಳನ್ನು ನಿರ್‍ಮಿಸುವ
ಹದದ ಹತ್ತಿಯನ್ನು ಒದವಿಸಿ ಸಂತತವೀಯುವ ಸಮ್ಮುದವ.
ಪರಿಪರಿ ಪಯಿರು-ಬೆಳೆಗಳಿಂದಲಿ ನೆಲಸಿರಿಯನು ಸಿಂಗರಿಸಿ,
ನಿರುತವು ಸಂತಸವೀಯುವೆ ಸರ್ವಜನಂಗಳ ಮನರಮಿಸಿ.

ನನ್ನ ನೆರವಿನೊಳೆ ಮಣ್ಣು ಕಲ್ಲು-ಮರ-ಮಟ್ಟುಗಳನು ತರುತ
ಚೆನ್ನು ಚೆನ್ನು ಮನೆಯನ್ನು ಮಾಡಿ ವಾಸಿಸುವರು ಸುಖಪಡುತ.
ನೀರುಣಿಸಲಾ ತೋಟಕೆ ನೀರಿನ ಮೊಟ್ಟೆಯನೆಳೆಯುವೆನು;
ಭಾರವ ಹೊರುತಲಿ ಎಲ್ಲ ಧಾನ್ಯಗಳ ಮನೆಗೊಯಿದೀಯುವೆನು.

ಇಂತು ಮನುಜರಿಗೆ ಸೌಖ್ಯದ ಸಾಧನೆ ನಿಂತು ಒದವಿಸಿದರೂ
ಸಂತತವೂ ನನ್ನಯ ಸುಖ ನೋಡದೆ ಪೀಡೆಯ ಕೊಡುತಿಹರು.
ಸದಾಕಾಲ ನನ್ನನೆ ದುಡಿಸುತೆ ಇಂತಹ ಬೆಳೆ ಪಡೆಯುವರು;
ಇದೋ ನೋಡು, ಈ ಬಗೆ ಬಾಯ್‌ಬಿಗಿಯುತ ನನಗೇ ತಿನಗೊಡರು.

ಹೇಳಿದಂತೆ ಕೇಳಲು ಹೆಣೆವರು ಹದಿನೆಂಟು ಹೊಂಚುಗಳನು,
ಕೋಲುಬಾರು ಹಣೆಹಗ್ಗ ಗುದಿಗೆಯಾ ಮೂಗುದಾರಗಳನು
ಹೂಂಕರಿಸೆನ್ನಯ ಬಂಧುವರ್ಗಕೀಯಲು ಎಚ್ಚರಿಕೆಯನು-
ಆಂಕಿತವಿಲ್ಲವು ನನಗೆ; ನೋಡು ಬಿಗಿದಿರುವರು ಬಾಯನ್ನು.

ನನ್ನ ದುಡಿಮೆಯೊಳೆ ಸುಮ್ಮಾನವ ಪಡೆದೆನ್ನನು ಲೆಕ್ಕಿಸದೆ
ಬನ್ನವು ! ಗೋದಲೆಯೊಳಗೆ ಬಿಗಿಯುವರು ಕೊರಳುಗಣ್ಣಿಯಿಂದೆ
ಅನುಭವಿಸಲು ಸ್ವಾತಂತ್ರ್ಯವನಿಚ್ಛಿಸಿ, ಯೋಚಿಸಿ ಮನದೊಳಗೆ-
ಘನಗರ್ಜನೆಯಲಿ ಕೂಗುತ ನಾ ನಸು ಚರಿಸಲಡವಿಯೊಳಗೆ-

ದುರುಳ ಮನುಜನೀಕ್ಷಿಸಿ ಶಿಕ್ಷಿಸುವನು ಬಿಗಿದೆನ್ನನು ಕಟ್ಟಿ,
ಮರುಳನು ನಾನೀ ಧರೆಯೊಳು ಜನ್ಮಿಸಿ ಏನು ಸೌಖ್ಯ ಪಟ್ಟೆ ?
ಮಾನವರಿವರಲ್ಲವು ದಾನವರೇ! ಸತ್ಯವು ತಿಳಿ ನೀನು!
ಏನು ಮಾಡಲೀ ಕ್ರೂರರ ಬಲೆಯಿಂ ಜಾರಲುಪಾಯವನು ?

ನಂದಿವಾಹನಾ | ಚಂದ್ರಶೇಖರಾ | ವೃಂದಾರಕ ವಿನುತಾ |
ಬಂಧದಿಂದ ನಮ್ಮವರೆಲ್ಲರನೂ ತಾರಿಸೆನ್ನ ತಾತಾ !’
ಇಂತು ಬೆಸಸಿ ಬಿಸುಸುಯಿದು ವ್ಯಸನದಲಿ ಮಿಂದು ಗೊಂದೆ ತಾನು
ನಿಂತಿತು ಮುಗಿಲನು ನೋಡುತ ಸ್ಮರಿಸುತ ಪರಮೇಶ್ವರನನ್ನು

ಎತ್ತಿನ ಕುತ್ತದ ವೃತ್ತವನ್ನು ಕೇಳುತ್ತ ಚಿತ್ತದಲ್ಲಿ
ಒತ್ತರಿಸಿದ ವ್ಯಥೆಯನು ಹತ್ತಿಕ್ಕುತ ಮನೆಗೆ ಬಂದೆ ಮರಳಿ
ಎತ್ತಿನ ಕಧೆಗೀ ಭುವನದ ದೀನ-ದರಿದ್ರರ ಬಾಳ್ಗತೆಯು
ಸತ್ಯವು ಸಮವಿಹುದೆನ್ನುತ ಬಂದಿತು ಬಗೆಯೊಳು ಭಾವನೆಯು !

‘ಸರುವ ಜೀವಿಗಳಿಗೂ ಸ್ವಾತಂತ್ರ್ಯದ ಸುಖವನಿತ್ತು ನೀನು
ಪೊರೆಯೊ!’ ಎನುತ ಪರಮಾತ್ಮನ ಮನದೊಳಗಂದು ಧ್ಯಾನಿಸಿದನು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗುರುವೇ ನಿನ್ನ ಪಾದ ಧೂಳಿನ
Next post ನಿರ್ವಸ್ತುಭಾವ

ಸಣ್ಣ ಕತೆ

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…