ಕರ್‍ನಾಟಕದ ಹೋರಾಟಗಳು ಮತ್ತು ಮುಸ್ಲಿಮರು

ಕರ್‍ನಾಟಕದ ಹೋರಾಟಗಳು ಮತ್ತು ಮುಸ್ಲಿಮರು

ಕನ್ನಡಪರ ಮತ್ತು ಜನಪರ ಹೋರಾಟಗಳಲ್ಲಿ ಮುಸ್ಲಿಮರ ಪಾತ್ರ ಎಂಬ ವಿಷಯವನ್ನು ಕುರಿತು ಚರ್ಚಿಸುವುದು ವಿಪರ್ಯಾಸವಾದರೂ ಇವತ್ತು ಅನಿವಾರ್ಯವಾದ ವಿಚಾರವಾಗಿದೆ. ಕಾರಣ, ನೂರಾರು ವರ್ಷಗಳಿಂದ ಅಕ್ಷರ ವಂಚಿತ ಸಮುದಾಯವಾದ ಇದು ಅಕ್ಷರಗಳಿಂದ ಪ್ರಕಟವಾದ ಇತಿಹಾಸದಲ್ಲಿ ತನ್ನನ್ನು ಗುರುತಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಆದ್ದರಿಂದ ಅಕ್ಷರ ರೂಪಿ ಇತಿಹಾಸವನ್ನು ಆಧರಿಸಿ ನಾವು ಮಾತನಾಡುವಾಗ ಅಕ್ಷರ ಕೇಂದ್ರಿತ ಬೌದ್ಧಿಕ ಶ್ರಮದಷ್ಟೇ ಬೆವರು ಕೇಂದ್ರಿತ ಭೌತಿಕ ಶ್ರಮವೂ ಮುಖ್ಯವಾಗಿ ಕಂಡು ಅಲಕ್ಷ್ಯಕ್ಕೀಡಾದ ಜನಸಮುದಾಯಗಳು ನಾಡಿನ ಕಟ್ಟುವಿಕೆಯಲ್ಲಿ ಮುಖ್ಯ ಪಾತ್ರ ನಿರ್ವಹಿಸಿವೆ ಎಂಬುದನ್ನು ಮರೆಯುತ್ತೇವೆ. ಈ ನಿಟ್ಟಿನಲ್ಲಿ ನಮ್ಮ ಎಲ್ಲಾ ಕಾಲದ ಅಕ್ಷರಗಳು ಅಕ್ಷರಗಳಿಂದ ದೂರವಾದ ಸಮುದಾಯಗಳನ್ನು ಅಕ್ಷರ ರೂಪದಲ್ಲಿ ಪ್ರಕಟಪಡಿಸಲು ಯತ್ನಿಸಲಿಲ್ಲ. ಆದ್ದರಿಂದ ಅವರು ’ಭವ್ಯ’ ಭಾರತದ ಸಂಸ್ಕೃತಿಯ ನಿರ್ಮಾಪಕರಾಗಿ ಎಲ್ಲಿಯೂ ಕಂಡರಣೆಗೊಳ್ಳುವುದಿಲ್ಲ. ಹಾಗೆ ಕಂಡರಣೆಗೊಳ್ಳದೆ ಬೆವರು ಕೇಂದ್ರಿತ ಪಾಠಗಳು ನಮ್ಮನ್ನು ಬಹುವಾಗಿ ರೂಪಿಸಿಬಿಟ್ಟಿರುವುದರಿಂದ ಭಾರತೀಯ ಸಂಸ್ಕೃತಿಗೆ ದಲಿತರ ಕೊಡುಗೆ ಎಂದೋ ಮುಸ್ಲಿಮರ ಕೊಡುಗೆ ಎಂದೋ ಹೇಳುವಾಗ ಅನೇಕರ ಕಣ್ಣು ಮಂಜಾಗುತ್ತದೆ. ಆದ್ದರಿಂದ ಮಂಜಾದ ಈ ಪೊರೆಯನ್ನು ಕಳಚಲೆತ್ನಿಸಿದಾಗ ’ದೇವ’ಸಂಸ್ಕೃತಿಯ ಬೌದ್ಧಿಕ ಜಗತ್ತಿನ ಜಢತೆಯ ನೆಲೆಗಳು ಚಲನಶೀಲಗೊಳ್ಳುತ್ತವೆ. ಆಗ ಅಲ್ಲಿ ಬೆಳೆದು ನಿಲ್ಲುವ ಚಿಂತನೆಗಳು ಪ್ರಜಾಸತ್ತಾತ್ಮಕವೂ, ಮನುಷ್ಯ ಕೇಂದ್ರಿತವೂ ಆಗಿ ನಮ್ಮ ಜಾತ್ಯಾತೀತ ಸಂವಿಧಾನಕ್ಕೆ ಗೌರವವನ್ನೂ ನೀಡುತ್ತವೆ. ಈ ತಾತ್ವಿಕ ನೆಲೆಯಲ್ಲಿ ಕರ್ನಾಟಕದ ಸಂಸ್ಕೃತಿಗೆ ಮುಸ್ಲಿಮರ ಕೊಡುಗೆ ಎಂಬ ಮುಖ್ಯ ಶೀರ್ಷಿಕೆಯಡಿಯಲ್ಲಿ ಕನ್ನಡಪರ ಮತ್ತು ಜನಪರ ಹೋರಾಟಗಳಲ್ಲಿ ಮುಸ್ಲಿಮರ ಪಾತ್ರ ಅವಿಭಾಜ್ಯ ಎಂಬುದನ್ನು ಚರ್ಚಿಸಬೇಕಿದೆ.

ಪ್ರಸ್ತುತ ವಿಷಯಕ್ಕೆ ಕಳೆದ ಇನ್ನೂರು ವರ್ಷಗಳ ವ್ಯಾಪ್ತಿಯನ್ನು ಇರಿಸಿಕೊಂಡಿದ್ದೇನೆ. ಈ ಅವಧಿಯಲ್ಲಿ ಕರ್ನಾಟಕದಲ್ಲಿ ಕಾಣಿಸಿಕೊಂಡ ಮೊದಲ ಬಹುಮುಖ್ಯ ಹೋರಾಟ-ಸ್ವಾತಂತ್ರ್ಯ ಹೋರಾಟವಾಗಿದೆ. ಈ ಹೋರಾಟ ಎರಡು ಪ್ರತ್ಯೇಕವಾದ ಕಾಲ ಘಟ್ಟಗಳಲ್ಲಿ ವಿಭಿನ್ನ ಸ್ವರೂಪದಲ್ಲಿ ಕಾಣಿಸಿಕೊಂಡಿದೆ. ಇದು ಸ್ಥೂಲ ದೃಷ್ಟಿಗೆ ಮಾತ್ರ ಕಾಣುವ ಸತ್ಯ. ಇದರ ಮೊದಲ ಘಟ್ಟವು ೧೮೫೭ ರ ಪೂರ್ವದ ಕಾಲವಾಗಿದೆ. ಈ ಅವಧಿಯಲ್ಲಿ ಬ್ರಿಟಿಷ್ ವಸಾಹತುಶಾಹಿ ನೀತಿಯ ವಿರುದ್ಧವಾಗಿ ಹೋರಾಟಗಳು ನಡೆದಿವೆ. ಆದರೆ ಈ ಹೋರಾಟಗಳನ್ನು ನಡೆಸಿದವರು ಮುಖ್ಯವಾಗಿ ರಾಜರು, ಸಂಸ್ಥಾನಿಕರು ಎಂಬುದನ್ನು ಗಮನಿಸಬೇಕು. ಇವರ ಮುಂದಾಳತ್ವದಲ್ಲಿ ಮಾತ್ರ ಭಾರತೀಯ ಸೈನಿಕರು ಬ್ರಿಟಿಷರ ವಿರುದ್ಧ ಹೋರಾಡಿದ್ದಾರೆ.

ಹೀಗೆ ೧೮೫೭ರ ಪೂರ್ವದಲ್ಲಿ ನಡೆದ ಬ್ರಿಟಿಷ್ ವಸಾಹತುಶಾಹಿ ನೀತಿಯ ವಿರುದ್ಧವಾಗಿ ನಡೆದ ಹೋರಾಟವನ್ನು ಮುಖ್ಯವಾಗಿ ರಾಜರು ಮತ್ತು ಸೈನಿಕರು ನಿರ್ವಹಿಸಿದರೆ ಆನಂತರದಲ್ಲಿ ೧೯೪೭ರ ವರೆಗೆ ಅದೇ ಹೋರಾಟವನ್ನು ಕ್ರಮವಾಗಿ ರಾಜರ ಜಾಗದಲ್ಲಿ ಜನಪ್ರತಿನಿಧಿಗಳು ಮತ್ತು ಸೈನಿಕರ ಜಾಗದಲ್ಲಿ ಜನರು ನಡೆಸಿದರು ಎಂಬುದನ್ನು ಗಮನಿಸಬೇಕು. ಈ ಎರಡನೆಯ ಹಂತದಲ್ಲಿ ಹೋರಾಟದ ಚುಕ್ಕಾಣಿಯನ್ನು ಜನ ಮತ್ತು ಜನಪ್ರತಿನಿಧಿಗಳು ತೆಗೆದುಕೊಂಡಿದ್ದರಿಂದಲೇ ಹೋರಾಟದ ಕಾವು ತೀವ್ರವೂ ವ್ಯಾಪಕವೂ ಆದದ್ದು. ಇಲ್ಲಿ ಎರಡನೆಯ ಘಟ್ಟದ ಕತೆ ಮೊದಲನೆಯದಕ್ಕಿಂತ ಭಿನ್ನ. ಈ ಎರಡು ಪ್ರತ್ಯೇಕ ಘಟ್ಟಗಳಲ್ಲಿ ನಡೆದ ಸ್ವಾತಂತ್ರ್ಯಪರ ಹೋರಾಟದಲ್ಲಿ ಮುಸ್ಲಿಮರ ಪಾತ್ರ ಅನೇಕ ಕಾರಣಗಳಿಂದ ವಿಶಿಷ್ಟವಾದದ್ದಾಗಿದೆ. ಅದನ್ನು ಈ ಮುಂದೆ ಗಮನಿಸಬಹುದು.

ಹೈದರ್ ಮತ್ತು ಟಿಪು ಹೋರಾಟ

ಕರ್ನಾಟಕದಲ್ಲಿ ಬ್ರಿಟಿಷ್ ವಸಾಹತುಶಾಹಿಯ ವಿರುದ್ಧವಾಗಿ ಮೊಟ್ಟಮೊದಲಿಗೆ ’ವ್ಯಾಪಕ’ ರೀತಿಯ ಹೋರಾಟವನ್ನು ನಡೆಸಿದವರು ಹೈದರ್ ಮತ್ತು ಟಿಪು ಅವರಾಗಿದ್ದಾರೆ. ಅವರು ನಾಲ್ಕು ’ಮೈಸೂರು ಯುದ್ಧ’ಗಳ ಮೂಲಕ ನಡೆಸಿದ ಹೋರಾಟ ಇತಿಹಾಸದ ಅನೇಕ ಪುಟಗಳನ್ನು ಅಪೇಕ್ಷಿಸಿ ನಿಂತಿದೆ.

ನಾಲ್ಕು ಮೈಸೂರು ಯುದ್ಧಗಳಲ್ಲಿ ಹೈದರ್‌ನ ಅನಂತರದಲ್ಲಿ ಟಿಪು ಮುಂದುವರೆದನು. ಕಡೆಯ ಯುದ್ಧದಲ್ಲಿ ೧೭೯೯ರ ಹೊತ್ತಿಗೆ ಟಿಪು ತನ್ನ ಮಕ್ಕಳನ್ನು ಬ್ರಿಟಿಷರ ಸೆರೆಯಾಗಿಸಿದ್ದನು. ಈ ಹಂತದಲ್ಲಿ ಬ್ರಿಟಿಷರೊಂದಿಗೆ ರಾಜೀ ಮನೋಭಾವ ತಾಳಿದ್ದರೆ ಬ್ರಿಟಿಷರ ಸ್ವಾಮಿತ್ವವನ್ನು ಒಪ್ಪಿಕೊಂಡು, ತನ್ನ ಸಿಂಹಾಸನವನ್ನು ಉಳಿಸಿಕೊಂಡು ತನ್ನ ಮರಣದ ೪೬ನೇ ವಯಸ್ಸನ್ನೂ ಮೀರಬಹುದಿತ್ತು. ಆದರೆ ತನ್ನ ಸಾವಿಗೂ ಮಿಗಿಲಾಗಿ ಸ್ವಾಭಿಮಾನ ಮತ್ತು ತನ್ನ ನಾಡಿನ (ಮೈಸೂರಿನ)ಸ್ವಾಯತ್ತತೆಯ ಪ್ರಶ್ನೆ ಮುಖ್ಯವಾದ್ದರಿಂದ ಹೊಸ ಶತಮಾನದ ಉದಯದ ಹೊತ್ತಿನಲ್ಲಿ ತಾನು ಅಸ್ತಮಿಸಬೇಕಾಗಿ ಬಂದಿತು.

ಇದು ಕರ್ನಾಟಕದ ಆಧುನಿಕ ಸಂದರ್ಭದಲ್ಲಿ ನಡೆದ ಮೊದಲ ವ್ಯಾಪಕ ಹೋರಾಟವಾಗಿದೆ. ಮೇಲ್ಕಂಡ ಶೀರ್ಷಿಕೆಯ ದೃಷ್ಟಿಗನುಸಾರವಾಗಿ ಇದರಲ್ಲಿ ಮುಖ್ಯಪಾತ್ರ ಮುಸ್ಲಿಮರದೇ ಆಗಿದೆ. ಇದು ಮೊದಲ ಘಟ್ಟ. ಇನ್ನು ಎರಡನೆಯ ಹಂತದಲ್ಲಿ ಮುಸ್ಲಿಮರ ಹೋರಾಟದ ಪಾತ್ರ ಇದಕ್ಕಿಂತ ಭಿನ್ನವೂ ವಿಶಿಷ್ಟವೂ ಆದುದಾಗಿದೆ. ಈ ಎರಡನೆಯ ಘಟ್ಟದಲ್ಲಿ ಅನೇಕ ಮುಸ್ಲಿಂ ಹೋರಾಟಗಾರರ ಪ್ರಸ್ತಾಪವಿದೆ. ಅವರ ಹೋರಾಟದ ವೈಶಿಷ್ಟ್ಯವನ್ನು ಅರಿಯಲು ಪೂರಕವಾಗಿ ವಸಾಹತು ಕಾಲದ ’ರಾಷ್ಟ್ರೀಯತೆ’ಯ ಚರ್ಚೆಯನ್ನು ಗಮನಿಸಬೇಕಾಗಿದೆ.

ವ್ಯಾಪಕ ನೆಲೆಯ ಸ್ವಾತಂತ್ರ್ಯ ಹೋರಾಟ

ಬ್ರಿಟಿಷ್ ವಸಾಹತುಶಾಹಿಗಳ ಆಡಳಿತಾವಧಿಯಲ್ಲಿಯೇ ಮೊಟ್ಟಮೊದಲಿಗೆ ಭಾರತದಲ್ಲಿ ’ರಾಷ್ಟ್ರೀಯತೆ’ಯ ಪರಿಕಲ್ಪನೆ ಕಾಣಿಸಿಕೊಂಡದ್ದು. ಇದು ನಾವಿಂದು ಸಾಮಾನ್ಯವಾಗಿ ಒಪ್ಪಿರುವ ಸತ್ಯ. ಒಟ್ಟು ಇದು ಮುಖ್ಯವಾಗಿ ರಾಜಕೀಯ ಪರಿಕಲ್ಪನೆ. ಇದು ಅಂದಿಗೆ ಏಕ ವಿನ್ಯಾಸದ್ದಾಗಿರಲಿಲ್ಲ; ಬಹು ವಿನ್ಯಾಸಗಳದ್ದಾಗಿತ್ತು. ಆದರೂ ಈ ಎಲ್ಲಾ ವಿನ್ಯಾಸಗಳಲ್ಲಿ ಕೆಲವೊಂದು ಸಮಾನ ಲಕ್ಷಣಗಳು ಇದ್ದದ್ದರಿಂದ ಅವುಗಳನ್ನು ಇಲ್ಲಿ ಉಪ ವಿನ್ಯಾಸಗಳೆಂದು ಕರೆಯಬಹುದು. ಅಂತಹ ಸಮಾನ ಲಕ್ಷಣಗಳಲ್ಲಿ ಎಲ್ಲಾ ವಿನ್ಯಾಸಗಳ ಶತ್ರುವೂ ಒಬ್ಬನೇ ಆಗಿದ್ದ ಎಂಬುದು. ಅವನು ಬ್ರಿಟೀಷ ವಸಾಹತುಶಾಹಿ. ಇದನ್ನು ಹೊರತು ಪಡಿಸಿ ಪರಮಹಂಸ-ವಿವೇಕಾನಂದ, ರಾಜರಾಮಮೋಹನರಾಯ, ದಯಾನಂದ ಸರಸ್ವತಿ ಮೊದಲಾದವರ ಸಮಾಜೋಧಾರ್ಮಿಕವಾದ ಭಾರತದ ರಾಷ್ಟ್ರೀಯತೆ ಬೇರೆ. ಅಂತೆಯೇ ಕಮ್ಯೂನಿಸ್ಟ್, ಅಂಬೇಡ್ಕರ್, ತಿಲಕ್, ಗಾಂಧಿ ಮೊದಲಾದವರ ರಾಷ್ಟ್ರೀಯತೆಯ ಪರಿಕಲ್ಪನೆ ಮತ್ತು ಅದರ ಹೋರಾಟಗಳ ಸ್ವರೂಪಗಳೇ ಕ್ರಮವಾಗಿ ಬೇರೆ. ಇಲ್ಲಿ ಹೋರಾಟದ ನೆಲೆಯಲ್ಲಿ ಹೆಚ್ಚು ವ್ಯಾಪಕವೂ ಪ್ರಭಾವಶಾಲಿಯೂ ಆಗಿದ್ದ ಎರಡು ಮಾದರಿಗಳೆಂದರೆ, ಒಂದು -ತಿಲಕ್ ಪ್ರಣೀತ ಉಗ್ರ ಹಿಂದೂ ರಾಷ್ಟ್ರೀಯತಾ ವಾದ. ಇದು ಶಿವಾಜಿ, ಗಣೋಶೋತ್ಸವ ಮೊದಲಾದ ಹಿಂದೂ ಮೂಲದ ಹೆಚ್ಚಿನ ಆಚರಣೆಗಳ ಮೂಲಕ ರಾಷ್ಟ್ರೀಯತಾ ಹೋರಾಟಕ್ಕೆ ಕಾವನ್ನು ನೀಡಲು ಯತ್ನಿಸಿತು. ಇನ್ನು ಎರಡನೆಯದು ಗಾಂಧಿ ಮಾದರಿಯದು. ಇದು ಧರ್ಮದ ಪರಿಧಿಗೆ ಸಿಲುಕದೆ ಜಾತ್ಯಾತೀತ ನೆಲೆಯಲ್ಲಿ ವ್ಯಾಪಕವಾಗಿ ಅನುಷ್ಠಾನಕ್ಕೆ ಬಂದ ಯತ್ನವಾಯಿತು. ಇಂಥಲ್ಲಿ ನಡೆದ ಹೋರಾಟದ ಮುಖ್ಯ ಅಸ್ತ್ರ ’ಅಹಿಂಸೆ’ಯೇ ಆಗಿತ್ತು. ಇದಕ್ಕೆ ಪೋಷಕವಾಗಿ ಕಾಂಗ್ರೆಸ್ ಸಂಸ್ಥೆಯ ಹೆಸರಿನಲ್ಲಿ ನಡೆದ ಖಾದಿ-ಚರಕ ಮೊದಲಾದ ಸ್ವದೇಶಿ ಚಳವಳಿ. ಇದು ಹಿಂದೂ ಮೂಲಭೂತವಲ್ಲದ ನೆಲೆಯಲ್ಲಿ ಕಾಣಿಸಿಕೊಂಡ ಹೋರಾಟವಾದುದರಿಂದ ಮುಸಲ್ಮಾನರು ಇದರ ಅಡಿಯಲ್ಲಿ ಕಾಣಿಸಿಕೊಳ್ಳಲಾರಂಭಿಸುತ್ತಾರೆ ಎಂಬುದನ್ನು ಇಲ್ಲಿ ಮುಖ್ಯವಾಗಿ ಗಮನಿಸಬೇಕು. ಇದು ಅವರ ಪ್ರಜ್ಞೆಪೂರ್ವಕ ಅಥವಾ ಅಪ್ರಜ್ಞೆಪೂರ್ವಕ ಮನಸ್ಥಿತಿ ಪ್ರೇರೇಪಿಸಿದ ದಾರಿಯಾಗಿದ್ದಿರಬಹುದು. ಅಂತೂ ಈ ಗಾಂಧಿ ರಾಷ್ಟ್ರೀಯತಾ ಮಾದರಿಯಿಂದ ಇವರು ಹೆಚ್ಚು ಸಂತುಷ್ಟಗೊಂಡಿದ್ದಾರೆ ಎಂಬುದು ಇಲ್ಲಿನ ಸತ್ಯ. ಅದನ್ನು ಈ ಕೆಳಕಂಡ ಸೋದಾಹರಣ ಚರ್ಚೆ ಸಮರ್ಥಿಸಲು ಯತ್ನಿಸುತ್ತದೆ.

ಡಾ. ಸೂರ್ಯನಾಥ ಕಾಮತರು ಸ್ವಾತಂತ್ರ್ಯ ಸಂಗ್ರಾಮದ ಸ್ಮೃತಿಗಳು‌ಎಂಬ ಶೀರ್ಷಿಕೆಯಡಿಯಲ್ಲಿ ಸಂಪಾದಿಸಿದ ಮೂರು ಸಂಪುಟಗಳಲ್ಲಿ ಕರ್ನಾಟಕದ ಸುಮಾರು ೯೦೦ ಸ್ವಾತಂತ್ರ್ಯ ಹೋರಾಟಗಾರರನ್ನು ಸಂದರ್ಶಿಸುತ್ತಾರೆ. ಇವರಲ್ಲಿ ಕೇವಲ ೮ ಮಂದಿ ಮಾತ್ರ ಮುಸ್ಲಿಂ ಹೋರಾಟಗಾರರು ಸಿಗುತ್ತಾರೆ. ಆದರೆ ಇವರ ಸಂಖ್ಯೆಯೇ ಅಂತಿಮವಲ್ಲ. ಈ ಅರಿವು ಸಂಪಾದಕರಾದಿಯಾಗಿ ಅನೇಕರಿಗೆ ಇದೆ. ಆದರೂ ಹಿಂದೂಗಳಿಗೆ ಹೋಲಿಸಿದಾಗ ಮುಸಲ್ಮಾನರ ಸಂಖ್ಯೆ ಕಡಿಮೆ ಇದ್ದಂತೆಯೇ ಇವರ ಮೂಲದ ಸ್ವಾತಂತ್ರ್ಯ ಹೋರಾಟಗಾರರ ಸಂಖ್ಯೆಯೂ ಅದೇ ಅನುಪಾತದಲ್ಲಿರಲು ಸಾಧ್ಯವಿದೆ. ಏನೇ ಇರಲಿ, ಈ ಎಂಟೂ ಮಂದಿ ಗಾಂಧಿ ಪ್ರಭಾವಿತರು ಎಂಬುದು ಅವರ ಜೀವನ ಮತ್ತು ಹೋರಾಟಗಳ ವಿವರಗಳಿಂದ ದೃಢವಾಗುತ್ತದೆ.

ಇದಕ್ಕೆ ಪೂರಕವಾಗಿ ಇಂದಿಗೂ ನಮ್ಮೊಂದಿಗಿರುವ ಎಸ್.ಕೆ. ಕರೀಂಖಾನ್, ಬಿ.ಎಂ. ಇದಿನಬ್ಬ ಮೊದಲಾದವರ ಗಾಂಧಿ ಪ್ರಭಾವಿತ ಜೀವನ ಹೋರಾಟದ ವಿವರಗಳನ್ನು ಗುರುತಿಸಬೇಕು.

ಕರ್ನಾಟಕ ಏಕೀಕರಣದ ಹೋರಾಟ

ಭಾರತದ ರಾಷ್ಟ್ರೀಯತೆಯ ಹೋರಾಟದ ಜೊತೆ ಜೊತೆಯಲ್ಲಿಯೇ ನಡೆಯುತ್ತಿದ್ದ ಮತ್ತೊಂದು ಮುಖ್ಯ ಹೋರಾಟ, ಅದು ಕರ್ನಾಟಕದ ಸಂದರ್ಭದಲ್ಲಿ ನಡೆದ ಕರ್ನಾಟಕ ಏಕೀಕರಣ ಹೋರಾಟ. ಇದರ ಆಶಯಗಳು ಸ್ವಾತಂತ್ರ್ಯದ ಆಶಯಗಳ ಭಾಗವಾಗಿಯೇ ಇದೆ. ಆದರೂ ಇದಕ್ಕೆ ಪ್ರತ್ಯೇಕವೇ ಆದ ವಿನ್ಯಾಸವಿದೆ.

ಕರ್ನಾಟಕದ ಏಕೀಕರಣ ಹೋರಾಟದಲ್ಲಿ ಸಹ ಕೆಲವು ಮಂದಿ ಮುಸ್ಲಿಂ ಹೋರಾಟಗಾರರು ದುಡಿದಿದ್ದಾರೆ. ಅವರಲ್ಲಿ ಒಬ್ಬರನ್ನು ಇಲ್ಲಿ ಪ್ರಾತಿನಿಧಿಕವಾಗಿ ಗುರುತಿಸುತ್ತೇನೆ. ಅವರು ಬಳ್ಳಾರಿಯ ರಂಜಾನ ಸಾಹೇಬ.

ದಿನಾಂಕ ೧.೧೦.೧೯೫೩ರಂದು ಮೈಸೂರು ಪ್ರಾಂತ್ಯ ಮತ್ತು ಬಳ್ಳಾರಿ ಜಿಲ್ಲೆ ಏಕೀಕರಣಗೊಂಡವು. ಅದರ ಹಿಂದಿನ ರಾತ್ರಿ ಈ ಹರ್ಷೋತ್ಸವವನ್ನು ಆಚರಿಸಲು ನಿರ್ಮಿಸಿದ್ದ ಪೆಂಡಾಲ್‌ನಲ್ಲಿ ಅದರ ಕಾವಲಿಗಾಗಿ ತಂಗಿದ್ದ ರಂಜಾನಸಾಹೇಬ, ಕನ್ನಡಪ್ರೇಮಿ ಕೆಲವು ಕಿಡಿಗೇಡಿಗಳ ಕೃತ್ಯದಿಂದಾಗಿ ಆಸಿಡ್‌ಬಲ್ಬ್ ಸಿಡಿತಕ್ಕೆ ಒಳಗಾಗಿ ಸಾವನ್ನಪ್ಪಿದನು.

ಹೀಗೆ ಕನ್ನಡದ ಹೆಸರಿನಲ್ಲಿ ಮೊಟ್ಟಮೊದಲಿಗೆ ಹುತಾತ್ಮನಾದವನು ಮುಸ್ಲಿಮ; ಅವನು ರಂಜಾನ ಸಾಹೇಬ. (ಇಲ್ಲಿ ಅನೇಕರಿಗೆ ಸತ್ಯಾಗ್ರಹದ ಮೂಲಕವಾಗಿ ರೈಲಿನ ಗಾಲಿಗಳಿಗೆ ಸಿಕ್ಕಿ ರಕ್ತದ ಮಡುವಾದ ಮು. ಗೋವಿಂದರಾಜು ಅವರು ನೆನಪಾಗಲು ಸಾಧ್ಯವಿದೆ!)

ಏಕೀಕರಣೋತ್ತರ ಕನ್ನಡ ಹೋರಾಟ

ಕರ್ನಾಟಕ ಏಕೀಕರಣ ನಂತರದ ಕನ್ನಡ ಹೋರಾಟ ಹೆಚ್ಚು ಸಂಕೀರ್ಣ. ಇದು ಕರ್ನಾಟಕದ ಒಳಗೂ ಮತ್ತು ಹೊರಗೂ ಹಾಗೂ ವಿವಿಧ ಕಾಲಗಳ ಹಿನ್ನೆಲೆಯಲ್ಲಿ ಅತ್ಯಂತ ವೈವಿಧ್ಯಮಯವಾಗಿ ಪ್ರಕಟವಾಗುತ್ತಾ ಬಂದಿದೆ. ಇದರ ಜೊತೆಗೆ ಹಿಂದೂ ಧಾರ್ಮಿಕ ಮೂಲದ ಭುವನೇಶ್ವರಿ ಕಲ್ಪನೆಯು ಧರ್ಮಾತೀತವಾದ ಕನ್ನಡ-ಕರ್ನಾಟಕತ್ವದೊಂದಿಗೆ ಸಮೀಕರಣಗೊಂಡು ಕನ್ನಡ ಚಳವಳಿಗೆ ಅವೈಚಾರಿಕ ನೆಲೆಗಟ್ಟನ್ನು ಸಹ ಪ್ರಾಪ್ತವಾಗಿಸಿದೆ. ಇಂತಹ ಬಳಕೆ ಸಾಮಾನ್ಯ ಕಾರ್ಯಕರ್ತರಲ್ಲಿ ಇದ್ದರೆ ಅದನ್ನು ತೀವ್ರವಾಗಿ ಪರಿಗಣಿಸಬೇಕಿಲ್ಲ. ಆದರೆ ಇದರ ಬಳಕೆ ಪ್ರಜ್ಞೆವಂತರೆನಿಸಿಕೊಂಡ ಅನೇಕ ಚಿಂತಕರಲ್ಲಿ ಪ್ರಜ್ಞೆಪೂರ್ವಕವಾಗಿಯೇ ಬಳಕೆಯಾಗುತ್ತಿದ್ದರೆ ಅದನ್ನು ಕನ್ನಡದ ಹೆಸರಿನ ಹಿಂದೂಮೂಲಭೂತವಾದಿ ಗುಣ ಎಂದಲ್ಲದೆ ಬೇರೆ ಏನೆಂದೂ ಕರೆಯಲಾಗುವುದಿಲ್ಲ.

ಹೀಗೆ ಹಿಂದೂ ಧಾರ್ಮಿಕ ವಿನ್ಯಾಸದ ಮೂಲಕವಾಗಿ ಹಿಂದೂಗಳ ಕನ್ನಡತ್ವವನ್ನು ಅನೇಕರು ಸಂಕುಚಿತಗೊಳಿಸುತ್ತಾ ಧಾರ್ಮಿಕ ಅಲ್ಪಸಂಖ್ಯಾತರಾದರೂ ಕನ್ನಡಿಗರೇ ಆದ ಮುಸಲ್ಮಾನರು ಹಾಗೂ ಕ್ರಿಶ್ಚಿಯನ್ನರಿಗೆ ಇದರಿಂದ ಮುಜುಗರವನ್ನು ಉಂಟು ಮಾಡುತ್ತಿದ್ದಾರೆ. ಇದು ಒಂದು ಮುಖದ ಸತ್ಯ. ಮತ್ತೊಂದು ಮುಖದಂತೆ, ಮುಸ್ಲಿಮರೆ ಬಹುಸಂಖ್ಯೆಯಲ್ಲಿ ಕನ್ನಡವನ್ನು ತಮ್ಮ ಸಾರ್ವಜನಿಕ ಭಾಷೆಯನ್ನಾಗಿ ಬಳಸುತ್ತಿಲ್ಲ. ಅವರ ಮನೆಯಲ್ಲಿನ ಭಾಷೆ ಯಾವುದೇ ಇರಲಿ, ಅದು ಸಹಜ. ಆದರೆ ಕರ್ನಾಟಕದ ಮುಖ್ಯ ಭಾಷಾ ವಾಹಿನಿಯಾದ ಕನ್ನಡದ ಮೂಲಕವಾಗಿ ತಮ್ಮ ಅನನ್ಯತೆಯನ್ನು ಗುರುತಿಸಿಕೊಳ್ಳುವುದು ನಾಡಿನ ಭಾಗವಾಗಿರುವ ಅವರ ಕರ್ತವ್ಯ. ಇಂತಹ ಪರಿಸ್ಥಿತಿ ಕೇರಳ, ತಮಿಳುನಾಡು ಮೊದಲಾದ ರಾಜ್ಯಗಳಲ್ಲಿ ಇಲ್ಲ ಎಂಬುದನ್ನು ಗಮನಿಸಬೇಕು. ಆದರೆ ಕರ್ನಾಟಕದಲ್ಲಿ ಮಾತ್ರ ಕೆಲವು ನೂರು ವರ್ಷಗಳಿಂದ ಈ ಪ್ರವೃತ್ತಿ ಬೆಳೆದು ಬಂದಿದೆ. ಅದು ಈಗಿಂದೀಗಲೇ ಬದಲಾಗುವ ಪ್ರವೃತ್ತಿಯೇನೂ ಅಲ್ಲ. ಆದರೆ ಸಂಕಲ್ಪವನ್ನು ಮೊದಲು ಮಾಡಿದಾಗ ಆನಂತರದಲ್ಲಿ ಈ ಕ್ರಿಯೆ ಕ್ರಮೇಣ ವ್ಯಾಪಕವಾಗುತ್ತದೆ ಎಂಬುದನ್ನು ಮರೆಯಬಾರದು.
ಹೀಗೆ ಕನ್ನಡಕ್ಕೆ ಸಂಬಂಧಿಸಿ ಹಿಂದೂ ಮತ್ತು ಮುಸ್ಲಿಂ ಎರಡೂ ಧಾರ್ಮಿಕ ವಲಯಗಳಲ್ಲಿ ಕೆಲವು ವಿಶಿಷ್ಟ ಸಮಸ್ಯೆಗಳಿವೆ. ಆದರೆ ಈ ಸಮಸ್ಯೆಗಳನ್ನು ಮೀರಿ ಬೆಳೆದ ಕೆಲವೇ ಮಂದಿ ಮುಸ್ಲಿಂ ಕನ್ನಡ ಹೋರಾಟಗಾರರು ನಮ್ಮೊಡನೆ ಇದ್ದಾರೆ. ಅವರಲ್ಲಿ ಅತ್ಯಂತ ಮುಖ್ಯವಾಗಿ ಗಮನಿಸಬೇಕಾದ ವ್ಯಕ್ತಿ ದಿವಂಗತ ರೆಹಮಾನ್‌ಖಾನ್.

ಇವರು ’ಕನ್ನಡ ಸಂಘರ್ಷ ಸಮಿತಿ’ಯ ಮುಖ್ಯ ರೂವಾರಿಗಳಲ್ಲಿ ಒಬ್ಬರು. ಇವರು ಗೋಕಾಕ ಚಳವಳಿಗೆ ಆರಂಭದ ಭಾಗದಲ್ಲಿ ತೀವ್ರ ಚಾಲನೆ ನೀಡಿದವರು. ಅದಕ್ಕಾಗಿ ಮೂರು ದಿನಗಳ ಆಮರಣಾಂತ ಉಪವಾಸ ಸತ್ಯಾಗ್ರಹವನ್ನು ಕೈಗೊಂಡು ಕಲಾಪದಲ್ಲಿದ್ದ ವಿಧಾನ ಸಭೆಯನ್ನೇ ನಡುಗಿಸಿದವರು.

ರೈತ-ಕಾರ್ಮಿಕ ಹೋರಾಟ

ಸ್ವಾತಂತ್ರ್ಯ ಪೂರ್ವ ಕರ್ನಾಟಕದಲ್ಲಿ ಅನೇಕ ಮುಸ್ಲಿಂ ಹೋರಾಟಗಾರರು ಸ್ವಾತಂತ್ರ್ಯ ಹೋರಾಟದ ಜೊತೆಜೊತೆಗೆ ರೈತ-ಕಾರ್ಮಿಕ ಪರವಾದ ಹೋರಾಟವನ್ನು ಸಹ ನಡೆಸಿದ್ದಾರೆ. ಜಮೀನುದಾರಿಕೆಯ ವಿರುದ್ಧವಾಗಿ ಭೂಮಿಯ ಆಕ್ರಮಣ ಮತ್ತು ಹಂಚಿಕೆಯ ಹೋರಾಟ, ಬೀಡಿ ಉದ್ಯಮದಲ್ಲಿ ಬಹುಸಂಖ್ಯಾತ ಕಾರ್ಮಿಕರಾಗಿದ್ದ ಮುಸ್ಲಿಮರ ಪರವಾದ ಹೋರಾಟ…ಹೀಗೆ ಅನೇಕ ರೂಪಗಳ ಹೋರಾಟ ಅಂದು ನಡೆದಿದೆ. ಇದರ ಅನೇಕ ನಾಯಕರಲ್ಲಿ ಬಸವನಬಾಗೇವಾಡಿಯ ರಾಜೇಸಾಬ ಅತ್ಯಂತ ಮುಖ್ಯ. ೬೦ ವರ್ಷದ ವೃದ್ಧಾಪ್ಯದಲ್ಲಿದ್ದರೂ ರೈತ-ಕಾರ್ಮಿಕರ ಹೋರಾಟದಲ್ಲಿ ಈತ ಸ್ಫೂರ್ತೀಯ ಸೆಲೆಯಾಗಿದ್ದನು. ಕಡೆಗೆ ಊಳಿಗಮಾನ್ಯ ಪ್ರಭುಗಳ ಏಜೆಂಟರಿಂದ ಈತ ಕೊಲೆಯಾದಾಗ ಅವನ ಹೋರಾಟವನ್ನು ತನ್ನ ತಂಗಿ ಸೈದಾಮಾ ಮುಂದುವರೆಸುತ್ತಾಳೆ. ಇಂತಹ ಹೋರಾಟದಲ್ಲಿ ಶಾಲಾ ಶಿಕ್ಷಕರಾಗಿದ್ದ ನಬೀರ್ ಸಾಬ್ ಮುಕ್ತುಸಾಬ್ ಬಾಲಸಿಂಗ್(ಉಸ್ತಾದ್), ಹೋರಾಟದ ಹಾಡುಗಳ ಆಶುಕವಿಯಾದ ಮಕಾನ್‌ದಾರ್ ಎಂಬುವವರನ್ನು ಮುಖ್ಯವಾಗಿ ಗಮನಿಸಬೇಕು.

ಇದೇ ರೀತಿಯಲ್ಲಿ ಹುಬ್ಬಳ್ಳಿ-ಧಾರವಾಡ ಪ್ರದೇಶದಲ್ಲಿ ೪೦ ವರ್ಷಗಳಿಗೂ ಮಿಗಿಲಾಗಿ ಬೀಡಿ ಕಾರ್ಮಿಕರ ಪರ ಹೋರಾಟ ನಡೆಸಿದ ಏ.ಜೆ. ಮುಧೋಳ, ಬಾಗಲಕೋಟೆಯ ಡಿ.ಎಂ. ಕಲಾಸಿ, ಹೈದಾರಾಬಾದ್ ನಿಜಾಮಶಾಹಿಯ ವಿರುದ್ಧ ಹೋರಾಡಿದ ಹಸನಬಾಗ್ ಮೊದಲಾದವರನ್ನು ಮರೆಯಲು ಸಾಧ್ಯವಾಗುವುದಿಲ್ಲ. ಈ ಬಗೆಯ ಹೋರಾಟ ಇಂದಿಗೂ ಇದೆ ಎಂಬುದನ್ನು ಗಮನಿಸಬೇಕು.

ಮಹಿಳಾ ಹೋರಾಟ

ಮುಸ್ಲಿಮರ ಮಹಿಳಾ ಹೋರಾಟ ಅತ್ಯಂತ ವಿಶಿಷ್ಟವಾದುದು. ಕಾರಣ, ಹಿಂದೂ ಮಹಿಳಾ ಹೋರಾಟಕ್ಕೆ ಈಗಾಗಲೇ ಒಂದು ವೇದಿಕೆಯನ್ನು ಸಿದ್ಧಮಾಡಲಾಗಿದೆ. ಈ ವೇದಿಕೆಗೆ ಅನೇಕ ನೂರು ವರ್ಷಗಳ ಇತಿಹಾಸ ಇದೆ. ಅಕ್ಕಮಹಾದೇವಿ, ಮುಕ್ತಾಯಕ್ಕ ಮೊದಲಾದವರಾಗಿ ಸ್ವಾತಂತ್ರ್ಯ, ಏಕೀಕರಣ ಹಾಗೂ ಸಮಕಾಲೀನ ಸಂದರ್ಭದ ಅಸಂಖ್ಯ ಹೋರಾಟಗಳಲ್ಲಿ ಹಿಂದೂ ಮಹಿಳೆ ನಿಭಿಡೆಯಿಂದ ಭಾಗವಹಿಸುತ್ತಾಳೆ. ಆದರೆ ಇಂತಹ ಸಲೀಸುತನ ಮುಸ್ಲಿಂ ಹೆಣ್ಣು ಮಗಳಿಗೆ ಇವತ್ತಿಗೂ ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಹೆಚ್ಚು ಸಂರಕ್ಷಿತವಾಗಿರುವ ಮುಸ್ಲಿಂ ಸಂಪ್ರದಾಯ ಲೋಕವು ಹೋರಾಟದ ಹೆಣ್ಣನ್ನು ಕಪು ದೃಷ್ಟಿಯಿಂದ ನೋಡುತ್ತದೆ. ತಾನು ಕೆಂಪೂ ಆಗುತ್ತದೆ. ಆದರೂ ಇಂತಹ ಕಲೆಗಳನ್ನು ಕಳಚಿಕೊಂಡು ತಮ್ಮ ಪ್ರಗತಿಪರತೆಯನ್ನು ಸ್ಥೈರ್ಯದಿಂದ ಸಾಬೀತು ಮಾಡಿದ ಕೆಲವು ಮಂದಿ ಮಹಿಳಾ ಹೋರಾಟಗಾರರು ನಮ್ಮೊಂದಿಗಿದ್ದಾರೆ. ಆದರೆ ಅವರ ಸಂಖ್ಯೆ ಅತ್ಯಂತ ಅಲ್ಪ. ಅವರಲ್ಲಿ ಮುಖ್ಯವಾಗಿ ಸಾರಾ ಅಬೂಬಕ್ಕರ್, ಬಾನು ಮುಷ್ತಾಕ, ಕೆ. ಶರೀಫಾ, ರಜಿಯಾ ಮುಂತಾದವರನ್ನು ಗುರುತಿಸಬೇಕಾಗುತ್ತದೆ.

ಇತರೆ ಹೋರಾಟಗಳು

ವಿದ್ಯಾರ್ಥಿ ಮತ್ತು ಸಾಂಸ್ಕೃತಿಕ ನೆಲೆಗಟ್ಟಿನ ಅನೇಕ ಹೋರಾಟಗಾರರಲ್ಲಿ ಕಾಲಕ್ರಮೇಣ ಮುಸ್ಲಿಂ ಹೋರಾಟಗಾರರ ಸಂಖ್ಯೆ ಹೆಚ್ಚುತ್ತಿದೆ. ಇದಕ್ಕೆ ಕಾರಣ ಶಿಕ್ಷಣ. ಇದರ ಮೂಲಕವಾಗಿ ಅಕ್ಷರವನ್ನು ಮಾತ್ರ ಪರಿಚಯದಲ್ಲಿಟ್ಟುಕೊಳ್ಳದೆ ಅದರ ಅರಿವನ್ನು ಸಹ ತಮ್ಮ ಪ್ರಜ್ಞೆಯ ಭಾಗವನ್ನಾಗಿ ಮಾಡಿಕೊಳ್ಳುತ್ತಿರುವ ಅನೇಕ ಮುಸ್ಲಿಂ ಸಮುದಾಯದ ಚಿಂತಕರು ಮತ್ತು ಕಾರ್ಯಕರ್ತರು ನಮ್ಮ ನಡುವೆ ಇದ್ದಾರೆ. ಈ ನಿಟ್ಟಿನಲ್ಲಿ ದೊಡ್ಡ ಸಂಖ್ಯೆಯನ್ನೆ ಬರೆಯಬಹುದಾಗಿದೆ.

ಒಟ್ಟಾರೆಯಾಗಿ ಕರ್ನಾಟಕದಲ್ಲಿ ನಡೆದ ಮತ್ತು ನಡೆಯುತ್ತಿರುವ ಜನಪರ ಮತ್ತು ಕನ್ನಡಪರ ಹೋರಾಟಗಳಲ್ಲಿ ಮುಸ್ಲಿಂ ಹೋರಾಟಗಾರರ ಸಮಸ್ಯೆಯ ನೆಲೆಗಳು ಅತ್ಯಂತ ವಿಶಿಷ್ಟವಾದದ್ದಾಗಿವೆ. ಇವು ಮನೋವೈಜ್ಞೆನಿಕ, ಸಾಮಾಜಿಕ, ಧಾರ್ಮಿಕ ಮೊದಲಾದ ಹಲವು ಕೋನಗಳ ಮೂಲಕವಾದ ಅಧ್ಯಯನವನ್ನು ಅಪೇಕ್ಷಿಸುತ್ತವೆ.

ಈ ಕೃತಿ: ಕರ್ನಾಟಕ ಸಂಸ್ಕೃತಿಗೆ ಮುಸ್ಲಿಮರ ಕೊಡುಗೆ (೨೦೦೩)
ಒತ್ತಾಸೆ : ಅಖಿಲ ಕರ್ನಾಟಕ ಮಹಪುರೀಯರ ಕನ್ನಡ ವೇದಿಕೆ ದಿನಾಂಕ ೮-೮-೨೦೦೧ರಂದು ಬೆಂಗಳೂರಿನಲ್ಲಿ ವ್ಯವಸ್ಥೆ ಮಾಡಿದ್ದ ‘ಕರ್ನಾಟಕ ಸಂಸ್ಕೃತಿಗೆ ಮುಸ್ಲಿಮರ ಕೊಡುಗೆ’ ಎಂಬ ಕಾರ್ಯಕ್ರಮದ ವಿಚಾರಗೋಷ್ಠಿಯೊಂದರಲ್ಲಿ ಮಂಡಿಸಿದ ಮಾತುಗಳನ್ನೊಳಗೊಂಡ ಲೇಖನ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪುಟ್ಟನ ಸಾಹಸ
Next post ಅರಿವು

ಸಣ್ಣ ಕತೆ

 • ಪಾಠ

  ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

 • ಅಜ್ಜಿ-ಮೊಮ್ಮಗ

  ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

 • ಪ್ರಕೃತಿಬಲ

  ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

 • ಸಂಶೋಧನೆ

  ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

 • ಮಿಂಚಿನ ದೀಪ

  ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

cheap jordans|wholesale air max|wholesale jordans|wholesale jewelry|wholesale jerseys