ಭೈರವಿ


‘ಬರಿಯೆ ಬಿಸುಸುಯಿಲಿಂದಲೀ ಹಗ-
ಲಿರುಳ ಕಳೆಯುವುದೇನು-
ಸರಿಯೆ!’ ಎನುತೇನೇನೊ ಹಾಡುತ-
ಲಿರುವೆನೇಗಲು ನಾನು.

ನನ್ನ ಹಾಡುಗಳೆಲ್ಲವಿವು ಮನ-
ದನ್ನ ನಿನಗಾಗಿರುವವು;
ನನ್ನ ಹಾಡಿನ ವರ್ಣ-ವರ್ಣವು
ನಿನ್ನನೇ ಕುರಿತಿರುವುವು;

ನಿನ್ನ ನೆನಹನೆ ಮೊರೆವುವು….!
ನಿನ್ನ ನೆನಹನೆ ಮೊರೆವುವೆಲ್ಲವು
ನಿನ್ನ ಕರೆಯುತಲಿರುವುವು.


ಹಾಡ ಕೇಳುತ ಜನಗಳೆಲ್ಲರು
ಖೋಡಿಗಳೆಯುತೆ ನನ್ನ
ಏಡಿಸುತ ನಗೆಯಾಡುತಿರುವುದ
ನೋಡುತಿರುವೆನು ಚೆನ್ನ!

“ಏನು ಹಾಡಿನ ರಾಗ! ಅಳುವಿನ
ತಾನಗಳೆ ತುಂಬಿರುವುವು!”
“ಎನು ಮಾತಿನ ರೀತಿ! ಬರಿ ತಿ-
ಲ್ದಾಣವೋ ಎಂದೆನಿಪುವು!”

ಎಂಬವರ ನುಡಿ ಕೇಳಿ….
ಎಂಬವರ ನುಡಿ ಕೇಳಿ `ಅಯ್ಯೋ!’
ಎಂಬೆ ಮರುಕವ ತಾಳಿ,


ಬಾಳು ನನ್ನದು ಅಳಲ ಹೊಳೆಯೊಳೆ
ತೇಲಿ ಮುಳುಗುತಲಿರುವುದು.
ಹೇಳುವೀ ಹಾಡೊಳಗೆ ಬೇರೆಯ
ಭಾವವೆಂತದು ಬರುವುದು?

ಹಾಡು ಕವನಗಳಲ್ಲಿ ಬದುಕೇ
ಮೂಡಿಕೊಂಡಿರದೇನು?
ನೋಡಿರದ ವಸ್ತುವನು ಚಿತ್ರದಿ
ಕೂಡಿಸಲು ಬಹುದೇನು?

ಏನೆ ಜನವೆನಲೀಗ….
ಏನೆ ಜನವೆನಲೀಗ ಹಾಡುವೆ
ನಾನು ನನ್ನಯ ರಾಗ !


ಉರಿವ ಬೇಗೆಗೆ ಸಿಲುಕಿಕೊಂಡವ-
ನೊರಲುವಾ ನುಡಿಯರ್ಥವು
ಹೊರಗೆ ನಿಂತವಗಾಗುವುದೆ ಅವ-
ನರಿಯೆನೆಂಬುದು ವ್ಯರ್ಥವು

ಇರುಳು ಹಗಲಿನ ಸಿರಿಯ ಬಣ್ಣಿಸೆ
ಕುರುಡನರಿಯುವನೇನು!
ಇರುಹು ತಿಳಿಯದೆ ನನ್ನ ಹಾಡನು
ಜರಿದರಾಗುವುದೇನು!

ಬರಿಯೆ ತರನನವೆಂದು….
ಬರಿಯೆ ತರನನವೆಂದು ಬಗೆವರ
ಮರುಳಿಗೇನೆನಲಿಂದು!
*****